ಭಾನುವಾರ, ಏಪ್ರಿಲ್ 18, 2021
25 °C

ಹಲವು ವೈಶಿಷ್ಟ್ಯಪೂರ್ಣ ಚಟುವಟಿಕೆ: ಚಿ.ಸು. ಕೃಷ್ಣಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಕಲೆಗಳ ಬಗ್ಗೆ ಜನಸಾಮಾನ್ಯರಲ್ಲಿ ತಿಳಿವಳಿಕೆ ಮೂಡಿಸುವುದು; ಕಲಾ ರಸಗ್ರಹಣ ಕಮ್ಮಟ ಏರ್ಪಾಡು; ದೃಶ್ಯಕಲಾ ದಿನಾಚರಣೆ; ಕೈಗೆಟುಕುವ ದರದಲ್ಲಿ ಪುಸ್ತಕ ಪ್ರಕಟಣೆ; ನಿರಂತರ ಚಿತ್ರಯಾತ್ರೆ...ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಈಚೆಗಷ್ಟೇ ನೇಮಕವಾದ ಚಿ.ಸು.ಕೃಷ್ಣಶೆಟ್ಟಿ ಅವರ ಮುಂದಿರುವ ಕೆಲವು ಯೋಜನೆಗಳು ಇವು. ಭಾನುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ಅಕಾಡೆಮಿ ಸಿದ್ಧವಾಗಿದ್ದು ಇದರ ಹಿನ್ನೆಲೆಯಲ್ಲಿ ಹತ್ತು-ಹಲವು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.“ಖ್ಯಾತ ಕಲಾವಿದ ಲಿಯೋನಾರ್ಡೋ ಡ ವಿಂಚಿ ಜನ್ಮದಿನ ಏಪ್ರಿಲ್ 15. ಆ ದಿನವನ್ನು ದೃಶ್ಯಕಲಾ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗುವುದು.ಆರಂಭದಲ್ಲಿ ಲಲಿತಕಲೆಯ ವಿವಿಧ ಪ್ರಕಾರಗಳು ಒಟ್ಟಿಗೆ ಇದ್ದ ಕಾರಣ, ಲಲಿತಕಲಾ ಅಕಾಡೆಮಿ ಎಂದು ನಾಮಕರಣ ಮಾಡಲಾಗಿತ್ತು. ಆದರೆ, ಈಗ ಕೆಲವು ಅಕಾಡೆಮಿಗಳು ಬೇರೆಯಾದ ಕಾರಣ, ಇದನ್ನು ಕರ್ನಾಟಕ ದೃಶ್ಯಕಲಾ ಅಕಾಡೆಮಿ ಎಂದು ಬದಲಾಯಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು” ಎಂದು ಅವರು ಹೇಳಿದರು.“ಅಕಾಡೆಮಿಯ ಮೂರು ವರ್ಷಗಳ ಅವಧಿಯಲ್ಲಿ ನಡೆಸಬಹುದಾದ ಚಟುವಟಿಕೆ ಮತ್ತು ಅವುಗಳಿಗೆ ಕಾಲಮಿತಿ ಗುರುತಿಸಿ ಸಲಹೆ ಕೊಡಲು ತಜ್ಞರ ನೇತೃತ್ವದ ವಿಶನ್ ಡಾಕ್ಯುಮೆಂಟ್ ರಚಿಸಲಾಗುವುದು. ಅಕಾಡೆಮಿ ನಡೆಸುವ ಕಾರ್ಯ ಚಟುವಟಿಕೆಗಳಿಗೆ ಸಲಹೆ ಹಾಗೂ ಮಾರ್ಗದರ್ಶನ ನೀಡಲು ನಾಲ್ವರು ಅನುಭವಿ ಕಲಾವಿದರ ಸಲಹಾ ಸಮಿತಿ ರಚನೆ ಮಾಡಲಾಗಿದೆ.ಜನತೆ ಹಾಗೂ ಕಲಾವಿದರ ನಡುವಿನ ಅಂತರ ಕಡಿಮೆ ಮಾಡಲು ಮಂಗಳೂರು, ಬೆಳಗಾವಿ, ಗುಲ್ಬರ್ಗ ಮತ್ತು ಬೆಂಗಳೂರಿನಲ್ಲಿ ಕಲಾ ರಸಗ್ರಹಣ ಕಮ್ಮಟ ನಡೆಸಲು ನಿರ್ಧರಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅಕಾಡೆಮಿಯ ವೆಬ್‌ಸೈಟ್ ರೂಪಿಸಲಾಗಿದೆ. ಸಮಕಾಲೀನ ಕಲೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ತಜ್ಞರಿಂದ ಉಪನ್ಯಾಸ ಮಾಲೆ ಆರಂಭಿಸಲಾಗುವುದು” ಎಂದು ಕೃಷ್ಣಶೆಟ್ಟಿ ವಿವರಿಸಿದರು.ಪ್ರದರ್ಶನ: ಅಕಾಡೆಮಿಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಸಂಚಾರಿ ಕಲಾ ಪ್ರದರ್ಶನ ಬಸ್ ಬಳಸಿಕೊಂಡು ಸಮಕಾಲೀನ ಕಲಾಕೃತಿಗಳು, ಕಲೆ ಕುರಿತ ಚಲನಚಿತ್ರ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ನಿರಂತರ ಚಿತ್ರಯಾತ್ರೆ ನಡೆಸಲಾಗುವುದ ಎಂದು ಅವರು ಮಾಹಿತಿ ನೀಡಿದರು. “ಆಧುನಿಕ ಸೇರಿದಂತೆ ವಿವಿಧ ಕಲಾಪಂಥಗಳನ್ನು ಪರಿಚಯಿಸುವ ಜನಪ್ರಿಯ ಪುಸ್ತಕಮಾಲೆ ಆರಂಭಿಸಲಾಗುವುದು. ಜನರ ಕೈಗೆಟುಕುವ ದರದಲ್ಲಿ ಪುಸ್ತಕ ಪ್ರಕಟಿಸಲಾಗುವುದು. ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ, ಓದುಗರಿಗೆ ಕೊಡುವ ಉದ್ದೇಶವೂ ನಮ್ಮದು” ಎಂದು ಅವರು ತಿಳಿಸಿದರು.ಪ್ರಶಸ್ತಿ ಮೊತ್ತ ಹೆಚ್ಚಳ: ಕಲಾವಿದರಿಗೆ ಕೊಡುವ ಗೌರವ ಪ್ರಶಸ್ತಿ ಮೊತ್ತ 10,000 ರೂಪಾಯಿಗಳಿದ್ದು, ಅದನ್ನು 50,000 ರೂಪಾಯಿಗೆ ಹೆಚ್ಚಿಸಬೇಕು ಹಾಗೂ ವಾರ್ಷಿಕ ಕಲಾ ಪ್ರದರ್ಶನ ಬಹುಮಾನ ಮೊತ್ತವನ್ನು 5ರಿಂದ 25 ಸಾವಿರಕ್ಕೆ ಏರಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರತಿ ಜಿಲ್ಲೆಗೆ ಒಬ್ಬರಂತೆ ಗೌರವ ಜಿಲ್ಲಾ ಸಂಚಾಲಕರನ್ನು ನೇಮಿಸಲಾಗಿದ್ದು, ಇವರು ಅಕಾಡೆಮಿ ಮತ್ತು ಕಲಾವಲಯದ ಮಧ್ಯೆ ಸಮನ್ವಯಕಾರರಾಗಿ ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.