ಶನಿವಾರ, ಏಪ್ರಿಲ್ 10, 2021
32 °C

ಉದ್ಯೋಗ ಮೇಳಕ್ಕೆ ಎಂಜಿನಿಯರ್ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ.ಟಿ.ಯು)ದ ಪ್ರಾದೇಶಿಕ ಕೇಂದ್ರದ ಆವರಣ ಎರಡು ದಿನಗಳ ಕಾಲ ಎಂಜಿನಿಯರಿಂಗ್ ಪದವೀಧರರಿಂದ ತುಂಬಿ ಹೋಗಿತ್ತು. ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮ, ಕೌಶಲ ಆಯೋಗ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಾರ್ಚ್ 5 ಮತ್ತು 6ರಂದು ನಡೆದ ಎರಡು ದಿನಗಳ ‘ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳ’ದಲ್ಲಿ ಸಾವಿರಾರು ಪದವೀಧರರು ಪಾಲ್ಗೊಂಡರು. ಉದ್ಯೋಗಾಕಾಂಕ್ಷೆ ಹೊತ್ತು ಬಂದ ಸುಮಾರು ಮೂರೂವರೆ ಸಾವಿರ ಪದವೀಧರರ ಪೈಕಿ ಕೆಲವರು ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದೂ ಆಯಿತು.ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿಯೇ ಪ್ರತ್ಯೇಕ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳ ಮಾಡಬೇಕೆನ್ನುವ ವಿ.ಟಿ.ಯು.ದ ಕನಸು ಮೊಟ್ಟಮೊದಲ ಬಾರಿಗೆ ಗುಲ್ಬರ್ಗದಲ್ಲಿ ಸಾಕಾರಗೊಂಡಿದ್ದೇ ವಿಶೇಷ. ಆನ್‌ಲೈನ್ ಮೂಲಕ ಹೆಸರು ನೋಂದಾಯಿಸಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಂದರ್ಶನ ನಡೆಸಲು ಬೆಂಗಳೂರು ಮೂಲದ ಸುಮಾರು 17 ಕಂಪೆನಿಗಳು ಆಗಮಿಸಿದ್ದವು.ಉದ್ಯೋಗ ಮೇಳದಲ್ಲಿ ಎರಡು ಬಗೆಯ ಪರೀಕ್ಷೆ ತೆಗೆದುಕೊಳ್ಳಲಾಯಿತು. ಆನ್‌ಲೈನ್‌ದಲ್ಲಿ 893 ಹಾಗೂ ಮೇಳದ ಸ್ಥಳದಲ್ಲಿ 686 ಪದವೀಧರರು ಪರೀಕ್ಷೆ ಬರೆದರು. ಈ ಪೈಕಿ ಉತ್ತಮ ಸಾಧನೆ ಮಾಡಿದ 579 ಜನರನ್ನು ಸಂದರ್ಶನಕ್ಕೆ ಆಹ್ವಾನಿಸಲಾಯಿತು. ಮೊದಲ ಸುತ್ತಿನಲ್ಲಿ ‘ಸಾಮರ್ಥ್ಯ ಪರೀಕ್ಷೆ ಇದ್ದರೆ, ಎರಡನೇ ಸುತ್ತಿನಲ್ಲಿ ತಂತ್ರಜ್ಞಾನ ಹಾಗೂ ಮೂರನೇ ಸುತ್ತಿನಲ್ಲಿ ಎಚ್.ಆರ್. (ಮಾನವ ಸಂಪನ್ಮೂಲ) ಪರೀಕ್ಷೆ ಇದ್ದವು.ಸಾಮಾನ್ಯವಾಗಿ ಇತರ ಪದವೀಧರರಿಗೆ ಪರೀಕ್ಷೆ, ಸಂದರ್ಶನ ತೆಗೆದುಕೊಂಡ ಸ್ವಲ್ಪ ಹೊತ್ತಿನಲ್ಲೇ ಉದ್ಯೋಗಕ್ಕೆ ನೇಮಕಾತಿ ಪತ್ರ ಸಿಗುವ ಸಾಧ್ಯತೆ ಇರುತ್ತದೆ. ಆದರೆ ಎಂಜಿನಿಯರಿಂಗ್ ಪದವೀಧರರನ್ನು ಆಯ್ಕೆ ಮಾಡುವ ವಿಧಾನ ಬೇರೆ. ಇಲ್ಲಿ ಅಭ್ಯರ್ಥಿ ಹಲವು ವಿಭಾಗಗಳ ಪರೀಕ್ಷೆಗಳನ್ನು ಎದುರಿಸಬೇಕು. ಪ್ರಸ್ತುತ ಗುಲ್ಬರ್ಗದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸಂದರ್ಶನ ಎದುರಿಸಿದವರ ಪೈಕಿ 105 ಅಭ್ಯರ್ಥಿಗಳು ಆಯ್ಕೆಯಾದರು. ಇವರಿಗೆ ಎರಡನೇ ದಿನ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯೋಗ

 

ಪತ್ರವನ್ನು ಕೂಡ ವಿತರಿಸಲಾಯಿತು. ಅತ್ಯಧಿಕ ಸಂಖ್ಯೆಯ ಪದವೀಧರರನ್ನು ನೇಮಕ ಮಾಡಿಕೊಂಡಿದ್ದು ‘ಎಚ್‌ಸಿಎಲ್ ಕಂಪೆನಿ’.“ಇನ್ನಷ್ಟು ಕಂಪೆನಿಗಳು ಕೊನೆಯ ಸುತ್ತಿನ ಸಂದರ್ಶನವನ್ನು ಬೆಂಗಳೂರಿನ ತಮ್ಮ ಪ್ರಧಾನ ಕಚೇರಿಯಲ್ಲಿ ನಡೆಸಲಿವೆ. ಏಪ್ರಿಲ್ ಒಂದನೇ ವಾರದ ಹೊತ್ತಿಗೆ ಉದ್ಯೋಗ ಪಡೆಯುವ ಈ ಭಾಗದ ಪದವೀಧರರ ಸಂಖ್ಯೆ ನಿಖರವಾಗಿ ಗೊತ್ತಾಗಲಿದೆ. ಇಲ್ಲಿ ನಡೆದಿರುವ ಮೇಳದಲ್ಲಿ ಕಂಪೆನಿಗಳ ಪ್ರತಿನಿಧಿಗಳಂತೂ ಇಲ್ಲಿನ ಪದವೀಧರರ ಬುದ್ಧಿಮತ್ತೆ, ಬದ್ಧತೆ ಹಾಗೂ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ” ಎಂದು ಕೇಂದ್ರೀಯ ನೇಮಕಾತಿ ಘಟಕದ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಆರ್. ತಿಳಿಸಿದರು.ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಗದ ಇನ್ನೊಂದು ಕಂಪೆನಿ ‘ಕನಝೆಂಟ್’ ಇದೇ 26 ಹಾಗೂ 27ರಂದು ಗುಲ್ಬರ್ಗಕ್ಕೆ ಆಗಮಿಸಲಿದೆ. ಈ ಮುನ್ನ ಸಂದರ್ಶನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರ ಸಂದರ್ಶನವನ್ನು ಕಂಪೆನಿಯ ಅಧಿಕಾರಿಗಳು ಮಾಡಲಿದ್ದಾರೆ. ಆಗ ಇನ್ನಷ್ಟು ಆಕಾಂಕ್ಷಿಗಳಿಗೆ ಉದ್ಯೋಗಾವಕಾಶ ಲಭ್ಯವಾಗುವ ನಿರೀಕ್ಷೆ ಇದೆ.ಪಾಲ್ಗೊಂಡ ಕಂಪೆನಿಗಳು

ಗ್ಲೋಬಲ್ ಎಡ್ಜ್, ಟ್ಯಾಲಿ ಸಲ್ಯೂಷನ್ಸ್, ಟಿಡಿ ಪವರ್ ಸಿಸ್ಟಮ್ಸ್, ಕೆನ್ನಮೆಟಲ್, ಲಕ್ ಇಂಡಿಯಾ, ಎಚ್‌ಸಿಎಲ್, ಎಐಎಂಎಸ್, ರೆಡ್ ಲೀಫ್, ಆರೇಂಜ್ ಟೆಕ್ನಾಲಜಿ ಸಲ್ಯೂಶನ್ಸ್, ಎಂಎಸ್‌ಪಿಎಲ್, ಕೊಹೆರೆನ್ಸ್ ಸರ್ವೀಸ್, ಎನ್‌ಟಿಟಿಎಫ್, ಕ್ಯಾಡ್‌ಮ್ಯಾಕ್ಸ್ ಮುಂತಾದವು.ಇದಲ್ಲದೇ, ಕೌಶಲ ವೃದ್ಧಿ ನೀಡುವ ಸಂಸ್ಥೆಗಳು ಆಗಮಿಸಿ ಆಸಕ್ತ ಪದವೀಧರರಿಗೆ ತರಬೇತಿ ನೀಡಿದವು. ಕಂಪೆನಿ ಹೆಸರು ಹಾಗೂ ತರಬೇತಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಹೀಗಿದೆ. ಕ್ಯಾಡ್‌ಮ್ಯಾಕ್ಸ್- 210; ಎನ್‌ಟಿಟಿಎಫ್-380, ಎನ್‌ಐಐಟಿ-31; ಆರ್‌ಐಐಐಟಿ-275; ಐಬಿಎಂ ಕಿಯೋನಿಕ್ಸ್-134; ಐಎಂಟಿಎಂಎ-60. (ಒಟ್ಟು 1090).

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.