ಕಲ್ಲಿದ್ದಲು ಹಗರಣ ಬಿಜೆಪಿ ಅಪಪ್ರಚಾರ

7

ಕಲ್ಲಿದ್ದಲು ಹಗರಣ ಬಿಜೆಪಿ ಅಪಪ್ರಚಾರ

Published:
Updated:

ಚಿಂಚೋಳಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಬಿಜೆಪಿ ಕಲ್ಲಿದ್ದಲು ಹಗರಣದ ಕುರಿತು ವ್ಯರ್ಥ ಆರೋಪ ಮಾಡುತ್ತಿದೆ. ಅದರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.ತಾಲ್ಲೂಕಿನ (ಸೇಡಂ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯ) ಗಡಿಕೇಶ್ವಾರ್ ಗ್ರಾಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಯಾವ ನೀತಿ, ನಿಯಮ ಹಾಗೂ ಪದ್ಧತಿಯಲ್ಲಿ ಕಲ್ಲಿದ್ದಲು ಹಂಚಿಕೆ ಮಾಡಲಾಗಿತ್ತೋ ಅದೇ ರೀತಿಯಲ್ಲಿ ಯುಪಿಎ ಸರ್ಕಾರ ಮಾಡಿದೆ. ಆದರೆ ತಮ್ಮ ಬಿಜೆಪಿ ಸರ್ಕಾರ ಮಾಡಿದ್ದು ತಪ್ಪಲ್ಲ ಕಾಂಗ್ರೆಸ್ ಸರ್ಕಾರ ಮಾಡಿದರೇ ತಪ್ಪು ಎನ್ನುವುದು ಯಾವ ನ್ಯಾಯ ಎಂದು ತಿಳಿಸಿ ಅಪಪ್ರಚಾರ ಸಲ್ಲದು ಎಂದರು.ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಅರುಣ ಶೌರಿಯವರೇ ಯುಪಿಎ ಸರ್ಕಾರದ ನೀತಿ ಸಮರ್ಥಿಸುತ್ತಿದ್ದಾರೆ. ಹೀಗಿರುವಾಗ ಕಲ್ಲಿದ್ದಲು ಹಗರಣ ಎಂದು ದೂರುತ್ತ ಸಾವಿರಾರು ಕೋಟಿ ಹೊಡೆದರು ಎನ್ನುವುದರಲ್ಲಿ ಯಾವುದೇ ಹುರುಳಿಲ್ಲ ಎಂದರು.ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ರಾಜ್ಯದ ಅಂದಿನ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನೇತೃತ್ವದಲ್ಲಿ ದೆಹಲಿಗೆ ತೆರಳಿ ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಲ್ಲಿಸಿದ ಪ್ರಸ್ತಾವನೆಗೆ ಅಂದಿನ ಗೃಹಮಂತ್ರಿ ಬಿಜೆಪಿಯ ಲಾಲ್‌ಕೃಷ್ಣ ಅಡ್ವಾಣಿ ತಿರಸ್ಕರಿಸಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಾವು ಹಾಗೂ ಮಾಜಿ ಸಿ.ಎಂ. ಬೀದರ್ ಸಂಸದ ಎನ್. ಧರ್ಮಸಿಂಗ್ ಕೂಡಿ ಹೈಕ ಭಾಗದ ಕುರಿತು ವಾಸ್ತವಾಂಶ ಅರಿಕೆ ಮಾಡಿಕೊಟ್ಟಿದ್ದರಿಂದ 371ನೇ ಕಲಂ ತಿದ್ದುಪಡಿ ಯಾಗುತ್ತಿದೆ ಎಂದರು.ಕಾಂಗ್ರೆಸ್ ಪಕ್ಷ ಜನ ಸಾಮಾನ್ಯರ ಪಕ್ಷವಾಗಿದೆ. ಜನಪರ ಕಾಳಜಿಯಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಹೀಗಾಗಿ ನಮಗೆ ನಿಮ್ಮ ಬೆಂಬಲ ಬೇಕಾಗಿದೆ. 2008ರಲ್ಲಿ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಮಠಾಧೀಶರು ಒಂದಾಗಿ ನಮ್ಮ ವಿರುದ್ಧ ನಿಂತರೂ ನೀವು(ಜನ) ನಮ್ಮ ಕೈಬಿಟ್ಟಿಲ್ಲ. ಶೇ.34ರಷ್ಟು ಮತಗಳು ನೀಡಿದ್ದೀರಿ. ಆದರೆ ಬಿಜೆಪಿ ಶೇ.33ರಷ್ಟು ಮತ ಪಡೆದು ವಾಮ ಮಾರ್ಗದಿಂದ ಅಧಿಕಾರಿ ಹಿಡಿಯಿತು ಎಂದು ಟೀಕಿಸಿದರು.

 

ಕೆಪಿಸಿಸಿ ಸದಸ್ಯ ಮಾಜಿ ಶಾಸಕ ಕೈಲಾಸ ವೀರೇಂದ್ರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿದರು. ಡಾ. ಜಿ.ರಾಮಕೃಷ್ಣ, ಬಾಬುರಾವ್ ಚವ್ಹಾಣ, ನಾಗೇಶ್ವರರಾವ್ ಮಾಲಿ ಪಾಟೀಲ ಮುಂತಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry