ಎಸ್ಬಿಐ: ನಗದು ಜಮಾ ಈಗ ಸುಗಮ
ಗುಲ್ಬರ್ಗ: ಬ್ಯಾಂಕಿಂಗ್ ಈಗ ಹಿಂದಿನಂತಿಲ್ಲ. ಕಚೇರಿ ಅವಧಿಗೆ ಕಾಯುವ, ಚಾಲೆನ್ ತುಂಬುವ, ಟೋಕನ್ ಪಡೆಯುವ, ಸರದಿ ನಿಲ್ಲುವ, ಸಹಿ ಹಾಕುವ, ಕ್ಯಾಶಿಯರ್-ಕ್ಲರ್ಕ್ ಜೊತೆ ಜಗಳಾಡುವ `ಕಾಲಹರಣ~ದ ಸ್ಥಿತಿಯಿಂದ ಕೆಲ ಕ್ಷಣದ ಪ್ರಕ್ರಿಯೆಗೆ ಬಂದಿದೆ. ಸರಳ, ತ್ವರಿತ ಮತ್ತು ಸುಭದ್ರ ಬ್ಯಾಂಕ್ ವ್ಯವಹಾರಕ್ಕೆ ತಂತ್ರಜ್ಞಾನ ಸಾಥ್ ನೀಡಿದೆ. ಎಸ್ಬಿಐ ಅತ್ತ ದಾಪುಗಾಲಿಟ್ಟಿದೆ.
ಮಾನವ ರಹಿತ ನಗದು ನೀಡುವ ಯಂತ್ರ `ಎಟಿಎಂ~ ದಶಕಗಳ ಹಿಂದಿನ ಅಚ್ಚರಿಯಾಗಿತ್ತು. ಪ್ರಸ್ತುತ ಮಕ್ಕಳಿಗೂ ಅಭ್ಯಾಸವಾಗಿದೆ. ಈಗ `ಕ್ಯಾಶ್ ಡೆಪೊಸಿಟ್ ಮೆಶಿನ್~ (ನಗದು ಜಮಾ ಯಂತ್ರ) ಯುಗ ಆರಂಭವಾಗಿದೆ. ಅದೂ ವಾರ ಪೂರ್ತಿ, 24 ಗಂಟೆಗಳೂ ಲಭ್ಯ.
ಕರ್ನಾಟಕದ ಮೊತ್ತಮೊದಲ ಯಂತ್ರವನ್ನು ಪ್ರತಿಷ್ಠಾಪಿಸಿದ ಹೆಗ್ಗಳಿಕೆಯನ್ನು ಗುಲ್ಬರ್ಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಸೂಪರ್ ಮಾರ್ಕೆಟ್ ಶಾಖೆ ಹೊಂದಿದೆ. ಎಚ್ಕೆಸಿಸಿಐ ಕಟ್ಟಡದ ಕೆಳಗಿನ ಎಟಿಂಎ ಸಮೀಪವೇ ಈ ಯಂತ್ರವನ್ನು ಇರಿಸಲಾಗಿದೆ.
ಹೀಗಿದೆ ಸಿಡಿಎಂ
ಈ ತನಕ ಎಟಿಎಂ ಕಾರ್ಡ್ ಬಳಸಿ ಹಣ ಸ್ವೀಕರಿಸಬಹುದಿತ್ತು. ಈಗ ಜಮಾ ಮಾಡಲೂ ಬಹುದು. ಪ್ರಕ್ರಿಯೆಯೂ ಸರಳವಾಗಿದೆ. ಮೊದಲಿಗೆ ಯಂತ್ರದಲ್ಲಿ ಕಾರ್ಡ್ ಸ್ವೈಪ್(ಎಳೆಯಿರಿ) ಮಾಡಿ. ಬಳಿಕ ಪಿನ್ ಒತ್ತಿ. ನಂತರ ಬ್ಯಾಂಕಿಂಗ್, ಮತ್ತೆ ಭಾಷೆ ಆಯ್ಕೆ ಮಾಡಿ. `ಡೆಪೊಸಿಟ್~ ಎಂದು ನಮೂದಿಸಿ. ವ್ಯವಹಾರ ದೃಢ ಮಾಡಿ. ಯಾವ ಖಾತೆ ಎಂದು ತಿಳಿಸಿ.
ಆಗ ಯಂತ್ರದ ಮುಂದಿನ ಹುಂಡಿಯು ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಜಮಾ ಮಾಡುವ ನೋಟುಗಳನ್ನು (100, 500 ಮತ್ತು 1000 ಮುಖಬೆಲೆ ಮಾತ್ರ) ಇಡಿ. ಒಂದು ಬಾರಿಗೆ ಗರಿಷ್ಠ 49,900 ರೂಪಾಯಿ ಅಥವಾ 200 ನೋಟುಗಳನ್ನು ಮಾತ್ರ ಸ್ವೀಕರಿಸುತ್ತದೆ. ನೀವು ಇಟ್ಟಿರುವ ಒಟ್ಟು ನೋಟುಗಳ ಸಂಖ್ಯೆ ಮತ್ತು ಹಣದ ಮೊತ್ತವನ್ನು ಯಂತ್ರ ತೋರಿಸುತ್ತದೆ. ಹೌದಾದರೆ `ಕನ್ಫರ್ಮ್~ ಎಂದು ಒತ್ತಿ. ನೀವು ಖಾತೆಗೆ ಹಾಕಿದ ಮೊತ್ತಕ್ಕೆ ರಶೀದಿ ನೀಡುತ್ತದೆ. ನಕಲಿ ಮತ್ತು ಹರಿದ ನೋಟು ಇದ್ದರೆ ಯಂತ್ರವು ವಾಪಾಸು ಮಾಡುತ್ತದೆ. ಕೆಲವೇ ಕ್ಷಣದಲ್ಲಿ ಹಣ ಜಮಾ ಮಾಡುವ ಕಾರ್ಯ ಮುಗಿದು ಹೋಗುತ್ತದೆ. ನೀವು ಬ್ಯಾಂಕ್ನ ಮೆಟ್ಟಿಲೇರುವ ಪ್ರಮೇಯವೇ ಇಲ್ಲ...
ಜಿಸಿಸಿ
ಸಿಡಿಎಂ ಜೊತೆ ಎಸ್ಬಿಐ ಆರಂಭಿಸಿರುವ ಇನ್ನೊಂದು ಪರಿಸರ ಸ್ನೇಹಿ ಯೋಜನೆ ಹಸಿರು ಬ್ಯಾಂಕಿಂಗ್ ಕೇಂದ್ರ (ಗ್ರೀನ್ ಬ್ಯಾಂಕಿಂಗ್ ಚ್ಯಾನೆಲ್ ಕೌಂಟರ್ಸ್). ಕೌಂಟರ್ನಲ್ಲಿ ಹಣ ಪಾವತಿ ಅಥವಾ ಸ್ವೀಕೃತಿಗೆ ಚಾಲೆನ್ ಬಳಸದ ವ್ಯವಸ್ಥೆ. ಎಟಿಎಂ ಕಾರ್ಡ್ ಇದ್ದರೆ ಸಾಕು. ಹಣ ಜಮಾ ಮಾಡಬಹುದು. ಚಾಲೆನ್ ತುಂಬುವ, ಖಾತೆ ಸಂಖ್ಯೆ ನಮೂದಿಸುವ, ಸಹಿ ಹಾಕುವ ಯಾವುದೇ ಕೆಲಸವಿಲ್ಲ. ಬಸ್ ನಿರ್ವಾಹಕರ ಟಿಕೆಟ್ ಮೆಶಿನ್ ಹೋಲುವ `ಟ್ರಾನ್ಸ್ಯಾಕ್ಷನ್ ಪ್ರೊಸೆಸಿಂಗ್ ಡಿವೈಸ್~ (ವ್ಯವಹಾರ ಪ್ರಕ್ರಿಯೆ ಯಂತ್ರ) ಎಲ್ಲ ಕೆಲಸವನ್ನು ನಿರ್ವಹಿಸುತ್ತದೆ. ನಿಮ್ಮ ಕಾರ್ಡ್ ಸ್ವೈಪ್ ಮಾಡಿ, ಪಿನ್ ದಾಖಲಿಸಿ, ಬಳಿಕ ವ್ಯವಹಾರದ ಮೊತ್ತ ಹಾಗೂ ಮತ್ತೊಂದು ಖಾತೆ ಸಂಖ್ಯೆ ದಾಖಲಿಸಿದರೆ ಸಾಕು. ಹಣ ಬದಲಾವಣೆ, ಜಮೆ, ಸ್ವೀಕೃತಿ ಎಲ್ಲವೂ ಸಾಧ್ಯ. ಕಾಗದ ರಹಿತ ಕಾರ್ಯ. ಸಮಯವೂ ಉಳಿತಾಯ.
`ಕೋರ್ ಬ್ಯಾಂಕಿಂಗ್ ಬಂದ ಬಳಿಕ ಬದಲಾವಣೆಯ ಪರ್ವವೇ ಆರಂಭವಾಗಿದೆ. ಗ್ರಾಹಕರು ಕೆಲ ಸಮಯದಲ್ಲೇ ಸರಳವಾಗಿ ವ್ಯವಹಾರ ಮುಗಿಸಬಹುದು. ಅಂತಹ ಹೊಸತನವನ್ನು ಎಸ್ಬಿಐ ಬ್ಯಾಂಕ್ ಮಾಡ್ತುದೆ. ಗುಲ್ಬರ್ಗದ ಆರು ಶಾಖೆ ಸೇರಿದಂತೆ ದೇಶದಲ್ಲಿ 14 ಸಾವಿರ ಶಾಖೆಗಳು ಮತ್ತು 30ಸಾವಿರ ಎಟಿಎಂ ಕೇಂದ್ರಗಳನ್ನು ಎಸ್ಬಿಐ ಹೊಂದಿದೆ. ದೇಶದ ಎಲ್ಲ ರಾಜ್ಯಗಳಲ್ಲೂ ವ್ಯವಹಾರವಿದೆ. ಇತರ ಸ್ಟೇಟ್ ಬ್ಯಾಂಕ್ಗಳ ಜೊತೆ ಸಹಭಾಗಿತ್ವ ಇದೆ.
ಇಷ್ಟು ವ್ಯಾಪಕತೆ ಇನ್ನು ಎಲ್ಲಿದೆ~ ಎನ್ನುತ್ತಾರೆ ಸಹಾಯಕ ಪ್ರಧಾನ ಪ್ರಬಂಧಕ ಸುಧಾಕರ್ ಕುಳಾಯಿ.
ಆಧುನಿಕ ತಂತ್ರಜ್ಞಾನವನ್ನು ಬಳಸುವ, ಸಾಲ ತ್ವರಿತವಾಗಿ ಪಾವತಿಸುವ, ಪಕ್ಕಾ ವ್ಯವಹಾರ ನಡೆಸುವ ತೀವ್ರತೆ ಬೇಕು. ಆಗ ವ್ಯವಹಾರ ಹೆಚ್ಚಾಗುತ್ತದೆ. ಮತ್ತಷ್ಟು ಸಾಲ, ಸರ್ಕಾರಿ ಯೋಜನೆ, ಹಣ ಸಿಗುತ್ತದೆ. ಗ್ರಾಹಕರು, ರೈತರು, ಜನತೆ ಯಶಸ್ಸು ಕಾಣಲು ಸಾಧ್ಯ ಎನ್ನುವುದು ಅವರ ಅಭಿಮತ. ಗುಲ್ಬರ್ಗ `ಹಿಂದುಳಿದಿದೆ~ ಎಂದವರು ಯಾರು? ಅವಕಾಶಗಳು ಬಂದಿವೆ. ಬಳಸುವವರು ಬೇಕಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.