ಶುಕ್ರವಾರ, ಆಗಸ್ಟ್ 7, 2020
25 °C

ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಬಂದ್:ಸಂಚಾರ ಅಸ್ತವ್ಯಸ್ತ: ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಬಂದ್:ಸಂಚಾರ ಅಸ್ತವ್ಯಸ್ತ: ಪರದಾಟ

ಕಮಲಾಪುರ:  ಕುಸಿದು ಬಿಳುವಂತಾಗಿರುವ ಕುರಿಕೋಟಾ ಸೇತುವೆಯನ್ನು ಗುರುವಾರ ಹೆದ್ದಾರಿ ಇಲಾಖೆ ರಾಜ್ಯ ಮುಖ್ಯ ಎಂಜಿನಿಯರ್ ಜಯಪ್ರಕಾಶ ಪರಿಶೀಲಿಸಿದರು.ಈ ಸೇತುವೆ ಹಲವು ಸ್ಥಳಗಳಲ್ಲಿ ಬಿರುಕು ಬಿಟ್ಟಿರುವುದನ್ನು ಗಮನಿಸಿ ಇದರಲ್ಲಿ ಭಾರವಾದ ವಾಹನಗಳು ಸಂಚರಿಸಿದರೆ ದುರ್ಘಟನೆಗಳು ಸಂಭವಿಸಬಹುದು ಎಂದರು. ಮೂರು ದಿನಗಳ ಕಾಲ ಪರಿಶೀಲಿಸಲಾಗಿದ್ದು,   ವರದಿಯನ್ನು ನಾಳೆ ಸಲ್ಲಿಸುವುದಾಗಿ ಎಂಜಿನಿಯರ್ ದೇವಿದಾಸ ಚವ್ಹಾಣ ತಿಳಿಸಿದರು.ಸಂಚಾರಕ್ಕೆ ತೊಂದರೆ:  ಮಹಾಗಾಂವ, ಕುರಿಕೋಟಾ ಮಾರ್ಗವಾಗಿ ತೆರಳುತ್ತಿದ್ದ ಒಂದು ಸರ್ಕಾರಿ ಬಸ್, ಮ್ಯಾಕ್ಸಿಕ್ಯಾಬ್ ಸೇರಿದಂತೆ ಹಲವಾರು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಹೆದ್ದಾರಿಯಲ್ಲಿ ಯಾವುದೇ ಒಂದು ಬಸ್‌ಗಳಿಲ್ಲದ್ದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗಿದೆ.ಪ್ರಯಾಣ ದರ ಹೆಚ್ಚಳ: ವಾಹನಗಳು ಸುತ್ತು ಬಳಸಿ ಸಂಚರಿಸುವ ಕಾರಣ ಎಲ್ಲ ಖಾಸಗಿ ವಾಹನಗಳು, ಸರ್ಕಾರಿ ಬಸ್‌ಗಳಿಗೂ ಪ್ರಯಾಣದರವನ್ನು 12ರಿಂದ 14 ರೂಪಾಯಿಯಷ್ಟು ಏರಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ಹೆಚ್ಚಿನ ಆರ್ಥಿಕ ಹೊರೆ ಅನುಭವಿಸಬೇಕಾಗಿದೆ.ಬಡವರು ಪ್ರತಿದಿನ ಪಟ್ಟಣಕ್ಕೆ ತೆರಳಿ ದಿನಗೂಲಿಯಿಂದ ಜೀವನ ಮಾಡುತ್ತಾರೆ. ಮಹಾಗಾಂವದಿಂದ ಗುಲ್ಬರ್ಗಕ್ಕೆ ತೆರಳಲು 19 ರೂಪಾಯಿ ದರ ಇದ್ದುದು ಇದೀಗ ರೂ. 33ಕ್ಕೆ ಏರಿಕೆಯಾಗಿದೆ. ಈ ಸೇತುವೆಯ ಸಮಸ್ಯೆಯಿಂದ ಬಡವರು ಬಲಿಪಶುಗಳಾಗುತ್ತಿದ್ದಾರೆ. ಸರ್ಕಾರಕ್ಕೆ ಹಲವಾರು ಬಾರಿ ಮನವಿಪತ್ರ ಸಲ್ಲಿಸಿದ್ದರೂ  ಯಾವುದೇ ಪ್ರಯೋಜನವಾಗಿಲ್ಲ. ದರ ಹೆಚ್ಚಳಕ್ಕೆ ಸರ್ಕಾರವೆ ಕಾರಣ ಎಂದು ಮಹಾಗಾಂವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್ ಒತ್ತಾಯಿಸಿದ್ದಾರೆ.ಸೇರುವೆ ಕಾಮಗಾರಿ ಇನ್ನು ಅರ್ಧಕ್ಕೆ ನಿಂತಿದೆ. ಅದನ್ನು ಬೇಗನೆ ಪೂರ್ಣಗೊಳಿಸಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಮಹಾಗಾಂವ ಘಟಕದ ನಿರಂಜನ್‌ಸ್ವಾಮಿ ಆಗ್ರಹಿಸಿದ್ದಾರೆ.ಆರಂಭವಾದ ಸೇತುವೆಯ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸದೆ ಇದ್ದಲ್ಲಿ ರಸ್ತೆಗಿಳಿದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.ಭಾರಿ ವಾಹನ ಸಂಚಾರ ನಿಷೇಧ

ಗುಲ್ಬರ್ಗ: ಗುಲ್ಬರ್ಗ -ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ 218ರ ರಸ್ತೆಯಲ್ಲಿ ಕುರಿಕೋಟಾ ಗ್ರಾಮದ ಹತ್ತಿರ ಇರುವ ಸೇತುವೆಯ ಸ್ಥಳದ ತನಿಖೆಯನ್ನು ಕೈಗೊಳ್ಳಲಾಗುವ ಪ್ರಯುಕ್ತ ಕುರಿಕೋಟಾ ಗ್ರಾಮದ ಹತ್ತಿರ ಇರುವ ಸೇತುವೆಯ ಮೇಲೆ ಭಾರಿ ವಾಹನಗಳು, ಮ್ಯಾಕ್ಸಿಕ್ಯಾಬ್‌ಗಳು ಮತ್ತು ಟ್ರ್ಯಾಕ್ಟರ್ ಟ್ರೇಲರ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.ಮೋಟಾರು ವಾಹನ ಕಾಯ್ದೆ ಹಾಗೂ ಕರ್ನಾಟಕ ವಾಹನ ನಿಯಮದಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರಾದ ಡಾ. ವಿಶಾಲ್ ಆರ್. ಅವರು ಈ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಸದರಿ ವಾಹನಗಳು ಪರ್ಯಾಯ ಮಾರ್ಗವಾಗಿ ತಾವರಗೇರಾ ಕ್ರಾಸ್- ತಾವರಗೇರಾ- ಹರಸೂರ- ತಡಕಲ್ ಕ್ರಾಸ್- ನಾಗೂರ ಮತ್ತು ಮಹಾಗಾಂವ ಕ್ರಾಸ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ (ಎನ್.ಹೆಚ್.-218 ಕಿ.ಮೀ 381) ಮುಖಾಂತರ ಸಂಚರಿಸುವಂತೆ ಆದೇಶಿಸಲಾಗಿದೆ.ವಿಜಾಪೂರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕುರಿಕೋಟಾ ಗ್ರಾಮದ ಹತ್ತಿರ ಇರುವ ಸೇತುವೆಯ ಸ್ಥಳ ಪರಿಶೀಲಿಸಿದ್ದಾರೆ. ಸೇತುವೆಯ ಕೆಳಗಡೆ ಇರುವ ಕಲ್ಲುಗಳು ಸರಿದು ನದಿಯಲ್ಲಿ ಬೀಳುವ ಸಂಭವ ಇದ್ದು ಭಾರಿ ವಾಹನಗಳು ಸೇತುವೆ ಮೇಲೆ ಸಂಚರಿಸಿದಾಗ ಕಂಪನವಾಗುತ್ತಿರುವುದಾಗಿ ತಿಳಿಸಿದ್ದಾರೆ.

 

ಭಾರಿ ವಾಹನಗಳ ಸಂಚಾರಕ್ಕೆ ಸದ್ಯದ ಸ್ಥಿತಿ ಯೋಗ್ಯವಾಗಿರದೆ ಸಂಚಾರ ಹೀಗೆ ಮುಂದುವರೆದರೆ ಸೇತುವೆಯು ಪೂರ್ಣ ಶಿಥಿಲಗೊಳ್ಳುವುದಲ್ಲದೆ ಸಂಚಾರವು ಪೂರ್ಣ ಸ್ಥಗಿತಗೊಳ್ಳುವುದೆಂದು ತಿಳಿಸಿದ್ದಾರೆ. ಸದರಿ ಸೇತುವೆ ವೀಕ್ಷಣೆಗಾಗಿ ಪರಿಣತರ ತಂಡವು ಭೇಟಿ ನೀಡಲಿದ್ದು, ಸೇತುವೆಯ ಬಲವರ್ಧನೆಯಾಗುವ ವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಲು ಕೋರಿರುವರು. ಈ ಹಿನ್ನೆಲೆಯಲ್ಲಿ ಸದರಿ ಆದೇಶವನ್ನು ಜಾರಿಗೊಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.