ಶುಕ್ರವಾರ, ನವೆಂಬರ್ 22, 2019
20 °C

ಲವ್‌ ಜಿಹಾದ್‌ ಕುರಿತ ಕುಟುಕು ಕಾರ್ಯಾಚರಣೆ: ಪ್ರಮೋದ್ ಮುತಾಲಿಕ್‌ ಖುಲಾಸೆ

Published:
Updated:
Prajavani

ಹುಬ್ಬಳ್ಳಿ: ತೆಹಲ್ಕಾ ಸಂಸ್ಥೆ ನಡೆಸಿದ್ದ ಲವ್‌ ಜಿಹಾದ್‌ ಕುರಿತ ಕುಟುಕು ಕಾರ್ಯಾಚರಣೆ ಆಧಾರದ ಮೇಲೆ ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸ್ಥಳೀಯ ಜೆಎಂಎಫ್‌ಸಿ 2ನೇ ನ್ಯಾಯಾಲಯ ಮುತಾಲಿಕ್‌ ಅವರನ್ನು ಶನಿವಾರ ಆರೋಪ ಮುಕ್ತಗೊಳಿಸಿದೆ.

2010ರಲ್ಲಿ ಘಟನೆ ನಡೆದಿತ್ತು. ಪ್ರಮೋದ್‌ ಮುತಾಲಿಕ್‌ ಹಾಗೂ ಬೆಂಗಳೂರು ನಗರದ ಶ್ರೀರಾಮಸೇನೆ ಅಧ್ಯಕ್ಷ ವಸಂತಕುಮಾರ ಭವಾನಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿತ್ತು. ಈ ಕುರಿತು ಪೊಲೀಸರು 2015ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಧೀಶ ವಿಶ್ವನಾಥ ಮೂಗತಿ ಅವರು ಸಾಕ್ಷ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದರು. ಪ್ರಮೋದ್‌ ಮುತಾಲಿಕ್‌ ಪರ ಲಕ್ಷ್ಮಣ ಮೊರಬ ಹಾಗೂ ವಿಶ್ವನಾಥ ಬಾಳಿಕಾಯಿ ವಾದ ಮಂಡಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮುತಾಲಿಕ್‌ ‘ನನ್ನ ಬಳಿ ಲವ್‌ ಜಿಹಾದ್‌ಗೆ ಸಂಬಂಧಿಸಿದ ಪೇಂಟಿಂಗ್‌ಗಳು ಇವೆ. ಅವುಗಳ ಪ್ರದರ್ಶನಕ್ಕೆ ಸಹಾಯ ಮಾಡಬೇಕು ಎಂದುಕೊಂಡು ದೆಹಲಿಯಿಂದ ಪುಷ್ಪರಾಜ್‌ ಎನ್ನುವ ವ್ಯಕ್ತಿ ವಿಡಿಯೊ ಮಾಡಿಕೊಂಡಿದ್ದ. ಪ್ರಕರಣ ದಾಖಲಾದ ಮೇಲೆ ಆ ವ್ಯಕ್ತಿ ಒಮ್ಮೆಯೂ ವಿಚಾರಣೆಗೆ ಹಾಜರಾಗಲಿಲ್ಲ. ಸತ್ಯದ ಹೋರಾಟಕ್ಕೆ ಸಿಕ್ಕ ಗೆಲುವು ಇದು’ ಎಂದರು.

‘2009ರಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಮಾಡಿದ್ದ ಪಬ್‌ ಘಟನೆ ವಿರುದ್ಧ ನಮ್ಮ ಸಂಘಟನೆಯಿಂದ ಸಾಕಷ್ಟು ಹೋರಾಟ ಮಾಡಿದ್ದೆವು. ಆದ್ದರಿಂದ ನನ್ನನ್ನು ಮಟ್ಟ ಹಾಕಲು ಮಾಡಿದ್ದ ವ್ಯವಸ್ಥಿತ ಪಿತೂರಿ ಇದಾಗಿತ್ತು. ಈ ತೀರ್ಪಿನಿಂದ ಸಂತೋಷವಾಗಿದೆ; ಘಟನೆ ನಡೆದಾಗ ನನ್ನನ್ನು ನಡೆಸಿಕೊಂಡ ರೀತಿಯ ಬಗ್ಗೆಯೂ ಬೇಸರವಿದೆ. ನನ್ನ ಮೇಲಿರುವ ಇನ್ನೂ 12 ಪ್ರಕರಣಗಳಲ್ಲಿ ಗೆಲುವು ಪಡೆಯುವ ವಿಶ್ವಾಸವಿದೆ. ಹಿಂದೂಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಕೈಬಿಡಬೇಕು ಎಂದು ಸರ್ಕಾರಕ್ಕೂ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)