ಶನಿವಾರ, ಮೇ 21, 2022
20 °C

ತೆರಿಗೆ ಹೊರೆ ಇಳಿಸುವಂತೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗದಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕು. ಎಚ್‌ಕೆಎಡಿಬಿ, ಐಟಿ ಪಾರ್ಕ್ ಮತ್ತು ಸೋಲಾರ್ ವಿದ್ಯುತ್ ಘಟಕಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು. ಅಲ್ಲದೆ, ವಿವಿಧ ಸರಕುಗಳ ಮೇಲೆ ಬಜೆಟ್‌ನಲ್ಲಿ ಹೆಚ್ಚಿಸಿರುವ ತೆರಿಗೆ ಭಾರವನ್ನು ಕಡಿಮೆಗೊಳಿಸಬೇಕು ಎಂದು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಎಚ್‌ಕೆಸಿಸಿಐ)ಯು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಜೆಟ್ ಮಂಡನೆ ಬಳಿಕ ಸಲಹೆ ನೀಡಿದೆ.ವ್ಯಾಟ್ ತೆರಿಗೆಯನ್ನು ಶೇ. 13.5ರಿಂದ ಶೇ. 14ಕ್ಕೆ ಹೆಚ್ಚಿಸಲು ಮಾಡಿರುವ ಪ್ರಸ್ತಾವವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ಈ ಮೂಲಕ ಶ್ರೀಸಾಮಾನ್ಯ ಉಪಯೋಗಿಸುವ ಸರಕುಗಳ ಮೇಲೆ ಹೆಚ್ಚಿನ ತೆರಿಗೆ ಭಾರವನ್ನು ತಪ್ಪಿಸಬೇಕು. ವ್ಯಾಟ್ ಹೆಚ್ಚಳದಿಂದ ಹಣದುಬ್ಬರ ಇನ್ನಷ್ಟು ಏರಿಕೆಯಾಗುವುದಲ್ಲದೆ, ತೆರಿಗೆ ವ್ಯತ್ಯಾಸದಿಂದ ಪ್ರಮುಖವಾಗಿ ಹೈದರಾಬಾದ್ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ವ್ಯಾಪಾರ ವಹಿವಾಟು ನೆರೆಹೊರೆಯ ರಾಜ್ಯಗಳಿಗೆ ಸ್ಥಳಾಂತರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.ಚಿನ್ನದ ಮೇಲೆ ಶೇ. 1ರ ವ್ಯಾಟ್ ದರವನ್ನು ಶೇ. 2ಕ್ಕೆ ಹೆಚ್ಚಿಸಲು ಮಾಡಿರುವ ಪ್ರಸ್ತಾವವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು. ದುಬಾರಿ ಲೋಹದ ಮೇಲಿನ ತೆರಿಗೆಗಳು ನೆರೆಯ ರಾಜ್ಯಗಳೊಂದಿಗೆ ವ್ಯತ್ಯಾಸವಾದರೆ, ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ. ಹೋಟೆಲ್ ಹಾಗೂ ಬಾರ್-ರೆಸ್ಟೊರೆಂಟ್‌ಗಳಲ್ಲಿ ಪೂರೈಸುವ ಆಹಾರದ ಮೇಲಿನ ತೆರಿಗೆಯನ್ನು ಸಮಾನಗೊಳಿಸಬೇಕು. ಆಂಧ್ರ ಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ, ಡೀಸೆಲ್ ಹಾಗೂ ಪೆಟ್ರೊಲ್ ಮಾರಾಟದ ಮೇಲಿನ ತೆರಿಗೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ತೈಲ ಮತ್ತು ತೈಲೋತ್ಪನ್ನಗಳ ಪ್ರವೇಶಕ್ಕೆ ನೆರೆಯ ರಾಜ್ಯಗಳಲ್ಲಿ ಯಾವುದೇ ತೆರಿಗೆ ಇರುವುದಿಲ್ಲ.ಕರ್ನಾಟಕದಲ್ಲಿ ಮಾತ್ರ ‘ಆಯಿಲ್ ಆ್ಯಂಡ್ ಲುಬ್ರಿಕಂಟ್ಸ್ ಮೇಲೆ ತೆರಿಗೆ ಹಾಕುವುದರಿಂದ ವ್ಯಾಪಾರ ವಹಿವಾಟು ಕುಸಿತವಾಗಲಿದೆ. ಅಲ್ಲದೆ, ರಾಜ್ಯಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಗೋಪಾಲಕೃಷ್ಣ ವಿ. ರಘೋಜಿ, ರಾಜ್ಯ ತೆರಿಗೆ ಉಪ ಸಮಿತಿಯ ಅಧ್ಯಕ್ಷ ಗುರುದೇವ ಎ. ದೇಸಾಯಿ ಹಾಗೂ ಕಾರ್ಯದರ್ಶಿ ಸೋಮಶೇಖರ್ ಜಿ. ತೆಂಗ್ಳಿ ಸಲಹೆ ಪತ್ರದಲ್ಲಿ ತಿಳಿಸಿದ್ದಾರೆ.ಬಜೆಟ್ ಕೊರತೆಯನ್ನು ತುಂಬಿಕೊಳ್ಳಲು, ನೋಂದಾವಣೆ ಮಾಡಿಕೊಳ್ಳದ ಡೀಲರ್‌ಗಳನ್ನು ನೋಂದಾಯಿಸಿಕೊಳ್ಳುವ ಮೂಲಕ ತೆರಿಗೆ ವ್ಯಾಪ್ತಿಯನ್ನು ಹೆಚ್ಚಿಸಬಹುದಾಗಿದೆ.ಚೆಕ್‌ಪೋಸ್ಟ್‌ಗಳನ್ನು ಮೇಲ್ದರ್ಜೆಗೆ ಏರಿಸಿ, ತೀವ್ರ ನಿಗಾ ವಹಿಸುವುದರಿಂದ ತೆರಿಗೆ ಹೆಚ್ಚಳ ಮಾಡಬಹುದಾಗಿದೆ. ವ್ಯಾಟ್ ಜಾಗೃತಿ ಕಾರ್ಯಕ್ರಮ ಕೈಗೊಂಡು, ಡೀಲರ್‌ಗಳು ಸ್ವಯಂ ನೋಂದಾವಣೆ ಮಾಡಿಕೊಳ್ಳಲು ಪ್ರಚೋದಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ ಹರಿದು ಬರಲಿದೆ ಎಂದು ಎಚ್‌ಕೆಸಿಸಿಐ ಸಲಹೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.