ಬುಧವಾರ, ಸೆಪ್ಟೆಂಬರ್ 23, 2020
24 °C

ಇಂದು ಶಾಲೆಗಾಗಿ ನಾವು ನೀವು:360 ಹುದ್ದೆಗಳು ಖಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ನೂರಾರು ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಜುಲೈ 5ರಂದು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಆಚರಿಸಲು ಉದ್ದೇಶಿಸಿದ `ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳು, ಅನಾದರ ತೋರುವ ಸಾಧ್ಯತೆಗಳಿವೆ.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯಂತೆ ಒಟ್ಟು 360 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ತಾಲ್ಲೂಕಿನ 284 ಪ್ರಾಥಮಿಕ ಶಾಲೆಗಳಲ್ಲಿ 1394 ಮಂಜೂರಾದ ಶಿಕ್ಷಕರ ಹುದ್ದೆಗಳಿವೆ. ಇದರಲ್ಲಿ 270 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ.ಈ ಪೈಕಿ 13 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದ ಕಾರಣ ನಿಯೋಜನೆ ಮೂಲಕ ಸದರಿ ಶಾಲೆಗಳನ್ನು ನಡೆಸಲಾಗುತ್ತಿದೆ. ಇನ್ನೂ 44 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವುದರಿಂದ ಏಕೋಪಾಧ್ಯಾಯ ಶಾಲೆಗಳಾಗಿ ಕಾರ್ಯ ನಿರ್ವಹಿಸುವಂತಾಗಿವೆ. ಇವುಗಳಲ್ಲಿ 39 ಕಿರಿಯ ಪ್ರಾಥಮಿಕ 5 ಹಿರಿಯ ಪ್ರಾಥಮಿಕ ಶಾಲೆಗಳು ಸೇರಿವೆ.ತಾಲ್ಲೂಕಿನಲ್ಲಿ 29 ಸರ್ಕಾರಿ ಪ್ರೌಢ ಶಾಲೆಗಳಿವೆ. 243 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ  87 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮೇಲ್ದರ್ಜೆಗೇರಿಸಿದ ಗಣಾಪುರ, ಸಾಲೇಬೀರನಹಳ್ಳಿ, ಹೂವಿನಬಾವಿ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ ಆದರೆ ಇಲ್ಲಿ ಇನ್ನೂ ಶಿಕ್ಷಕರ ಯಾವುದೇ ಹುದ್ದೆಗಳು ಮಂಜೂರಾಗಿಲ್ಲ ಎಂದು ಮೂಲಗಳು ತಿಳಿಸಿವೆ.ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳನ್ನು ಒಂದು ಕೋಣೆಯಲ್ಲಿ ಕುರಿಗಳಂತೆ ಕೂಡಿಸಿ ಕಾಟಾಚಾರಕ್ಕೆ ಶಾಲೆಗಳನ್ನು ನಡೆಸಲಾಗುತ್ತಿದೆ. ಆದರೆ ಮಕ್ಕಳಿಗೆ ಮಾತ್ರ ಗುಣಮಟ್ಟದ ಶಿಕ್ಷಣ ಗಗನ ಕುಸುಮವಾಗಿದೆ.ಗ್ರಾಮೀಣ ಪ್ರದೇಶದಿಂದ ಪ್ರತಿನಿತ್ಯ ಜನಪ್ರತಿನಿಧಿಗಳಿಗೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ದೂರವಾಣಿ ಕರೆ ಮಾಡಿ ಸಮಸ್ಯೆ ತಿಳಿಸುತ್ತಿರುವುದರಿಂದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನ ಸಭೆಯ ಸದಸ್ಯರು ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅನುಮಾನಕ್ಕೆ ಕಾರಣವಾಗಿದೆ.ಜನಪ್ರತಿನಿಧಿಗಳು. ಶಿಕ್ಷಣ ಪ್ರೇಮಿಗಳು, ಎಸ್‌ಡಿಎಂಸಿಯವರು ಹಾಗೂ ಹಳೆ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಸೆಳೆದು ಶಾಲೆಯ ಭೌತಿಕ ಪ್ರಗತಿಯ ಜತೆಗೆ ಬೌದ್ದಿಕ ವಿಕಾಸದ ಬಗ್ಗೆ ಖಾತರಿ ಮೂಡಿಸಲು ಶಿಕ್ಷಣ ಇಲಾಖೆ ಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಆದರೆ ಶಿಕ್ಷಕರ ಹುದ್ದೆಗಳು ಭರ್ತಿ ಮಾಡದೇ ಯಾವ ಕಾರ್ಯಕ್ರಮ ಮಾಡಿದರೆ ಏನು ಪ್ರಯೋಜನ ಎಂದು ಕೋಡ್ಲಿಯ ಸಿದ್ದಾರ್ಥ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಚಿಂತಕುಂಟಾ ಹಾಗೂ ಚಿಮ್ಮಾಈದಲಾಯಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ ಚಿಂಚೋಳಿಕರ್ ಪ್ರಶ್ನಿಸಿದ್ದಾರೆ.ಸರ್ಕಾರ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿ ಇಂತಹ ಕಾರ್ಯಕ್ರಮ ಏರ್ಪಡಿಸಿದರೆ ಜನರ ಸ್ಪಂದನೆ ದೊರೆಯುತ್ತದೆ ಎಂದ ಅವರು. ಶಿಕ್ಷಣದ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಗಡಿ ತಾಲ್ಲೂಕಿನಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಅಧಿಕಾರಿಗಳ ಜಾಣ ಕುರುಡುತನಕ್ಕೆ ಸಾಕ್ಷಿಯಾಗಿದೆ. ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಬಗ್ಗೆ ಚರ್ಚೆ ನಡೆದರೆ ಜವಾಬ್ದಾರಿ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಉತ್ತರಿಸಬೇಕಾಗುತ್ತದೆ. ಇದರಿಂದ ನುಣುಚಿಕೊಳ್ಳಲು ಕಾರ್ಯಕ್ರಮದಿಂದ ದೂರ ಉಳಿಯುವ ಸಾಧ್ಯತೆಗಳು ಅಲ್ಲಗಳೆಯುವಂತಿಲ್ಲ.ಕಳೆದ ಮೂರು ವರ್ಷಗಳಿಂದ, ಪ್ರತಿ ವರ್ಷ ಖಾಲಿ ಹುದ್ದೆಗಳ ಸಂಖ್ಯೆ ಏರುತ್ತಿದೆ. ಇದರಿಂದ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮರಿಚೀಕೆಯಾಗಿದೆ. ಜಿಲ್ಲೆಯಲ್ಲಿಯೇ ಅತ್ಯಧಿಕ ಶಿಕ್ಷಕರ ಹುದ್ದೆಗಳು ತಾಲ್ಲೂಕಿನಲ್ಲಿ ಖಾಲಿ ಇರುವುದರಿಂದ ಸರ್ಕಾರಿ ಶಾಲೆಗಳು ಶಿಕ್ಷಕರಿಲ್ಲದೇ ಭಣಗುಡುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.