105ನೇ ವರ್ಷದ ದಸರಾ

7

105ನೇ ವರ್ಷದ ದಸರಾ

Published:
Updated:
Deccan Herald

ನಾಡಹಬ್ಬ ದಸರಾವನ್ನು ಸಡಗರ, ಸಂಭ್ರಮದಿಂದ ಆಚರಿಸುವುದರಲ್ಲಿ ಬೆಂಗಳೂರಿಗರೇನು ಹಿಂದೆ ಬಿದ್ದಿಲ್ಲ. ಗಣೇಶೋತ್ಸವ ಮುಗಿಯುತ್ತಿದ್ದಂತೆ ಬರುವ ದಸರಾ ಉತ್ಸವವನ್ನೂ ವಿವಿಧ ಬಡಾವಣೆಗಳಲ್ಲಿ ಸಂಘಟಿತವಾಗಿ ಆಚರಿಸಿ ನಿವಾಸಿಗಳು ಸಂಭ್ರಮಿಸುವುದುಂಟು.

ಅಂತೆಯೇ, ರಾಜಧಾನಿಯ ಹಳೆ ಪ್ರದೇಶಗಳಲ್ಲಿ ಒಂದಾದ ಜೆ.ಸಿ. ನಗರದಲ್ಲಿ (ಜಯ ಚಾಮರಾಜೇಂದ್ರ ನಗರ) ದಸರಾ ವಿಶೇಷ ಹಬ್ಬ. ಒಂಬತ್ತು ದಿನವೂ ಇಲ್ಲಿನ ನಿವಾಸಿಗಳು ನಾಡಹಬ್ಬ ಆಚರಿಸಿ ಒಗ್ಗಟ್ಟು ಪ್ರದರ್ಶಿಸುತ್ತಾರೆ. ದೇವರ ಆರಾಧನೆಯ ಜತೆಗೆ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಇಲ್ಲಿನ ಬಡಾವಣೆಗಳ ಸುತ್ತಮುತ್ತ ದೇವರ ಮೆರವಣಿಗೆ ಕೊಂಡೊಯ್ದು ಸಂಭ್ರಮಿಸುತ್ತಾರೆ.

ಜೆ.ಸಿ. ನಗರ ದಸರಾ ಆಚರಣೆ ಇಂದು, ನಿನ್ನೆಯದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಯುದ್ಧದಲ್ಲಿ ವಿಜಯಿಸಿದ ಸಂಕೇತವಾಗಿ ಇಲ್ಲಿ ದಸರಾ ಆಚರಿಸಲಾಗುತ್ತದೆ. ವಿಜಯೋತ್ಸವದ ಪ್ರಯುಕ್ತ ದೇವರ ಮೆರವಣಿಗೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದು ನಗರದ ಅತಿ ಹಳೆಯ ದಸರಾ ಉತ್ಸವಗಳಲ್ಲಿ ಒಂದು.

105ನೇ ವರ್ಷದ ದಸರಾ: ಈ ಬಾರಿ ಜೆ.ಸಿ. ನಗರದಲ್ಲಿ ಆಚರಿಸುತ್ತಿರುವುದು 105ನೇ ವರ್ಷದ ದಸರಾ ಉತ್ಸವ. ದಸರಾ ಅಚರಣೆ ಸಲುವಾಗಿಯೇ ಇಲ್ಲಿ ರಚನೆಯಾಗುವ ‘ಜೆ.ಸಿ. ನಗರ ದಸರಾ ಉತ್ಸವ ಸಮಿತಿ’ ಅಚ್ಚುಕಟ್ಟಾಗಿ ನವರಾತ್ರಿ ಹಬ್ಬವನ್ನು ಆಚರಿಸುತ್ತದೆ. ಕಾರ್ಯಕ್ರಮದ ಸಂಪೂರ್ಣ ಆಯೋಜನೆ, ನಿರ್ವಹಣೆಯ ಜವಾಬ್ದಾರಿ ಈ ಸಮಿತಿಯದ್ದೇ. ಇಲ್ಲಿನ ಮುನಿರೆಡ್ಡಿ ಪಾಳ್ಯದ ಬಳಿಯಿರುವ ಮಠದ ಹಳ್ಳಿಯ ಗುಂಡು ಮುನೇಶ್ವರ ಸ್ವಾಮಿ ಮತ್ತು ಸಮೀಪದ ಮಹೇಶ್ವರಿ ದೇವಿ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯಗಳು ಈ ಸಮಯದಲ್ಲಿ ನಡೆಯುತ್ತವೆ. ಶತಮಾನಕ್ಕೂ ಹಳೆಯದಾದ ಈ ಉತ್ಸವಕ್ಕೆ ವಿಶೇಷ ಇತಿಹಾಸವೂ ಇದೆ.

ದಸರಾಕ್ಕೆ ಮಹಾಯುದ್ಧದ ನಂಟು: ಮೊದಲನೇ ಮಹಾಯುದ್ಧಕ್ಕೂ ಮುನಿರೆಡ್ಡಿ ಪಾಳ್ಯ, ಜೆ.ಸಿ. ನಗರದ ದಸರಾ ಉತ್ಸವಕ್ಕೂ ನಂಟಿದೆ. 1914ರಲ್ಲಿ ನಡೆದ ಮೊದಲ ಜಾಗತಿಕ ಯುದ್ಧದಲ್ಲಿ ಬ್ರಿಟಿಷರ ಪರವಾಗಿ ಪಾಲ್ಗೊಳ್ಳುವಂತೆ ಮೈಸೂರಿನ ಒಡೆಯರನ್ನು ಬ್ರಿಟಿಷರು ಕೇಳಿದರು. ಅವರು ಬೆಂಗಳೂರಿನಲ್ಲಿದ್ದ ಮೂರು ತುಕಡಿ ಸೈನ್ಯವನ್ನು ಯುದ್ಧಕ್ಕೆ ಕಳುಹಿಸಿದರು.

ಈ ಸೇನಾ ತುಕಡಿಯವರು ಯುದ್ಧಕ್ಕೆ ಹೋಗುವ ಮುನ್ನ ಮುನೇಶ್ವರ ದೇವಾಲಯಕ್ಕೆ ಬಂದು ಆಶೀರ್ವಾದ ಪಡೆದರು. ಯುದ್ಧದಲ್ಲಿ ಗೆಲುವು ದೊರೆತರೆ, ವಿಜಯದಶಮಿ ದಿನ ಇಲ್ಲಿನ ಕೇರಿಗಳಲ್ಲಿ ಮುನೇಶ್ವರ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವುದಾಗಿ ಹರಕೆ ಹೊತ್ತರು. ಆಗಿನಿಂದಲೇ ಈ ಭಾಗದ ಜನರು ಇಲ್ಲಿ ದಸರಾ ಹಬ್ಬವನ್ನು ಆಚರಣೆಗೆ ತಂದರು.

ಸೈನಿಕರಿಂದ ಮೆರವಣಿಗೆಗೆ ಚಾಲನೆ: ಮೊದಲ ಮಹಾಯುದ್ಧದಲ್ಲಿ ಬ್ರಿಟಿಷರು ಮತ್ತು ಅವರ ಮಿತ್ರಕೂಟ ಜಯಗಳಿಸಿತು. ಅಂತೆಯೇ ಅವರ ಪರವಾಗಿ ಹೋರಾಡಿದ ಮೈಸೂರಿನ ಸೇನಾ ತುಕಡಿಯೂ ವಿಜಯೋತ್ಸವ ಆಚರಿಸಿತು. ಸೈನಿಕರು ಮುನೇಶ್ವರ ದೇವರಿಗೆ ಹೊತ್ತಿದ್ದ ಹರಕೆ ತೀರಿಸಲು ಅಣಿಯಾದರು. ಅದರಂತೆ ವಿಜಯದಶಮಿ ದಿನ ಕುದುರೆ ಸವಾರರ ಕವಾಯತಿನೊಂದಿಗೆ ಮೈಸೂರು ಲ್ಯಾನ್ಸರ್‌ ಮೈದಾನದಲ್ಲಿ ಬನ್ನಿ ಕಡಿದು, ಮುನೇಶ್ವರ ಸ್ವಾಮಿಯ ಮೂರ್ತಿಯನ್ನು ಹೆಗಲ ಮೇಲೆ ಹೊತ್ತು ಇಲ್ಲಿನ ಕೇರಿಗಳಲ್ಲಿ ಮೆರವಣಿಗೆ ಸಾಗಿ ವಿಜಯೋತ್ಸವ ಆಚರಿಸಿದರು.

ಇದರಿಂದ ಪ್ರಸನ್ನರಾದ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಬ್ರಿಟಿಷ್‌ ಸರ್ಕಾರಕ್ಕೆ ಮುನಿರೆಡ್ಡಿ ಪಾಳ್ಯದ ಸಮೀಪದ ಬೈರಸಂದ್ರ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶವನ್ನು ಕುದುರೆ ಸವಾರರ ಸೇನಾ ತುಕಡಿ ನೆಲೆಸಲು ಬಳುವಳಿಯಾಗಿ ನೀಡಿದರೆಂದು ತಿಳಿದು ಬರುತ್ತದೆ. ಅದನ್ನೇ ಇಂದು ಓಲ್ಡ್‌ ಎಂ.ಎಸ್‌. ಲೇನ್‌ (ಹಳೆ ಮೈಸೂರು ಸವಾರ್‌ ಲೇನ್‌) ಎಂದು ಕರೆಯಲಾಗುತ್ತಿದೆ ಎನ್ನುತ್ತಾರೆ ಜೆ.ಸಿ. ನಗರ ದಸರಾ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ರಾವ್.

ಸ್ವಾತಂತ್ರ್ಯ ನಂತರ ಈ ಪಡೆ ಕೇಂದ್ರ ರಕ್ಷಣಾ ಪಡೆಯ ಸ್ವಾಧೀನಕ್ಕೆ ಒಳಗಾಯಿತು. ಯುದ್ಧದಲ್ಲಿ ಮಡಿದ ಯೋಧರ ಸ್ಮರಣೆಗಾಗಿ ಬ್ರಿಟಿಷರು ಇಲ್ಲಿ ಧ್ವಜಸ್ಥಂಭ ಸ್ಥಾಪಿಸಿದ್ದಾರೆ. ಹೀಗೆ ನಮ್ಮೂರಿನ ದಸರಾಕ್ಕೂ ನೂರಾರು ವರ್ಷಗಳ ಇತಿಹಾಸವಿದೆ. ಈ ಬಾರಿ 105ನೇ ವರ್ಷದ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಅಣಿಯಾಗಿದ್ದೇವೆ ಎಂದು ಅವರು ಹೇಳುತ್ತಾರೆ.

**

ಸಾಂಸ್ಕೃತಿಕ ಕಾರ್ಯಕ್ರಮ

ಜೆ.ಸಿ. ನಗರದ ದಸರಾ ಉತ್ಸವಕ್ಕೆ ಬುಧವಾರ ಚಾಲನೆ ದೊರೆತಿದೆ. ಮೊದಲ ದಿನ ವಾದ್ಯಗೋಷ್ಠಿ ನಡೆದಿದೆ. ಇದೇ 11 ರಂದು ಸೂರ್ಯ ಆರ್ಟ್‌ ಇಂಟರ್‌ನ್ಯಾಷನಲ್‌ ಕಲಾವಿದರಿಂದ ನೃತ್ಯರೂಪಕ, 12ರಂದು ರಾಜ್‌ ಮೆಲೋಡಿಸ್‌ ತಂಡದಿಂದ ವಾದ್ಯಗೋಷ್ಠಿ, 13ರಂದು ನಗೆ ಹಬ್ಬ (ಗಂಗಾವತಿ ಪ್ರಾಣೇಶ್‌ ಮತ್ತು ತಂಡ), 14ರಂದು ಮದನ್‌ ಮಲ್ಲು ತಂಡದಿಂದ ವಾದ್ಯಗೋಷ್ಠಿ, 15ರಂದು ಫ್ರೆಂಡ್ಸ್‌ ಆಫ್‌ ವಾಯ್ಸ್‌ ತಂಡದಿಂದ ವಾದ್ಯಗೋಷ್ಠಿ, 16ರಂದು ಕನ್ನಡ ಮ್ಯೂಸಿಕ್‌ ನೈಟ್‌, 17ರಂದು ನಟರಾಜ್‌ ಡಾನ್ಸ್‌ ಅಕಾಡೆಮಿಯ ನೃತ್ಯ ಕಲಾವಿದರಿಂದ ನೃತ್ಯ ಪ್ರದರ್ಶನ, 18ರಂದು ನಟ ರವಿ ಅರ್ಪಿಸುವ ಮ್ಯೂಸಿಕ್‌ ಆಫ್‌ ಹಾರ್ಟ್‌ ವಾದ್ಯಗೋಷ್ಠಿ, 19ರಂದು ಡಾನ್ಸ್‌ ತಂಡದವರಿಂದ ನೃತ್ಯ ಸಂಯೋಜನೆ ಆಯೋಜನೆಗೊಂಡಿದೆ. ಸ್ಥಳ: ಶಿವರಾಂ ದಸರಾ ವೇದಿಕೆ, ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ (ಆದಿ ಕಬೀರ ಆಶ್ರಮ ಪಕ್ಕ), ಜೆ.ಸಿ.ನಗರ. ಕಾರ್ಯಕ್ರಮದ ಸಮಯ: ನಿತ್ಯ ಸಂಜೆ 6 ಗಂಟೆ.

ಮೆರವಣಿಗೆ: ಇದೇ 19ರಂದು ರಾತ್ರಿ 9.30 ಗಂಟೆಗೆ ಮೆರವಣಿಗೆ ನಡೆಯಲಿದೆ. ಹೂವಿನ ಪಲ್ಲಕ್ಕಿಯೊಡನೆ ವಿವಿಧ ವಾದ್ಯ ವೃಂದಗಳೊಂದಿಗೆ ದೇವರುಗಳ ಮೂರ್ತಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಪ್ರತಿಮೆಯೊಂದಿಗೆ ಮೆರವಣಿಗೆ ಸಾಗುವುದು ಹಿಂದಿನಿಂದ ನಡೆದುಕೊಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !