ಪರ್ಯಾಯದ ಹುಡುಕಾಟದಲ್ಲಿ ಕರ್ನಾಟಕದ ರಾಜಕಾರಣ...

7

ಪರ್ಯಾಯದ ಹುಡುಕಾಟದಲ್ಲಿ ಕರ್ನಾಟಕದ ರಾಜಕಾರಣ...

Published:
Updated:

ಕರ್ನಾಟಕದ ಮತದಾರ ನಿರಾಶನಾಗಿದ್ದಾನೆ. ಆತನಿಗೆ ರಾಜ್ಯ ಸರ್ಕಾರದ ಸಾಧನೆಯ ಬಗ್ಗೆ ಸಮಾಧಾನವಿಲ್ಲ. ತಾನು ಅಂದುಕೊಂಡುದೇ ಒಂದು ಆಗುತ್ತಿರುವುದೇ ಒಂದು ಎಂದು ಆತನಿಗೆ ಭ್ರಮನಿರಸನವಾಗಿದೆ. ಆದರೆ, ಪರ್ಯಾಯಕ್ಕೆ ಆತ ಮಾಡಿದ ಹುಡುಕಾಟಕ್ಕೆ ಸೂಕ್ತ ಉತ್ತರವೂ ಸಿಕ್ಕಂತೆ  ಕಾಣುವುದಿಲ್ಲ. ಆತನ ಗೊಂದಲ ಮೊನ್ನೆಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಫಲಿತಾಂಶದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.ಒಟ್ಟು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳ ಜಯಾಪಜಯದ ಲೆಕ್ಕ ತೆಗೆದುಕೊಂಡರೆ ಬಿಜೆಪಿಗೆ ಮುನ್ನಡೆಯಾಗಿದೆ. ಜಿಲ್ಲಾ ಪಂಚಾಯ್ತಿಗಳಲ್ಲಿ ತನ್ನ ಇಬ್ಬರೂ ಪ್ರಬಲ ವಿರೋಧಿಗಳಿಗಿಂತ ಮೂರು ಪಟ್ಟು ಹೆಚ್ಚು ಜಿಲ್ಲಾ ಪಂಚಾಯ್ತಿಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಐದು ವರ್ಷಗಳ ಹಿಂದಿನ ಇದೇ ಚುನಾವಣೆಯ ಫಲಿತಾಂಶ ಗಮನಿಸಿದರೆ ಈಗಿನ ಆಡಳಿತ ಪಕ್ಷ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಬೇರುಗಳನ್ನು ಬಿಟ್ಟಿರುವುದೂ ಎದ್ದು ಕಾಣುತ್ತದೆ.

 

ಅದಕ್ಕೆ ಭಾಗ್ಯಲಕ್ಷ್ಮಿ, ಶಾಲಾ ಮಕ್ಕಳಿಗೆ ಸೈಕಲ್ ವಿತರಣೆಯಂಥ ಜನೋಪಯೋಗಿ ಯೋಜನೆಗಳು ಕಾರಣವಾಗಿರಬಹುದು. ಆದರೆ, ಸೀರೆ ವಿತರಣೆ ನಿರೀಕ್ಷಿತ ಫಲ ಕೊಟ್ಟಂತೆ ಕಾಣುವುದಿಲ್ಲ. ಏಕೆಂದರೆ ಈ ಸರ್ಕಾರ ಕೊಟ್ಟ ಸೀರೆಯ ಲೆಕ್ಕ ನೋಡಿದರೆ ಕನಿಷ್ಠ 20 ಜಿಲ್ಲಾ ಪಂಚಾಯ್ತಿಗಳಲ್ಲಿಯಾದರೂ ಅದು ಅಧಿಕಾರಕ್ಕೆ ಬರಬೇಕಿತ್ತು. ಹಾಗೆ ಆಗಿಲ್ಲ. ಹೆಣ್ಣು ಮಕ್ಕಳು ಸೀರೆ ತೆಗೆದುಕೊಂಡೂ ತಮಗೆ ಬೇಕಾದವರಿಗೆ ಮತ ಹಾಕಿದಂತೆ ಕಾಣುತ್ತದೆ. ಅದು ಒಳ್ಳೆಯ ಬೆಳವಣಿಗೆ. ಸೀರೆ ಅವರ ಮನಸ್ಸನ್ನು ಸಂಪೂರ್ಣವಾಗಿ ಮನಸೂರೆಗೊಳ್ಳದೇ ಇರುವುದಕ್ಕೆ ಈ ಸರ್ಕಾರದ ವರ್ಚಸ್ಸು ಮುಕ್ಕಾಗಿರುವುದು ಕಾರಣವಾಗಿರಬಹುದು.ತಾನು ಬಯಸಿದಂತೆ ಕಾರ್ಯನಿರ್ವಹಿಸದ ಸರ್ಕಾರಕ್ಕೆ ತಕ್ಕ ಸಂದೇಶ ಕೊಡಬೇಕು ಎಂದರೆ ವಿರೋಧ ಪಕ್ಷಗಳು ತಾವು ಪರ್ಯಾಯ ಎಂಬ ಸಂದೇಶವನ್ನು ಮತದಾರನಿಗೆ ಕೊಡಬೇಕಿತ್ತು. ಆ ಸಂದೇಶ ಕೊಡುವಲ್ಲಿ ವಿರೋಧ ಪಕ್ಷಗಳೂ ಸಫಲವಾಗಲಿಲ್ಲ. ಪ್ರಮುಖ ವಿರೋಧ ಪಕ್ಷವಾದ  ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿಯೇ ಎಡವಿತು. ಕರ್ನಾಟಕದ ರಾಜಕೀಯದಲ್ಲಿ ಒಂದೋ ಲಿಂಗಾಯತರು ಮುಂಚೂಣಿಯಲ್ಲಿ ಇರಬೇಕು, ಇಲ್ಲವೇ ಒಕ್ಕಲಿಗರು ಮುಂಚೂಣಿಯಲ್ಲಿ ಇರಬೇಕು. ಇಬ್ಬರೂ ಜತೆಗೆ ಇದ್ದರೆ ಆ ಲೆಕ್ಕವೇ ಬೇರೆ. ಅಥವಾ ಈ ಇಬ್ಬರೂ ಜತೆಯಾಗಿದ್ದು ಒಬ್ಬರು ಮುಂದಾಳತ್ವ ವಹಿಸಿರಬೇಕು. ದೇವರಾಜ ಅರಸು ಅವಧಿ ಬಿಟ್ಟರೆ ಕಳೆದ ನಾಲ್ಕು ದಶಕಗಳ ರಾಜಕಾರಣ ಇದನ್ನೇ ಹೇಳಿಕೊಂಡು ಬಂದಿದೆ.ರಾಜ್ಯ ರಾಜಕಾರಣದಲ್ಲಿ ಜಮೀನುದಾರಿ ಪದ್ಧತಿಯ ಪಳೆಯುಳಿಕೆಗಳು ಇನ್ನೂ ಉಳಿದಿರುವುದೂ ಇದಕ್ಕೆ ಕಾರಣವಾಗಿರಬಹುದು. ಕಾಂಗ್ರೆಸ್ ಪಕ್ಷದಿಂದ ಲಿಂಗಾಯತರು ದೂರವಾಗಿ ದಶಕಗಳೇ ಕಳೆದು ಹೋಗಿವೆ. ಒಕ್ಕಲಿಗರೂ ಪ್ರತ್ಯೇಕ ನಾಯಕತ್ವದಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಬಿಜೆಪಿಗೆ ಮೊರೆ ಹೋಗಿರುವ ಲಿಂಗಾಯತರನ್ನು ಒಡೆಯಬೇಕಿದ್ದರೆ ಆ ಸಮುದಾಯದಿಂದಲೇ ಒಬ್ಬರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ತರುವ ದಿಸೆಯಲ್ಲಿ ಹೈಕಮಾಂಡ್ ಯೋಚನೆ ಮಾಡಬೇಕಿತ್ತು. ಆ ಸಮುದಾಯದ ನಾಯಕರು ಒಂದಲ್ಲ ಎರಡು ಬಾರಿ ಸಭೆ ಮಾಡಿ ತಮಗೆ ನಾಯಕತ್ವ ಬೇಕು ಎಂಬ ಇಂಗಿತ ನೀಡಿದರೂ ಅದನ್ನು ಹೈಕಮಾಂಡ್ ಗಮನಿಸಲಿಲ್ಲ.ಎಲ್ಲ ಲಿಂಗಾಯತರು ಯಡಿಯೂರಪ್ಪ ತಪ್ಪು ಮಾಡಲಿ ಸರಿ ಮಾಡಲಿ ಅವರ ಜತೆಗೇ ಹೋಗೋಣ ಎಂದು ಅಂದುಕೊಳ್ಳುವವರಲ್ಲ. ಆದರೆ, ಅವರಿಗೆ ಬಿಜೆಪಿ ಬಿಟ್ಟರೆ ಕಾಂಗ್ರೆಸ್ಸಿನಲ್ಲಿ ತಮ್ಮ ಸಮುದಾಯಕ್ಕೆ ಅಧಿಕಾರ ಸಿಗಬಹುದು ಎಂಬ ಸಣ್ಣ ಸೂಚನೆಯಾದರೂ ಇರಬೇಕು. ಆ ಸೂಚನೆ, ಇಂಗಿತವನ್ನು ಕಾಂಗ್ರೆಸ್ ಕೊಡಲಿಲ್ಲ. ಹೈಕಮಾಂಡ್, ಅಂಥ ಸಮೂಹ ನಾಯಕರೇನೂ ಅಲ್ಲದ ದಲಿತ ಸಮುದಾಯದ ಡಾ.ಜಿ.ಪರಮೇಶ್ವರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಕೂಡ್ರಿಸಿತು.

 

ಗಾಯದ ಮೇಲೆ ಬರೆ ಎಳೆದಂತೆ ಶಾಮನೂರು ಶಿವಶಂಕರಪ್ಪ, ವೀರಣ್ಣ ಮತ್ತೀಕಟ್ಟಿ, ಡಾ.ಎ.ಬಿ.ಮಾಲಕರೆಡ್ಡಿ, ಎಸ್.ಬಿ.ಸಿದ್ನಾಳ ಮುಂತಾದ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಿಗೆ ಕನಿಷ್ಠ ಎಐಸಿಸಿ ಸದಸ್ಯತ್ವವನ್ನೂ ಕೊಡಲಿಲ್ಲ. ಶಾಮನೂರು ಕಳೆದ ಮೂರು ದಶಕಗಳಿಂದ ಪಕ್ಷದ ಖಜಾಂಚಿಯಾಗಿ ದುಡಿದವರು. ಪಕ್ಷಕ್ಕೆ ಹಣ ಕೊಟ್ಟವರು. ಆದರೆ, ಶಾಮನೂರು, ವೀರಣ್ಣ, ಮಾಲಕರೆಡ್ಡಿ, ಸಿದ್ನಾಳ ಮಾಡಿದ ತಪ್ಪು ಏನೆಂದರೆ ತಾವು ಕೆಪಿಸಿಸಿ ಹುದ್ದೆಯ ಆಕಾಂಕ್ಷಿಗಳು ಎಂದು ಇಂಗಿತ ನೀಡಿದ್ದು. ಅಂಥ ಇಂಗಿತವೇನೂ ನೀಡದಿದ್ದರೂ ಎಂ.ಪಿ.ಪ್ರಕಾಶ್ ಅವರಿಗೂ ಎಐಸಿಸಿ ಸದಸ್ಯತ್ವ ಸಿಗಲಿಲ್ಲ.ಇದೆಲ್ಲ ಸೋನಿಯಾ, ರಾಹುಲ್ ಅವರಿಗೆ ಗೊತ್ತಾಗುತ್ತದೆಯೋ ಇಲ್ಲವೋ ತಿಳಿಯದು. ಆದರೆ, ಲಿಂಗಾಯತ ಸಮುದಾಯಕ್ಕೆ ಅನಿಸಿದ್ದು ಏನು ಎಂದರೆ ಕಾಂಗ್ರೆಸ್ಸಿನಲ್ಲಿ ತಾವು ನೆಲಹಾಸು ಎಂದು. ಹಾಸುತ್ತಾರೆ, ಬಳಸುತ್ತಾರೆ ಅಷ್ಟೇ ಎಂದು. ಅಷ್ಟು ಸಾಕಿತ್ತು ಮತ್ತೆ ಆ ಸಮುದಾಯ ಯಡಿಯೂರಪ್ಪ ಎಂಬ ‘ಅಯಸ್ಕಾಂತ’ದ ಸುತ್ತಲೇ ಸುತ್ತತೊಡಗಿತು. ಈ ಸಾರಿಯ ಚುನಾವಣೆಯ ಫಲಿತಾಂಶವನ್ನು ಕರ್ನಾಟಕದ ನಕಾಶೆಯಲ್ಲಿ ನೋಡಿದರೆ ಅದು ಸ್ಪಷ್ಟವಾಗಿ ಗೊತ್ತಾಗುತ್ತದೆ.ಲಿಂಗಾಯತರು ಕಾಂಗ್ರೆಸ್ಸಿಗೆ ಹೋಗಲು ಒಂದು ಕ್ಷಣ ಮನಸ್ಸು ಮಾಡಬಹುದಿತ್ತೇನೋ. ಆದರೆ, ಅವರು ಜೆ.ಡಿ(ಎಸ್) ಜತೆಗೆ ಹೋಗುವುದು ಸಾಧ್ಯವೇ ಇರಲಿಲ್ಲ. ಉತ್ತರ ಕರ್ನಾಟಕದಲ್ಲಿ ಅದು ತನ್ನ ಬೇರುಗಳನ್ನು ಸ್ವಲ್ಪ ಚಾಚಿಕೊಂಡಂತೆ ಕಂಡರೂ ಮೂಲತಃ ಒಕ್ಕಲಿಗ ಸಮುದಾಯ ಸಾಂದ್ರವಾಗಿರುವ ಪ್ರದೇಶದ ಪಕ್ಷ ಎಂಬುದೂ ಫಲಿತಾಂಶದ ಕರ್ನಾಟಕ ನಕಾಶೆ ನೋಡಿದರೆ ಗೊತ್ತಾಗುತ್ತದೆ. ಒಟ್ಟು ಫಲಿತಾಂಶದ ನಕಾಶೆ ನೋಡಿದಾಗ ರಾಜ್ಯದ ಮತದಾರನ ಗೊಂದಲ ಎದ್ದು ಕಾಣುತ್ತದೆ.12 ಜಿಲ್ಲಾ ಪಂಚಾಯ್ತಿಗಳಲ್ಲಿ ಆತ ಬಿಜೆಪಿಗೆ ಅಧಿಕಾರ ಕೊಟ್ಟರೂ ಹತ್ತರಲ್ಲಿ ಯಾರಿಗೂ ಬಹುಮತ ಕೊಟ್ಟಿಲ್ಲ. ಈ ಹತ್ತರ ಪೈಕಿ ಏಳು ಜಿಲ್ಲೆಗಳಾದ ಗುಲ್ಬರ್ಗ, ರಾಯಚೂರು, ಕೊಪ್ಪಳ, ವಿಜಾಪುರ, ಚಿತ್ರದುರ್ಗ, ಮೈಸೂರು, ಬೆಂಗಳೂರು ನಗರದಲ್ಲಿ ಜೆ.ಡಿ (ಎಸ್) ಜತೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದಾಗಿದೆ. ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಜೆ.ಡಿ.(ಎಸ್) ಅಧಿಕಾರಕ್ಕೆ ಬರಬಹುದು. ಬಳ್ಳಾರಿಯಲ್ಲಿ ಈಗಾಗಲೇ ಆಪರೇಷನ್ ಕಮಲ ಆಗಿದೆ. ಅದು ಬಿಜೆಪಿ ತೆಕ್ಕೆಗೇ ಹೋಗಲಿದೆ.ಜೆ.ಡಿ (ಎಸ್)ಗೆ ತನ್ನ ದೌರ್ಬಲ್ಯ ಗೊತ್ತಿದೆ. ಅದಕ್ಕಾಗಿಯೇ ಚುನಾವಣೆ ಬಂದಾಗಲೆಲ್ಲ ಅದು ಜನತಾ ಪರಿವಾರದಿಂದ ದೂರ ಹೋದವರನ್ನೆಲ್ಲ ತನ್ನ ತೆಕ್ಕೆಗೆ ಮರಳಿ ಆಹ್ವಾನಿಸುವ ಮಾತು ಆಡುತ್ತದೆ. ಒಂದು ಕುಟುಂಬದ ಪಕ್ಷವಾಗಿ ಪರಿವರ್ತಿತವಾಗಿದ್ದರೂ ಜೆ.ಡಿ (ಸ್)ನ ಶಕ್ತಿ ಏನು ಎಂದರೆ ಸಮೂಹದ ಮೇಲೆ ಪ್ರಭಾವ ಬೀರಬಲ್ಲ ಕುಮಾರಸ್ವಾಮಿ ನಾಯಕತ್ವ. ದೌರ್ಬಲ್ಯವೇನು ಎಂದರೆ ದೇವೇಗೌಡರನ್ನು ಯಾರೂ ನಂಬದೇ ಇರುವುದು. ಈ ಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕರ್ನಾಟಕದ ಮತದಾರರು ಕುಮಾರಸ್ವಾಮಿಯವರನ್ನು ಒಬ್ಬ ಪರ್ಯಾಯ ನಾಯಕನಂತೆ ಒಪ್ಪಿಕೊಳ್ಳಲು ಮುಂದಾಗಿರುವುದು.

 

ಕಾಂಗ್ರೆಸ್ ಪಕ್ಷ ಹೀಗೇ ನಾಯಕತ್ವದ ದಿವಾಳಿತನದಲ್ಲಿ ಮೈ ಮರೆತು ಬಿಟ್ಟರೆ ಕುಮಾರಸ್ವಾಮಿಯವರೇ ಯಡಿಯೂರಪ್ಪ ಅವರಿಗೆ ಪರ್ಯಾಯ ನಾಯಕನಾಗಿ ಹೊರಹೊಮ್ಮುತ್ತಾರೆ. ಯಡಿಯೂರಪ್ಪ ಅಥವಾ ಅವರ ಪಕ್ಷದ ಸಚಿವರು ಏನು ಮಾಡಿದರೂ ಜನರು ಸುಮ್ಮನೆ ಇರುತ್ತಾರೆ ಎಂದು ಭಾವಿಸುವುದು ಮೂರ್ಖತನವಾಗುತ್ತದೆ. ಆದರೆ, ರಾಜಕೀಯದಲ್ಲಿ ಸಂಖ್ಯೆಯ ಪಾತ್ರ ಬಹಳ ದೊಡ್ಡದು. ಜೆ.ಡಿ (ಎಸ್) ಇದೇ ಸ್ವರೂಪದಲ್ಲಿ ಇದ್ದರೆ ಅದು ರಾಜ್ಯವನ್ನು ಆಳಲು ಬೇಕಾಗುವಷ್ಟು ಸ್ಥಾನಗಳನ್ನು ವಿಧಾನಸಭೆಯಲ್ಲಿ ಗಳಿಸಲಾರದು.

 

ಪಕ್ಷದ ಬುನಾದಿ ಹೆಚ್ಚು ಪ್ರಜಾಸತ್ತಾತ್ಮಕವಾಗಬೇಕು, ‘ಒಂದು ಮನೆಯಲ್ಲಿ ಎಲ್ಲ ತೀರ್ಮಾನವಾಗುತ್ತದೆ, ನಾವು ಸುಮ್ಮನೆ ನಾಮ್‌ಕೆವಾಸ್ತೆ ಪಕ್ಷದಲ್ಲಿ ಇದ್ದೇವೆ’ ಎಂದು ಇತರ ನಾಯಕರಿಗೆ ಅನಿಸಬಾರದು. ಚುನಾವಣೆ ಬಂದಾಗ ಮಾತ್ರ ಜನತಾ ಪರಿವಾರದ ಸಿದ್ದರಾಮಯ್ಯ, ಪ್ರಕಾಶ್ ಅವರ ಹೆಸರುಗಳನ್ನು ದೇವೇಗೌಡ, ರೇವಣ್ಣ, ಕುಮಾರಸ್ವಾಮಿ ಕನವರಿಸಬಾರದು. ಎಷ್ಟೇ ಜಗಳ ಮಾಡಿದರೂ ಜನತಾ ಪರಿವಾರದಲ್ಲಿ ಘಟಾನುಘಟಿ ನಾಯಕರು ಇದ್ದರು. ಅವರು ವೈಯಕ್ತಿಕವಾಗಿ ಶ್ರೇಷ್ಠ ಆಡಳಿತಗಾರರಾಗಿದ್ದರು. ಆದರೆ, ಈಗ ಅವರೆಲ್ಲ ಚದುರಿ ಹೋಗಿದ್ದಾರೆ. ಕಾಂಗ್ರೆಸ್ಸಿಗೆ, ಬಿಜೆಪಿಗೆ ಹೋಗಿರುವ ಈ ಪರಿವಾರದ ನಾಯಕರು ಸುಖವಾಗಿ ಇದ್ದಾರೆ ಎಂದೇನೂ ಅಲ್ಲ. ಅವರು ಈಗ ಯಾರ ಜತೆ ಜಗಳವಾಡುತ್ತಾರೆ? ಜನತಾ ಪರಿವಾರವನ್ನು ಒಂದುಗೂಡಿಸುವ ಹೊಣೆ ಕುಮಾರಸ್ವಾಮಿಯವರ ಮೇಲೆ ಇದೆ.ಸಿದ್ದರಾಮಯ್ಯ ಅವರ ಜತೆಗೆ ಸಲಿಗೆಯಿಂದ ಇರುವ ರೇವಣ್ಣ ಅವರ ಮೇಲೆ ಇದೆ. ಪ್ರಕಾಶ್ ಅವರ ಜತೆ ಒಡನಾಡಿದ ದೇವೇಗೌಡರ ಮೇಲೆ ಇದೆ.ದೂರ ಹೋದ ಸ್ನೇಹಿತರನ್ನು ಒಂದು ಮಾಡುವುದು ನಂಬಿಗೆ ಮಾತ್ರ. ಯಡಿಯೂರಪ್ಪ ಸರ್ಕಾರವನ್ನು ಬೀಳಿಸಲು ಕುಮಾರಸ್ವಾಮಿ ಮುಂದಾದುದೂ ಲಿಂಗಾಯತ ಮತಗಳು ಆ ಪಕ್ಷಕ್ಕೆ ಬಾರದೇ ಇರಲು ದೊಡ್ಡ ಕಾರಣ. ಬಹುಶಃ ಲಿಂಗಾಯತರಿಗೆ ತಪ್ಪು ಸಂದೇಶ ಹೋಗಿದೆ ಎಂದು ತಿಳಿದೇ ಕುಮಾರಸ್ವಾಮಿ ಒಂದಕ್ಕಿಂತ ಹಲವು ಸಾರಿ ತಾವು ಲಿಂಗಾಯತರ ವಿರೋಧಿಯಲ್ಲ, ಯಡಿಯೂರಪ್ಪ ವಿರೋಧಿ ಮಾತ್ರ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದ್ದು. ಆದರೆ, ಅದು ಲಿಂಗಾಯತರಲ್ಲಿ ನಂಬಿಕೆ ಮೂಡಿಸಲಿಲ್ಲ.ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಬೆಂಬಲವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷ ಚುನಾವಣೆಗಿಂತ ಮುಂಚೆಯೇ ಸೋಲು ಒಪ್ಪಿಕೊಂಡಂತಿತ್ತು. ಪಕ್ಷದ ಅಧ್ಯಕ್ಷರು ಪತ್ರಿಕೆಗಳಿಗೆ ಕೊಟ್ಟ ಸಂದರ್ಶನದಲ್ಲಿ ಅವರ ‘ಸೋತ ಮನಃಸ್ಥಿತಿ’ ಸ್ಪಷ್ಟವಾಗಿಯೇ ವ್ಯಕ್ತವಾಗುತ್ತಿತ್ತು. ಕಾಂಗ್ರೆಸ್ ಪಕ್ಷದ ಸ್ಥಿತಿ ಈಗ ಹೇಗಿದೆ ಎಂದು ಅದೇ ಪಕ್ಷದ ಮೂಲ ನಿವಾಸಿಗಳನ್ನು ಕೇಳಿದರೆ ಗೊತ್ತಾಗುವುದಿಲ್ಲ. ಸಿದ್ದರಾಮಯ್ಯ ಅವರ ಜತೆಗೆ ಬಂದವರನ್ನು ಕೇಳಿದರೆ ಗೊತ್ತಾಗುತ್ತದೆ. ಅವರ ಜತೆಗೆ ಪರಮೇಶ್ವರ್ ಕೂಡ ಮಾತನಾಡಿ ನೋಡಬೇಕು.ಕಾಂಗ್ರೆಸ್ಸಿನಲ್ಲಿ ಆತ್ಮಗೌರವಕ್ಕೆ, ನಾಯಕತ್ವಕ್ಕೆ ಬೆಲೆ ಸಿಗುವುದಿಲ್ಲ. ಕೇವಲ ಹೌದಪ್ಪಗಳು, ಸೋನಿಯಾ ಮತ್ತು ರಾಹುಲ್‌ಗೆ ಜೈಕಾರ ಹಾಕುವವರಿಗೆ ಮಾತ್ರ ಅಲ್ಲಿ ಮನ್ನಣೆ ಎಂದು ಈಗಾಗಲೇ ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಮನದಟ್ಟಾಗಿದೆ. ಅದಕ್ಕಾಗಿಯೇ ಅವರಿಗೆ ಉಸಿರುಗಟ್ಟತೊಡಗಿದೆ. ಆದರೆ, ಎಲ್ಲಿಗೆ ಹೋಗುವುದು? ಮೂಲ ಕಾಂಗ್ರೆಸ್ಸಿಗರು ಒಂದು ಪಕ್ಷ ದೇವೇಗೌಡರ ಸಖ್ಯಕ್ಕೆ ಮುಂದಾದಾರು, ಆದರೆ ವಲಸೆ ಬಂದವರು ನಂಬುವುದು ಸಾಧ್ಯವೇ ಇಲ್ಲ. ಅವರು ಜೆ.ಡಿ (ಎಸ್)ನಲ್ಲಿ ಇದಕ್ಕಿಂತ ಹೆಚ್ಚು ಉಸಿರುಗಟ್ಟಿ ಹೊರಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಪರ್ಯಾಯವಾಗಬೇಕಿದ್ದ ಒಟ್ಟು ರಾಜಕಾರಣವೇ ಉಸಿರುಗಟ್ಟಿ ಹೋಗಿರುವುದರ ಸಂಕೇತ ಇದು.ಕಾಂಗ್ರೆಸ್ ನಾಯಕರು ವೇದಿಕೆಗಳಲ್ಲಿ ಮಾತ್ರ ಒಂದಾಗುತ್ತಾರೆ. ವೇದಿಕೆಯ ಕೆಳಗೆ ಯಾವುದೇ ಚಿಂತನ ಮಂಥನ ನಡೆಯುವಂತೆ ಕಾಣುವುದಿಲ್ಲ.ಕಾರ್ಯತಂತ್ರವೂ ರೂಪುಗೊಳ್ಳುವುದಿಲ್ಲ. ವೇದಿಕೆಯ ಭಾಷಣಗಳಲ್ಲಿಯೂ ಯಾವುದೋ ಕಾಲದಲ್ಲಿ ಸೋನಿಯಾ ಗಾಂಧಿ ಅಧಿಕಾರ ತ್ಯಾಗ ಮಾಡಿದ್ದನ್ನೇ ಒಬ್ಬರಾದ ಮೇಲೆ ಒಬ್ಬ ನಾಯಕ ಭಾಷಣ ಮಾಡುತ್ತ ಇದ್ದರೆ ಅದೂ ಜನರಲ್ಲಿ ಸ್ಫೂರ್ತಿ ತುಂಬುವುದಿಲ್ಲ. ಪರ್ಯಾಯ ರಾಜಕೀಯ ಮಾಡಲು ವೇದಿಕೆಯ ಇಂಥ ಭಾಷಣಗಳು ಮಾತ್ರ ಸಾಲುವುದಿಲ್ಲ. ಜನ ಇನ್ನೇನನ್ನೋ ಬಯಸುತ್ತಾರೆ.

 

ಅವರು ಬಯಸುವುದು ಜನಪರವಾದ, ಸ್ವಚ್ಛವಾದ, ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ತೆಗೆದುಕೊಂಡು ಹೋಗುವ ರಾಜಕಾರಣ. ನಾಯಕ ತನಗೆ ಹತ್ತಿರವಾಗಿರಲಿ ಎಂದು ಬಯಸುವ ರಾಜಕಾರಣ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಒಳ್ಳೆಯವರು. ಅವರು ಜನರಿಗೆ ಕೇಡು ಮಾಡದ ಮನುಷ್ಯನೂ ಹೌದು. ಆದರೆ, ತುಂಬ ‘ತುಟ್ಟಿ ಮನುಷ್ಯ’. ಜನರಿಗೆ ಸಿಗುವುದೇ ಇಲ್ಲ. ಅವರ ಮತಕ್ಷೇತ್ರ ಕೊರಟಗೆರೆಯಲ್ಲಿಯೇ ಅವರಿಗೆ ಸೋಲಾಗಿದೆ.‘ಕೊರಟಗೆರೆಯ ಹಿಂದಿನ ಶಾಸಕರನ್ನು ಭೇಟಿ ಮಾಡಲು ಎರಡು ಕೆ.ಜಿ ನೆಲಗಡಲೆ ಮಾರಿದರೆ ಸಾಕು ಹೋಗಿ ಭೇಟಿ ಮಾಡಬಹುದಿತ್ತು, ಈಗಿನ ಶಾಸಕ ಪರಮೇಶ್ವರ್ ಅವರನ್ನು ಎರಡು ಕ್ವಿಂಟಲ್ ನೆಲಗಡಲೆ ಮಾರಿದರೂ ಭೇಟಿ ಮಾಡಲು ಸಾಧ್ಯವಿಲ್ಲ’ ಎಂದು ಅಲ್ಲಿನ ಜನರಿಗೆ ಅನಿಸತೊಡಗಿರುವುದಕ್ಕೆ ಪರಮೇಶ್ವರ್ ಅವರೇ ಉತ್ತರ ಕಂಡುಕೊಳ್ಳಬೇಕು.

 

ಈ ಚುನಾವಣೆ  ಪರಮೇಶ್ವರ್ ಅವರಿಗೆ ಮಾತ್ರವಲ್ಲ ಎಲ್ಲ ನಾಯಕರಿಗೂ ಸಾಲು ಸಾಲಾಗಿ ಮುಖಭಂಗ ಮಾಡಿದೆ. ರಾಮನಗರದಲ್ಲಿ ಕುಮಾರಸ್ವಾಮಿಯವರ ಖ್ಯಾತಿಗೆ ತಕ್ಕ ಜಯ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರಿಗೂ ಅದೇ ಗತಿಯಾಗಿದೆ. ಗದಗಿನಲ್ಲಿ ಪಾಟೀಲ ಕುಟುಂಬಕ್ಕೆ ಮತ್ತೆ ಮುಖಭಂಗವಾಗಿದೆ. ಬಳ್ಳಾರಿಯಲ್ಲಿ ರೆಡ್ಡಿ ಸೋದರರಿಗೆ ಮಂಗಳಾರತಿ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರಿಗೆ ಕೂದಲೆಳೆ ಅಂತರದ ಜಯ ಸಿಕ್ಕಿದೆ. ಜನರು ಇದಕ್ಕಿಂತ ಇನ್ನೂ ಎಂಥ ಸಂದೇಶ ಕೊಡಲು ಸಾಧ್ಯ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry