ವೇಗ-ಸಾಹಸದ ಜೀಪ್ ರೋಮಾಂಚನ

7

ವೇಗ-ಸಾಹಸದ ಜೀಪ್ ರೋಮಾಂಚನ

Published:
Updated:

ಗುಲ್ಬರ್ಗ: ಮೈ ನವಿರೇಳಿಸುವ ವೇಗ ಮತ್ತು ಸಾಹಸದ ರಸ್ತೆಯೇತರ ಜೀಪು ಚಾಲನೆಯ ರಾಷ್ಟ್ರೀಯ ಮಟ್ಟದ `‘G-EEP- Off Road Event 2012 Gulbarga Expeditions, Escapades & Promotions’  (ಜೀಪ್ ಗುಲ್ಬರ್ಗ ಸವಾರಿ, ಭಂಡ ಸಾಹಸ ಮತ್ತು ಪ್ರವರ್ತನೆ) ಸ್ಪರ್ಧೆಗೆ ಸೂರ್ಯ ನಗರಿ ಸಜ್ಜಾಗುತ್ತಿದೆ.ಈಗಾಗಲೇ ಸ್ಥಳೀಯ ಸ್ಪರ್ಧಿಗಳು ರಾಷ್ಟ್ರದ ವಿವಿಧೆಡೆ ಪಾಲ್ಗೊಳ್ಳುತ್ತಿದ್ದರೂ, ಗುಲ್ಬರ್ಗದಲ್ಲಿ ಚೊಚ್ಚಿಲ ಬಾರಿಗೆ ರಸ್ತೆಯೇತರ ಚಾಲನೆಯ ಸ್ಪರ್ಧೆ ನಡೆಯುತ್ತಿದೆ. ರೋಮಾಂಚನದ ಸಾಹಸವನ್ನು ವೀಕ್ಷಿಸುವ ಅವಕಾಶವು ನಗರದ ನಾಗರಿಕರಿಗೆ ಬಂದಿದೆ.

 

ಏನಿದು?:  ಗುಲ್ಬರ್ಗದ ರಸ್ತೆಯಲ್ಲೇ ವಾಹನ ಚಲಾಯಿಸಲು ಹೆದರಬೇಕು! ಇನ್ನು ನೀರು ಹರಿದು ಹೋದ ಸ್ಥಳ, ಎರಡು ಅಡಿಗೂ ಹೆಚ್ಚು ಕೆಸರು, ಏಕಾಏಕಿ ಸುಮಾರು ಎರಡು ಮೀಟರ್ ಎತ್ತರದಿಂದ ಧುಮುಕುವುದು, ಅಲಗಂಚಿನಂತೆ ಇರುವ ರಸ್ತೆಯಲ್ಲಿ ಚಲಿಸುವುದು, ಏಕಾಏಕಿ ಐದು ಅಡಿ ಹೊಂಡಕ್ಕೆ ಬಿದ್ದು ಏಳುವುದು, 60 ಡಿಗ್ರಿ ಕೋನದ ಗುಡ್ಡ, ಬಂಡೆಯ ಮೇಲೆ ಚಲಿಸುವುದು, ಹೊಂಡಗಳಲ್ಲೇ ಸಾಗುವುದು ಹೀಗೆ ಸಾಹಸಮಯವಾಗಿ ಸಾಗುವುದೇ ಕಷ್ಟ. ಅದುವೇ ರಸ್ತೆಯೇತರ ಚಾಲನಾ ಸ್ಪರ್ಧೆ (ಆಫ್ ರೋಡ್ ಈವೆಂಟ್). ಅಂತಹ ಮಾದರಿಯ ಸಾಹಸ ನಡೆಸಲು ಗುಲ್ಬರ್ಗದ ಶಿವಶರಣಪ್ಪ ಉಪ್ಪಿನ ತೋಟದಲ್ಲಿ ಟ್ರ್ಯಾಕ್‌ನ ತಯಾರಿ ನಡೆಯುತ್ತಿದೆ.ಜೀಪ್:`ಗುಲ್ಬರ್ಗ ನೇಚರ್ ಅವೇರ್‌ನೆಸ್ ಆ್ಯಂಡ್ ಅಡ್ವೆಂಚರ್ ಸ್ಪೋರ್ಟ್ ಕ್ಲಬ್~ ತಂಡವು ಕಳೆದ ಕೆಲವು ವರ್ಷಗಳಿಂದ ಇಂತಹ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಇದೇ ತಂಡದ ಮಲ್ಲಿಕಾರ್ಜುನ ಸಜ್ಜನ ಶೆಟ್ಟಿ, ಕುಶಾಲ್ ಗುತ್ತೇದಾರ್ ಮತ್ತು ಮತೀನ್ ಪಟೇಲ್ ತಂಡವು ಚೆನ್ನೈನ ಪಲಾರ್‌ನಲ್ಲಿ 400 ಕಿ.ಮೀ. ನದಿ ತೀರದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ `ಮೊದಲ ಬಾರಿಗೆ ಸ್ಪರ್ಧಿಸಿದ ಅತ್ಯುತ್ತಮರು~ ಮತ್ತು `ಪರಿಸರ ಪ್ರೇಮಿ ತಂಡ~ ಪ್ರಶಸ್ತಿ ಗೆದ್ದಿದೆ. ಇದೇ ತಂಡದಲ್ಲಿ  ವೈಭವ್‌ರೆಡ್ಡಿ, ಮಹ್ಮದ್ ಇದ್ರೀಸ್ ಭಾಗವಾನ್, ಸೈಯ್ಯದ್ ಜಾಫರ್ ಹುಸೇನ್ ಮತ್ತಿತರರು ಇದ್ದಾರೆ.ಇವರೆಲ್ಲ ಸೇರಿಕೊಂಡು ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ಗುಲ್ಬರ್ಗದ ಶಿವಶರಣ ಉಪ್ಪಿನವರ ತೋಟ ಹಾಗೂ ಕಮಲಾಪುರದ ಕುದುರೆಮುಖ ಗುಡ್ಡದಲ್ಲಿ ಅ.5 ಮತ್ತು 6ರಂದು ಸ್ಪರ್ಧೆಯನ್ನು ಆಯೋಜಿಸಿದೆ. ಕೋಲ್ಕೊತ್ತಾ, ಮುಂಬಯಿ, ಚೆನ್ನೈ, ಹೈದರಾಬಾದ್ ಮತ್ತಿತರ  ಕ್ಲಬ್‌ಗಳ ತಂಡಗಳು ಆಗಮಿಸಲಿವೆ. ಗುಡ್ಡಗಾಡು ಪ್ರದೇಶವಾದ ಹಿಮಾಲಯದ ತಪ್ಪಲು, ಮಡಿಕೇರಿ, ಚಿಕ್ಕಮಗಳೂರು ಮತ್ತಿತರ ಪ್ರದೇಶಗಳಲ್ಲಿ ಇಂತಹ ಸ್ಪರ್ಧೆಗಳು ಸಾಮಾನ್ಯ. ಆದರೆ ಮೊದಲ ಬಾರಿಗೆ ಬಯಲು ಸೀಮೆಯ ಗುಲ್ಬರ್ಗದಲ್ಲಿ ಈ ಸಾಹಸವನ್ನು ಈ ತಂಡವು ನಡೆಸಿಕೊಡುತ್ತಿದೆ. ಮೊದಲ ದಿನ ಉಪ್ಪಿನ ತೋಟದಲ್ಲಿ ಹಾಗೂ ಎರಡನೇ ದಿನ ಕಮಲಾಪುರದಲ್ಲಿ ಸ್ಪರ್ಧೆ ನಡೆಯಲಿದೆ.ಟ್ರ್ಯಾಕ್:


ಇಂಗ್ಲಿಷ್‌ನಲ್ಲಿ ಜೀಪ್ ಬರೆದಂತೆ ಹೋಲುವ ಸುಮಾರು 2 ಕಿ.ಮೀ. ಉದ್ದದ ಟ್ರ್ಯಾಕ್ ಸಿದ್ಧಪಡಿಸಲಾಗುತ್ತಿದೆ. ಈ ಟ್ರಾಕ್‌ನ ಆರಂಭದಲ್ಲಿ ಸುಮಾರು 2ರಿಂದ 4 ಅಡಿ ಆಳದ ಕೆಸರು ನೀರಿನ ಹಾದಿ ನಿರ್ಮಿಸಲಾಗಿದೆ. ಆ ಬಳಿಕ ಸವಾರರು ಲಾರಿ ಚಕ್ರಗಳನ್ನು ಹಾಕಿ ನಿರ್ಮಿಸಿದ ರಸ್ತೆಯ ಮೇಲೆ ಸಾಗಬೇಕು. ತಕ್ಷಣವೇ ಸಿಮೆಂಟ್ ಪೈಪ್‌ಗಳ ಮೇಲೆ ನಾಜೂಕಾಗಿ ಚಲಾಯಿಸಬೇಕು. ಏಕಾಏಕಿ ಎರಡು ಮೀಟರ್ ಎತ್ತರ ರಸ್ತೆ ಸಾಗಿ ಒಮ್ಮೆಲೆ ಕೆಳಗಿಳಿಯಬೇಕು. ವೇಗವಾಗಿ ಬಂದ ಚಾಲಕರು ಎತ್ತರದಿಂದ ದೂರಕ್ಕೆ ಜೀಪನ್ನು ಹಾರಿಸಬೇಕು. ತಕ್ಷಣವೇ ಸುಮಾರು ಐದು ಅಡಿಯ ಹೊಂಡಕ್ಕೆ ಜೀಪು ಬೀಳಿಸಿಕೊಂಡು ಚಲಾಯಿಸಬೇಕು. ಈ ರೀತಿಯಲ್ಲಿ ಸ್ಪರ್ಧೆಯ ಸುತ್ತು ಸಾಗುತ್ತದೆ.ಈ ಎಲ್ಲ ಸಾಹಸವನ್ನು ಮುಗಿಸಿಕೊಂಡು ಬರಲು `ಟಿಡಿಎಸ್~ (ಸಮಯ ದೂರ ಮತ್ತು ವೇಗ) ನೀಡಲಾಗುತ್ತದೆ. ಇದರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಬ ಎರಡು ವಿಭಾಗ ಇರುತ್ತದೆ. ಒಟ್ಟಾರೆ ಯಾರು ಹೆಚ್ಚಿನ ವೇಗ ಮತ್ತು ಕಡಿಮೆ ಅವಧಿಯಲ್ಲಿ ನೀಡಿದ ದೂರವನ್ನು ಪೂರೈಸುತ್ತಾರೋ ಅವರು ಪ್ರಶಸ್ತಿಗೆ ಪಾತ್ರರಾಗುತ್ತಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ (ಮೊ.9343549444) ಸಂಪರ್ಕಿಸಬಹುದು.ಹಳೇ ಕಾಲದ ಮಿಲಿಟರಿ ಜೀಪು ಸೇರಿದಂತೆ ಸುಮಾರು 70ಕ್ಕೂ ಅಧಿಕ ಜೀಪುಗಳನ್ನು ಹೊಂದಿರುವ ಭಾರತೀಯ ಜೀಪರ್ ಎಂದೇ ಖ್ಯಾತವಾಗಿರುವ ಉದಯ ಭಾನ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಪಾಲ್ಗೊಳ್ಳಲಿದ್ದಾರೆ. ಹಳೇ ಕಾಲದಿಂದ ಇಂದಿನ ತನಕದ ಹಲವು ಜೀಪ್‌ಗಳು ಸ್ಪರ್ಧೆಗೆ ಬರಲಿವೆ. ಸೂರ್ಯನಗರಿ ಜನತೆಗೆ ಸಾಹಸ ನೋಡುವ ಭಾಗ್ಯವೊಂದು `ಜೀಪ್~ನಲ್ಲಿ ಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry