ಅ.1- ತೊಗರಿ ಬೆಳೆಗಾರರ ಸಮಾವೇಶ

7

ಅ.1- ತೊಗರಿ ಬೆಳೆಗಾರರ ಸಮಾವೇಶ

Published:
Updated:

ಗುಲ್ಬರ್ಗ: ಕೇಂದ್ರ ಸರ್ಕಾರವು ಪ್ರತಿ ವರ್ಷ 50 ಲಕ್ಷ ಕ್ವಿಂಟಲ್ ತೊಗರಿಯನ್ನು ತೆರಿಗೆ ಇಲ್ಲದೆ ಆಮದು ಮಾಡಿಕೊಳ್ಳುತ್ತಿದೆ. ಬರ್ಮಾ ಮತ್ತು ದಕ್ಷಿಣ ಆಫ್ರಿಕಾದಿಂದ ಈ ವರ್ಷ ತೆರಿಗೆ ಇಲ್ಲದೆ ಅಂದರೆ ಕ್ವಿಂಟಲ್‌ಗೆ 3,500 ರೂಪಾಯಿಗೆ ಚೆನ್ನೈ ಬಂದರಿಗೆ 10 ಲಕ್ಷ ಟನ್ ತೊಗರಿ ಆಮದು ಮಾಡಿಕೊಳ್ಳುತ್ತಿರುವುದು ರಾಜ್ಯದ ರೈತರಿಗೆ ಆತಂಕವುಂಟು ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷೆಎ ಗೌರಮ್ಮ ಪಾಟೀಲ್ ತಿಳಿಸಿದ್ದಾರೆ.ತೊಗರಿ ಆಮದು ನೀತಿಯಿಂದಾಗಿ ಬೆಳೆಗಾರರು ಕಂಗೆಟ್ಟಿದ್ದಾರೆ. ಆಮದು ಮಾಡುವುದರಿಂದ ಕೂಲಿಕಾರರು, ಬೇಳೆ ಕಾರ್ಖಾನೆಗಳು ಸೇರಿದಂತೆ ಜಿಲ್ಲೆಯ ಆರ್ಥಿಕತೆಯು ಸಂಕಷ್ಟಕ್ಕೊಳಗಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಗುಲ್ಬರ್ಗ ಸೇರಿದಂತೆ 15 ಲಕ್ಷ ಎಕರೆ ಪ್ರದೇಶದಲ್ಲಿ 60 ಲಕ್ಷ ಕ್ವಿಂಟಲ್‌ನಷ್ಟು ತೊಗರಿ ಬೆಳೆಯಲಾಗುತ್ತಿದೆ. ಗುಲ್ಬರ್ಗ ಜಿಲ್ಲೆಯೊಂದರಲ್ಲೇ ಶೇ 60 ಭಾಗ ತೊಗರಿ ಬೆಳೆಯಲಾಗುತ್ತಿದೆ. ಗುಲ್ಬರ್ಗವು ಅತಿ ಹೆಚ್ಚು ತೊಗರಿ ಬೆಳೆಯುವ ಜಿಲ್ಲೆ ಎಂದು ಗುರುತಿಸಿಕೊಂಡಿದೆ ಎಂದು ವಿವರಿಸಿದ್ದಾರೆ.ತೊಗರಿ ಮಂಡಳಿಯ ಚಟುವಟಿಕೆ ಇಲ್ಲದೆ ನಾಮ್‌ಕೆ ವಾಸ್ತೆ ಮಂಡಳಿಯಾಗಿದೆ. ದಾಲ್ ಕ್ಲಸ್ಟರ್ ಮಂಜೂರಾತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿಲ್ಲ. ಈ ಎಲ್ಲ ವಿಷಯಗಳನ್ನು ಚರ್ಚಿಸಲು ಅ. 1ರಂದು ಬೆಳಿಗ್ಗೆ ಬೆಳಿಗ್ಗೆ 10.30ಕ್ಕೆ ಸೂಪರ್ ಮಾರ್ಕೆಟ್‌ನ ಚೇಂಬರ್ ಆಫ್ ಕಾಮರ್ಸ್‌ನ ಶ್ರೀನಿವಾಸರಾವ್ ರಘೋಜಿ ಸಭಾಂಗಣದಲ್ಲಿ ನಡೆಸಲಾಗುವುದು.ಸಮಾವೇಶದಲ್ಲಿ ಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ, ಉಪಾಧ್ಯಕ್ಷ ಯು. ಬಸವರಾಜ, ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕಾರ್ಯದರ್ಶಿ ಬಸವರಾಜ ಹಡಗಿಲ್, ಬೇಳೆ ಕಾರ್ಖಾನೆ ಮಾಲೀಕರ ಸಂಘದ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ, ಕೃಷಿ ವಿಜ್ಞಾನಿ ನಾಗರಾಜ, ಆರ್ಥಿಕ ತಜ್ಞರು, ಪ್ರಗತಿಪರ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry