ಗುರುವಾರ , ಏಪ್ರಿಲ್ 15, 2021
22 °C

ಮೌಢ್ಯತೆ ಬಿಡಿ: ಆರೋಗ್ಯ ಕಾಪಾಡಿ

ಹರ್ಷವರ್ಧನ ಪಿ.ಆರ್. / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕಳೆದ ವರ್ಷ ಹೈರಾಣಾಗಿದ್ದ ಆರೋಗ್ಯ ಇಲಾಖೆಯು ಈ ಬಾರಿ ನಿಟ್ಟುಸಿರುಬಿಟ್ಟಿದೆ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದ ಹಾವಳಿ ಇಳಿಮುಖ ಮತ್ತು ಬೇಸಿಗೆಯಲ್ಲಿ ವ್ಯಾಪಕ ರೋಗ ಬಾಧಿಸದಿರುವುದೇ ಇದಕ್ಕೆ ಕಾರಣ. ಇನ್ನೊಂದೆಡೆ ರೋಗದ ಮಾಹಿತಿ ನೀಡುವ ಉಚಿತ ಕರೆಯ `104~ ಕಾಲ್‌ಸೆಂಟರ್ ಶೀಘ್ರವೇ ಬರುವ ನಿರೀಕ್ಷೆ.ಕಳೆದ ವರ್ಷ ಜೂನ್ ತನಕದ ಮಾಹಿತಿಯನ್ನು ಈ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇ 71ರಷ್ಟು ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,746 ಮಂದಿ ಮಲೇರಿಯಾಕ್ಕೆ ತುತ್ತಾಗಿದ್ದರೆ, ಈ ಬಾರಿ ಕೇವಲ 507 ಮಂದಿಯಲ್ಲಿ ಮಾತ್ರ ಪತ್ತೆಯಾಗಿದೆ.ಸರ್ಕಾರ ಮಲೇರಿಯಾ ಮಾಸ ಆಚರಿಸುವ ಜೂನ್‌ನಲ್ಲಿ ಪತ್ತೆಯಾದ ರೋಗಿಗಳ ಸಂಖ್ಯೆ 120 (2012). ಕಳೆದ ವರ್ಷ  525 (2011) ಇತ್ತು. ಕಳೆದ ವರ್ಷ ನಗರವನ್ನು ಕಾಡಿದ ಕಾಮಾಲೆ ಈ ಬಾರಿ ಕಾಡಿಲ್ಲ. ಈ ತನಕ 506 ವಾಂತಿಭೇದಿ, 15 ಶಂಕಿತ ಡೆಂಗೆ ಮತ್ತು ಒಂದು ಎಚ್1ಎನ್1 ಪ್ರಕರಣ ಪತ್ತೆಯಾಗಿವೆ. ಇವು ಬಿಟ್ಟರೆ ಸುದ್ದಿ ಮಾಡಿರುವುದು ಹಾವು ಕಡಿತವೇ ಹೆಚ್ಚು. ಸುಮಾರು 6 ಮಂದಿ ಹಾವು ಕಡಿತಕ್ಕೆ ತುತ್ತಾಗಿದ್ದರೆ, ಸಾವುಗಳೂ ಸಂಭವಿಸಿದೆ. ನಗರದಲ್ಲಿ ನೊಣ-ಸೊಳ್ಳೆಗಳ ಕಾಟ ಹೆಚ್ಚಿವೆ.ಕಾರಣ: `ಕಳೆದ ವರ್ಷ ನೀರು ಶೇಖರಣೆಗೊಳ್ಳುವ ಪ್ರಮುಖ 2,500 ಸ್ಥಳಗಳನ್ನು ಗುರುತಿಸಿ ಮಲೇರಿಯಾ ನಿಯಂತ್ರಿಸುವ ಗಪ್ಪಿ ಮೀನುಗಳನ್ನು ಬಿಡಲಾಗಿತ್ತು. 37ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಅಲ್ಲದೇ ರಾಜ್ಯ ಸರ್ಕಾರವು  ಔಷಧಿ ನೀತಿ ಬದಲಾಯಿಸಿದ್ದು, ಹೊಸ ಔಷಧಿಗಳನ್ನು ನೀಡಲಾಗಿತ್ತು. ಸರ್ಕಾರದ ಇಂತಹ ಕ್ರಮದಿಂದ ರೋಗ ಪಸರಿಸುವುದು ಕಡಿಮೆ ಆಗಿದೆ~ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಶಿವಜರಾಜ ಸಜ್ಜನಶೆಟ್ಟಿ ಹೇಳುತ್ತಾರೆ.ಹಾವು ಕಡಿತ: ಮಳೆಗಾಲದಲ್ಲಿ ಆಹಾರ, ಸಂತಾನೋತ್ಪತ್ತಿ ಮತ್ತು ಬೆಚ್ಚಗಿನ ಸ್ಥಳವನ್ನು ಅರಸಿಕೊಂಡು ಹಾವುಗಳು ಬರುತ್ತವೆ. ಹೀಗಾಗಿ ಮನೆಗಳತ್ತ ಸುಳಿಯುತ್ತವೆ. ಈ ಸಂದರ್ಭದಲ್ಲೇ ಹಾವು ಕಡಿತವೂ ಹೆಚ್ಚುವುದು. ಮನೆಯ ಸಂದಿಗೊಂದಿ, ಅಟ್ಟ ಮತ್ತಿತರ ಸ್ಥಳಗಳಲ್ಲಿ ಬೆಚ್ಚಗೆ ಅವಿತುಕೊಳ್ಳುವ ಸಾಧ್ಯತೆ ಇರುತ್ತವೆ. ಈ ಬಗ್ಗೆ ಎಚ್ಚರ ವಹಿಸಬೇಕು. ಹಾವುಗಳು ಹೆಚ್ಚಾಗಿ ಬಿಲ ಬಿಟ್ಟು ಬಂದು ಕಾಣಿಸಿಕೊಳ್ಳುವ ಶ್ರಾವಣ ಮಾಸದ ಅಮಾವಾಸ್ಯೆ ಬಳಿಕದ ಐದನೇ ದಿನವನ್ನು ಜನತೆ `ನಾಗರ ಪಂಚಮಿ~ (ಜು.23) ಎಂದೂ ಆಚರಿಸುತ್ತಾರೆ.`ಹಾವು ಕಡಿತದ ಬಗ್ಗೆ ಜನತೆಯಲ್ಲಿ ಮೌಢ್ಯವಿದೆ. ನಾಟಿ ಔಷಧಿಗೆ ತೆರಳುತ್ತಾರೆ. ಆದರೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು- ಜಿಲ್ಲಾ ಆಸ್ಪತ್ರೆಯಲ್ಲಿ `ಆ್ಯಂಟಿವೆನಮ್~ (ವಿಷನಿರೋಧಕ) ಔಷಧಿ ಲಭ್ಯವಿದೆ. ಆತುರ ಪಡದೇ ಆಸ್ಪತ್ರೆಗೆ ದೌಡಾಯಿಸಬೇಕು. ನಾಯಿ ಕಡಿತಕ್ಕೂ ಔಷಧಿ ಇದೆ. ಎಲ್ಲವೂ ಉಚಿತ~ ಎಂದು ಸಜ್ಜನಶೆಟ್ಟಿ ಹೇಳಿದರು.ಎಚ್ಚರ: ಕುಡಿವ ನೀರು, ಆಹಾರದ ಬಗ್ಗೆ ನಿಗಾ ವಹಿಸಬೇಕು. ಪರಿಸರ ಹಾಗೂ ಸ್ವಂತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ರೋಗ ಇಳಿಮುಖ ಇದ್ದರೂ, ಕಳೆದ ವಾರದಲ್ಲಿ ನೊಣ ಹಾಗೂ ಸೊಳ್ಳೆಯ ಹಾವಳಿ ಹೆಚ್ಚಿದೆ. ಅದಕ್ಕೆ ಎಚ್ಚರ ವಹಿಸಬೇಕು ಎಂದ ಆರೋಗ್ಯಾಧಿಕಾರಿ ಯಾವುದೇ ಮಾಹಿತಿ ಬೇಕಿದ್ದಲ್ಲಿ ಕರೆ (08472-278619) ಮಾಡಿ ಎಂದರು. 

 

ರಾತ್ರಿ ಚಿಕಿತ್ಸಾಲಯ...

ಗುಲ್ಬರ್ಗ:
ಗುಲ್ಬರ್ಗ ಆನೆಕಾಲು ರೋಗ ನಿಯಂತ್ರಣ ಘಟಕವು ಪ್ರತಿ ಶನಿವಾರ ರಾತ್ರಿ 7ರಿಂದ 9ರ ತನಕ `ನೈಟ್ ಕ್ಲಿನಿಕ್~ (ರಾತ್ರಿ ಚಿಕಿತ್ಸಾಲಯ) ನಡೆಸುತ್ತದೆ. ಆಯಾ ತಾಲ್ಲೂಕಿನ ಸಂತೆಯ ದಿನವೇ ಪಟ್ಟಣದಲ್ಲಿ ರೋಗ ಹಾಗೂ ರಕ್ತ ಪರೀಕ್ಷೆ ನಡೆಯುತ್ತದೆ.  ಆನೆಕಾಲು ರೋಗವು `ವುಚೆರೆರಿಯಾ ಬ್ಯಾಂಕ್ರೋಫ್ಟಿ~ ಪರಾವಲಂಬಿ ಜೀವಿಯಿಂದ ಬರುತ್ತದೆ. ಸೊಳ್ಳೆ ಕಡಿತದ ಮೂಲಕ ನಮ್ಮ ದೇಹ ರೋಗಾಣು ಪ್ರವೇಶಿಸಿದ 5-10 ವರ್ಷದ ಬಳಿಕ ಲಕ್ಷಣ ಕಾಣಿಸಿಕೊಳ್ಳುತ್ತದೆ. ಲಕ್ಷಣ ಗೋಚರಿಸಿದ ಬಳಿಕ ನಿರ್ಮೂಲನೆ ಅಸಾಧ್ಯ. ಅದಕ್ಕಾಗಿ `ನೈಟ್ ಕ್ಲಿನಿಕ್~ನಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ ಎನ್ನುವುದು ಘಟಕದ ವೈದ್ಯರ ಅಭಿಪ್ರಾಯ. ಮಾಹಿತಿಗೆ ಚಂದ್ರಕಾಂತ ಏರಿ (9448651088) ಅವರನ್ನು ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.