ಇಬ್ಬರಿಗೆ ಮಲೇರಿಯಾ ಪತ್ತೆ

ಭಾನುವಾರ, ಮೇ 26, 2019
32 °C

ಇಬ್ಬರಿಗೆ ಮಲೇರಿಯಾ ಪತ್ತೆ

Published:
Updated:

ಚಿತ್ತಾಪುರ: ತಾಲ್ಲೂಕಿನ ಇಂಗನಕಲ್ ಗ್ರಾಮದಲ್ಲಿ ಮಲೇರಿಯಾ, ತೀವ್ರ ಜ್ವರ, ಚಳಿ ಮತ್ತು ವಾಂತಿ ಬೇಧಿಯಿಂದ ಜನರು ತತ್ತರಿಸಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ ಎಂಬ ಮಾಹತಿ ಆಧರಿಸಿ ಗ್ರಾಮಕ್ಕೆ ಆಗಮಿಸಿದ ವೈದ್ಯರ ತಂಡ ಗ್ರಾಮದಲ್ಲಿ ಬೀಡು ಬಿಟ್ಟು ಪ್ರತಿ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗ್ರಾಮದ ಒಟ್ಟು 490 ಜನರ ರಕ್ತ ಮಾದರಿ ಪರೀಕ್ಷೆಗೆ ಕಳಿಸಲಾಗಿತ್ತು. ಅದರಲ್ಲಿ ಕೇವಲ ಇಬ್ಬರಿಗೆ ಮಾತ್ರ ಮಲೇರಿಯಾ ರೋಗ ಇರುವುದು ಪತ್ತೆಯಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭುಲಿಂಗ ಮಾನಕರ್ ಹೇಳಿದರು.ಗ್ರಾಮದಲ್ಲಿ ರೋಗದಿಂದ ಜನರು ನರಳಾಡುತ್ತಿದ್ದಾರೆ ಎನ್ನುವ ಸುದ್ಧಿ ಕೇಳಿದ ಶಾಸಕ ವಾಲ್ಮೀಕ ನಾಯಕ ಅವರು ಶನಿವಾರ ಗ್ರಾಮಕ್ಕೆ ಭೇಟಿ ವೈದ್ಯಾಧಿಕಾರಿಗಳಿಂದ ಮಾಹಿತಿ ಕೇಳಿದಾಗ, ಗ್ರಾಮದಲ್ಲಿ ನಾಗಮ್ಮ ಕೊರಬಾ (85) ಎನ್ನುವ ಮಹಿಳೆಯು ಕಳೆದ ಜುಲೈ 28 ರಂದು ಸಹಜವಾಗಿ ಮೃತಪಟ್ಟಿದ್ದಾರೆ.ಸುಭದ್ರಮ್ಮ ಅಮೃತಪ್ಪ ಹಡಪದ (65) ಎಂಬ ಮಹಿಳೆಯು ಅನಾರೋಗ್ಯ ಮತ್ತು ಜ್ವರದಿಂದ ಮೃತಪಟ್ಟಿದ್ದಾರೆ. ಅವರ ರಕ್ತ ಮಾದರಿ ಪರೀಕ್ಷೆಯಲ್ಲಿ ಯಾವುದೇ ರೋಗ ಪತ್ತೆಯಾಗಿಲ್ಲ. ಪಲ್ಲವಿ ಹರಿಶ್ಚಂದ್ರ (11) ಬಾಲಕಿ ತೀವ್ರ ಚಳಿ, ಜ್ವರದಿಂದ ಸಾವಿಗೀಡಾಗಿದ್ದಾರೆ ಎಂದು ವೈದ್ಯಾಧಿಕಾರಿ ಶಾಸಕರಿಗೆ ತಿಳಿಸಿದರು.ಪಲ್ಲವಿ ತೀವ್ರ ಜ್ವರದಿಂದ ಬಳಲುತ್ತಿರುವಾಗ ಗುಂಡಗುರ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲಿಂದ ಅವರನ್ನು ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಗೆ ಕಳಿಸಲಾಗಿದೆ. ಅಲ್ಲಿ ಅವರ ರಕ್ತ ಮಾದರಿ ಪರೀಕ್ಷೆ ಮಾಡಿದಾಗ ಯಾವುದೇ ರೋಗ ಪತ್ತೆಯಾಗಿಲ್ಲ. ಮಿದುಳಿಗೆ ಜ್ವರ ಏರಿ ಪಲ್ಲವಿ ಮೃತಪಟ್ಟಿದ್ದಾರೆ ಎಂದು ಡಾ. ಮಾನಕರ್ ಶಾಸಕರಿಗೆ ಹೇಳಿದರು.ಗ್ರಾಮದ 490 ಜನರ ರಕ್ತ ಮಾದರಿ ಪರೀಕ್ಷೆಯಲ್ಲಿ ಹಣಮಂತ ಮತ್ತು ಸಿದ್ದಪ್ಪ ಸಾಬಣ್ಣ ಎಂಬುವವರಿಗೆ ಮಾತ್ರ ಮಲೇರಿಯಾ ಇರುವುದು ದೃಢಪಟ್ಟಿದೆ. ಅವರಿಗೆ ಅವರ ಮನೆಯಲ್ಲಿಯೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದಲ್ಲಿ ಡೆಂಗೆ, ಮಲೇರಿಯಾ, ಚಿಕೂನ್ ಗುನ್ಯಾ, ಮಲೇರಿಯಾ, ಟೈಫಾಯಿಡ್ ರೋಗಗಳ ಹಾವಳಿ ಇಲ್ಲ. ಗ್ರಾಮದ ಪರಿಸರ ಅಶುದ್ಧಗೊಂಡು ಹಾಗೂ ಕಲುಷಿತ ನೀರು ಸೇವನೆಯಿಂದ ಜ್ವರ, ಚಳಿ ಬರುತ್ತಿದೆ. ಆತಂಕ ಪಡುವ ಸ್ಥಿತಿಯಿಲ್ಲ ಎಂದು ವೈದ್ಯಾಧಿಕಾರಿಗಳು ವಿವರಿಸಿದರು.ಗ್ರಾಮದಲ್ಲಿ ಕುಡಿವ ನೀರಿನ 5 ಮೂಲಗಳಿವೆ. ಅವುಗಳಲ್ಲಿನ ನೀರು ಪರೀಕ್ಷಗೆ ಕಳಿಸಿದಾಗ, ಎಲ್ಲಾ ನೀರಿನ ಮೂಲಗಳ ನೀರು ಕುಡಿಯಲು ಅಯೋಗ್ಯ ಎಂಬ ವರದಿ ಬಂದಿದೆ. ಕಳೆದ ಎರಡು ವರ್ಷಗಳಿಂದ ಕುಡಿವ ನೀರಿನ ಟ್ಯಾಂಕ್ ತೊಳೆದು ಶುಚಿಗೊಳಿಸಿಲ್ಲ. ನೀರು ಕಲುಷಿತವಾಗಿ ಜನರಿಗೆ ರೋಗ ಬರುವ ಸಾಧ್ಯತೆಯಿದೆ ಎಂದು ಟ್ಯಾಂಕ್ ತೊಳಿಸಿ ಸ್ವಚ್ಛತೆ ಮಾಡಲಾಗಿದೆ. ನೀರಿನಲ್ಲಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಜನರಿಗೆ ಹ್ಯಾಲೋಜಿನ್ ಮಾತ್ರೆ ವಿತರಿಸಲಾಗಿದೆ. ಪರಿಸರ ಸ್ವಚ್ಛತೆ ಹಾಗೂ ನೀರನ್ನು ಕಾಯಿಸಿ, ಆರಿಸಿ, ಸೋಸಿ, ತಣ್ಣಗೆ ಮಾಡಿ ಕುಡಿಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಶಾಸಕ ವಾಲ್ಮೀಕ ನಾಯಕ ವೈದ್ಯರಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಬಾಲರಾಜ್ ದೇವರಖದ್ರಾ, ಮಾಡಬೂಳ ವೈದ್ಯರಾದ ಡಾ. ಶರಣಬಸಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಅವಂಟಿ, ಮುಖಂಡ ಸಿದ್ದಣ್ಣ ಕಲ್ಲಶೆಟ್ಟಿ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಾಜಿ ಬುರಬುರೆ, ತಾಲ್ಲೂಕು ಯುವ ಅಧ್ಯಕ್ಷ ತಮ್ಮಣ್ಣ ಡಿಗ್ಗಿ, ಚಂದ್ರು ಕಾಳಗಿ ಮುಂತಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry