ಶುಕ್ರವಾರ, ನವೆಂಬರ್ 22, 2019
24 °C

ಹಾಕಿದ್ದಕ್ಕೆ ಹತ್ತುಹಾಕದ್ದಕ್ಕೆ ಒಂದು!

Published:
Updated:
Prajavani

ಸಂಬಳದ ದಿನ. ರಾತ್ರಿ ಹತ್ತಾದರೂ ಗಂಡ ತೆಪರೇಸಿ ಇನ್ನೂ ಮನೆಗೆ ಬಂದಿಲ್ಲ. ಎಲ್ಲಿಗೆ ಹೋಗಿರಬಹುದು? ಸಿನಿಮಾ, ಬಾರು ಅಂತ ಸ್ನೇಹಿತರ ಜೊತೆ ಕೂತಿರಬಹುದಾ? ಫೋನ್ ಕೂಡ ತೆಗೀತಿಲ್ಲ... ಆತಂಕಗೊಂಡ ಹೆಂಡತಿ ಪಮ್ಮಿ ಮತ್ತೊಮ್ಮೆ ಕರೆ ಮಾಡಲು ಮೊಬೈಲ್ ಕೈಗೆತ್ತಿಕೊಂಡಳು. ಅಷ್ಟರಲ್ಲಿ ಬಾಗಿಲು ಬಡಿದ ಸದ್ದಾಯಿತು.

ಬಾಗಿಲು ತೆರೆದರೆ ತೆಪರೇಸಿ ಬೆಪ್ಪನಂತೆ ಮುಖ ಒಣಗಿಸಿಕೊಂಡು ನಿಂತಿದ್ದ. ವಿಸ್ಕಿ ವಾಸನೆ ‘ಘಂ’ ಅಂತ ಪಮ್ಮಿ ಮೂಗಿಗೆ ಬಡಿಯಿತು.

‘ಯಾಕ್ರೀ ಲೇಟು? ಎಲ್ಲೋಗಿದ್ರಿ? ಫ್ರೆಂಡ್ಸ್ ಸಿಕ್ಕಿದ್ರಾ? ಚೆನ್ನಾಗಿ ಗುಂಡು ಹಾಕಿದ್ರಿ ತಾನೆ? ಸಂಬಳ ಎಲ್ಲಿ?’

ಪಮ್ಮಿ ಪ್ರಶ್ನೆಗಳಿಗೆ ತೆಪರೇಸಿ ಉತ್ತರಿಸದೆ ಸೀದಾ ಒಳ ನಡೆದು ಸೋಫಾ ಮೇಲೆ ಕುಕ್ಕರಿಸಿದ.

‘ಯಾಕ್ರೀ ಡಲ್ಲಾಗಿದೀರಾ? ಗುಂಡು ಜಾಸ್ತಿ ಆಯ್ತು ಅನ್ಸುತ್ತೆ. ಸಂಬಳದ ದುಡ್ಡೆಲ್ಲಿ?’

ತೆಪರೇಸಿ ಮಾತಾಡದೆ ಜೇಬಿನಿಂದ ಹಣ ತೆಗೆದು ಪಮ್ಮಿ ಕೈಗಿಟ್ಟ. ಹಣ ಎಣಿಸಿದ ಪಮ್ಮಿ ‘ಏನ್ರಿ ಇದೂ? ನಿಮ್ಮ ಸಂಬಳ ಎಷ್ಟು?’

‘ಹದಿನೈದು ಸಾವಿರ...’

‘ಮತ್ತೆ ಮೂರೂವರೆ ಕೊಟ್ಟಿದೀರಾ?’

‘ಹಾಕಿದ್ದಕ್ಕೆ ಹತ್ತು, ಹಾಕದಿದ್ದಕ್ಕೆ ಒಂದು ಹೋಯ್ತು...’

‘ಅಂದ್ರೆ?’

‘ಗುಂಡು ಹಾಕಿದ್ದಕ್ಕೆ ಹತ್ತು ಸಾವಿರ, ಹೆಲ್ಮೆಟ್ ಹಾಕದಿದ್ದಕ್ಕೆ ಒಂದು ಸಾವಿರ ದಂಡ... ಪೊಲೀಸ್‍ನೋರು ಕಿತ್ಕಂಡ್ರು’.

‘ಅಯ್ಯೋ... ಅಷ್ಟೊಂದಾ?’

‘ಅದಿಲ್ಲ ಇದಿಲ್ಲ ಅಂತ ಒಟ್ಟು ಇಪ್ಪತ್ತಮೂರು ಸಾವಿರ ದಂಡ ಹಾಕಿದ್ರು. ಸರ್ಕಾರದೋರು ಈಗ ಹೊಸ ಟ್ರಾಫಿಕ್ ರೂಲ್ಸ್ ತಂದಿದಾರಂತೆ...’

‘ಹೌದಾ? ನಿಜ ಹೇಳ್ತಿದೀರಾ?’ ಪಮ್ಮಿಗೆ ಅನುಮಾನ. ತೆಪರೇಸಿ ಜೇಬಿನಿಂದ ರಸೀದಿ ತೆಗೆದು ಅವಳ ಕೈಗಿಟ್ಟ.

ರಸೀದಿ ನೋಡಿದ ಪಮ್ಮಿ ‘ಮತ್ತೆ ಉಳಿದ ದಂಡಕ್ಕೆ ಏನು ಮಾಡಿದ್ರಿ?’ ಕೇಳಿದಳು.

‘ಉಳಿದ ದಂಡಕ್ಕೆ ಈ ಡಬ್ಬಾ ಬೈಕ್ ನೀವೇ ಇಟ್ಕಳಿ ಅಂತ ಹೇಳಿ ನಡ್ಕಂಡ್ ಮನೆಗೆ ಬಂದೆ...!’ ತೆಪರೇಸಿ ಉಸಿರುಬಿಟ್ಟ.

ಪ್ರತಿಕ್ರಿಯಿಸಿ (+)