ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ; ರೋಗಿಗಳ ಪರದಾಟ

7
ಹನೂರು ತಾಲ್ಲೂಳಕಿನ ಸುಳ್ವಾಡಿ ಗ್ರಾಮದ ಮಾರಮ್ಮನ ದೇವಸ್ಥಾನದಲ್ಲಿ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಭಕ್ತರು

ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ; ರೋಗಿಗಳ ಪರದಾಟ

Published:
Updated:
Deccan Herald

ಹನೂರು/ಕೊಳ್ಳೇಗಾಲ: ಹನೂರು ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್‍ಕುತ್ ಮಾರಮನ್ಮನ ದೇವಸ್ಥಾನಲ್ಲಿ ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ರೋಗಿಗಳು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯಿಲ್ಲದೆ ಪರದಾಡಬೇಕಾಯಿತು.

ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ರೋಗಿಗಳಿಗೆ ಸುಳ್ವಾಡಿ ಗ್ರಾಮದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಆಸ್ಪತ್ರೆಯಲ್ಲಿ ವೈದ್ಯರ ಕೊರೆತಯಿಂದಾಗಿ 25ಕ್ಕೂ ಹೆಚ್ಚು ರೋಗಿಗಳನ್ನು ಮೈಸೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಬೇಕಾಯಿತು.

ಘಟನೆ ಸಂಭವಿಸಿದ ಸಂದರ್ಭದಲ್ಲಿ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಐವರು ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಅವರು ಬೆಳಕವಾಡಿ, ಬಂಡಳ್ಳಿ ಹಾಗೂ ಇನ್ನಿತರ ಕಡೆಗಳಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಆರಂಭಿಸಿರಾದರು. ಆದರೆ, ದಾಖಲಾಗುತ್ತಿದ್ದ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದ್ದರಿಂದ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಚಿಕಿತ್ಸೆ ನೀಡಲು ಹೆಣಗಾಡುವಂತಾಯಿತು.

ಲಘು ಲಾಠಿ ಪ್ರಹಾರ: ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡು ಮೇಲಿಂದ ಮೇಲೆ ತುರ್ತು ವಾಹನದಲ್ಲಿ ಬರುತ್ತಿದ್ದವರನ್ನು ವೀಕ್ಷಿಸಲು ಸರ್ಕಾರಿ ಆಸ್ಪತ್ರೆಯ ಮುಂಭಾಗ ಜನಸಾಗರವೇ ಹರಿದುಬಂತು. ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನು ಹಾಗೂ ರೋಗಿಗಳ ಸಂಬಂಧಿಕರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ವೈದ್ಯರ ಕೊರತೆ ಉಂಟಾಗಿರುವುದರಿಂದ ಖಾಸಗಿ ಆಸ್ಪತ್ರೆಗಳ ವೈದ್ಯರ ನೆರವನ್ನೂ ಜಿಲ್ಲಾಡಳಿತ ಬಳಸಿಕೊಂಡಿದೆ.

ಆರ್ಥಿಕವಾಗಿ ಪ್ರಬಲವಾಗಿರುವವರು ಅಸ್ವಸ್ಥರಾಗಿರುವ ತಮ್ಮ ಕುಟುಂಬದ ಸದಸ್ಯರನ್ನು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಬಡವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳ್ಳೇಗಾಲ ಆಸ್ಪತ್ರೆಯೊಂದರಲ್ಲೇ 27 ಜನರು ದಾಖಲಾಗಿದ್ದಾರೆ. ಈ ಪೈಕಿ 7 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ರೋಗಿಗಳನ್ನು ಮೈಸೂರಿಗೆ ಕಳಹಿಸಲಾಗುತ್ತಿದೆ.

ಸಂಬಂಧಿಕರ ಆಕ್ರಂದನ
ಕಾಮಗೆರೆ ಹಾಲಿ ಕ್ರಾಸ್‌ ಆಸ್ಪತ್ರೆ ಹಾಗೂ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟವರ ಹಾಗೂ ಅಸ್ವಸ್ಥಗೊಂಡವರ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.  ‘ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮಕ್ಕಾಗಿ ನನ್ನ ಮೊಮ್ಮಕ್ಕಳು ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ಮಾಡಿ ಅಲ್ಲಿ ನೀಡಿದ ಪ್ರಸಾದ ಸೇವಿಸಿದ್ದಾರೆ. ಪ್ರಸಾದ ಸೇವಿಸಿದ ಕೆಲ ಕ್ಷಣದಲ್ಲಿ ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡಿದ್ದಾರೆ. ನೆರೆಹೊರೆಯವರ ಸಹಾಯದಿಂದ ಸುಳ್ವಾಡಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಇಲ್ಲಿಗೆ ತಂದು ದಾಖಲು ಮಾಡಿದ್ದಾರೆ’ ಎಂದು ಬಿದರಹಳ್ಳಿ ಗ್ರಾಮದ ಮಾದಯ್ಯ ತಮ್ಮ ದುಗುಡವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.


ವಿಷಾಹಾರ ಸೇವಿಸಿ ಮೃತಪಟ್ಟ ಕಾಗೆಗಳು

20 ಕಾಗೆ; 2 ನಾಯಿ ಸಾವು
ಹನೂರು:
ದೇವಸ್ಥಾನ ಪ್ರಸಾದ ಸೇವಿಸಿ  20ಕ್ಕೂ ಹೆಚ್ಚು ಕಾಗೆಗಳು ಹಾಗೂ ಎರಡು ಶ್ವಾನಗಳು ಮೃತಪಟ್ಟಿವೆ.

ಈ ದೇವಾಲಯವು, ಮಲೆಮಹದೇಶ್ವರ ವನ್ಯಧಾಮದ ರಾಮಾಪುರ ವನ್ಯಜೀವಿ ವಲಯದ ಮಾರ್ಟಳ್ಳಿ ಸೆಕ್ಷನ್ ವ್ಯಾಪ್ತಿಗೆ ಬರುತ್ತದೆ. 

ಸ್ಥಳಕ್ಕೆ ಬೇಟಿ ನೀಡಿದ ಉಪ ವಲಯ ಅರಣ್ಯಾಧಿಕಾರಿ ನೂರ್ ಮಹಮ್ಮದ್ ಖಾನ್ ಹಾಗೂ ಅರಣ್ಯ ರಕ್ಷಕ ಶೇಖರ್ ದೇಸೂರ್ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೇರೆ ಯಾವುದೇ ಪ್ರಾಣಿಗಳು ಮೃತಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !