ಮಳೆಗೆ ಕುಸಿದ ಶಾಲಾ ಕಟ್ಟಡ

ಬುಧವಾರ, ಜೂಲೈ 17, 2019
24 °C

ಮಳೆಗೆ ಕುಸಿದ ಶಾಲಾ ಕಟ್ಟಡ

Published:
Updated:

ಶಹಾಬಾದ: ನಗರಸಭೆ ವ್ಯಾಪ್ತಿಯ ಹಳೆ ಶಹಾಬಾದನ ಶಂಕರಲಿಂಗೇಶ್ವರ ದೇವಸ್ಥಾನದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಈಚೆಗೆ ಬಿದ್ದ ಭಾರಿ ಮಳೆಯಿಂದ ಭಾಗಷಃ ಕುಸಿದಿದ್ದು ಇಲ್ಲಿನ ಶಾಲಾ ಮಕ್ಕಳು ಬೀದಿ ಪಾಲಾಗಿವೆ, ಇದರಿಂದ ಪಾಲಕರು ಮತ್ತು ಶಿಕ್ಷಕರು ಆತಂಕ ಪಡುವಂತಾಗಿದೆ. ಕಟ್ಟಡ ಕುಸಿದ ಭೀತಿಯಲ್ಲಿ ಮಕ್ಕಳನ್ನು ಕಳೆದ ಕೆಲ ದಿನಗಳಿಂದ ಮನೆಗೆ ಕಳಿಸಿಕೊಡಲಾಗುತ್ತಿದೆ.ಕಳೆದ ಎಪ್ರಿಲ್-ಮೇ ತಿಂಗಳಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಕಟ್ಟಡ ತೆರವು ಮತ್ತು ರಸ್ತೆ ವಿಸ್ತರಣೆ ಕಾರ್ಯಾಚರಣೆ ಸಂದರ್ಭದಲ್ಲಿ ಸದರಿ ಶಾಲೆಯ ಒಂದು ಭಾಗ ನೆಲ ಸಮವಾಗಿತ್ತು.  ಸ್ಥಳೀಯರು ಆಸಕ್ತಿ ತೋರಿದ ಕಾರಣದಿಂದಾಗಿ ಈ ಭಾಗದಲ್ಲಿ ತಾತ್ಕಾಲಿಕ ಗೋಡೆ ನಿರ್ಮಿಸಿ ಶಾಲೆ ನಡೆಯುತ್ತಿತ್ತು. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ, ಗಾಳಿಗೆ ಈಗ ಗೋಡೆ ಕುಸಿದಿದೆ. ಆರಂಭದ ದಿನಗಳಲ್ಲಿ ಈ ಶಾಲೆ ಚಾವಡಿಯಲ್ಲಿ ನಡೆಯುತ್ತಿತ್ತು. ನಂತರ ಆಗಿನ ಎಸ್‌ಡಿಎಂಸಿ ಸದಸ್ಯರ ಆಸಕ್ತಿಯ ಪರಿಣಾಮ ಎರಡು ಕೋಣೆ, ಈಚೆಗೆ ನಾಲ್ಕು ಕೋಣೆ ಕಂಡಿತ್ತು.  ಶಾಲಾ ಕಟ್ಟಡ ಕುಸಿದ ಸುದ್ದಿ ತಿಳಯುತ್ತಲೆ, ಶಿಕ್ಷಣ ಇಲಾಖೆಯ ಸಂಯೋಜಕ ಸುಬಾಶ್ಛಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. `ಬಹಳ ದಿನದಿಂದ ಶಾಲಾ ಗೋಡೆ ದುರಸ್ತಿಗೆ ಸ್ಥಳೀಯ ನಗರಸಭೆಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಆದರೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ. ಕೇವಲ ಆಶ್ವಾಸನೆ ನೀಡುತ್ತಿರುವ ಸ್ಥಳೀಯ ಆಡಳಿತ ಕಾರ್ಯರೂಪಕ್ಕೆ ತರುತ್ತಿಲ್ಲ. ಮಳೆ ಹೀಗೆ ಮುಂದುರೆದರೆ ಮತ್ತೊಂದು ಕೋಣೆ ಕುಸಿಯುವ ಸಾಧ್ಯತೆ ಇದೆ. ಕಟ್ಟಡ ಸೂಕ್ತರೀತಿಯಲ್ಲಿ ನಿರ್ಮಾಣ ಗೊಳ್ಳುವವರೆಗೆ ಇಲ್ಲಿನ ಉರ್ದು ಶಾಲೆಯ ನೂತನ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸುವಂತೆ~ ಸ್ಥಳೀಯ ಗಣ್ಯರಾದ ನಗರಸಭೆ ಸದಸ್ಯ ಶ್ರೀಶೈಲ ಬೆಳಮಗಿ, ಸುಧಾಕರರಾವ ಮಾಲಿಪಾಟೀಲ, ಶರಣಗೌಡ ಪಾಟೀಲ ಮತ್ತು ಸೋಮಶೇಖರ ಕರಿವಾವಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದಾರೆ.     ಸಧ್ಯ 1 ರಿಂದ 7 ನೆ ತರಗತಿವರೆಗೆ ನಡೆಯುತ್ತಿರುವ ಈ ಶಾಲೆಯಲ್ಲಿ ಸುಮಾರು 250 ಕ್ಕೂ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದು, 10 ಶಿಕ್ಷಕರು ಇದ್ದಾರೆ. ಈ ಶಾಲಾ ಕಟ್ಟಡ ದುರಸ್ತಿಯಾಗದಿದ್ದರೆ, ಇಲ್ಲಿನ ಪುಟ್ಟಪುಟ್ಟ ಮಕ್ಕಳು, ದಶಕಗಳ ಹಿಂದೆ ಇದ್ದ ವ್ಯವಸ್ಥೆಯಂತೆ ಮತ್ತೆ ಸುಮಾರು ಒಂದು ಕಿಮೀ ದೂರದ ಸಿಬರಕಟ್ಟಾ ಸರ್ಕಾರಿ ಶಾಲೆಗೆ ಹೋಗುವ ಅನಿವಾರ್ಯತೆ ಇದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry