ಪ್ರಶ್ನೆ ಉತ್ರರ

ಅಬ್ದುಲ್ ಮಜೀದ್, ಕೊಪ್ಪಳ - ಯೋಗೇಂದ್ರ. ಎಂ, ನಾಗದೇವನಹಳ್ಳಿ.
ನಾನು ಮೆಕ್ಯಾನಿಕಲ್ ಡಿಪ್ಲೊಮಾ ಮಾಡಿದ್ದೇನೆ. ನನಗೆ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಬೇಕೆಂದು ತುಂಬಾ ಆಸೆ ಇದೆ. ಯಾವುದರಲ್ಲಿ ಕೆಲಸ ಮಾಡಿದರೆ ಉತ್ತಮ ಭವಿಷ್ಯ ಇದೆ. ಡಿಪ್ಲೊಮಾ ನಂತರ ನನಗೆ ದೊರಕುವ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಿ.


-ವಾಹನ ತಯಾರಿಕಾ ಸಂಸ್ಥೆಗಳಾದ ಟಾಟಾ, ಮಹೀಂದ್ರ, ಅಶೋಕ್ ಲೇಲ್ಯಾಂಡ್, ಬಜಾಜ್, ಮಾರುತಿ ಸುಜುಕಿ, ಟೊಯೊಟ, ಹುಂಡೈ ಇತ್ಯಾದಿಗಳಲ್ಲಿ ನೀವು ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡಲು ಅವಕಾಶ ಇರುತ್ತದೆ. ಆದ್ದರಿಂದ ಈ ಸಂಸ್ಥೆಗಳಲ್ಲಿ ಉದ್ಯೋಗ ಲಭಿಸುವ ಅವಕಾಶ ಮತ್ತು ಭವಿಷ್ಯ ಉತ್ತಮವಾಗಿ ಇರುತ್ತದೆ. ಈ ಸಂಸ್ಥೆಗಳ ಅಂತರ್ಜಾಲ ತಾಣವನ್ನು ಅವಲೋಕಿಸುತ್ತಿದ್ದರೆ ಉದ್ಯೋಗ ದೊರೆಯುವ ಮಾಹಿತಿ ಮತ್ತು ಅನುಸರಿಸಬೇಕಾದ ಕ್ರಮಗಳ ವಿವರಗಳು ದೊರೆಯುತ್ತವೆ.

ಮಂಜುನಾಥ ಎಚ್.ಎಂ
ನಾನು ಡಿಪ್ಲೊಮಾ ಮುಗಿಸಿದ್ದೇನೆ. ಅಂತಿಮ ವರ್ಷದಲ್ಲಿ ಶೇ 80 ಮತ್ತು ಒಟ್ಟು ಸರಾಸರಿ ಶೇ 74 ಅಂಕ ಪಡೆದಿದ್ದೇನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 56 ಅಂಕ ಗಳಿಸಿದ್ದೇನೆ. ಈಗ ಉದ್ಯೋಗಕ್ಕೆ ಸೇರಲು ಕಂಪೆನಿಗಳಿಗೆ ಹೋದಾಗ ಎಸ್ಸೆಸ್ಸೆಲ್ಸಿ ಕನಿಷ್ಠ ಶೇ 60 ಅಂಕ ಇರಬೇಕು ಎನ್ನುತ್ತಾರೆ. ಜೊತೆಗೆ ಎಸ್ಸೆಸ್ಸೆಲ್ಸಿ ಆದ ಮೂರು ವರ್ಷಗಳ ಬಳಿಕ ಡಿಪ್ಲೊಮಾಗೆ ಸೇರಿಕೊಂಡೆ. ಇದನ್ನು ಕಾರಣವಾಗಿಟ್ಟುಕೊಂಡು ವಯಸ್ಸಿನ ಸಮಸ್ಯೆ ಎನ್ನುತ್ತಾರೆ. ನನಗೆ ಬಿ.ಇ ಮಾಡಬೇಕೆಂಬ ಅಭಿಲಾಷೆ ಇದೆ. ಆದರೆ ಅದನ್ನು ಮಾಡಿದ ಮೇಲೂ ಹೀಗೆ ಮಾಡಿದರೆ ನನ್ನ ಶ್ರಮ ವ್ಯರ್ಥವಾಗಬಹುದು. ಏನೂ ತೋಚುತ್ತಿಲ್ಲ. ದಯಮಾಡಿ ಸೂಕ್ತ ಮಾರ್ಗದರ್ಶನ ಕೊಡಿ.


-ಉದ್ಯೋಗಕ್ಕೆ ಸೇರಲು ಎಲ್ಲ ಸಂಸ್ಥೆಗಳಲ್ಲೂ ಕನಿಷ್ಠ ಅಂಕಗಳ ಮಿತಿ ಇರುತ್ತದೆ. ಅದು ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಬೇರೆ ಬೇರೆಯಾಗಿಯೂ ಇರುತ್ತದೆ. ಆದ್ದರಿಂದ ನೀವು ಗಳಿಸಿರುವ ಅಂಕಗಳಿಗೆ ಹೊಂದುವ ಸಂಸ್ಥೆಗಳಿಗೆ ಅರ್ಜಿ ಹಾಕಿ ಉದ್ಯೋಗವನ್ನು ಅರಸಬೇಕು. ಹತ್ತನೇ ತರಗತಿಯ ನಂತರ ಕಾರಣಾಂತರಗಳಿಂದ ನಿಮ್ಮ ವಿದ್ಯಾಭ್ಯಾಸ ಮುಂದುವರಿಯದೆ ಮೂರು ವರ್ಷಗಳ ಬಳಿಕ ಪಡೆದ ಡಿಪ್ಲೊಮಾಗೆ ವಯಸ್ಸಿನ ಸಮಸ್ಯೆ ಬರಲಾರದು. ಬಿ.ಇ ಮಾಡಬೇಕೆಂಬ ಅಭಿಲಾಷೆ ಇದ್ದರೆ ನೇರವಾಗಿ ಎರಡನೇ ಬಿ.ಇ ಪದವಿಗೆ ಪ್ರವೇಶ ಪಡೆಯಲು ಅವಕಾಶ ಇದೆ ಮತ್ತು ಬಿ.ಇ ಪದವಿಯಲ್ಲಿ ಉತ್ತಮ ದರ್ಜೆ ಗಳಿಸಿದರೆ ಕೆಳಗಿನ ತರಗತಿಗಳ ಅಂಕಗಳು ಉದ್ಯೋಗವನ್ನು ಅರಸುವಾಗ ಗೌಣವಾಗುತ್ತವೆ. ಆದ್ದರಿಂದ ನೀವು ಬಿ.ಇ ಪದವಿ ಪಡೆಯಲು ಹಾಕುವ ಶ್ರಮ ವ್ಯರ್ಥವಾಗುವುದಿಲ್ಲ.

ನಾಗರಾಜ್ ಕಳಲ್
ನಾನು ಬಿ.ಇ (ಮೆಕ್ಯಾನಿಕಲ್) ಓದುತ್ತಿದ್ದೇನೆ. ನನಗೆ ಆರ್.ಟಿ.ಒ ಆಗಬೇಕೆಂಬ ಆಸೆ ಇದೆ. ಇದಕ್ಕಾಗಿ ಮಾಡಬೇಕು? ಇದರ ಪರೀಕ್ಷೆ ಮತ್ತು ಆಯ್ಕೆಗಳು ಹೇಗೆ? ಪರೀಕ್ಷೆಗೆ ನಾವು ಓದಬೇಕಾಗಿರುವ ವಿಷಯಗಳು ಯಾವುವು, ಎಷ್ಟು? ತರಬೇತಿ ಇದೆಯೇ?


- ಕೆ.ಪಿ.ಎಸ್.ಸಿ ಪರೀಕ್ಷೆಯ ಮೂಲಕವೇ ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಬಿ.ಇ ಪದವಿಯ ನಂತರ ಈ ಪರೀಕ್ಷೆ ತೆಗೆದುಕೊಳ್ಳಬಹುದು. ಆಗಿಂದಾಗ್ಗೆ ಕೆ.ಪಿ.ಎಸ್.ಸಿ ಅಂತರ್ಜಾಲ ತಾಣವನ್ನು (www.kpsc.kar.nic.in)  ಗಮನಿಸುತ್ತಿರಿ. ಅಲ್ಲಿ ಪರೀಕ್ಷೆ ಕುರಿತಾದ ಅಧಿಸೂಚನೆ, ಪಠ್ಯಕ್ರಮ (ಸಿಲೆಬಸ್) ದೊರೆಯುತ್ತದೆ. ಅಂತೆಯೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಡಿ ಬರುವ ಅಂತರ್ಜಾಲ ತಾಣ ಮತ್ತು ಪ್ರಾದೇಶಿಕ ಸಾರಿಗೆ ಆಯುಕ್ತರ ಅಂತರ್ಜಾಲ ತಾಣದಲ್ಲೂ ಇದರ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಮಾಹಿತಿಯನ್ನು ಆಧರಿಸಿ ಪರೀಕ್ಷೆಗೆ ಇರುವ ವಿಷಯ ಮತ್ತು ಅದರ ತಯಾರಿಯನ್ನು ನೀವು ಪ್ರಾರಂಭ ಮಾಡಬಹುದು.

ಐಜಾಜ್‌ ಮುಜಾವರ್
ನಾನು 2006ರಲ್ಲಿ ಡಿಪ್ಲೊಮಾಗೆ ಸೇರಿ 2012ರಲ್ಲಿ ಮುಗಿಸಿದೆ. ನಂತರ ದೂರಶಿಕ್ಷಣದಲ್ಲಿ ಬಿ.ಎಸ್ಸಿ ಮಾಡುತ್ತಿದ್ದೇನೆ. ಡಿಪ್ಲೊಮಾ ಮುಗಿಸಲು ನಾನು 6 ವರ್ಷ ತೆಗೆದುಕೊಂಡಿರುವುದರಿಂದ ಸರ್ಕಾರಿ ಕೆಲಸಕ್ಕೆ ಅರ್ಹನಾಗುತ್ತೇನೆಯೇ?


-ಯಾವುದೇ ಉದ್ಯೋಗಕ್ಕೆ ಸೇರಲು ಅರ್ಹತಾ ಪರೀಕ್ಷೆಯನ್ನು ಇಂತಿಷ್ಟೇ ಅವಧಿಯಲ್ಲಿ ಮುಗಿಸಬೇಕೆಂಬ ನಿಯಮ ಇರುವುದಿಲ್ಲ. ಆದರೆ, ಪ್ರತಿ ಉದ್ಯೋಗಕ್ಕೂ ಅರ್ಹ ಅಭ್ಯರ್ಥಿಯಾಗಲು ವಯೋಮಿತಿ ಮಾತ್ರ ಇರುತ್ತದೆ ಮತ್ತು ನಿರ್ದಿಷ್ಟ ವಯೋಮಿತಿಯನ್ನು ಆ ಉದ್ಯೋಗಕ್ಕೆ ಕರೆ ನೀಡುವಾಗ ಪ್ರಕಟಿಸುತ್ತಾರೆ. ಆದ್ದರಿಂದ ನೀವು ಆ ವಯೋಮಿತಿಯ ಒಳಗೆ ಇರುವುದು ಅಥವಾ ಇಲ್ಲದೇ ಇರುವುದು ಮಾತ್ರ ಗಣನೆಗೆ ಬರುತ್ತದೆ.

ಕಾಂಚನ ಮಾಲ, ಭದ್ರಾವತಿ
ನನ್ನ ಮಗಳು ದ್ವಿತೀಯ ಪಿ.ಯು. ಓದುತ್ತಿದ್ದು ಮುಂದೆ ಆರ್ಕಿಟೆಕ್ಚರ್ ಕೋರ್ಸ್ ಮಾಡಲು ಬಯಸಿದ್ದಾಳೆ. ಇದನ್ನು ಓದಲು ಯಾವ ಪುಸ್ತಕಗಳನ್ನು ಅಭ್ಯಾಸ ಮಾಡಬೇಕು? ವಿಶೇಷ ಸಿ.ಇ.ಟಿ ಬರೆಯಬೇಕೇ? ಇದನ್ನು ಓದಿದ ಮೇಲೆ ಸೂಕ್ತ ಉದ್ಯೋಗ ದೊರೆಯುತ್ತದೆಯೇ? ಇದು ಹೆಣ್ಣು ಮಕ್ಕಳಿಗೆ ಸೂಕ್ತವೇ?


- ತಾಂತ್ರಿಕ ಶಿಕ್ಷಣದಲ್ಲಿ ಬಿ.ಇ ಆರ್ಕಿಟೆಕ್ಚರ್ ಪದವಿಗೆ ಸೇರಲು ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ ಶಾಸ್ತ್ರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಜೊತೆಗೆ ಆ್ಯಪ್ಟಿಟ್ಯೂಡ್ ಟೆಸ್ಟ್ ತೆಗೆದುಕೊಳ್ಳಬೇಕಾಗುತ್ತದೆ. ಈ ಪರೀಕ್ಷೆಯ ಬಗ್ಗೆ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆ.ಇ.ಎ) ಅಂತರ್ಜಾಲ ತಾಣದಲ್ಲಿ (http://kea.kar.nic.in/) ಪಡೆಯಬಹುದು. ಹೆಣ್ಣು ಮಕ್ಕಳಿಗೆ ಈ ಪದವಿ ಅತ್ಯಂತ ಸೂಕ್ತವಾದುದು ಮತ್ತು ವಿಪುಲವಾದ ಉದ್ಯೋಗಾವಕಾಶಗಳು ಇರುತ್ತವೆ. ಈ ಉದ್ಯೋಗಾವಕಾಶಗಳಲ್ಲಿ ಸರ್ಕಾರಿ ಮತ್ತು ಅನೇಕ ಖಾಸಗಿ ಸಂಸ್ಥೆಗಳು ಸೇರುತ್ತವೆ.

ಪ್ರಿಯಾಂಕ ಬಿ.ಟಿ
ನಾನು ಅಂತಿಮ ವರ್ಷದ ಬಿ.ಇ ಓದುತ್ತಿದ್ದೇನೆ. ಟ್ರೇಡ್ ಸೆರಾಮಿಕ್ಸ್ ಮತ್ತು ಸಿಮೆಂಟ್ ಟೆಕ್ನಾಲಜಿ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಆದರೆ ಈಗ ಹಲವರು ಇದು ಹೆಣ್ಣು ಮಕ್ಕಳಿಗೆ ಸೂಕ್ತವಾದ ಕೋರ್ಸ್ ಅಲ್ಲ, ಇದರಲ್ಲಿ ಅವರಿಗೆ ಭವಿಷ್ಯವಿಲ್ಲ ಎನ್ನುತ್ತಿದ್ದಾರೆ. ನನಗೆ ಭವಿಷ್ಯದ ಕುರಿತು ಚಿಂತೆ ಮತ್ತು ಗೊಂದಲವಾಗುತ್ತಿದೆ. ದಯಮಾಡಿ ಸೂಕ್ತ ಸಲಹೆ ಕೊಡಿ.


- ಹೆಣ್ಣು ಮಕ್ಕಳಿಗೆ ಸೂಕ್ತವಲ್ಲದ ಕೋರ್ಸ್ ಯಾವುದೂ ಇಲ್ಲ. ಭವಿಷ್ಯದ ದೃಷ್ಟಿಯಿಂದ ಎಲ್ಲ ಕೋರ್ಸುಗಳಿಗೂ ತನ್ನದೇ ಆದ ಉದ್ಯೋಗಾವಕಾಶಗಳು ಇರುತ್ತವೆ. ಸೆರಾಮಿಕ್ಸ್ ಮತ್ತು ಸಿಮೆಂಟ್ ತಂತ್ರಜ್ಞಾನವನ್ನು ಯಥೇಚ್ಛವಾಗಿ ಬಳಸುವ ಹಲವಾರು ಖಾಸಗಿ ಸಂಸ್ಥೆಗಳು ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಇವೆ. ಅವುಗಳಲ್ಲಿ ಕೆಲವು ಜಾನ್ಸನ್, ನಿಟ್‌ಕೋ, ಖಾಜಾರಿಯಾ, ಆರ್.ಎ.ಕೆ, ಎ.ಸಿ.ಸಿ, ಯುರೋ ಇತ್ಯಾದಿ. ಆದ್ದರಿಂದ ಭವಿಷ್ಯದ ದೃಷ್ಟಿಯಿಂದ ಚಿಂತೆ ಮತ್ತು ಗೊಂದಲದ ಅವಶ್ಯಕತೆ ಇಲ್ಲ.

ಅಭಿಷೇಕ್ ಜೆ.ಕೆ
ನಾನು ಮೆಕ್ಯಾನಿಕಲ್ ಬಿ.ಇ ಅಂತಿಮ ಸೆಮಿಸ್ಟರ್‌ನಲ್ಲಿದ್ದು ಮುಂದೆ ಕೆಲಸಕ್ಕೆ ಸೇರಲೋ ಅಥವಾ ಓದಲೋ ಎಂಬ ವಿಷಯದಲ್ಲಿ ಸ್ವಲ್ಪ ಗೊಂದಲವಿದೆ. ಹಾಗಾಗಿ ಮುಂದೆ ಕೋರ್ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಬೇಕಾದರೆ ಯಾವುದಾದರೂ ಬಾಹ್ಯ ಕೋರ್ಸುಗಳ ಅಗತ್ಯವಿದೆಯೇ? ಇದ್ದರೆ ಅವು ಯಾವುವು?  ಅಂತೆಯೇ ಮುಂದೆ ಎಂ.ಟೆಕ್ ಮಾಡುವುದಾದರೆ ಯಾವ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲಿ? ಯಾವುದಕ್ಕೆ ಬೇಡಿಕೆ ಮತ್ತು ಉದ್ಯೋಗಾವಕಾಶ ಹೆಚ್ಚು?


- ಮೆಕ್ಯಾನಿಕಲ್ ವಿಭಾಗದಲ್ಲಿ ಈ ಪದವಿಯನ್ನು ಮುಗಿಸಿದ ನಂತರ ಸ್ನಾತಕೋತ್ತರ ಪದವಿಯಾದ ಎಂ.ಟೆಕ್ ಪದವಿಯನ್ನು ಅದೇ ವಿಷಯದಲ್ಲಿ ಮುಂದುವರಿಸುವುದು ಒಳ್ಳೆಯದು. ಪ್ರಸ್ತುತ ಪರಿಸ್ಥಿತಿಯಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ತಾಂತ್ರಿಕ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶ ಮತ್ತು ಭವಿಷ್ಯ ಇದೆ. ಇದಕ್ಕೆ ಕಾರಣ ಅನೇಕ ದೇಶಿ ಮತ್ತು ವಿದೇಶಿ ಖಾಸಗಿ ಸಂಸ್ಥೆಗಳು ವಾಹನಗಳ ತಯಾರಿಕೆ ಹಾಗೂ ನಿರ್ವಹಣೆಗೆ ನಮ್ಮ ದೇಶವನ್ನು ಮೂಲ ಜಾಗವನ್ನಾಗಿ ಮಾಡಿಕೊಂಡಿವೆ. ವಿಭಾಗದ ಆಯ್ಕೆಯನ್ನು ನಿಮ್ಮ ಪ್ರಾಧ್ಯಾಪಕರ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು.

ಪ್ರವೀಣ್ ಸಿ.
8. ನಾನು ಬಿ.ಬಿ.ಎಂ ಮುಗಿಸಿ ಎರಡು ವರ್ಷಗಳಿಂದ ಉದ್ಯೋಗದಲ್ಲಿದ್ದೇನೆ. ಬಿ.ಬಿ.ಎಂ ಅತ್ಯುತ್ತಮ ದರ್ಜೆಯಲ್ಲಿ ಪಾಸು ಮಾಡಿಕೊಂಡಿದ್ದರಿಂದ ಫಲಿತಾಂಶ ಬಂದ ನಂತರದ ತಿಂಗಳಿನಲ್ಲೇ ಉದ್ಯೋಗ ಪಡೆದು ಉತ್ತಮವಾದ ಸಂಬಳವನ್ನೂ ಪಡೆಯುತ್ತಿದ್ದೇನೆ. ಆದರೆ ನನಗೆ ಇನ್ನು ಓದಬೇಕು ಎನಿಸುತ್ತಿದೆ. ಮನೆಯ ಆರ್ಥಿಕ ಪರಿಸ್ಥಿತಿಯ ಕಾರಣ ಉದ್ಯೋಗ ಬಿಡಲು ಸಾಧ್ಯವಿಲ್ಲ. ಎಂ.ಬಿ.ಎ ಅಥವಾ ಸಿ.ಎ ಮಾಡಬೇಕೆಂಬ ಮಹದಾಸೆ ಇದೆ. ಆದರೆ ಮಾಡುವುದು ಹೇಗೆ? ಎರಡರಲ್ಲಿ ಯಾವುದು ಉತ್ತಮ ಮತ್ತು ಯಾವುದಕ್ಕೆ ಹೆಚ್ಚು ಬೇಡಿಕೆ ಇದೆ?

 

ಉದ್ಯೋಗ ದೊರೆತು ಉತ್ತಮವಾದ ಸಂಬಳ ದೊರೆಯುತ್ತಿದ್ದರೂ ಮುಂದೆ ಓದಬೇಕೆಂಬ ನಿಮ್ಮ ಹಂಬಲ ಪ್ರಶಂಸನೀಯವಾದುದು. ಸದ್ಯದ ಪರಿಸ್ಥಿತಿಯಲ್ಲಿ ನೀವು ಮುಂದಿನ ವಿದ್ಯಾಭ್ಯಾಸಕ್ಕಾಗಿ ಎಂ.ಬಿ.ಎ ಪದವಿಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಈ ಪದವಿಯನ್ನು ಸಂಜೆ ಕಾಲೇಜು ಅಥವಾ ದೂರ ಶಿಕ್ಷಣದ ಮೂಲಕ ಅಭ್ಯಾಸ ಮಾಡಬಹುದು.


ಚೈತ್ರ
9. ನಾನು 2003ರಲ್ಲಿ ಸಿ.ಎಸ್ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿ, ನಂತರ 5 ವರ್ಷ ಉದ್ಯೋಗ ನಿರ್ವಹಿಸಿದ್ದೇನೆ. ಬಳಿಕ ಆರೋಗ್ಯದ ತೊಂದರೆಯಿಂದಾಗಿ ಉದ್ಯೋಗವನ್ನು ಬಿಟ್ಟು ಈಗ ಮನೆಯಲ್ಲೇ ಇದ್ದೇನೆ. ಮುಂದೆ ಓದಲು ಮನಸ್ಸಾಗುತ್ತಿದೆ. ಹಾಗಾಗಿ ಈಗ ನಾನು ಲ್ಯಾಟರಲ್ ಎಂಟ್ರಿ ಮೂಲಕ ಬಿ.ಸಿ.ಎ ದ್ವಿತೀಯ ವರ್ಷಕ್ಕೆ ಸೇರಬಹುದೇ? ಭವಿಷ್ಯದ ದೃಷ್ಟಿಯಿಂದ ಇದು ಸೂಕ್ತವೇ?


ಉದ್ಯೋಗ ಪಡೆದ ನಂತರವೂ ಮುಂದೆ ಓದಬೇಕೆಂಬ ನಿಮ್ಮ ಹಂಬಲ ಉತ್ತಮವಾದದ್ದು. ವಿಶ್ವವಿದ್ಯಾಲಯದಲ್ಲಿ ನಿಯಮಗಳ ಪ್ರಕಾರ ಆಯ್ಕೆ ಇದ್ದರೆ ಬಿ.ಸಿ.ಎ ದ್ವಿತೀಯ ವರ್ಷಕ್ಕೆ ನೀವು ಪ್ರವೇಶ ಪಡೆಯಲು ಅಡ್ಡಿಯಿಲ್ಲ. ಭವಿಷ್ಯದ ದೃಷ್ಟಿಯಿಂದ ಬಿ.ಸಿ.ಎ ನಂತರ ಸ್ನಾತಕೋತ್ತರ ಪದವಿಯನ್ನು ಎಂ.ಸಿ.ಎ ಮೂಲಕ ಗಳಿಸಬಹುದು.

ಗಣೇಶ್
10. ನಾನು ಪಿ.ಡಬ್ಲ್ಯು.ಡಿ.ಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೇನೆ. ಸಿವಿಲ್ ಎಂಜಿನಿಯರ್ ಡಿಪ್ಲೊಮಾ ಮಾಡಿಕೊಂಡಿದ್ದೇನೆ. ನನಗೆ 49 ವರ್ಷ. ಈಗ ದೂರಶಿಕ್ಷಣದ ಮೂಲಕ ಎಂ.ಎ ಅಥವಾ ಎಂ.ಎಸ್ಸಿ ಮಾಡಬೇಕೆಂದಿದ್ದೇನೆ. ನಾನು ಈಗ ಈ ಪದವಿಯನ್ನು ನೇರವಾಗಿ ಪಡೆದುಕೊಳ್ಳಬಹುದೇ ಅಥವಾ ನನ್ನ ವಯಸ್ಸಿನ ಆಧಾರದ ಮೇಲೆ ಪಡೆದುಕೊಳ್ಳಬೇಕೇ?


ವಯಸ್ಸಿನ ಆಧಾರದ ಮೇಲೆ ನೀವು ದೂರಶಿಕ್ಷಣದ ಮೂಲಕ ಎಂ.ಎ ಅಥವಾ ಎಂ.ಎಸ್ಸಿ ಪದವಿಗೆ ಅಭ್ಯಾಸ ಮಾಡಬಹುದು. ಆದರೆ ಅಭ್ಯಾಸ ಮಾಡದೆ ನೇರವಾಗಿ ವಯಸ್ಸಿನ ಆಧಾರದ ಮೇಲೆ ಯಾವುದೇ ಪದವಿಯನ್ನು ಯಾರೂ ಪಡೆಯಲು ಸಾಧ್ಯವಿಲ್ಲ.