ಸಂಚಾರ ಸ್ಥಗಿತ: ಮತ್ತೆ ಗೋಳಾಟ

7

ಸಂಚಾರ ಸ್ಥಗಿತ: ಮತ್ತೆ ಗೋಳಾಟ

Published:
Updated:
ಸಂಚಾರ ಸ್ಥಗಿತ: ಮತ್ತೆ ಗೋಳಾಟ

ಚಿತ್ತಾಪುರ: ಇಲ್ಲಿಂದ ಗುಲ್ಬರ್ಗ, ಕಾಳಗಿ ಹಾಗೂ ಸೇಡಂ ನಗರ ಪಟ್ಟಣಗಳಿಗೆ ಸಂಪರ್ಕ ಜೋಡಿಸುವ ಮುಖ್ಯ ರಸ್ತೆಯ ಮಾರ್ಗದ ತಾಲ್ಲೂಕಿನ ದಂಡೋತಿ-ತೆಂಗಳಿ ಕ್ರಾಸ್ ನಡುವೆ ರಸ್ತೆಯ ಕೆಸರಲ್ಲಿ ಲಾರಿಗಳೆರಡು  ಪರಸ್ಪರ ಎದುರುಗೊಂಡು ಪಕ್ಕದಿಂದ ಹಾದು ಹೋಗುವ ಸಮಯದಲ್ಲಿ ಸಿಲುಕಿದ್ದರಿಂದ ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆ 11.30ರವರೆಗೆ ಈ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಸಾರ್ವಜನಿಕ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿ ಪರದಾಡಿದರು.ಮೂರ‌್ನಾಲ್ಕು ದಿನಗಳಿಂದ ಹಗಲು ರಾತ್ರಿ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಮಳೆ ಬಂದ ಪರಿಣಾಮ ಇಡೀ ರಸ್ತೆಯು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಹದಗೆಟ್ಟ ರಸ್ತೆಯಲ್ಲಿ ವಾಹನ ಚಾಲಕರು ಸ್ವಲ್ಪವೂ ಎಚ್ಚರ ತಪ್ಪಿದರೆ ವಾಹನ ಸಿಲುಕುವ ಅಪಾಯ ಮತ್ತು ಅನಾಹುತ ತಪ್ಪಿದ್ದಲ್ಲ ಎನ್ನುವಂತೆ ರಸ್ತೆ ತೀರಾ ದುಸ್ಥಿತಿಗೆ ತಲುಪಿದೆ.ದಂಡೋತಿಯಿಂದ ತೆಂಗಳಿ ಕ್ರಾಸ್‌ವರೆಗೆ ಪ್ರಯಾಣಿಸುತ್ತಿದ್ದ ಹಾಸು ಕಲ್ಲು ತುಂಬಿದ ಲಾರಿ ಕೆಸರಲ್ಲಿ ಸಿಲುಕಿದೆ. ಗುಲ್ಬರ್ಗದಿಂದ ಕಿರಾಣಿ ಸಾಮಗ್ರಿ ತುಂಬಿಕೊಂಡು ಚಿತ್ತಾಪುರ ಕಡೆಗೆ ಪ್ರಯಾಣಿಸುತ್ತಿದ್ದ ಲಾರಿ ಅದೇ ಸ್ಥಳದಲ್ಲಿ ಪಕ್ಕದಿಂದ ಸಾಗುವಾಗ ಕೆಸರಲ್ಲಿ ಸಿಲುಕಿದ್ದರಿಂದ ಸಂಚಾರ ಸಂಪೂರ್ಣ ಬಂದ್ ಆಗಿ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು.ರಸ್ತೆಯ ಎರಡೂ ಕಡೆಗೆ ನೂರಾರು ಸಂಖ್ಯೆಯಲ್ಲಿ ಲಾರಿಗಳು ಸಾಲಾಗಿ ನಿಂತಿದ್ದವು. ಲಾರಿಗಳು ಸಿಲುಕಿ ವಾಹನ ಸಂಚಾರಕ್ಕೆ ಅವಕಾಶವಿಲ್ಲದ ಪರಿಣಾಮ ಬೆಳಿಗ್ಗೆ ಶಾಲಾ ಕಾಲೇಜುಗಳಿಗೆ ಹೋಗಬೇಕಾದ ಶಿಕ್ಷಕರು, ವಿದ್ಯಾರ್ಥಿಗಳು, ಉಪನ್ಯಾಸಕರು, ಸರ್ಕಾರಿ ನೌಕರರು, ಬ್ಯಾಂಕ್ ನೌಕರರು, ಸಾರ್ವಜನಿಕ ಪ್ರಯಾಣಿಕರು ಪಡಬಾರದ ತೊಂದರೆ ಅನುಭವಿಸಿದರು.

 

ಈ ಮಾರ್ಗದ ಬಸ್ ಸಂಚಾರ ಹಿಂದಕ್ಕೆ ಪಡೆದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ಮಧ್ಯಾಹ್ನವರೆಗೆ ಶಹಾಬಾದ್ ಮಾರ್ಗವಾಗಿ ಗುಲ್ಬರ್ಗಕ್ಕೆ ಬಸ್ ಸಂಚಾರ ಬದಲಾವಣೆ ಮಾಡಿತ್ತು. ದಂಡೋತಿ ವರೆಗೆ ಬಂದ ಬಸ್ಸುಗಳು ಇವಣಿ ಮಾರ್ಗವಾಗಿ ಗುಲ್ಬರ್ಗಕ್ಕೆ ಪ್ರಯಾಣಿಸಿದವು. ಸಮಯಕ್ಕೆ ಸರಿಯಾಗಿ ತಲುಪಲು ಆಗದ ಪರಿಣಾಮ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ಹೋಗದೆ ಮಾನಸಿಕ ಹಿಂಸೆ ಅನುಭವಿಸಿದರು. ರಸ್ತೆ ನಿರ್ಮಾಣಕ್ಕೆಂದು ಅಗೆದಿರುವ ರಸ್ತೆಯಲ್ಲಿ ಕೇವಲ ಮಣ್ಣು ಇರುವ ಕಡೆಗೆ ಮುರುಮ್ ಹಾಕಿಸಿ ಮಳೆ ಬಂದಾಗ ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಕಾಳಗಿ ಲೋಕೋಪಯೋಗಿ ಇಲಾಖೆ ಅಧಿಕಾರಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಸಮಸ್ಯೆಗೆ ಕೇವಲ ಕಾಮಗಾರಿ ಮಾಡಿಸುತ್ತಿರುವ ಗುತ್ತಿಗೆದಾರರನ್ನೆ ಜವಾಬ್ದಾರಿಯಾಗಿಸಿ ಮೂಕ ಪ್ರೇಕ್ಷಕರಾಗಿದ್ದಾರೆ.ಅದರ ಪರಿಣಾಮ ವಾರದಲ್ಲಿ ಒಂದೆರಡು ಸಲ ಸಂಚಾರ ಬಂದ್ ಆಗಿ ಜನರು ತೊಂದರೆ ಅನುಭವಿಸುವಂತ್ತಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಮಾಡಿದ್ದಾರೆ.  ಗುರುವಾರ ಕಾಳಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಾಮರಾವ ಕುಲ್ಕರ್ಣಿ, ಸಹಾಯಕ ಎಂಜಿನಿಯರ್ ಎನ್.ಎಸ್ ಮಾಳಗಿ ರಸ್ತೆಯ ಬಗ್ಗೆ ಪರಿಶೀಲನೆ ಮಾಡಿ ಹೋದ ನಂತರವೇ ರಾತ್ರಿ ಸಂಚಾರ ಬಂದ್ ಆಗಿದೆ.  ರಸ್ತೆಯ ದುಸ್ಥಿತಿ ಅರಿಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಕಂಡು ಕಾಣದಂತೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ವರ್ತನೆಯಿಂದ ನಮಗೆ ಮಾತ್ರ ತೊಂದರೆ ತಪ್ಪಿದ್ದಲ್ಲ ಎಂದು ಜನರು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry