ಕುರಿಕೋಟಾ ಸೇತುವೆ: ಆಮೆಗತಿಯಲ್ಲಿ ಕಾಮಗಾರಿ

7

ಕುರಿಕೋಟಾ ಸೇತುವೆ: ಆಮೆಗತಿಯಲ್ಲಿ ಕಾಮಗಾರಿ

Published:
Updated:
ಕುರಿಕೋಟಾ ಸೇತುವೆ: ಆಮೆಗತಿಯಲ್ಲಿ ಕಾಮಗಾರಿ

ಕಮಲಾಪುರ: ರಾಷ್ಟ್ರೀಯ ಹೆದ್ದಾರಿ 218 ಬೀದರ್-ಶ್ರೀರಂಗ ಪಟ್ಟಣ ಮಧ್ಯದ ಕುರಿಕೋಟಾದ ನಿಜಾಮರ ಕಟ್ಟಡದ ಸೇತುವೆಯ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕಳೆದ ಜುಲೈಯಿಂದ ಈವರೆಗೆ ಮೂರು ತಿಂಗಳ ಕಾಲ ಕಳೆದರೂ ಪ್ರಯಾಣಿಕರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮೆಹಬೂಬ ಶಹ ಕುರಿಕೋಟಾ, ಸಂತೋಷ ಸಾಹು ಆರೋಪಿಸಿದ್ದಾರೆ.ಸೇತುವೆ ಕಾಮಗಾರಿ ನಡೆಯುತ್ತಿದೆ. ಆದರೆ ಗುತ್ತಿಗೆದಾರರಿಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎರಡು ತಿಂಗಳಿಂದ ಯಾವುದೇ ಮಾರ್ಗದರ್ಶನ ನೀಡಿಲ್ಲ. ಹಣವಿಲ್ಲದೆ ಮೂರು ಕೋಟಿ ರೂಪಾಯಿ ಮೊತ್ತದ ಕಾಮಗಾರಿ ನಡೆದಿದೆ ಎಂದು ಹೆದ್ದಾರಿ ಇಲಾಖೆ ಎಂಜಿನಿಯರ್ ದೇವಿದಾಸ ಚವ್ಹಾಣ ತಿಳಿಸಿದರು.ಲೋಕೋಪಯೋಗಿ ಮಾರ್ಗಕ್ಕೆ ಕುತ್ತು: ಈ ಸೇತುವೆಯಲ್ಲಿ ಭಾರವಾದ ವಾಹನಗಳಿಗೆ ನಿಷೇಧ ಮಾಡಿದ್ದರೂ ಪ್ರತಿದಿನ ಹಲವಾರು ಭಾರವಾದ ವಾಹನಗಳು ಸಂಚರಿಸುತ್ತಿವೆ. ಸ್ಥಳದಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಇರುತ್ತಾರೆ. ಆದರೂ ಹಲವಾರು ಭಾರವಾದ ವಾಹನಗಳು ಸಂಚರಿಸುತ್ತಿವೆ. ಹೀಗೆ ವಾಹನಗಳು ಪ್ರಯಾಣ ಮಾಡಿದಲ್ಲಿ ಸೇತುವೆ ಕುಸಿದು ಬೀಳುತ್ತದೆ ಎಂದು ಎಂಜಿನಿಯರೊಬ್ಬರು ತಿಳಿಸಿದರು.ಈ ದಾರಿಯಲ್ಲಿ ಸಾಮಾನ್ಯ ಜನರ ಪ್ರತಿದಿನ ಸಂಚಾರಕ್ಕೆ ಭಾರಿ ತೊಂದರೆಯಾಗುತ್ತಿದೆ. ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ. ಖಾಸಗಿ ವಾಹನಗಳ ಮಾಲೀಕರು ಮನಬಂದಂತೆ ಹಣ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಸರಿಯಾದ ಸಮಯಕ್ಕೆ ವಾಹನ ಸಹ ನಡೆಸುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಸೇತುವೆ ದುರಸ್ತಿಗಾಗಿ ಭೋಪಾಲ್, ಹೈದರಾಬಾದ್ ಹಾಗೂ ಬೆಂಗಳೂರಿನಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ  ತಜ್ಞರು ಆಗಮಿಸಿ ವರದಿ ನೀಡಿದ್ದಾರೆ. ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೇಂದ್ರ ಕಾರ್ಮಿಕ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸುವುದಾಗಿ ಭರವಸೆ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.ಒಂದೆಡೆ ಇನ್ನೂ ಮುಗಿಯದ ಗುಲ್ಬರ್ಗ- ಬೀದರ್ ರೈಲ್ವೆ ಮಾರ್ಗ ಕಾಮಗಾರಿ, ಇನ್ನೊಂದೆಡೆ ಅಪಾಯಕಾರಿ ಕುರಿಕೋಟಾ ಸೇತುವೆ, ನೆನೆಗುದಿಗೆ ಬಿದ್ದ ಹೊಸ ಸೇತುವೆಯ ಮಧ್ಯೆ ಬೀದರ್- ಗುಲ್ಬರ್ಗ ನಡುವಿನ ಸಂಚಾರಕ್ಕೆ ಪೆಟ್ಟು ಬಿದ್ದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry