ಚಿಂಚೋಳಿ: ಅನ್ನದಾತನ ಕೈ ಹಿಡಿದ ವರುಣದೇವ
ಚಿಂಚೋಳಿ: ತಾಲ್ಲೂಕಿನ ರೈತರ ಕೈ ಹಿಡಿದ ಮೇಘರಾಜ, ಕೃಷಿಕರ ಹೊಲಗಳಲ್ಲಿ ಮುಂಗಾರು ಬೆಳೆಗಳು ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾನೆ.
ಮಿನಿ ಮಲೆನಾಡು ಎಂಬ ಹೆಗ್ಗಳಿಕೆ ಹೊಂದಿರುವ ತಾಲ್ಲೂಕಿನಲ್ಲಿ ಈಗ ಭೂರಮೆ ಹಸಿರಿನಿಂದ ಸಿಂಗಾರಗೊಂಡಿದ್ದಾಳೆ. ಕೊಂಚಾವರಂ ಕಾಡು ಹಸಿರು ಹೊದಿಕೆ ಹೊದ್ದು ಮನಸ್ಸಿಗೆ ಮುದ ನೀಡುತ್ತಿದೆ.
ಪ್ರತಿನಿತ್ಯ ಬೆಳೆಗೆ ಬೇಕಾದಷ್ಟು ಮಳೆ ಸುರಿಯುತ್ತಿರುವುದರಿಂದ ಬೆಳೆಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಬೆಳೆಗಳು ಉತ್ತಮ ಬೆಳವಣಿಗೆಯ ಹಂತದಲ್ಲಿವೆ.
ಹೆಸರು, ಉದ್ದು, ತೊಗರಿ, ಎಳ್ಳು, ಹತ್ತಿ, ಸಜ್ಜೆ, ಹೈಬ್ರಿಡ್ ಜೋಳ, ಸೂರ್ಯಕಾಂತಿ ಬೆಳೆಗಳು ಹೊಲದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಕಳೆ ಕೀಳುವುದು, ಕಳೆ ನಿವಾರಕ ಸಿಂಪರಣೆ ಹಾಗೂ ಎಡೆ ಹೊಡೆಯುವ ಕೆಲಸದಲ್ಲಿ ರೈತರು ತೊಡಗಿದ್ದಾರೆ.
ಈ ಮಧ್ಯೆ ಮಂಗಳವಾರ ರಾತ್ರಿ ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದಿದೆ. ಸುಲೇಪೇಟದಲ್ಲಿ 6 ಸೆಂ.ಮೀ, ಚಿಂಚೋಳಿ 5 ಸೆಂ.ಮೀ, ಕೊಂಚಾವರಂ, ಐನಾಪೂರ, ಚಿಮ್ಮನಚೋಡದಲ್ಲಿ ತಲಾ 3 ಸೆಂ.ಮೀ, ಕೋಡ್ಲಿಯಲ್ಲಿ 1 ಸೆಂ.ಮೀ ಮಳೆ ಸುರಿದಿದ್ದು ರೈತರಲ್ಲಿ ಸಂತಸ ಉಂಟು ಮಾಡಿದೆ.
ಅಗತ್ಯಕ್ಕೆ ತಕ್ಕಂತೆ ಮಳೆ ಸುರಿಯುತ್ತಿರುವುದರಿಂದ ತಾಲ್ಲೂಕಿನಲ್ಲಿ ಕೆರೆಕುಂಟೆ, ನದಿ, ತೊರೆಗಳಲ್ಲಿ ಹೊಸ ನೀರು ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ಹೊಲಗಳಲ್ಲಿ ಭಾರಿ ಪ್ರಮಾಣದ ಮಳೆನೀರು ಸಂಗ್ರಹಗೊಂಡು ಹೊಲಗಳು ಕೆರೆಯಂತೆ ಕಾಣಿಸುತ್ತಿವೆ.
ಶೇ.96 ಬಿತ್ತನೆ: ಜಿಲ್ಲೆಯಲ್ಲಿಯೇ ಚಿಂಚೋಳಿ ತಾಲ್ಲೂಕಿನಲ್ಲಿ ಉತ್ತಮ ಮಳೆಯನ್ನು ವರುಣದೇವ ಕರುಣಿಸಿದ್ದಾನೆ.
ಕೊಂಚಾವರಂ ಕಾಡಿನ ಕೊಡುಗೆ ಇದಕ್ಕೆ ಕಾರಣ ಎನ್ನಲಾಗಿದೆ. ಇಲ್ಲಿಯವರೆಗೆ ಶೇ. 96ರಷ್ಟು ಬಿತ್ತನೆಯಾಗಿದೆ. ಅಂದಾಜು 68ರಿಂದ70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಬೆಡಸೂರು `ಪ್ರಜಾವಾಣಿ~ಗೆ ಮಾಹಿತಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.