ಭಾನುವಾರ, ಜೂಲೈ 5, 2020
22 °C

ಕನ್ನಡಿಗರ ಬದುಕು ಶ್ರೀಮಂತವಾಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಟಗುಪ್ಪಾ: ವಿಶ್ವದ ಸರ್ವ ಕನ್ನಡಿಗರ ಬದುಕು ಶ್ರೀಮಂತವಾಗಬೇಕು, ಕನ್ನಡ ಸಾಂಸ್ಕೃತಿಕ ಪರಂಪರೆ ವಿಶ್ವ ಗುರುತಿಸುವಂತೆ ಆಗಬೇಕು ಎಂಬುದ್ದು ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು.ಶುಕ್ರವಾರ ಪಟ್ಟಣದಲ್ಲಿ ನಡೆದ ವಲಯ ಮಟ್ಟದ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತ, ರಾಜ್ಯದಲ್ಲಿ 2ಕೋಟಿ ಜನ ಅನ್ಯ ಭಾಷೆ ಮಾತನಾಡುವವರು ಇದ್ದಾರೆ, ಅವರಿಗೆ ಕನ್ನಡ ಕಲಿಸುವ ಕಾರ್ಯ ಸರ್ವ ಕನ್ನಡಿಗನ ಮೇಲಿದೆ, ಪ್ರತಿ ಕನ್ನಡಿಗ ತಾನು ಮೋದಲು ಕನ್ನಡ ಲಿಪಿ, ಅಂಕಿಗಳನ್ನು ದಿನನಿತ್ಯದ ಬದುಕಿನಲ್ಲಿ ಬಳಸುವ ರೂಢಿ ಹಾಕಿಕೊಳ್ಳಬೇಕು. ವಿಶ್ವದಲ್ಲಿ ಮುಂದುವರೆದ ರಾಷ್ಟ್ರಗಳು ಮಾತೃ ಭಾಷೆಯಲ್ಲಿ ಮಕ್ಕಳಿಗೆ ಮೂಲ ಶಿಕ್ಷಣ ಕೊಡುತ್ತಿರುವಾಗ ಕನ್ನಡಿಗರಾದ ನಾವು ಮಾತೃ ಭಾಷಾ ಮಾಧ್ಯಮದ ಶಿಕ್ಷಣದ ಬಗ್ಗೆ ಇಲ್ಲಸಲ್ಲದ ಗೊಂದಲ ನಿರ್ಮಿಸದೆ ಕಡ್ಡಾಯವಾಗಿ ಮಾತೃ ಭಾಷೆಯಲ್ಲಿ ಮೂಲ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.ಪ್ರಾದ್ಯಾಪಕಿ ಜಯದೇವಿ ಗಾಯಕವಾಡ ಉಪನ್ಯಾಸ ನೀಡುತ್ತ, ಜಿಲ್ಲೆಯ ಪುರಾತನ ಶ್ರೀಮಂತಿಕೆ ನಮಗಿಂದು ಮಾರ್ಗದರ್ಶಿ ಆಗಿದ್ದು, ಕನ್ನಡ ನಾಡಿನಲ್ಲಿ ಕನ್ನಡದ ರಕ್ಷಣೆಗೆ ನೂರಾರು ಸಂಘ ಸಂಸ್ಥೆಗಳು ಹುಟ್ಟಿಕೊಂಡಿರುವುದಕ್ಕೆ ನೋವು ವ್ಯಕ್ತಪಡಿಸಿದರು. ಪ್ರತಿ ಕನ್ನಡಿಗ ತನ್ನ ಮನೆಯಿಂದ ಕನ್ನಡದ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಂತರೆಡ್ಡಿ ಜಂಪಾ ನುಡಿದರು.ಎಸ್.ಬಿ.ಕುಚಬಾಳ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಮೇರಿ ಮಾರ್ಗರೇಟ್ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಮಹಾರುದ್ರಪ್ಪ ಆಣದೂರೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಾಳೆಯ ಸ್ವಾಭಿಮಾನಿ, ಆದರ್ಶ ನಾಡು ನಮ್ಮದಾಗಲು ಇಂದಿನ ಮಕ್ಕಳಿಗೆ ನೈತೀಕ, ಅದ್ಯಾತ್ಮಿಕ, ವೈಜ್ಞಾನಿಕ ಶಿಕ್ಷಣ ನೀಡಿ ಆದರ್ಶ ನಾಗರಿಕರನ್ನಾಗಿ ಸಿದ್ಧಪಡಿಸುವಂತೆ ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು. ಶ್ರೀಶೈಲ ಮುಧೋಳ, ಶಿವಕುಮಾರ ಚನ್ನಶೆಟ್ಟಿ ಇತರರು ಇದ್ದರು.ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಸಲಾಯಿತು. ವಿವಿಧ ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಲಯಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕುಕಡಾಲ್ ಸ್ವಾಗತಿಸಿದರು. ಗುಂಡಪ್ಪ ಹುಡಗೆ ಪ್ರಾಸ್ತಾವಿಕ ಮಾತನಾಡಿದರು. ಅನೀಲಕುಮಾರ ಸಿಂಧೆ ನಿರೂಪಿಸಿದರು. ನೀಲಕಂಠ ಇಸ್ಲಾಂಪೂರ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.