ಜೆಡಿಎಸ್ ಪಾದಯಾತ್ರೆ ರದ್ದು

7

ಜೆಡಿಎಸ್ ಪಾದಯಾತ್ರೆ ರದ್ದು

Published:
Updated:

ಜೇವರ್ಗಿ: ಇದೇ 4ರಂದು ಗುಲ್ಬರ್ಗದಲ್ಲಿ ನಡೆಯಬೇಕಿದ್ದ ರಾಜ್ಯ ಸಚಿವ ಸಂಪುಟ ಸಭೆಯನ್ನು ಕಾವೇರಿ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಮುಂದೂಡಿದ್ದರಿಂದ ಉದ್ದೇಶಿತ ಜಾತ್ಯತೀತ ಜನತಾದಳ ತಾಲ್ಲೂಕು ಸಮಿತಿ ಪಾದಯಾತ್ರೆಯನ್ನು ರದ್ದುಪಡಿಸಲಾಯಿತು.ತಾಲ್ಲೂಕಿನ ಪ್ರಮುಖ 7ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ನೇತೃತ್ವದಲ್ಲಿ ಸಹಸ್ರಾರು ರೈತರು ಜೇವರ್ಗಿಯಿಂದ- ಗುಲ್ಬರ್ಗವರೆಗೆ ಪಾದಯಾತ್ರೆ ನಡೆಸಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ ಸಚಿವ ಸಂಪುಟ ಸಭೆ ಮಂದೂಡಿದ ಬಗ್ಗೆ ಸೋಮವಾರ ರಾತ್ರಿ ದೊರೆತ ನಂತರ ಗೊಂದಲಕ್ಕೀಡಾದ ಜೆಡಿಎಸ್ ಮುಖಂಡರು, ಯಥಾಸ್ಥಿತಿ ಪಾದಯಾತ್ರೆ ಹೋರಾಟ ನಡೆಸಲಾಗುವುದು. ಅ.4ರಂದು ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುವ ತೀರ್ಮಾನಕ್ಕೆ ಬಂದಿದ್ದರು.ಪೂರ್ವಯೋಜಿತ ಹೋರಾಟದಂತೆ ಬೆಳಿಗ್ಗೆಯಿಂದಲೇ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಹಸ್ರಾರು ಜನ ಪಕ್ಷದ ಕಾರ್ಯಕರ್ತರು, ರೈತರು, ಅಭಿಮಾನಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಜೆಡಿಎಸ್ ಕಚೇರಿ ಬಳಿ ಜಮಾಯಿಸಿದರು. ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಪಕ್ಷದ ರಾಜ್ಯ ಮಟ್ಟದ ಮುಖಂಡರು ಮೊದಲು ಜೆಡಿಎಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದರು. ನಂತರ ರಾಷ್ಟ್ರಪೀತ ಮಹಾತ್ಮಾಗಾಂಧಿ ಹಾಗೂ ದೇಶದ ಮಾಜಿ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರಿ ಅವರ ಜಯಂತಿ ನಿಮಿತ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.ಮಧ್ಯಾಹ್ನ 1ಕ್ಕೆ ಪ್ರಾರಂಭವಾದ ಬಹಿರಂಗ ಸಭೆ 3.30ಕ್ಕೆ ಪೂರ್ಣಗೊಂಡಿತು. ಪಕ್ಷದ ಹಿರಿಯ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರ ಸೂಚನೆ ಮೇರೆಗೆ ಪಾದಯಾತ್ರೆ ಮೊಟಕುಗೊಳಿಸಿರುವುದಾಗಿ ಕೇದಾರಲಿಂಗಯ್ಯ ಹಿರೇಮಠ ನೆರೆದ ಜನರಿಗೆ ಸ್ಪಷ್ಟಪಡಿಸಿದರು.ತಾಲ್ಲೂಕಿನ ಅನೇಕ ಗ್ರಾಮಗಳಿಂದ ಪಾದಯಾತ್ರೆಗೆ ತೆರಳಲು ಸಿದ್ಧತೆ ಮಾಡಿಕೊಂಡು ಬಂದಿದ್ದ ಪಕ್ಷದ ಕಾರ್ಯಕರ್ತರು, ರೈತಾಪಿ ವರ್ಗದವರು ಕೆಲ ಕಾಲ ಗೊಂದಲಕ್ಕೀಡಾಗಿದ್ದರು. ನಂತರ ಬಂದ ದಾರಿಗೆ ಸುಂಕವಿಲ್ಲದಂತೆ ಪಕ್ಷದ ವತಿಯಿಂದ ಖಾಸಗಿ ಶಾಲೆಯಲ್ಲಿ ತಯಾರಿಸಿದ್ದ ಅಡುಗೆಯನ್ನು ಸವಿದು, ತಮ್ಮ ತಮ್ಮ ವಾಹನಗಳಲ್ಲಿ ಗ್ರಾಮಗಳಿಗೆ ತೆರಳಿದರು. ಉದ್ದೇಶಿತ ಐತಿಹಾಸಿಕ ಪಾದಯಾತ್ರೆ ಹೋರಾಟ ಪಕ್ಷದ ಬಹಿರಂಗ ಸಭೆಯಾಗಿ ಮಾರ್ಪಟ್ಟಿದ್ದರಿಂದ ಸಭೆಯಲ್ಲಿದ್ದ ಅನೇಕ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry