ಮಂಗಳವಾರ, ಏಪ್ರಿಲ್ 13, 2021
26 °C

ಅಬ್ಬೆತುಮಕೂರು ಶ್ರೀಗಳ ಪಾದಯಾತ್ರೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೇವರ್ಗಿ:  ಲೋಕಕಲ್ಯಾಣ ಮತ್ತು ಮಾನವ ಸಮೃದ್ಧಿಗಾಗಿ ಪ್ರತಿ ವರ್ಷ ಯಾದಗಿರಿ ಜಿಲ್ಲೆಯ ಅಬ್ಬೆತುಮಕೂರು ವಿಶ್ವಾರಾಧ್ಯ ಸಿದ್ಧ ಸಂಸ್ಥಾನ ಮಠದ ಡಾ.ಗಂಗಾಧರ ಸ್ವಾಮೀಜಿಯವರು ಪವಾಡ ಪುರುಷ, ಸದ್ಗುರು ವಿಶ್ವಾರಾಧ್ಯರ ಜನ್ಮಸ್ಥಳ ಜೇವರ್ಗಿ ತಾಲ್ಲೂಕಿನ ಗಂವ್ಹಾರದಿಂದ ಮಂಗಳವಾರ ಸಹಸ್ರಾರು ಭಕ್ತ ಸಮೂಹದೊಂದಿಗೆ ಪಾದಯಾತ್ರೆ ಆರಂಭಿಸಿದರು.ಬೆಳಿಗ್ಗೆ 9 ಗಂಟೆಗೆ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಬಸವೇಶ್ವರ ಕರ್ತೃ ಗದ್ದುಗೆಗೆ ಗಂಗಾಧರ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಗೋಟಾರ ರುದ್ರ ಸಂಗೀತ ಬಳಗದಿಂದ ವಿಶೇಷ ರುದ್ರಾಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಶ್ರೀಗಳು ಗ್ರಾಮದ ಆರಾಧ್ಯ ದೈವ ಅಮೃತೇಶ್ವರ ದೇವಸ್ಥಾನಕ್ಕೆ (ಉದ್ಭವಲಿಂಗ) ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಶ್ರೀಮಠದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.ಮಂಗಳವಾರ ಪಾದಯಾತ್ರೆ ಗಂವ್ಹಾರದಿಂದ ಹೊರಟು, ಶಹಾಪುರ ತಾಲ್ಲೂಕಿನ ಅಣಬಿ ಗ್ರಾಮದ ಮಾರ್ಗವಾಗಿ ಶಿರವಾಳಕ್ಕೆ ತಲುಪಲಿದೆ.18ರಂದು ಬೆಳಿಗ್ಗೆ ಚಿತ್ತಾಪುರ ತಾಲ್ಲೂಕಿನ ಸನ್ನತಿ ಗ್ರಾಮದ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಮುಗಿಸಿದ ನಂತರ ಪಾದಯಾತ್ರೆ ಮುಂದುವರೆಯಲಿದೆ. ಸಂಜೆ 4 ಗಂಟೆಗೆ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ದೇವಸ್ಥಾನದಲ್ಲಿ ವಿಶೇಷ ಕುಂಕುಮಾರ್ಚನೆ ನಡೆಯಲಿದೆ.ಸನ್ನತಿಯಿಂದ ಹೊರಟು ಕನಕನಳ್ಳಿ- ಉಳವಂಡಗೇರಾ ಮಾರ್ಗವಾಗಿ ತಳಕ ಗ್ರಾಮಕ್ಕೆ ತಲುಪಲಿದೆ. ನಂತರ ಬಸವಣ್ಣ ದೇವಾಲಯದಲ್ಲಿ ಪ್ರಸಾದ ಸ್ವೀಕರಿಸಲಿದ್ದಾರೆ. ಬಳಿಕ ಹೆಡಗಿಮದ್ರಿಗೆ ಆಗಮಿಸಿ ಶಾಂತ ಶಿವಯೋಗಿ ಮಠದಲ್ಲಿ ವಾಸ್ತವ್ಯ ಮಾಡಲಿದ್ದಾರೆ. 19ರಂದು ಮಧ್ಯಾಹ್ನ 3ಕ್ಕೆ ಹೆಡಗಿಮದ್ರಿಯಿಂದ ಹೊರಟು ಠಾಣಾಗುಂದಿಗೆ ಆಗಮಿಸಿ ಪ್ರಸಾದ ಸ್ವೀಕಾರ ನಡೆಯಲಿದೆ. ಅನಂತರ ನೇರವಾಗಿ ಸುಕ್ಷೇತ್ರ ಅಬ್ಬೆತುಮಕೂರಿನ ಪಾದಗಟ್ಟೆಗೆ ಸಂಜೆ 6ಕ್ಕೆ ಪಾದಯಾತ್ರೆ ತಲುಪಲಿದೆ. ಪಾದಗಟ್ಟೆಯಿಂದ ವಿಶೇಷ ಮೆರವಣಿಗೆ ಮೂಲಕ ಪುರಪ್ರವೇಶ ಮಾಡುವುದರೊಂದಿಗೆ ಪಾದಯಾತ್ರೆ ಸಂಪನ್ನಗೊಳ್ಳಲಿದೆ.ಪಾದಯಾತ್ರೆ ಚಾಲನೆ ಸಂದರ್ಭದಲ್ಲಿ ಬಾಜಾ, ಬಜಂತ್ರಿ, ವಾದ್ಯ-ವೈಭವಗಳು ಪಾದಯಾತ್ರೆಯ ಸೊಬಗನ್ನು ಹೆಚ್ಚಿಸಿದ್ದವು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.