ಮಂಗಳವಾರ, ಏಪ್ರಿಲ್ 13, 2021
30 °C

ಗ್ರಾಮದೆಲ್ಲೆಡೆ ಡೆಂಗೆ, ಮಲೇರಿಯಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ತೀವ್ರ ಚಳಿ, ಜ್ವರ, ವಾಂತಿಭೇದಿ ಉಲ್ಬಣಿಸಿ ಒಂದೇ ವಾರದಲ್ಲಿ ಮೂರು ಜನರನ್ನು ಬಲಿ ತೆಗೆದುಕೊಂಡು ಜನತೆಯಲ್ಲಿ ಡೆಂಗೆ, ಮಲೇರಿಯಾದ ಭಯಭೀತಿ ಹುಟ್ಟಿಸಿದ ದಾರುಣ ಘಟನೆಯೊಂದು ಚಿತ್ತಾಪುರ ತಾಲ್ಲೂಕಿನ ಇಂಗನಕಲ್ ಗ್ರಾಮದಲ್ಲಿ ಸಂಭವಿಸಿದೆ.ತೆಂಗಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ      224 ಮನೆಗಳಿದ್ದು, ರಸ್ತೆಗಳ ಬದಿಯಲ್ಲಿ ಹರಿಯುವ ಚರಂಡಿ ನೀರು, ಅವುಗಳಲ್ಲಿರುವ ಲಾರ್ವಾ, ದೊಡ್ಡ ಸೊಳ್ಳೆಗಳ ಕಾಟ, ಕಲುಷಿತ ನೀರಿನ ವಾತಾವರಣವೇ ಈ ರೀತಿಯ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.ತೀವ್ರ ಚಳಿ, ಜ್ವರ, ವಾಂತಿಭೇದಿಗೆ ನಲುಗಿದ್ದ ನಾಗಮ್ಮ ತಳವಾರ (70), ಸುಭದ್ರಮ್ಮ ಅಮೃತಪ್ಪ (60) ಮತ್ತು ಬಾಲಕಿ ಪಲ್ಲವಿ ಹರಿಶ್ಚಂದ್ರ (11) ಈಚೆಗೆ ಒಂದೇ ವಾರದಲ್ಲಿ ಸಾವನ್ನಪ್ಪಿದ  ದುರ್ದೈವಿಗಳು.ವಿಷಯ ತಿಳಿಯುತ್ತಿದ್ದಂತೆ ಮಂಗಳವಾರ ಗ್ರಾಮಕ್ಕೆ ದೌಡಾಯಿಸಿದ ಜಿಲ್ಲಾ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ದಂಡು ಘಟನೆ ಕುರಿತು ಪರಿಶೀಲನೆ ನಡೆಸಿದೆ.ಗ್ರಾಮದಲ್ಲಿ ಕಲುಷಿತ ವಾತಾವರಣ ಹೆಚ್ಚಿದ್ದು, ಇದರಿಂದ ಶೇಕಡಾ 75ಕ್ಕಿಂತಲೂ ಹೆಚ್ಚು ಜನರಲ್ಲಿ ಜ್ವರ, ಚಳಿ ಕಂಡುಬರುತ್ತಿದೆ ಎನ್ನಲಾಗಿದೆ.ಕೋರವಾರ, ಮಾಡಬೂಳ, ಗುಂಡಗುರ್ತಿ, ಪೇಠಶಿರೂರ, ತೆಂಗಳಿ, ದಂಡೋತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಸೇರಿದಂತೆ 40ಜನರ ಆರೋಗ್ಯ ಇಲಾಖೆಯ ಸಿಬ್ಬಂದಿ ತಂಡ ಗ್ರಾಮದಲ್ಲಿ ಬೀಡುಬಿಟ್ಟಿದ್ದು ಮನೆ ಮನೆಗೆ ತೆರಳಿ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡುತ್ತಿರುವುದು ಕಂಡುಬರುತ್ತಿದೆ.ಸದ್ಯಕ್ಕೆ ಹ್ಯಾಲೋಜನ್ ಮಾತ್ರೆ ನೀಡಲಾಗುತ್ತಿದ್ದು, ಶುಕ್ರವಾರದ ತನಕ 442ಜನರಿಗೆ ರಕ್ತ ಪರೀಕ್ಷೆ ಮಾಡಲಾಗಿದ್ದು ವರದಿ ಬಂದ ನಂತರ ಯಾವ ಜ್ವರ ಎಂಬುದು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಒದಗಿಸಲಾಗುವುದೆಂದು ಜಿಲ್ಲಾ ಆರೋಗ್ಯಾಧಿಕಾರಿ ಶಿವರಾಜ ಸಜ್ಜನಶೆಟ್ಟಿ ಹೇಳಿದ್ದಾರೆ. ಮಲೇರಿಯಾ, ಟೈಫಾಯಿಡ್ ಅಥವಾ ಮೆದುಳು ಜ್ವರ ಇರಬಹುದೆಂದು ಶಂಕಿಸಿದ ಅವರು, ಗ್ರಾಮದಲ್ಲಿ ಪ್ರತಿನಿತ್ಯ ಫಾಗಿಂಗ್ ಮಾಡಿಸಿ ಸಂಜೆ ಬೇವಿನ ತಪ್ಪಲು ಸುಡುವಂತೆ ಗ್ರಾಮಾಡಳಿತಕ್ಕೆ ಸೂಚಿಸಿದ್ದಾರೆ.ಎಲ್ಲಿಯು ಗಲೀಜು ವಾತಾವರಣ ಇರದಂತೆ ನೋಡಿಕೊಳ್ಳಲು ಆರೋಗ್ಯಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದು, ಶುಚಿತ್ವ ಕಾಪಾಡಿ ಕಾಯಿಲೆ ನಿರ್ಮೂಲನೆ ಮಾಡಲು ಲಾರ್ವಾ ನಾಶಕ ಟೆಮಿಪಾಸ್ ಸಿಂಪರಣೆ ಮಾಡಲಾಗುತ್ತಿದೆ. ದೊಡ್ಡ ಸೊಳ್ಳೆಗಳು ಸಾಯಿಸಲು ಡಿಡಿಟಿ ಸಿಂಪರಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲು ಕುಡಿಯುವ ನೀರಿನ ಮಾದರಿ ಮತ್ತು ರಕ್ತ ಪರೀಕ್ಷೆಯ ಶ್ಯಾಂಪಲ್ ತೆಗೆದುಕೊಂಡು ಬೆಂಗಳೂರಿಗೆ ಕಳಿಸಲಾಗಿದೆ ಎಂದು ಜಿಲ್ಲಾ ಕೀಟ ಶಾಸ್ತ್ರಜ್ಞ ಚಾಮರಾಜ ದೊಡ್ಡಮನಿ ಹಾಗೂ ಮಲೇರಿಯಾ ತಾಲ್ಲೂಕು ಸುಪರ್‌ವೈಜರ್ ಎಸ್.ಆರ್.ಕಣ್ಣಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಒಟ್ಟಾರೆ ಇಲ್ಲಿ ಯಾವುದೇ ತರಹದ ರೋಗ ಲಕ್ಷಣಗಳು ಕಂಡುಬರದಂತೆ ನೋಡಿಕೊಳ್ಳಲು ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದ್ದು ಕ್ಷಣ ಕ್ಷಣಕ್ಕೂ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಪ್ರಭುಲಿಂಗ ಮಾನಕರ್ ಹೇಳಿದ್ದಾರೆ.ಈಗಾಗಲೇ ಜಿಲ್ಲಾ ಪಂಚಾಯತಿ ಸದಸ್ಯರಾದ ಶಂಭುಲಿಂಗ ಗುಂಡಗುರ್ತಿ, ರಮೇಶ ಮರಗೋಳ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮಲ್ಲಪ್ಪ ಹೊಸಮನಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣ ಅಧಿಕಾರಿ ಸುರೇಶ ಬಿರಾದಾರ, ಎಪಿಎಂಸಿ ಸದಸ್ಯ ಶಿವರಾಜ ಪಾಟೀಲ ಭೇಟಿ ನೀಡಿ ಸೂಕ್ತಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಮತ್ತು ಗ್ರಾಮಾಡಳಿತಕ್ಕೆ ತಾಕೀತು ಮಾಡಿದ್ದಾರೆ.ಈ ರೀತಿಯ ಘಟನೆ ಉಲ್ಬಣಿಸಿ ಇಡೀ ಊರಿನ ಜನತೆ ತತ್ತರಿಸುತ್ತಿದ್ದರೂ ಸಂಬಂಧಪಟ್ಟ ಕ್ಷೇತ್ರದ ಶಾಸಕ ವಾಲ್ಮೀಕ ನಾಯಕ್ ಮತ್ತು ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಾಥ ಪಿಲ್ಲಿ ಈಕಡೆಗೆ ಕಣ್ಣು ಸಹ ತಿರುಗಿಸಿ ನೋಡಿಲ್ಲ ಎಂದು ಗ್ರಾಪಂ ಸದಸ್ಯರಾದ ಪರಮೇಶ್ವರ ಬೆನಕನಪಳ್ಳಿ, ಬಸ್ಸಮ್ಮ ಕೋರಬಾ     ಆಪಾದಿಸಿದ್ದಾರೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.