ಶುಕ್ರವಾರ, ಏಪ್ರಿಲ್ 23, 2021
22 °C

ರೂ215 ಕೋಟಿ ಬಜೆಟ್‌ಗೆ ಪಾಲಿಕೆ ಅನುಮೋದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ಮಹಾನಗರ ಪಾಲಿಕೆಯ ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಡ್ಡಿ ಪಾಟೀಲ ಕುರಕುಂದಾ ಅವರು ಸೋಮವಾರ ಇಲ್ಲಿನ ಇಂದಿರಾ ಸಭಾಭವನದಲ್ಲಿ ಮಂಡಿಸಿದ ರೂ 5.85 ಕೋಟಿ ಉಳಿತಾಯ ಒಳಗೊಂಡ ರೂ. 215 ಕೋಟಿ ಗಾತ್ರದ 2012-13ನೇ ಸಾಲಿನ ಬಜೆಟ್‌ನ್ನು ಪಾಲಿಕೆ ಸದಸ್ಯರು ಅನುಮೋದಿಸಿದರು.ಪ್ರಸ್ತುತ ಆರ್ಥಿಕ ವರ್ಷದಲ್ಲಿ ಪಾಲಿಕೆಯಿಂದ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಇದಕ್ಕಾಗಿ ಮೀಸಲಿಟ್ಟ ಮೊತ್ತದ ವಿವರಗಳ ಮುಖ್ಯಾಂಶವಿರುವ ಎರಡು ಪುಟದ ಬಜೆಟ್ ಪತ್ರವನ್ನು ಭೀಮರಡ್ಡಿ ಪಾಟೀಲ ಓದಿದರು. ಬಜೆಟ್ ಮಂಡನೆ ವಿಳಂಬವಾಗಿರುವುದಕ್ಕೆ ವಿನೋದ ಕೆ.ಬಿ. ಆರಂಭದಲ್ಲೆ ಆಕ್ಷೇಪ ವ್ಯಕ್ತಪಡಿಸಿದರು.ಮೇಯರ್ ಚುನಾವಣೆ, ಸ್ಥಾಯಿ ಸಮಿತಿ ರಚನೆ ಹಾಗೂ ವಿಧಾನಪರಿಷತ್ ಚುನಾವಣೆ ಸಂಬಂಧ ಇದೇ ಮೊದಲ ಬಾರಿಗೆ ನೀತಿಸಂಹಿತೆ ಜಾರಿಗೊಳಿಸಿದ್ದರಿಂದ ಅನಿವಾರ್ಯವಾಗಿ ಬಜೆಟ್ ಮಂಡನೆ ವಿಳಂಬವಾಗಿದೆ ಎಂದು ಭೀಮರಡ್ಡಿ ಸ್ಪಷ್ಟನೆ ನೀಡಿದರು.ಪಾಲಿಕೆ ನಿರೀಕ್ಷಿಸಿರುವ ಆದಾಯ: 2012-13ನೇ ಸಾಲಿನಲ್ಲಿ ವಿವಿಧ ಮೂಲದಿಂದ ಒಟ್ಟು ರೂ 22.48 ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಪಾಲಿಕೆ ಹೊಂದಿದೆ. ಕಟ್ಟಡ ಮತ್ತು ನಿವೇಶನಗಳ ಆಸ್ತಿ ತೆರಿಗೆ ರೂ 10 ಕೋಟಿ, ಸ್ಟ್ಯಾಂಪ್ ತೆರಿಗೆ ರೂ 20 ಲಕ್ಷ, ಪಾಲಿಕೆ ನಿವೇಶನಗಳ ಮಾರಾಟ ರೂ 3.75 ಲಕ್ಷ, ಕಟ್ಟಡ ನಿರ್ಮಾಣ ಶುಲ್ಕ ರೂ 5 ಕೋಟಿ, ಅಭಿವೃದ್ಧಿ ಶುಲ್ಕ ರೂ 3 ಕೋಟಿ, ಜಾಹೀರಾತು ತೆರಿಗೆ ರೂ 1 ಕೋಟಿ, ರಸ್ತೆ ಅಗೆತಕ್ಕೆ ಶುಲ್ಕ ರೂ 12 ಲಕ್ಷ, ವ್ಯಾಪಾರ ಪರವಾನಗೆ ಶುಲ್ಕ ರೂ 2 ಕೋಟಿ.ರಾಜ್ಯ ಸರ್ಕಾರದಿಂದ ಒಟ್ಟು ರೂ. 59.07 ಕೋಟಿ ಅನುದಾನ ನಿರೀಕ್ಷಿಸಲಾಗಿದೆ. ಅದರಲ್ಲಿ ಎಸ್‌ಎಫ್‌ಸಿ (ಸಂಬಳ) ರೂ 15 ಕೋಟಿ, ಎಸ್‌ಎಫ್‌ಸಿ (ವಿಶೇಷ) ರೂ 23.37 ಕೋಟಿ, ಎಸ್‌ಎಫ್‌ಸಿ (ಮುಕ್ತ ನಿಧಿ) ರೂ 15.2 ಕೋಟಿ, 13ನೇ ಹಣಕಾಸು ಯೋಜನೆ (ರಸ್ತೆ ಮತ್ತು ಸೇತುವೆ) ರೂ 1.53 ಕೋಟಿ ಹಾಗೂ 13ನೇ ಹಣಕಾಸು (ಮೂಲ ನಿಧಿ) ರೂ 3.97 ಕೋಟಿಯಷ್ಟಿದೆ.ಅಭಿವೃದ್ಧಿ ಯೋಜನೆಗಳು: ಸಾರ್ವಜನಿಕ ಉದ್ಯಾನದಲ್ಲಿ ಸಂಗೀತ ಕಾರಂಜಿ ಅಳವಡಿಸಲು ರೂ 1 ಕೋಟಿ ಹಾಗೂ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನಗಳ ಅಭಿವೃದ್ಧಿಗಾಗಿ ರೂ 2 ಕೋಟಿ ಅನುದಾನ ವಿನಿಯೋಗಿಸಲು ನಿರ್ಧರಿಸಲಾಗಿದೆ.ನಗರದ ವಿವಿಧ ಬಡಾವಣೆಗಳಿಗೆ ಹೊಂದಿಕೊಂಡು ವಿಸ್ತರಣೆಯಾಗಿರುವ ಪ್ರದೇಶ (ಎಕ್ಸಟೆನ್ಸೆನ್ ಏರಿಯಾ)ಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ರೂ 3 ಕೋಟಿ, ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪತ್ರಿಕಾ ಭವನದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ರೂ 5 ಲಕ್ಷ ಹಣ ನೀಡಲು ಉದ್ದೇಶಿಸಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳ ಅಭಿವೃದ್ಧಿಗೊಳಿಸಲು ಆರಂಭಿಕವಾಗಿ ರೂ 20 ಲಕ್ಷ ತೆಗೆದಿಡಲಾಗಿದೆ.ನಗರದಲ್ಲಿ ನೈರ್ಮಲ್ಯ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಹಿಂದಿನ ವರ್ಷದ ಬಜೆಟ್‌ನಲ್ಲಿ ತೆಗೆದಿರಿಸಿದ್ದ ಬಜೆಟ್‌ನ್ನು ದುಪ್ಪಟ್ಟುಗೊಳಿಸಿ ರೂ 7.8 ಕೋಟಿ ಮೀಸಲಿಡಲಾಗಿದೆ. ನೈರ್ಮಲ್ಯ ಕಾಪಾಡಲು ಹಿರಿಯ ನಿರೀಕ್ಷಕರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ.ನಗರದಲ್ಲಿರುವ ಪ್ರಮುಖ ವೃತ್ತಗಳ ಅಭಿವೃದ್ಧಿ ಹಾಗೂ ಸ್ವಾಗತ ದ್ವಾರಗಳ ಅಭಿವೃದ್ಧಿಗೆ ರೂ 1 ಕೋಟಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ, ಪ್ರತಿಭಾನ್ವಿತರಿಗೆ ವಿದ್ಯಾರ್ಥಿ ವೇತನ, ವಾಹನ ಚಾಲನಾ, ಕಂಪ್ಯೂಟರ್, ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ತರಬೇತಿಗಳನ್ನು ಒದಗಿಸಲಾಗುವುದು. ವಿಶೇಷವಾಗಿ ಪೌರ ಕಾರ್ಮಿಕರ ಕುಟುಂಬಗಳಿಗೂ ವಿವಿಧ ಯೋಜನೆಗಳನ್ನು ತಲುಪಿಸಲು ಉದ್ದೇಶಿಸಲಾಗಿದೆ. ಒಟ್ಟು ಶೇ 22.75 ಯೋಜನೆಗೆ ಒಟ್ಟು ರೂ 8.55 ಕೋಟಿ ಹಣ ಮೀಸಲಿಡಲಾಗಿದೆ.ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶೇ 7.25 ಯೋಜನೆ ಅಡಿಯಲ್ಲಿ ಒಟ್ಟು 2.74 ಕೋಟಿ ತೆಗೆದಿಟ್ಟಿದ್ದು, ಇದೇ ಮೊದಲ ಬಾರಿಗೆ ಅಂಗವಿಕಲರ ನೆರವಿಗಾಗಿ ಶೇ 3ರಷ್ಟು ಅನುದಾನ ತೆಗೆದಿರಿಸಲಾಗಿದೆ.

ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಹೆರಿಗೆ ಭತ್ಯೆಗಾಗಿ ರೂ 50 ಲಕ್ಷ, ನಗರದ ಎಲ್ಲ ಧರ್ಮದಸ್ಮಶಾನಗಳಲ್ಲಿ ಹೈಮಾಸ್ಟ್ ದೀಪ ಹಾಗೂ ಕೊಳವೆಬಾವಿ ಕೊರೆಸಲು ರೂ 1.5 ಕೋಟಿ, ನಗರದ ವಿವಿಧ ಭಾಗದಲ್ಲಿ ಸೂಚನಾ ಫಲಕ ಅಳವಡಿಸಲು ರೂ 50 ಲಕ್ಷ, ಬೀದಿ ನಾಯಿಗಳ ಸಂತಾನಶಕ್ತಿ ಹರಣಕ್ಕೆ ರೂ 50 ಲಕ್ಷ, ಸಸಿ ನೆಡುವುದಕ್ಕೆ ರೂ 50 ಲಕ್ಷ, ಬೀದಿ ದೀಪಗಳ ನಿರ್ವಹಣೆಗಾಗಿ ರೂ 2 ಕೋಟಿ, ಬೀದಿ ದೀಪಗಳ ವಿಸ್ತರಣೆಗಾಗಿ ರೂ 5 ಕೋಟಿ, ಮಟನ್ ಮಾರ್ಕೆಟ್, ಫಿಶ್ ಮಾರ್ಕೆಟ್ ಹಾಗೂ ಕಸಾಯಿಖಾನೆ ಅಭಿವೃದ್ಧಿಗೆ ರೂ 1 ಕೋಟಿ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ರೂ 75 ಲಕ್ಷ ಬಜೆಟ್‌ನಲ್ಲಿ ಮೀಸಲಾಗಿಡಲಾಗಿದೆ.ಬಜೆಟ್ ಮಂಡನೆ ನಂತರ ನಡೆದ ಚರ್ಚೆ ವೇಳೆಯಲ್ಲಿ ಮಿರ್ಜಾ ಕಾಸಿಂ ಬೇಗ, ಸಜ್ಜಾದ ಅಲಿ, ಅಬ್ದುಲ್ ರೆಹಮಾನ, ಉಮೇಶ ಶೆಟ್ಟಿ ಅವರು ಬಜೆಟ್‌ನಲ್ಲಿ ಕೆಲವು ತಿದ್ದುಪಡಿಗಳನ್ನು ಸೂಚಿಸಿದರು. ಎಲ್ಲರ ಸಲಹೆಗಳನ್ನು ಮಾನ್ಯ ಮಾಡಲಾಗುವುದು. ಬರುವ ನವೆಂಬರ್‌ನಲ್ಲಿ ಸಾಧ್ಯವಾದರೆ ಮತ್ತೆ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗುವುದು ಎಂದು ಭೀಮರಡ್ಡಿ ತಿಳಿಸಿದರು.ಮಹಾಪೌರ ಸೋಮಶೇಖರ ಮೇಲಿನಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಆಯುಕ್ತ ಡಾ. ಸಿ. ನಾಗಯ್ಯ ಸೇರಿದಂತೆ ಅಧಿಕಾರಿಗಳು ಸಭೆಯ ಮುಂಭಾಗ           ದಲ್ಲಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.