ಶುಕ್ರವಾರ, ಏಪ್ರಿಲ್ 23, 2021
22 °C

ಡಿಸೆಂಬರ್‌ಗೆ ಕಾಮಗಾರಿ ಪೂರ್ಣ: ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‌ನ ಅಡಿಯಲ್ಲಿ ತಲಾ ನೂರು ಕೋಟಿ ರೂಪಾಯಿಗಳ ಎರಡು ಪ್ಯಾಕೇಜ್ ಲಭ್ಯವಾಗಿದ್ದರೂ ಗುಲ್ಬರ್ಗ ನಗರದ ಜನತೆ ಅನುಭವಿಸುತ್ತಿರುವ ದುಃಸ್ಥಿತಿಯನ್ನು ನಗರಾಭಿವೃದ್ಧಿ ಸಚಿವ ಎಸ್. ಸುರೇಶಕುಮಾರ್ ಬುಧವಾರ ಖುದ್ದಾಗಿ ವೀಕ್ಷಿಸಿದರು.ಬೆಳಿಗ್ಗೆ ನಗರಕ್ಕೆ ಆಗಮಿಸಿದ ಸಚಿವರು, ವಿವಿಧ ಬಡಾವಣೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ರಸ್ತೆ ಮಧ್ಯೆ ಬಾಯಿ ತೆರೆದುಕೊಂಡು ಅಪಾಯ ಆಹ್ವಾನಿಸುತ್ತಿರುವ ಮ್ಯಾನ್‌ಹೋಲ್ ಕಂಡು ದಂಗಾದರು! ಚರಂಡಿಯಲ್ಲಿ ತುಂಬಿದ್ದ ತ್ಯಾಜ್ಯದ ಮಧ್ಯೆಯೇ ಹುಲುಸಾಗಿ ಬೆಳೆದ ಮೆಕ್ಕೆಜೋಳ ಕಂಡು ದಿಙ್ಮೂಢರಾದರು. ಒಳಚರಂಡಿ ಮೇಲಿನ ಕಾಂಕ್ರೀಟ್ ಚಪ್ಪಡಿ ಕಾಮಗಾರಿ ಮುಗಿಯುವ ಮುನ್ನವೇ ಬಿದ್ದಿದ್ದನ್ನೂ ಕಂಡರು. “ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡದೇ ಹೋದರೆ ಗುಲ್ಬರ್ಗಕ್ಕೆ ಅಂಟಿದ ಹಿಂದುಳಿದ ಹಣೆಪಟ್ಟಿಯನ್ನು ತೆಗೆದುಹಾಕುವುದು ಅಸಾಧ್ಯ” ಎಂದು ಕಟುವಾಗಿ ಟೀಕಿಸಿದರು.ನಂತರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಾಲಿಕೆ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ಜತೆ ಸಚಿವರು ಸಭೆ ನಡೆಸಿದರು. ಕಾಮಗಾರಿ ಬಗ್ಗೆ ವಿವರ ಪಡೆದ ಅವರು, “ನಿಮ್ ಆಫೀಸರ್ ಜತೆ ಸೇರ‌್ಕೊಂಡು ವೆಹಿಕಲ್ ಬಿಟ್ಟು ನಡೆದುಕೊಂಡ್ ಹೋಗಿ ಜನರ ಸಮಸ್ಯೆ ಏನಂತ ಅರ್ಥ ಮಾಡ್ಕೊಳ್ಳಿ” ಎಂದು ಪಾಲಿಕೆ ಆಯುಕ್ತ ಸಿ.ನಾಗಯ್ಯ ಅವರಿಗೆ ತಾಕೀತು ಮಾಡಿದರು.ಸಭೆಯ ಆರಂಭದಲ್ಲಿ ಸಿಎಂ ಪ್ಯಾಕೇಜ್‌ನ ಅಡಿ ಕೈಗೊಳ್ಳಲಾದ ಕಾಮಗಾರಿ ಕುರಿತು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಮಾಹಿತಿ ನೀಡಿದರು. ರೂ 55 ಕೋಟಿ ವೆಚ್ಚದಲ್ಲಿ ಮೂರು ರಸ್ತೆಗಳ ಅಭಿವೃದ್ಧಿ ನಡೆಸಲಾಗುತ್ತಿದೆ. ಈ ಪೈಕಿ 38.94 ಕೋಟಿ ರೂಪಾಯಿಗಳನ್ನು ಭೂಸ್ವಾಧೀನಕ್ಕೆ ನೀಡಲಾಗಿದೆ. ಸೇಡಂ ರಸ್ತೆಯಿಂದ ಜಿಲ್ಲಾಸ್ಪತ್ರೆ ಮೂಲಕ ಅನ್ನಪೂರ್ಣ ಆಸ್ಪತ್ರೆವರೆಗಿನ ರಸ್ತೆ ಕಾಮಗಾರಿ ಬಾಕಿ ಉಳಿದಿದೆ. ಇದಕ್ಕಾಗಿ ಒಟ್ಟು 18 ಕೋಟಿ ಬೇಕಾಗಿದ್ದು ಈಗಾಗಲೇ ಜಿಲ್ಲಾಡಳಿತದ ಬಳಿ 9 ಕೋಟಿ ರೂಪಾಯಿ ಇದೆ; ಉಳಿದ 9 ಕೋಟಿ ರೂಪಾಯಿ ಸಂಗ್ರಹಿಸಬೇಕಿದೆ ಎಂದು ಅವರು ವಿವರ ನೀಡಿದರು.`ರಮಿಸಿ ಕೆಲ್ಸ ಮಾಡಿಸ್ತಿದೀವಿ~: ಆಳಂದ ನಾಕಾದಿಂದ ರೈಲು ನಿಲ್ದಾಣವರೆಗಿನ ರಸ್ತೆ ಕಾಮಗಾರಿಯನ್ನು ಪಾಟೀಲ್ ಅಂಡ್ ಪಾಟೀಲ್ ಕನ್‌ಸ್ಟ್ರಕ್ಷನ್‌ಗೆ ವಹಿಸಲಾಗಿದ್ದು, ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದೆ. ಕೆಲಸದ ಮೇಲೆ ಹೆಚ್ಚಿನ ನಿಗಾ ವಹಿಸಬೇಕೆಂದರೆ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ ಎಂದ ಜಿಲ್ಲಾಧಿಕಾರಿ ಡಾ. ವಿಶಾಲ್, “ಕಾಂಟ್ರಾಕ್ಟರ್ ಸ್ಲೋ ಇದ್ದಾರ. ಹಂಗಾಗಿ ನಾವು ಅವರನ್ನು ರಮಿಸಿ ಕೆಲ್ಸ ಮಾಡಿಸ್ತಿದೀವಿ” ಎಂದರು.ಇದರಿಂದ ಅಸಮಾಧಾನಗೊಂಡ ಸಚಿವ ಸುರೇಶಕುಮಾರ್, `ಅವರಿಂದ ಕೆಲಸ ತೆಗೆದುಕೊಳ್ಳುವ ಬಗೆ ಹೇಗೆ~ ಎಂದು ಪ್ರಶ್ನಿಸಿದಾಗ, `ಇನ್ನಷ್ಟು ಸಿಬ್ಬಂದಿ ಬೇಕು~ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಶೀಘ್ರದಲ್ಲೇ ಈ ಕುರಿತು ಕ್ರಮ ಜರುಗಿಸುವುದಾಗಿ ಸಚಿವರು ಭರವಸೆ ನೀಡಿದರು. ಜತೆಗೆ, ಗುತ್ತಿಗೆ ಕಂಪೆನಿಯ ಪ್ರತಿನಿಧಿಯೊಂದಿಗೆ ಬೆಂಗಳೂರಿಗೆ ಬರುವಂತೆ ಪಾಲಿಕೆ ಆಯುಕ್ತ ಸಿ.ನಾಗಯ್ಯ ಅವರಿಗೆ ಸೂಚಿಸಿದ ಸಚಿವರು, ಕೆಲಸ ಪೂರ್ಣಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದರು.ನೀರು- ಒಳಚರಂಡಿ: ನಗರದ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕುರಿತು ಸಚಿವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ನಗರದ ಚರಂಡಿ ನೀರು ಭೀಮಾ ನದಿಯನ್ನು ಸೇರುತ್ತಿದ್ದು, ಅದರಿಂದಲೇ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂಬ ಅಂಶವನ್ನು ಶಾಸಕ ಅಮರನಾಥ ಪಾಟೀಲ ಸಚಿವರ ಗಮನಕ್ಕೆ ತಂದರು.

ಈ ವ್ಯವಸ್ಥೆ ಸರಿಪಡಿಸುವ ಕ್ರಮದ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಹಿರಿಯ ಅಧಿಕಾರಿ ಬಾಲಚಂದ್ರ ಅರಸ್ ಮಾಹಿತಿ ನೀಡಿ, ನೀರು ಪೂರೈಸುವ ಹಳೆಯ ಪೈಪ್‌ಲೈನ್ ಬದಲಾಯಿಸಲು ರೂ. 21 ಕೋಟಿ ಹಾಗೂ ಒಳಚರಂಡಿ ಕೊಳವೆ ಬದಲಾಯಿಸಲು 9 ಕೋಟಿ ರೂಪಾಯಿ ಬೇಕು ಎಂದರು.ಇದಕ್ಕೆ ಸಚಿವರು 9 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಭರವಸೆ ನೀಡಿದರು.

“ಉಳಿದ ಪಾಲಿಕೆಗಳಲ್ಲಿ ಅಭಿವೃದ್ಧಿ ಕಾರ್ಯ ತೀವ್ರಗತಿಯಲ್ಲಿ ಸಾಗಿದರೆ ಇಲ್ಲಿ ಮಾತ್ರ ವರ್ಷಗಟ್ಟಲೇ ಸಮಯ ಬೇಕಾಗುತ್ತಿದೆ. ಒಂದು ವೇಳೆ ಅಧಿಕಾರಿಗಳು ಶ್ರಮಪಟ್ಟು ಕೆಲಸ ಮಾಡದೇ ಹೋದರೆ ಇನ್ನು ಎಷ್ಟೇ ವರ್ಷ ಕಳೆದರೂ ಪರಿಸ್ಥಿತಿ ಹೀಗೆಯೇ ಉಳಿಯುತ್ತದೆ” ಎಂದು ಎಚ್ಚರಿಸಿದ ಸಚಿವರು, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಎಲ್ಲ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.`ಇಂಪ್ರೂವ್ ಆಗ್ಬೇಕು~: “ನಗರದ ಅಭಿವೃದ್ಧಿಗೆ ಇಷ್ಟು ಅಪಾರ ಪ್ರಮಾಣದ ಅನುದಾನ ಬಂದಿದ್ದರೂ ಕೆಲಸವಾಗಿಲ್ಲ. ಪರಿಸ್ಥಿತಿ ಹೀಗೆಯೇ ಇರಬೇಕೇ? ಅಥವಾ ಸುಧಾರಿಸಬೇಕೇ? ಹೇಳಿ...” ಎಂದು ಸಚಿವರು ಪ್ರಶ್ನಿಸಿದರು.

 ಇದಕ್ಕೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಸುಮ್ಮನೇ ಕುಳಿತಾಗ, “ಹೇಳಿ... ಪರಿಸ್ಥಿತಿ ಏನಾಗಬೇಕು?” ಎಂದು ಮತ್ತೆ ಕೇಳಿದರು. ಆಗ ಅಧಿಕಾರಿಗಳು ಹಾಗೂ ಸಿಬ್ಬಂದಿ `ಇಂಪ್ರೂವ್ ಆಗ್ಬೇಕು~ ಎಂದು ಹೇಳುವುದರೊಂದಿಗೆ ಸಭೆ ಮುಕ್ತಾಯವಾಯಿತು.ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ, ಶಾಸಕರಾದ ಖಮರುಲ್ ಇಸ್ಲಾಂ, ಶಶೀಲ ನಮೋಶಿ   ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.