ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಚಾರ್ಯರಿಂದ ಕಿರುಕುಳ ಆರೋಪ: ತರಗತಿ ಬಹಿಷ್ಕರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಂಕರ್ ಆನಂದ್ ಸಿಂಗ್ ಸರ್ಕಾರಿ ಕಾಲೇಜು ಪ್ರಾಚಾರ್ಯರ ವಿರುದ್ಧ ಪ್ರತಿಭಟನೆ
Last Updated 17 ಸೆಪ್ಟೆಂಬರ್ 2018, 10:36 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಶಂಕರ್‌ ಆನಂದ್‌ ಸಿಂಗ್‌ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಕಾಲೇಜಿನ ಮುಖ್ಯ ಪ್ರವೇಶ ದ್ವಾರದ ಎದುರು ಕುಳಿತುಕೊಂಡು ಪ್ರಾಚಾರ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದರು. ‘ಪ್ರಾಚಾರ್ಯರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳು ಏನಾದರೂ ಕೇಳಲು ಹೋದರೆ ಉಡಾಫೆಯಾಗಿ ಮಾತನಾಡುತ್ತಾರೆ. ವಿದ್ಯಾರ್ಥಿನಿಯರ ಜತೆಗೆ ಸರಿಯಾಗಿ ವರ್ತಿಸುವುದಿಲ್ಲ’ ಎಂದು ಮನವಿಯಲ್ಲಿ ವಿವರಿಸಿದರು.

‘ಕಾಲೇಜಿನಲ್ಲಿ ಅಗತ್ಯ ಮೂಲಸೌಕರ್ಯಗಳು ಇಲ್ಲ. ದಾನಿಗಳು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ, ಅದನ್ನು ಆರಂಭಿಸುತ್ತಿಲ್ಲ. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯವಿದೆ. ಪ್ರಾಚಾರ್ಯರು ಅವರಿಗಾಗಿ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಓದಲು ಪುಸ್ತಕಗಳ ವ್ಯವಸ್ಥೆ ಇಲ್ಲ. ಈ ಕುರಿತು ಪ್ರಶ್ನಿಸಿದರೆ, ‘ನಾನು ಮನೆಯಿಂದ ತಂದುಕೊಡಲೇ. ಇರುವುದರಲ್ಲೇ ಹೊಂದಿಕೊಂಡು ಹೋಗಬೇಕು’ ಎಂದು ಹೇಳುತ್ತಾರೆ’ ಎಂದು ದೂರಿನಲ್ಲಿ ಮಾಹಿತಿ ನೀಡಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌, ‘ಪ್ರಾಚಾರ್ಯರೊಂದಿಗೆ ಚರ್ಚಿಸಿ, ಆದಷ್ಟು ಶೀಘ್ರ ಮೂಲಸೌಕರ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ದೂರಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದುವರಿಯಲಾಗುವುದು’ ಎಂದು ಹೇಳಿದರು.

ಪ್ರತಿಭಟನೆಯನ್ನು ಬೆಂಬಲಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರ, ಸೋಮಶೇಖರ್‌, ಶೇಷು, ವಾಸುದೇವ, ರಮೇಶ, ಬುದ್ಧ–ಬಸವ–ಅಂಬೇಡ್ಕರ್‌ ಸಂಘಟನೆಯ ಕಾರ್ಯದರ್ಶಿ ಮಧುರ ಚೆನ್ನ ಶಾಸ್ತ್ರಿ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ವೆಂಕಟೇಶ, ಗುಜ್ಜಲ ಗಣೇಶ, ಆಟೊ ಯೂನಿಯನ್‌ ಅಧ್ಯಕ್ಷ ಕೆ.ಎಂ. ಸಂತೋಷ್‌ ಕುಮಾರ್‌, ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌.ಎಫ್‌.ಐ.) ಮುಖಂಡ ಮಂಜುನಾಥ, ಸಂತೋಷ, ಶಿವ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿ.ವೈ.ಎಫ್‌.ಐ.) ಮುಖಂಡ ರಮೇಶ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT