ಭಾನುವಾರ, ನವೆಂಬರ್ 17, 2019
21 °C
ಭಿನ್ನತೆ – ವಿರೋಧಗಳ ನಡುವಿನ ವೈಚಾರಿಕ ಸಂವಾದವೇ ಪ್ರಜಾತಂತ್ರದ ನರನಾಡಿ

ಸೈದ್ಧಾಂತಿಕ ಸಂವಾದದ ಸಮಕ್ಷಮದಲ್ಲಿ...

Published:
Updated:
Prajavani

ನಮ್ಮ ವಿದ್ವತ್ ವಲಯದಲ್ಲಿ ನಡೆಯುವ ಚರ್ಚೆಗಳಲ್ಲಿ ನಾವು ಎಡ ಮತ್ತು ಬಲ ಸಿದ್ಧಾಂತಗಳ ರಾಜಕೀಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತೇವೆ ಮತ್ತು ವಿಶ್ಲೇಷಿಸುತ್ತೇವೆ. ಆದರೆ, ಸಾರ್ವಜನಿಕ ವೇದಿಕೆಗಳಲ್ಲಿ ಎಡ ಮತ್ತು ಬಲಪಂಥೀಯ ಪರಿಕಲ್ಪನೆಗಳನ್ನು ಜನಪ್ರಿಯ ಮಾತುಗಾರಿಕೆಯ ವೈಖರಿಯಿಂದ ಪರಸ್ಪರ ಛೇಡಿಸುತ್ತ ಸಭಿಕರ ಚಪ್ಪಾಳೆಗಳಿಗೆ ಪುಳಕಿತಗೊಳ್ಳುತ್ತೇವೆ.

ಇತ್ತೀಚೆಗಿನ ದಿನಗಳಲ್ಲಂತೂ ಎಡ- ಬಲಗಳೆಂಬ ಪದಗಳು ಭಾಷಿಕ ನಿಘಂಟುಗಳಿಗೆ ಸೇರಿದ ಹೊಸ ಬೈಗುಳಗಳೋ ಎಂದೂ ಭಾಸವಾಗುತ್ತಿವೆ. ಒಂದು ಕಾಲಕ್ಕೆ ಎಡ ಮತ್ತು ಬಲಪಂಥಗಳ ನಡುವಣ ವಾಗ್ವಾದವು ಭಾರತದ ಸಂದರ್ಭದಲ್ಲಿ ವಸಿಷ್ಠ- ವಿಶ್ವಾಮಿತ್ರರ ವಾಗ್ವಾದದಂತೆ, ಶಂಕರ- ಮಂಡನಮಿಶ್ರರ ಬೌದ್ಧಿಕ ಸೆಣಸಾಟದಂತೆ, ಗಾಂಧಿ- ಅಂಬೇಡ್ಕರ್‌ ಅವರು ನಡೆಸಿದ ಗಹನ ಸಾಮಾಜಿಕ ಮೀಮಾಂಸೆಯಂತೆ ಗಂಭೀರವಾಗಿತ್ತು. ಆದರೆ ಇಂದು ಅದು, ಅಂದಿನ ಧೀಮಂತ ಸಂವಾದದ ಸ್ವಯಂಪ್ರಭೆಯನ್ನು ಕಳೆದುಕೊಂಡು ಪುಢಾರಿಗಳ ಬಾಯಿಚಪಲದ ಪಂಥಾಹ್ವಾನದಂತೆ ಕೇಳಿಸುತ್ತಿದೆ.

ನಮ್ಮ ಸಮಾಜದಲ್ಲಿ ಎಡ ಮತ್ತು ಬಲದ ಪ್ರಶ್ನೆ ಬಹಳ ಸಾಪೇಕ್ಷವಾಗಿರುವಂತಹದ್ದು. ‘ಉಗ್ರ ಎಡ’ಕ್ಕೆ ‘ಸಾಧಾರಣ ಎಡ’ ಬಲಪಂಥವಾಗಿ ಕಾಣಬಹುದು. ‘ತೀವ್ರ ಬಲ’ಕ್ಕೆ ‘ಸಂಯಮದ ಬಲ’ ಎಡಪಂಥವಾಗಿ ಕಾಣಬಹುದು. ಎಡಪಂಥೀಯ ಚಿಂತನೆಯು ಸತ್ಯದ ಸ್ವರೂಪದ ಕುರಿತು ಅಥವಾ ವಾಸ್ತವದ ನೆಲೆಗಟ್ಟಿನ ಕುರಿತು ಅನೇಕ ಮೂಲಜಿಜ್ಞಾಸಿಕ ಪ್ರಶ್ನೆಗಳನ್ನು ಎತ್ತುತ್ತದೆ. ಆ ಪ್ರಕಾರ ಯಾವುದೇ ಸಮಾಜದ ‘ಯಜಮಾನ ಸ್ಥಾನ’ದಲ್ಲಿರುವ ವಿಚಾರಗಳನ್ನು ಪ್ರಶ್ನಿಸುವ ಮತ್ತು ಸಮಸ್ಯಾತ್ಮಕಗೊಳಿಸುವ ವಿಮರ್ಶಾತ್ಮಕ ನಿಲುವುಗಳೆಲ್ಲವೂ ಎಡಪಂಥೀಯವೇ. ನಮ್ಮ ಇಂದಿನ ಎಡಪಂಥದ ಮಡಿಮೈಲಿಗೆಯ ಅಂಧವಿಶ್ವಾಸವನ್ನು ಸ್ವಲ್ಪ ಬದಿಗೆ ಸರಿಸಿದರೆ, ಬಲಪಂಥೀಯ
ರೆಂದು ನಾವು ಭಾವಿಸಿದ ಅನೇಕರು ಎಡಪಂಥೀಯರೇ ಆಗಿಬಿಡುತ್ತಾರೆ. ಒಂದರ್ಥದಲ್ಲಿ ಎಡ ಮತ್ತು ಬಲ ಎನ್ನುವ ನಮ್ಮ ಈ ವೈಚಾರಿಕ ಪ್ರತ್ಯೇಕೀಕರಣಗಳು ತಿಳಿವಳಿಕೆಯ ಅನುಕೂಲಕ್ಕಾಗಿ ನಾವು ರೂಪಿಸಿಕೊಂಡ ಪರಿಕಲ್ಪನಾತ್ಮಕ ಪ್ರಭೇದಗಳಷ್ಟೇ ಆಗಿವೆ. ಪ್ರತಿಭಾನ್ವಿತ ಚಿಂತಕ ರಾಮ ಮನೋಹರ ಲೋಹಿಯಾ ಅವರು ಎಡ-ಬಲ ಕುರಿತಾದ ತಮ್ಮ ಜಿಜ್ಞಾಸೆಯಲ್ಲಿ, ಪ್ರತ್ಯೇಕೀಕರಣದ ಅತಿರೇಕಗಳಿಂದ ಉಂಟಾಗುವ ಅಪಾಯದ ಕುರಿತು ಬರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

ಎಡ ಮತ್ತು ಬಲಪಂಥೀಯ ವಿಚಾರಗಳ ನಡುವೆ ಸಂವಾದ ನಡೆಸಬೇಕು ಎಂದು ಆಗ್ರಹಿಸುವವರನ್ನು ‘ಬಲಪಂಥಕ್ಕೆ ತಮ್ಮನ್ನು ತಾವು ಮಾರಿಕೊಂಡವರು’ ಎಂದು ಯಾರಾದರೂ ತಿಳಿದುಕೊಂಡರೆ, ಅದು ಅವರ ಸಮಸ್ಯೆ. ಸದ್ಭಾವನೆಯಿಂದ ಪ್ರಶ್ನಿಸುವುದು, ಸಂದೇಹಿಸುವುದು ಹಾಗೂ ರಾಜಕೀಯ ನಿಲುವುಗಳನ್ನು ವಿಮರ್ಶಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಆರೋಗ್ಯಕ್ಕೆ ಅತ್ಯಗತ್ಯ. ಸಂವಾದವೇ ಪ್ರಜಾತಂತ್ರದ ಅತ್ಯಂತ ಮುಖ್ಯ ಭಾಗ ಎಂದು ಪ್ರತಿಪಾದಿಸುವವರು ಯಾವುದೇ ಬಗೆಯ ಎಡ- ಬಲಪಂಥೀಯರ ಸೆಕ್ಯುರಿಟಿ ತಪಾಸಣೆಗೆ ಒಳಗಾಗಬೇಕಾದಂತಹ ಪರಿಸ್ಥಿತಿ ನಮ್ಮ ದೇಶದಲ್ಲಿ ಬಂದಿದೆಯೇ? ಹಾಗಿದ್ದಲ್ಲಿ ಅದು ಅತ್ಯಂತ ನಾಚಿಕೆಗೇಡಿನ ವಿದ್ಯಮಾನ. ತಮಗಿಂತ ಭಿನ್ನವಾದ ರಾಜಕೀಯ ನಿಲುವಿನವರ ಸೈದ್ಧಾಂತಿಕ ತಪಾಸಣೆಯನ್ನು ನಡೆಸುವ ಯಾವ ಸಿದ್ಧಾಂತಿಗಳೂ ಆರೋಗ್ಯಕರವಾದ ಚಿಂತನಶೀಲ ಸಮಾಜವನ್ನು ಪ್ರತಿಬಿಂಬಿಸಲಾರರು.

ಯಾವುದೇ ಸಮಾಜವು ವಿಭಿನ್ನ ಸಾಮಾಜಿಕ ನೆಲೆಗಳಿಂದ ಭಿನ್ನಭಿನ್ನ ರೀತಿಯ ಯೋಚನೆಗಳನ್ನು ಮತ್ತು ಕೆಲವೊಮ್ಮೆ ಪರಸ್ಪರ ವಿರೋಧಿಯಾಗಿರುವ ಚಿಂತನೆಗಳನ್ನು ಹುಟ್ಟುಹಾಕುತ್ತದೆ. ಈ ಭಿನ್ನತೆ ಹಾಗೂ ವಿರೋಧಗಳ ನಡುವೆ ಸಂವಾದ ಸಾಧ್ಯವಿದೆ ಮತ್ತು ಈ ಸಂವಾದವೇ ಪ್ರಜ್ಞಾವಂತ ಸಮಾಜದ ನಿರ್ಮಾಣಕ್ಕೆ ಬುನಾದಿಯೆಂದು ಅನೇಕ ಪ್ರಾಜ್ಞರು ಪ್ರತಿಪಾದಿಸಿ
ದ್ದಾರೆ. ನಮ್ಮ ನಡುವೆ ನಡೆಯಬೇಕಾದ ಈ ವೈಚಾರಿಕ ಸಂವಾದವೇ ಪ್ರಜಾತಂತ್ರದ ನರನಾಡಿಯೂ ಆಗಿದೆ.

ಲೋಕತಂತ್ರವು ಅತ್ಯಂತ ವಿಚಾರಶೀಲತೆಯಿಂದ ಪ್ರತಿಪಾದಿಸುವ ಈ ಸಂವಾದದ ಸ್ವರೂಪವೇನು? ಸಂವಾದವೆಂದರೆ ಮಾತಿನ ಕೂರಂಬುಗಳಿಂದ ಒಬ್ಬರನ್ನೊಬ್ಬರು ಚುಚ್ಚುವ ವಾಗ್ಯುದ್ಧವಲ್ಲ. ಅದು ವಿವೇಕ–ವಿವೇಚನೆಗಳಿಂದ ನಡೆಯಬೇಕಾದ ಚಿಂತನ- ಮಂಥನ. ಈ ಸಂವಾದದಲ್ಲಿ ಸೋಲು ಅಥವಾ ಗೆಲುವುಗಳಿಲ್ಲ. ಒಂದು ಮಾತು ಮೇಲುಗೈ ಸಾಧಿಸಿದರೆ ಅದಕ್ಕೆ ಎದುರಾದ ಇನ್ನೊಂದು ಮಾತು ಸೋತು ಹೋಯಿತು ಎಂದಲ್ಲ. ಗೆದ್ದ ಮಾತು ಸೋತ ಮಾತಿನ ತಿಳಿವನ್ನು ಒಳಗೊಳ್ಳುವುದರಿಂದ ಸೋಲು- ಗೆಲುವು ಇಲ್ಲಿ ಅಪ್ರಸ್ತುತ. ಹೆಗಲ್, ಮಾರ್ಕ್ಸ್ ಮೊದಲಾದ, ಜಗತ್ತಿನ ಶ್ರೇಷ್ಠ ತತ್ವಜ್ಞಾನಿಗಳು ‘ದ್ವಂದ್ವಾತ್ಮಕತೆ’ (ಡಯಲೆಕ್ಟಿಕ್ಸ್) ಎನ್ನುವ ತಮ್ಮ ತತ್ವಜ್ಞಾನೀಯ ನುಡಿಗಟ್ಟುಗಳಲ್ಲಿ ಹೇಳುವುದು ಈ ಸೋಲು-ಗೆಲುವಿನ ಆಚೆ ಜರುಗುವ ವಿಶ್ವ ವಿಕಾಸದ ಕಥೆಯನ್ನು. ಎರಡು ವಿಭಿನ್ನ ವಿಚಾರಗಳ ನಡುವಿನ ಕರ್ಷಣೆಯಲ್ಲಿ ಮೂರನೆಯ ಹೊಸ ವಿಚಾರವೊಂದು ಹುಟ್ಟುತ್ತದೆ ಎಂದು ಹೆಗಲ್ ಹೇಳಿದರೆ, ಎರಡು ಭೌತಿಕ ವಾಸ್ತವಗಳ ನಡುವಿನ ಹಣಾಹಣಿಯಲ್ಲಿ ಮೂರನೆಯ ಹೊಸ ವಾಸ್ತವವೊಂದು ಮೂಡುತ್ತದೆ ಎಂದು ಮಾರ್ಕ್ಸ್ ಹೇಳುತ್ತಾನೆ.

ತತ್ವಜ್ಞಾನ ಮತ್ತು ತತ್ವಜ್ಞಾನಿಗಳ ಮಾತು ಹಾಗಿರಲಿ. ಪ್ರಜಾಪ್ರಭುತ್ವವೆನ್ನುವ ನಮ್ಮ ಇಂದಿನ ಅಮಿತ ಜೀವನ
ದರ್ಶನವೂ ಮಾತುಗಳ, ವಿಚಾರಗಳ, ಜೀವನಕ್ರಮಗಳ ನಡುವಿನ ದ್ವಂದ್ವಾತ್ಮಕ ತಿಕ್ಕಾಟದಿಂದ ರೂಪುಗೊಳ್ಳುವ ಚಲನಶೀಲವಾದ ಸತ್ಯವನ್ನು ಪ್ರತಿಪಾದಿಸುತ್ತದೆ. ಈ ಸತ್ಯಶೋಧನೆಯ ಚಟುವಟಿಕೆಯು ಜಯಾಪಜಯಗಳ ಸ್ವಾರ್ಥಪರ ನಿಲುವನ್ನು ಮೀರಿ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸತ್ಯದ ಪ್ರಯೋಗಶೀಲತೆಯ ಮಾತುಗಳನ್ನಾಡಿದ ಮಹಾತ್ಮ ಗಾಂಧಿಯ ಈ ನಾಡಿನಲ್ಲಿ ಸಂವಾದ ನಡೆಯಬೇಕು, ವಿಚಾರಗಳ ಪ್ರಜಾತಾಂತ್ರಿಕ ವಿನಿಮಯ ಸಂಭವಿಸಬೇಕು ಎಂದು ಯಾರಾದರೂ ಹೇಳಿದರೆ ಅದು ಅಪರಾಧವಾಗುವುದೇ? ಮುಕ್ತಭಾವದ ವಿಚಾರಗಳು ಸಮಾಜದ ಆರೋಗ್ಯವನ್ನು ಪ್ರತಿನಿಧಿಸುತ್ತವೆ ಎಂದು ಹೇಳುವವರು ಸೈದ್ಧಾಂತಿಕ ರಕ್ತ
ಪರೀಕ್ಷೆಗೆ ಒಳಗಾಗಬೇಕೇ? ಶ್ರೇಷ್ಠವಾದ ಎಡಪಂಥೀಯ ವಿಚಾರಗಳು, ಅಷ್ಟೇ ಶ್ರೇಷ್ಠವಾದ ಬಲಪಂಥೀಯ ವಿಚಾರಗಳೊಂದಿಗೆ ಮುಖಾಮುಖಿಯಾಗಬೇಕು ಎಂದು ಹೇಳಿದರೆ, ಬಲಪಂಥೀಯ ರಾಜಕಾರಣದ ಹಿಂಸಾರಭಸಮತಿಯನ್ನು ಸಮರ್ಥಿಸಿದಂತೆ ಆಗುವುದೇ?

ಹಿಂಸೆ ಯಾವ ಹೆಸರಿನಲ್ಲಿಯೇ ನಡೆಯಲಿ, ಯಾವ ಸಿದ್ಧಾಂತದ ಆಶ್ರಯದಲ್ಲಿಯೇ ನಡೆಯಲಿ, ಅದು ಹಿಂಸೆಯೇ. ಜಗತ್ತಿನ ಚರಿತ್ರೆಯಲ್ಲಿ ಎಡ ಮತ್ತು ಬಲಪಂಥೀಯ ಅಧಿಕಾರಶಾಹಿ ವ್ಯವಸ್ಥೆಗಳು ಮಾನವ ಸಮುದಾಯಗಳ ಮೇಲೆ ಬೇರೆಬೇರೆ ಹೆಸರಿನಲ್ಲಿ, ಬೇರೆಬೇರೆ ಕಾರಣಗಳಿಗಾಗಿ ಮತ್ತು ಬೇರೆಬೇರೆ ಸಂದರ್ಭಗಳಲ್ಲಿ ನಿರಂತರವಾಗಿ ಹಿಂಸೆಯನ್ನು ಎಸಗಿವೆ. ತಾವು ನಡೆಸಿದ ಹಿಂಸೆಗೆ ತಮ್ಮ ಮೂಗಿನ ನೇರದ ಸೈದ್ಧಾಂತಿಕ ಸಮರ್ಥನೆಗಳನ್ನೂ ನೀಡಿವೆ ಎನ್ನುವುದು ಸದಾ ನಮ್ಮ ನೆನಪಿನಲ್ಲಿರಬೇಕು. ಹಿಂಸೆ ಮತ್ತು ಮತಾಂಧತೆಯ ವಿರುದ್ಧ, ಮಾನವ ಸ್ವಾತಂತ್ರ್ಯದ ಪರವಾದ ಹೋರಾಟಗಳು ನಿರಂತರವಾಗಿ ನಡೆಯುತ್ತಾ ಬಂದಿವೆ.

ಇಷ್ಟರವರೆಗಿನ ವಾದದ ಹಿನ್ನೆಲೆಯಲ್ಲಿ ಎಡ ಮತ್ತು ಬಲಪಂಥೀಯತೆಗಳ ನಡುವಿನ ಸಂವಾದವು ರಾಷ್ಟ್ರವಾದ, ಅಭಿವೃದ್ಧಿ, ಪ್ರಜಾಸತ್ತೆ ಮತ್ತು ಸೆಕ್ಯುಲರ್‌ ವಾದಗಳೆಂಬ ಆಧುನಿಕತೆಯ ನಾಲ್ಕು ಪ್ರಮುಖ ವಿದ್ಯಮಾನಗಳ ಕುರಿತು ನಡೆಯಬೇಕಾಗಿದೆ. ಯಾಕೆಂದರೆ ನಮ್ಮ ಈಗಿನ ಪ್ರಕ್ಷುಬ್ಧ ಕಾಲಘಟ್ಟ ಈ ವಿದ್ಯಮಾನಗಳ ಕುರಿತು ಸೈದ್ಧಾಂತಿಕ ಹಟಮಾರಿತನದಿಂದ ಮುಕ್ತವಾದ ಹೊಸ ಬಗೆಯ ಅರ್ಥನಿರೂಪಣೆಗಳನ್ನು ಬಯಸುತ್ತದೆ. ಅದು ಸಾಧ್ಯವಾಗಬೇಕಿದ್ದರೆ ಎಡ ಮತ್ತು ಬಲಪಂಥೀಯ ಪರಂಪರೆಗಳು ತಮ್ಮತಮ್ಮ ಬೌದ್ಧಿಕ ಇತಿಹಾಸದಲ್ಲಿ ಮರೆತಿರುವ ಅಥವಾ ಅಳಿಸಿ ಹಾಕಿರುವ ತತ್ವಜ್ಞಾನೀಯ ಸಂಪನ್ಮೂಲಗಳನ್ನು ಮರುಶೋಧಿಸ
ಬೇಕಾಗಿದೆ.

ಪ್ರತಿಕ್ರಿಯಿಸಿ (+)