ಶುಕ್ರವಾರ, ಏಪ್ರಿಲ್ 16, 2021
28 °C

ಸುರಪುರ ಬಂದ್ ಸಂಪೂರ್ಣ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಈ ಬಾರಿಯ ಐದನೆ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ತಪ್ಪಾಗಿ ಮುದ್ರಿಸಲಾಗಿರುವ ಸುರಪುರದ ವೀರ ದೊರೆ ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ಅವರ ಇತಿಹಾಸವನ್ನು ಮರು ಮುದ್ರಣ ಮಾಡುವಂತೆ ಆಗ್ರಹಿಸಿ ಯುವ ಭಾರತ ಕ್ರಾಂತಿ ದಳ ಶುಕ್ರವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು.ಅಂಗಡಿ ಮುಂಗಟ್ಟುಗಳು ಬಂದಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಕೆಲ ಶಾಲಾ, ಕಾಲೇಜುಗಳು ಸ್ವಯಂ ಪ್ರೇರಿತ ರಜೆ ನೀಡಿದ್ದವು. ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವಹಿವಾಟು ಸ್ಥಗಿತಗೊಳಿಸಿತ್ತು. ಬಸ್ ಸಂಚಾರ ವಿರಳವಾಗಿತ್ತು. ಜನ ಸಂಚಾರವಿಲ್ಲದೆ ರಸ್ತೆಗಳು, ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು.ಬೆಳಿಗ್ಗೆ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಗಾಂಧಿ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡರು.ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ್ ಮಾತನಾಡಿ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಡೀ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಇಲ್ಲಿನ ಗೋಸಲ ವಂಶದ ಕೆಚ್ಚೆದೆಯ ದೊರೆ ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ನಮಗೆಲ್ಲ ಆದರ್ಶಪ್ರಾಯರು. ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಪಠ್ಯ ಪುಸ್ತಕದಲ್ಲಿ ಮುದ್ರಿತವಾಗಿರುವುದು ಖಂಡನಾರ್ಹ. ಲೇಖಕರು ಇತಿಹಾಸದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಇತಿಹಾಸಕ್ಕೆ ಕಪ್ಪು ಚುಕ್ಕೆ ಮೂಡಿಸಿದಂತಾಗುತ್ತದೆ ಎಂದು ವಿಷಾದಿಸಿದರು.ಯುವ ಭಾರತ ಕ್ರಾಂತಿ ದಳದ ಸಂಸ್ಥಾಪಕ ರಾಮುನಾಯಕ್ ಅರಳಹಳ್ಳಿ ಮಾತನಾಡಿ, ಖ್ಯಾತ ಇತಿಹಾಸ ಲೇಖಕ ವಿ.ಡಿ. ದಿವಾಕರ್‌ಜಿ ಅವರು ತಮ್ಮ `ಸೌತ್ ಇಂಡಿಯಾ ಇನ್ 1857 ವಾರ್ ಆಪ್ ಇಂಡಿಪೆಂಡೆನ್ಸ್~ ಗ್ರಂಥದಲ್ಲಿ ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ಅವರು ವೀರಮರಣ ಅಪ್ಪಿದರು ಎಂದು ಉಲ್ಲೇಖಿಸಿದ್ದಾರೆ. ವೆಂಕಟಪ್ಪನಾಯಕ್ ಅವರು ಆತ್ಮಹತ್ಯೆ ಮಾಡಿ ಕೊಳ್ಳುವ ಹೇಡಿಯಾಗಿರಲಿಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲ ಕರ್ನಲ್ ಮೆಡೋಜ ಟೇಲರ್ ತಮ್ಮ ಆತ್ಮಕಥೆಯಲ್ಲಿ ಬರೆದಿದ್ದಾರೆ ಎಂದು ವಿವರಿಸಿದರು.ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ಅವರ ಇತಿಹಾಸವನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡುವಂತೆ ಇಲ್ಲಿನ ಜನರು, ಇತಿಹಾಸ ಲೇಖಕರು ಒತ್ತಾಯಿಸುತ್ತಲೆ ಬಂದಿದ್ದರು. ಈ ಬಾರಿ ಪಠ್ಯ ಪುಸ್ತಕದಲ್ಲಿ ಮುದ್ರಿತವಾಗಿದೆ ಎಂದು ಜನ ಸಂತೋಷ ಪಟ್ಟಿದ್ದರು.ಆದರೆ ಪುಸ್ತಕ ನೋಡಿದ ಮೇಲೆ ಇತಿಹಾಸ ತಪ್ಪು ಮುದ್ರಿತವಾಗಿದ್ದು ಜನರಿಗೆ ಭ್ರಮನಿರಸನಗೊಳಿಸಿತು. ಇದು ಧೀರ ಸ್ವಾತಂತ್ರ್ಯ ಹೋರಾಟಗಾರನಿಗೆ ಮಾಡಿದ ಅವಮಾನ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಹರಿರಾವ ಅದೋನಿ ಕಿಡಿ ಕಾರಿದರು.ಮುಖಂಡರಾದ ಉಸ್ತಾದ್ ವಜಾಹತ್ ಹುಸೇನ್, ಗಂಗಾಧರನಾಯಕ್ ತಿಂಥಣಿ, ಉಪೇಂದ್ರನಾಯಕ ಸುಬೇದಾರ್, ನಂದಣ್ಣನಾಯಕ್ ದೇಸಾಯಿ ಮತ್ತಿತರರು ಮಾತನಾಡಿದರು.ಇತಿಹಾಸ ತಪ್ಪು ಮುದ್ರಿತವಾಗಿರುವ ಐದನೆ ತರಗತಿ ಸಮಾಜ ವಿಜ್ಞಾನ ಪುಸ್ತಕಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ಅವರ ಬಗ್ಗೆ ಸಮರ್ಪಕ ಮಾಹಿತಿ ಸಂಗ್ರಹಿಸಿ ಮರು ಮುದ್ರಣ ಮಾಡಬೇಕು. ಸಂಕ್ಷಿಪ್ತವಾಗಿ ಮುದ್ರಿಸದೆ ವಿಸ್ತಾರವಾಗಿ ಪ್ರಕಟಿಸಬೇಕು. ವೆಂಕಟಪ್ಪನಾಯಕ್ ಅವರ ಭಾವಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಮಹ್ಮದ್ ಗೌಸುದ್ದೀನ್ ಅವರಿಗೆ ಸಲ್ಲಿಸಲಾಯಿತು.ರಾಜಾ ನಾಲ್ವಡಿ ವೆಂಕಟಪ್ಪನಾಯಕ್ ಅವರ ವಂಶಸ್ಥ ರಾಜಾ ಲಕ್ಷ್ಮೀನಾರಾಯಣ ನಾಯಕ್, ಕಡ್ಲೆಪ್ಪಮಠದ ಪ್ರಭುಲಿಂಗ ಸ್ವಾಮಿಗಳು, ಪ್ರಕಾಶಚಂದ ಜೈನ್, ವೆಂಕಟೇಶ ಭಕ್ರಿ, ಗುಂಡಪ್ಪ ಸೋಲಾಪುರ, ಚಂದ್ರಶೇಖರ ವಜ್ಜಲ್, ಶಿವರಾಜನಾಯಕ್ ಜಾಗೀರದಾರ್, ಬುಚ್ಚಪ್ಪನಾಯಕ್ ಗುರಿಕಾರ್, ತಿಪ್ಪಣ್ಣ ಮ್ಯಾಕಲ್, ಶರಣು ಮಕಾಶಿ, ದಶರಥ ದೊರೆ, ಮುದ್ದಣ್ಣ ಅಮ್ಮಾಪುರ, ಹೊಳೆಪ್ಪ ಕಮತಗಿ, ಶೇಖರಗೌಡನಾಯಕ್ ಅಮ್ಮಾಪುರ, ಸತೀಶ ಬಾರಿ, ವಾಸುನಾಯಕ್, ತಿಪ್ಪಣ್ಣ ಪೋ.ಪಾ. ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.