ಮಂಗಳವಾರ, ಏಪ್ರಿಲ್ 13, 2021
31 °C

ಬರ ಪರಿಸ್ಥಿತಿ: ಸಿಎಂ-ಜಿಲ್ಲಾಧಿಕಾರಿ ವಿಡಿಯೊ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜಗದೀಶ ಶೆಟ್ಟರ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ನಡೆಸಿದ ಜಿಲ್ಲಾಧಿಕಾರಿಗಳ ಜೊತೆಗಿನ ಚರ್ಚೆಯಲ್ಲಿ ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿಯಿಂದ ವಿಡಿಯೊ ಸಂವಾದ ಮೂಲಕ ಉತ್ತರಿಸಲಾಯಿತು.ಬರ ನಿರ್ವಹಣೆ, ಕುಡಿಯುವ ನೀರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಮುಖ್ಯಮಂತ್ರಿ ಅವರು ಕೇಳಿದ ಮಾಹಿತಿಗೆ ಪೂರಕವಾಗಿ ಜಿಲ್ಲೆಯಲ್ಲಿ ಮಾಡಿಕೊಂಡ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು ಎಂದು ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್ ತಿಳಿಸಿದ್ದಾರೆ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಜಿಲ್ಲೆಗೆ 110 ಕೋಟಿ ರೂಪಾಯಿ ಕಾರ್ಯಯೋಜನೆ ಸಿದ್ಧಪಡಿಸಲಾಗಿದ್ದು, ಅದರಲ್ಲಿ 43 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಈಗಾಗಲೇ 23 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಮುಗಿದಿದ್ದು, ಇನ್ನುಳಿದವು ಮುಗಿಯುವ ಹಂತದಲ್ಲಿವೆ ಎಂದು ಮಾಹಿತಿ ನೀಡಲಾಗಿದೆ ಎಂದರು.ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ವಿವಿಧೆಡೆ ನೀರನ ಬರ ಕಾಣಿಸಿಕೊಂಡಿದೆ. ಆದರೆ ಜೇವರ್ಗಿ ಮತ್ತು ಆಳಂದ ತಾಲ್ಲೂಕುಗಳಲ್ಲಿ ಮಾತ್ರ ಪರಿಸ್ಥಿತಿ ಬೀಕರವಾಗಿದೆ ಎಂದು ವಿವರಿಸಲಾಗಿದೆ. 487 ಕೈಪಂಪುಗಳಿದ್ದು, 33 ಕೈಪಂಪುಗಳು ಕೆಟ್ಟು ಹೋಗಿವೆ. ಆದರೂ ಜಿಲ್ಲೆಯಲ್ಲಿನ ನೀರಿನ ಲಭ್ಯತೆ ಅನುಸಾರ ಜನ ಮತ್ತು ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.ಜಾನುವಾರು ಸಂರಕ್ಷಣೆಗೆ ಜಿಲ್ಲೆಯಲ್ಲಿ 14 ಗೋಶಾಲೆಗಳನ್ನು ಆರಂಭಿಸಲಾಗಿದ್ದು, ಮೇವಿನ ಬ್ಯಾಂಕ್ ಕೂಡ ಆರಂಭಿಸಲಾಗಿದೆ. ಆದರೆ ಮೇವು ಖರೀದಿಸಲು ಜನರು ಹಿಂದೇಟು ಹಾಕುತಿದ್ದಾರೆ ಎಂದು ತಿಳಿಸಲಾಗಿದೆ. ಈ ವಿಷಯದಲ್ಲಿ ಜೆಸ್ಕಾಂ ನೆರವಿನೊಂದಿಗೆ ಬರದ ಬೀಕರತೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲೆಯ ಈಗಿನ ಸ್ಪಷ್ಟ ಚಿತ್ರಣದ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.ಜಿಲ್ಲಾ ಪಂಚಾಯಿತಿ, ಕೃಷಿ, ಪಶು ಸಂಗೋಪನಾ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.