ಬಿಜೆಪಿ ಸರ್ಕಾರದಿಂದ ಜನತೆ ಭ್ರಮ ನಿರಸನ

7

ಬಿಜೆಪಿ ಸರ್ಕಾರದಿಂದ ಜನತೆ ಭ್ರಮ ನಿರಸನ

Published:
Updated:

ಜೇವರ್ಗಿ: ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ರಾಜ್ಯದ ಜನತೆ ಭ್ರಮ ನಿರಸನ ಗೊಂಡಿದ್ದು, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜಾತ್ಯತೀತ ಜನತಾದಳಕ್ಕೆ ಉಜ್ವಲ ಭವಿಷ್ಯ ಕಾದಿದೆ~ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ರಾಜ್ಯ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.ಮಂಗಳವಾರ ಬರಗಾಲದಿಂದ ತತ್ತರಿಸಿದ ರೈತರ ನೆರವಿಗಾಗಿ ಜಾತ್ಯತೀತ ಜನತಾದಳ ತಾಲ್ಲೂಕು ಸಮಿತಿ ಹಮ್ಮಿಕೊಂಡಿದ್ದ ಜೇವರ್ಗಿಯಿಂದ-ಗುಲ್ಬರ್ಗದ ವರೆಗೆ ರೈತರ ಪಾದಯಾತ್ರೆಗೂ ಮುನ್ನ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.ಬರಗಾಲದಿಂದ ಬೆಳೆ ಹಾನಿಗೀಡಾದ ರೈತರಿಗೆ ತಕ್ಷಣ ಬೆಳೆವಿಮೆ ವಿತರಿಸಬೇಕು. ಕಳೆದ ನಾಲ್ಕುವರೆ ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿಲ್ಲ. ತಾಲ್ಲೂಕಿನ ಪ್ರಮುಖ 7ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಅವರು ಪಾದಯಾತ್ರೆಗೆ ಮುಂದಾಗಿರುವುದನ್ನು ಯತ್ನಾಳ ಶ್ಲಾಘಿ ಸಿದರು.ಜನವಿರೋಧಿ, ರೈತವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಧೋರಣೆಯನ್ನು ಯತ್ನಾಳ ಕಟುವಾಗಿ ಟೀಕಿಸಿದರು. ಮುಂಬರುವ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾದರೆ ರೈತರ ಸಾಲ ಸಂಪೂರ್ಣ ಮನ್ನಾ ಆಗಲಿದೆ. ರಾಜ್ಯದಲ್ಲಿನ ಪ್ರಮುಖ ನೀರಾವರಿ ಯೋಜನೆಗಳು ಪೂರ್ಣಗೊಳಿಸಲಾಗುವುದೆಂದು ಯತ್ನಾಳ ತಿಳಿಸಿದರು.ಹೋರಾಟದ ನೇತೃತ್ವ ವಹಿಸಿದ್ದ ಜಿಲ್ಲಾ ಜೆಡಿಎಸ್ ಪಕ್ಷದ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ರೈತರ ಸಾಲ ಮನ್ನಾ ಮಾಡಬೇಕು. ಬೆಳೆ ಹಾನಿಗೀಡಾದ ರೈತರಿಗೆ ಬೆಳೆವಿಮೆ ಮಂಜೂರು ಮಾಡಬೇಕು. ಶತಕಗಳಿಂದ ನೆನೆಗುದಿಗೆ ಬಿದ್ದಿರುವ ತಾಲ್ಲೂಕಿನ ಮಲ್ಲಾಬಾದ ಏತ ನೀರಾವರಿ ಯೋಜನೆಯನ್ನು ಕಾಲಮೀತಿಯಲ್ಲಿ ಪೂರ್ಣಗೊಳಿಸಬೇಕು. ಕೋನಾಹಿಪ್ಪರಗಾ-ಸರಡಗಿ ಬ್ರಿಜ್ ಕಂ ಬ್ಯಾರೇಜ್ ಕಾಮಗಾರಿಗೆ ಮಂಜೂರಾತಿ ನೀಡಬೇಕು. ಆಹಾರ ಸಂಸ್ಕರಣಾ ಘಟಕಕ್ಕೆ ಅಗತ್ಯ ಅನುದಾನ

ಬಿಡುಗಡೆಗೊಳಿಸಬೇಕು. ತಾಲ್ಲೂಕಿನಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಕಾಲುವೆಗಳನ್ನು ನವೀಕರಿಸಬೇಕು.ಯಡ್ರಾಮಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಬಹಿರಂಗ ಸಭೆಯಲ್ಲಿ ಮಾಜಿ ಸಚಿವ ಹಾಗೂ ವಿಜಾಪುರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಸಿ.ಮನಗೂಳಿ,

ಯಾದಗಿರಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ನಾಗಣ್ಣಗೌಡ ಕಂದಕೂರ, ಕಾರ್ಯಾಧ್ಯಕ್ಷ ಶರಣಪ್ಪ ಸಲಾದಪುರ, ಮುಖಂಡರಾದ ದೇವೆಗೌಡ ತೆಲ್ಲೂರ, ಗೋವಿಂದಭಟ್ಟ ಪೂಜಾರಿ, ಚಂದ್ರಕಾಂತ ಗದ್ದಗಿ,

ಶರಣಪ್ಪ ತಳವಾರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಶಿವಾನಂದ ದ್ಯಾಮಗೊಂಡ, ಕಾರ್ಯಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಎಸ್.ಕೆ.ಹೇರೂರ, ಎಸ್.ಎಸ್.ಸಲಗರ್ ಸೈಯದ್‌ಪಟೇಲ್ ಮಾಲಿಪಾಟೀಲ, ಸದಾನಂದ ಪಾಟೀಲ, ಮಹಾಂತಯ್ಯ ಹಿರೇಮಠ, ಎ.ಬಿ.ಹಿರೇಮಠ, ಚಂದ್ರಶೇಖರ ಹಿರೇಮಠ, ಪ್ರಕಾಶ ಪಾಟೀಲ ಯತ್ನಾಳ, ಬಸವರಾಜ ಹಂಗರಗಿ ಮತ್ತಿತರರು ಉಪಸ್ಥಿತರಿದ್ದರು.ಪಾದಯಾತ್ರೆ ರದ್ದು: ಅ.4ರಂದು ಗುಲ್ಬರ್ಗದಲ್ಲಿ ನಡೆಯುವ ಸಚಿವ ಸಂಪುಟ ಸಭೆಯನ್ನು ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮುಂದೂಡಿದ್ದರಿಂದ ಜೇವರ್ಗಿಯಿಂದ-ಗುಲ್ಬರ್ಗದವರೆಗೆ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡರು. ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಸಹಾಯಕ ಆಯುಕ್ತ ಹರ್ಷ ಶೆಟ್ಟಿ ಅವರಿಗೆ 7ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಬಸನಗೌಡ ಪಾಟೀಲ ಯತ್ನಾಳ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ತಹಶೀಲ್ದಾರ್ ಡಿ.ವೈ.ಪಾಟೀಲ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾಶಿನಾಥ ತಳಕೇರಿ, ಜೇವರ್ಗಿ ಸರ್ಕಲ್ ಇನ್‌ಸ್ಪೆಕ್ಟರ್ ರಾಮಣ್ಣ ಸಾವಳಗಿ, ಜೇವರ್ಗಿ ಪಿಎಸ್‌ಐ ಸುಧೀರ ಬೆಂಕಿ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry