ಭಾನುವಾರ, ಏಪ್ರಿಲ್ 18, 2021
32 °C

ಗುಲ್ಬರ್ಗ ಪಾಲಿಕೆ ಕಾಮಗಾರಿ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮಹಾನಗರ ಪಾಲಿಕೆಯಲ್ಲಿ 2004 -05ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನ ಮತ್ತು ರಾಜ್ಯ ಹಣಕಾಸು ಆಯೋಗ (ಎಸ್‌ಎಫ್‌ಸಿ) ಅನುದಾನದ ಅಡಿಯಲ್ಲಿ ಕೈಗೊಳ್ಳಲಾದ 9.48 ಕೋಟಿ ರೂಪಾಯಿ ಕಾಮಗಾರಿಯಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪಾಲಿಕೆ 14 ಅಧಿಕಾರಿಗಳ ವಿಚಾರಣೆ ನಡೆಸಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಯುವ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ರಾಜು ಕುಳಗೇರಿ ತಿಳಿಸಿದರು.ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಚಾರಣೆಗಾಗಿ ನಿವೃತ್ತ ನ್ಯಾಯಾಧೀಶ ರುಕ್ಮಾಜಿ ಕೃಷ್ಣ ಭಟ್, ಸರ್ಕಾರದ ಜಂಟಿ ಕಾರ್ಯದರ್ಶಿ ರಿಚರ್ಡ್ ಲೋಬೋ ಅವರನ್ನು ನೇಮಕ ಮಾಡಲಾಗಿದ್ದು, ಗುಲ್ಬರ್ಗ ಇತಿಹಾಸದಲ್ಲಿ ಇದೊಂದು ಸುದೀರ್ಘ ವಿಚಾರಣೆಯಾಗಿದೆ ಎಂದು ಹೇಳಿದರು.ಈ ಅವ್ಯವಹಾರ ಕುರಿತು 2007ರಲ್ಲಿ ಕರ್ನಾಟಕ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಮಾಹಿತಿ ಹಕ್ಕು ಕಾಯ್ದೆ ಮೂಲಕ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಫಲವಾಗಿಯೇ ಅವ್ಯವಹಾರ ನಡೆಸಿದರು ಎನ್ನಲಾದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ವಿಚಾರಣೆ ನಡೆದಿದೆ ಎಂದು ತಿಳಿಸಿದರು.2004-05ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗದಿಂದ ರೂ. 14 ಕೋಟಿ ಅನುದಾನ ಘೋಷಿಸಲಾಗಿತ್ತು. ಆದರೆ ಅದರಲ್ಲಿ 9 ಕೋಟಿ 48 ಲಕ್ಷ ರೂಪಾಯಿ ಮಾತ್ರ ಹಣ ಬಿಡುಗಡೆಯಾಗಿತ್ತು. ಈ ಹಣದಲ್ಲಿ 107 ಬಿಟಿ ರಸ್ತೆ, 2 ಸಿಸಿ ರಸ್ತೆ, 22 ಹೈಮಾಸ್ಟ್ ದೀಪ, 11 ದೊಡ್ಡ ನಾಲೆ, 16 ಉದ್ಯಾನ ಕಾಂಪೌಂಡ್ ನಿರ್ಮಿಸಲಾಗಿದೆ. ಆದರೆ ಅವೆಲ್ಲವೂ ಕಳಪೆ ಮಟ್ಟದ್ದಾಗಿವೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೋರಾಟ ನಡೆಸಲಾಗಿತ್ತು ಎಂದು ವಿವರಿಸಿದರು.ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗುಲ್ಬರ್ಗ ಮಹಾನಗರ ಪಾಲಿಕೆಯ ಮೂವರು ಆಯುಕ್ತರು ಹಾಗೂ 11 ಜನ ಎಂಜಿನಿಯರ್‌ಗಳ ವಿರುದ್ಧ ವಿಚಾರಣೆ ನಡೆದು ಸರ್ಕಾರಕ್ಕೆ ಸಲ್ಲಿಸಿರುವುದು ಪ್ರಾಮಾಣಿಕ ಹೋರಾಟಕ್ಕೆ ಸಂದ ಜಯ ಎಂದು ತಿಳಿಸಿದರು. ಎಂ.ಎಸ್. ಪಾಟೀಲ ನರಿಬೋಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.