ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಪ್ರತಿ ಕುಟುಂಬಕ್ಕೆ ₹3,800 ತಕ್ಷಣ ಪರಿಹಾರ, ಶೀಘ್ರ ಶೆಡ್‌ ನಿರ್ಮಾಣ –ಸಿಎಂ

Last Updated 20 ಆಗಸ್ಟ್ 2018, 15:11 IST
ಅಕ್ಷರ ಗಾತ್ರ

ಬೆಂಗಳೂರು: ಕೊಡಗಿನಪರಿಹಾರ ಕೇಂದ್ರಗಳಲ್ಲಿರುವ ಸುಮಾರು 5800 ನೆರೆ ಸಂತ್ರಸ್ತರಿಗೆತಕ್ಷಣ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ₹3800ನೀಡಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ ತಿಳಿಸಿದರು.

ಕೊಡಗಿನಲ್ಲಿ ಎರಡು ದಿನಗಳ ವೈಮಾನಿಕ ಸಮೀಕ್ಷೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು. ಜಿಲ್ಲಾಡಳಿತದಿಂದ ನೆರೆ ಸಂತ್ರಸ್ತರು ಹಾಗೂ ಹಾನಿಯಮಾಹಿತಿ ಪಡೆದಿರುವ ಅವರು,ಸಂಕಷ್ಟಕ್ಕೆ ಒಳಗಾಗಿರುವ50 ಸಾವಿರ ಕುಟುಂಬಗಳಿಗೆ ದಿನೋಪಯೋಗಿ ದಿನಸಿ ಸಾಮಾಗ್ರಿಗಳನ್ನು ಪ್ರತಿ ಕುಟುಂಬದ ಮನೆಯ ಬಾಗಿಲಿಗೆ ತಲುಪಿಸಲು 10 ಮೊಬೈಲ್ ದಿನಸಿ ಸಾಮಾಗ್ರಿಗಳ ವಿತರಣಾ ಘಟಕಗಳನ್ನು ಪ್ರಾರಂಭಿಸಲು ಸೂಚಿಸಿದ್ದಾರೆ.

ಪ್ರವಾಹ, ಗುಡ್ಡ ಕುಸಿತದ ಪರಿಣಾಮ ಕೊಡಗಿನಾದ್ಯಂತ 845 ಮನೆಗಳುಪೂರ್ಣ ಹಾನಿಗೊಳಗಾಗಿದ್ದು, 773 ಮನೆಗಳಿಗೆಭಾಗಶ: ಹಾನಿ ಉಂಟಾಗಿದೆ. ಮುಂದಿನ ಹತ್ತು ದಿನಗಳೊಳಗೆ ಸಂತ್ರಸ್ತರಿಗೆ ತಾತ್ಕಾಲಿಕ ಅಲ್ಯುಮಿನಿಯಂ ಶೆಡ್‌ಗಳನ್ನುನಿರ್ಮಿಸುವ ವ್ಯವಸ್ಥೆ ಮಾಡಲಾಗುತ್ತಿದ್ದು, ಅದಕ್ಕಾಗಿ ಸೂಕ್ತ ಸ್ಥಳ ಗುರುತಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ನಷ್ಟದ ಅಂದಾಜು ಪಟ್ಟಿತಯಾರಿಸಲು ಹಾಗೂ ಮನೆಗಳನ್ನು ಕಟ್ಟುವ ಕಾರ್ಯದ ಮೇಲ್ವಿಚಾರಣೆ ಮಾಡಲು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ.ಈವರೆಗೆ 12 ಜನ ಸಾವಿಗೀಡಾಗಿದ್ದು,4320 ಜನರನ್ನು ಆಪತ್ತಿನಿಂದ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಸೋಮವಾರ ಮಳೆ ಸ್ವಲ್ಪ ತಗ್ಗಿರುವುದರಿಂದ ಪರಿಹಾರ ಕಾರ್ಯ ಚುರುಕುಗೊಂಡಿದೆ ಎಂದರು.

123 ಕಿ.ಮೀ. ರಸ್ತೆ, 58 ಸೇತುವೆ, 278 ಸರ್ಕಾರಿ ಕಟ್ಟಡ, 3800 ವಿದ್ಯುತ್ ಕಂಬ ಹಾನಿಗೊಳಗಾಗಿವೆ. ಹಲವು ರಸ್ತೆಗಳಸಂಪರ್ಕ ಕಡಿತಗೊಂಡಿವೆ. ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕಾಮಗಾರಿ ರಾಜ್ಯ ಸರ್ಕಾರಕ್ಕೆ ಸವಾಲಾಗಿದೆ.ಜಿಲ್ಲೆಯಲ್ಲಿ 41 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಒಟ್ಟು 6620 ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿದ್ದಾರೆ.

ಜಿಲ್ಲಾಡಳಿತ , ಪೊಲೀಸ್ ಇಲಾಖೆ, ಕರ್ನಾಟಕ ಸಶಸ್ತ್ರ ಮೀಸಲು ಪಡೆ, ಭೂ ಸೇನೆ, ವಾಯು ಪಡೆ, ನೌಕಾ ದಳ, ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ (ಎನ್‌ಡಿಆರ್‌ಎಫ್‌) ತಂಡಗಳು, ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಧಿಕಾರಿಗಳು, ಎನ್‌ಸಿಸಿ, ನಾಗರೀಕ ರಕ್ಷಣಾ ದಳ, ಗೃಹ ರಕ್ಷಕ ದಳ ಸೇರಿದಂತೆ ಒಟ್ಟು 1725 ವಿಶೇಷ ತರಬೇತಿ ಪಡೆದ ತಜ್ಞರು ಯುದ್ಧೋಪಾದಿಯಲ್ಲಿ ಪ್ರತಿ ದಿನ 24 ಗಂಟೆಗಳ ಕಾಲ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ವಾಯುಪಡೆಯ ಎಂ-17 ಹೆಲಿಕಾಪ್ಟರ್ ಹಾರಂಗಿಯಿಂದ ಕಾರ್ಯನಿರ್ವಹಿಸುತ್ತಿದೆ.ಪ್ರತಿ ದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನಿರಂತರ ಮಾಹಿತಿಯನ್ನು ಒದಗಿಸುತ್ತಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಡಿಜಿಪಿ ಅಗ್ನಿ ಶಾಮಕ ದಳ, ಇಬ್ಬರು ಎಡಿಜಿಪಿಗಳು, ಇಬ್ಬರು ಅಪರ ಮುಖ್ಯ ಕಾರ್ಯದರ್ಶಿಗಳು ಸ್ಥಳದಲ್ಲೇ ಮುಕ್ಕಾಂ ಮಾಡಿ ಪರಿಹಾರ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆಎಂದು ಹೇಳಿದರು.

’ಪರಿಹಾರ ಕೇಂದ್ರಗಳಿಗೆ ಹಾಲು, ಕುಡಿಯುವ ನೀರು ವ್ಯವಸ್ಥೆಮಾಡಲಾಗಿದೆ.ನೆರವಿಗಾಗಿ ಒದಗಿ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಮಡಿಕೇರಿಎಪಿಎಂಸಿ ಯಾರ್ಡ್‌ನಲ್ಲಿ ಸಂಗ್ರಹಿಸಿ ಪಂಚಾಯತಿಗಳ ಮೂಲಕ ಜನರಿಗೆ ವಿತರಣೆ ಮಾಡಲಾಗುತ್ತಿದೆ.ಐದು ವಿಶೇಷ ವೈದ್ಯಕೀಯ ತಂಡಗಳು, 10 ರೆವಿನ್ಯೂ ಅಧಿಕಾರಿಗಳ ತಂಡಗಳನ್ನು ಪರಿಹಾರ ಕಾಮಗಾರಿಗಳಿಗಾಗಿ ವಿಶೇಷವಾಗಿ ನಿಯೋಜಿಸಲಾಗಿದೆ. 60 ಜೆಸಿಬಿಗಳು, 20 ಫೋರ್ ವೀಲ್ ಡ್ರೈವ್‌ವಾಹನಗಳು ಕಾರ್ಯಾಚರಣೆಯಲ್ಲಿವೆ.

ಕುಶಾಲನಗರದ ಮೂರು ಬಡಾವಣೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ನೀರನ್ನು ಹೊರಕ್ಕೆ ಪಂಪ್ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತಾಂತ್ರಿಕ ತಂಡ ಕೊಡಗಿಗೆ ತೆರಳಿದೆ.ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ವೈದ್ಯ ಮತ್ತು ವೈದ್ಯೇತರ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆಯ ವಿಶೇಷ ಘಟಕಗಳನ್ನು ರೂಪಿಸಿ ನಿಯೋಜಿಸಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಕೂಲಿ ಕಾರ್ಮಿಕರಿಗೆ ಮಡಿಕೇರಿ, ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಪಟ್ಟಣಗಳಲ್ಲಿ ಬಿದ್ದಿರುವ ತ್ಯಾಜ್ಯವಸ್ತುಗಳ ನಿರ್ಮೂಲನಾ ಕಾಮಗಾರಿಯನ್ನು ವಹಿಸಲು ಸೂಚಿಸಲಾಗಿದೆ.

ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಈಗಾಗಲೇ ಸರಬರಾಜು ಮಾಡಿರುವ ಪುಸ್ತಕ, ಸಮವಸ್ತ್ರ ಹಾನಿಗೊಳಗಾಗಿರುವುದರಿಂದ ಮತ್ತೊಂದು ಸೆಟ್ ಪುಸ್ತಕ ಮತ್ತು ಸಮವಸ್ತ್ರಗಳನ್ನು ಸರಬರಾಜು ಮಾಡಲು ಸೂಚಿಸಲಾಗಿದ್ದು, ಶಾಲೆಗೆ ಕಳೆದ 3 ತಿಂಗಳಲ್ಲಿ 20 ದಿನ ರಜೆ ಇದ್ದುದರಿಂದ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ. ಭೂಸಿತದಿಂದ ರಸ್ತೆ ಸಂಪರ್ಕ ಅಡ್ಡಿಯಾಗಿರುವುದು, ವಿದ್ಯುತ್‌ ಸರಬರಾಜು ಸರಿಪಡಿಸಲು ವಿಶೇಷ ತಂಡಗಳನ್ನು ರವಾನಿಸಲಾಗಿದೆ.ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಿದೆ ಹಾಗೂಅಧಿಕಾರಿಗಳ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಸಿಎಂ ಕುಮಾರಸ್ವಾಮಿ ಮಾಹಿತಿ ನೀಡಿದರು.

ನೊಂದ ಸಂತ್ರಸ್ತರಿಗೆ ಸಹಾಯಕ್ಕಾಗಿಮುಖ್ಯಮಂತ್ರಿಪರಿಹಾರ ನಿಧಿಖಾತೆಗೆ ದೇಣಿಗೆ ಸಲ್ಲಿಸಬಹುದಾಗಿದೆ; “ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80 -ಜಿ ಅಡಿ ಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.”

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT