ನಿಯಮಾವಳಿ ಪ್ರಕಾರ ಆಯ್ಕೆಪಟ್ಟಿಗೆ ಆಗ್ರಹ

7

ನಿಯಮಾವಳಿ ಪ್ರಕಾರ ಆಯ್ಕೆಪಟ್ಟಿಗೆ ಆಗ್ರಹ

Published:
Updated:

ಗುಲ್ಬರ್ಗ: ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಪ್ರೌಢಶಾಲೆಗಳಿಗೆ ಚಿತ್ರಕಲಾ ಶಿಕ್ಷಕರ ಆಯ್ಕೆ ಪಟ್ಟಿಯು ಕಾನೂನುಬಾಹಿರವಾಗಿದ್ದು, ಅದನ್ನು ರದ್ದುಪಡಿಸಿ ಸರ್ಕಾರದ ನಿಯಮಾವಳಿ ಪ್ರಕಾರವೇ ಚಿತ್ರಕಲಾ ಶಿಕ್ಷಕರ ಆಯ್ಕೆಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಚಿತ್ರಕಲಾ ಪದವೀಧರ ಹೋರಾಟ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಗುಲ್ಬರ್ಗದಲ್ಲಿ ಬುಧವಾರ ರ‌್ಯಾಲಿ ನಡೆಸಿದರು.ಬಿಎಫ್‌ಎ, ಎಂಎಫ್‌ಎ ಪದವಿ ಪಡೆದ ಅಭ್ಯರ್ಥಿಗಳನ್ನು ಕಾನೂನುಬಾಹಿರವಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ವಿಷಯ ಶಿಕ್ಷಕರ ನೇಮಕಾತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮವನ್ನು ಅನುಸರಿಸಿದ್ದು, ಚಿತ್ರಕಲಾ ಶಿಕ್ಷಕರ ನೇಮಕಾತಿಯಲ್ಲಿ ಅಧಿಕಾರಿಗಳ ತಪ್ಪುಗ್ರಹಿಕೆಯಿಂದಾಗಿ ವಿದ್ಯಾರ್ಹತೆ ಬಗ್ಗೆ ಗೊಂದಲ ಮೂಡಿದೆ.ಅಧಿಕಾರಿಗಳು ಮಾಡಿದ ತಪ್ಪಿನಿಂದ ಚಿತ್ರಕಲಾ ಶಿಕ್ಷಕರ ತರಬೇತಿ ಪಡೆದ (ಎಎಂಜಿಡಿ) ಅಭ್ಯರ್ಥಿಗಳು ಬಹಳ ಸಂಕಷ್ಟದಲ್ಲಿ ಇದ್ದಾರೆ ಎಂದು ಸಮಿತಿಯ ರಾಜ್ಯ ಕಾರ್ಯದರ್ಶಿ ಬಾಬುರಾವ ಚವ್ಹಾಣ ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನೇಮಕಾತಿ ನಿಯಮಾವಳಿ ಪ್ರಕಾರ ಆರ್ಟ್ ಮಾಸ್ಟರ್ (ಎಎಂ) ಅಥವಾ ಡಿಪ್ಲೊಮಾ ಇನ್ ಡ್ರಾಯಿಂಗ್ ಮತ್ತು ಪೇಂಟಿಂಗ್ (ಜಿಡಿ) ತರಬೇತಿ ಹೊಂದಿದವರನ್ನು ನೇಮಕ ಮಾಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಪತ್ರ ರವಾನಿಸಲಾಯಿತು.ಪದಾಧಿಕಾರಿಗಳಾದ ಗುಂಡೇರಾವ ಪಾಟೀಲ, ಮಂಜುನಾಥ ಹೊಸಮನಿ, ಬಸವರಾಜ ಬೆಣ್ಣೆ, ಗೌತಮ ಚಿತ್ತೆಕರ್ ಇತರರು ಪ್ರತಿಭಟನೆಯಲ್ಲಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry