ಹರನೂರ: ಹೆಪ್ಪುಗಟ್ಟಿದ ಮೌನ

7

ಹರನೂರ: ಹೆಪ್ಪುಗಟ್ಟಿದ ಮೌನ

Published:
Updated:

ಜೇವರ್ಗಿ: ರಾಜ್ಯದೆಲ್ಲೆಡೆ ಬಂದ್ ಆಚರಿಸುತ್ತಿದ್ದರೆ ತಾಲ್ಲೂಕಿನ ಹರನೂರ ಗ್ರಾಮದಲ್ಲಿ ನೀರವ ಮೌನ. ಎಲ್ಲೆಡೆ ರೋದನ. ಮಕ್ಕಳ, ಹಿರಿಯರ, ಸಂಬಂಧಿಕರ, ಗೆಳೆಯರ, ಬಂಧುಗಳ ಆಕ್ರಂದನ. ಮೌನ ಮಡುಗಟ್ಟಿತ್ತು. ಆಗಸದಲ್ಲಿ ಮೋಡ ಕವಿದಿದ್ದರೆ, ಊರೆಲ್ಲ ದುಃಖದಿಂದ ಕಣ್ಣೀರಾಗಿತ್ತು. ವಿಧಿಯ ಆಟಕ್ಕೆ ಉತ್ತರಿಸುವವರಿಲ್ಲ. ಸಂತೈಸುವವರಿಗೂ ನೋವು ತಡೆದುಕೊಳ್ಳಲು ಸಾಧ್ಯ ಆಗುತ್ತಿಲ್ಲ.ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರ ಮುಗಿಸಿ ಶುಕ್ರವಾರ ರಾತ್ರಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಲಾರಿ-ಜೀಪು ಮುಖಾಮುಖಿಯಲ್ಲಿ ಮೃತಪಟ್ಟ 13 ಸೋದರ ಸಂಬಂಧಿಗಳ ಅಂತ್ಯಸಂಸ್ಕಾರವು ಶನಿವಾರ ಮಧ್ಯಾಹ್ನ 12 ಗಂಟೆಗೆ ಹರನೂರ ಗ್ರಾಮದಲ್ಲಿ ನೆರವೇರಿತು.ಗ್ರಾಮದ ಹೊರವಲಯದಲ್ಲಿ ಒಂದೇ ಬೃಹದಾಕಾರದ ಹೊಂಡ ತೆಗೆದು, ವಿಧಿವಿಧಾನಗಳನ್ನು ಪೂರೈಸಿದ ಬಳಿಕ 13 ಮಂದಿಯ ಶವಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಯಿತು. ಅಂತ್ಯಸಂಸ್ಕಾರಕ್ಕೆ ಸುಮಾರು 12 ಸಾವಿರ ಮಂದಿ ಮೂಕ ಸಾಕ್ಷಿಯಾದರು. ಮಾತು ಮೌನವಾಗಿತ್ತು. ದುಃಖತಪ್ತ ಮುಖದ ಭಾವನೆಗಳೇ ನೋವಿನ ಕತೆ ಹೇಳುತ್ತಿದ್ದವು. ಮರಳಲೇ ಇಲ್ಲ: ಈ ದುರ್ಘಟನೆಯು ಹುಮನಾಬಾದ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಸೊನ್ನ ಕ್ರಾಸ್-ಹಿಪ್ಪರಗಾ (ಎಸ್.ಎನ್) ಮಧ್ಯೆ ಸಂಭವಿಸಿತ್ತು. ವಿಜಾಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಯರಗಲ್ (ಬಿ.ಕೆ) ಗ್ರಾಮದಲ್ಲಿ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಶುಕ್ರವಾರ ಮುಂಜಾನೆ ಗ್ರಾಮದ ಸುಮಾರು 19 ಮಂದಿ ಒಂದೇ ಜೀಪಿನಲ್ಲಿ ತೆರಳಿದ್ದರು. ಸಂಬಂಧಿಕರೊಬ್ಬರ ಮರಣದ ಸುದ್ದಿ ತಿಳಿದು ಸೂರ್ಯ ಮೂಡುವಾಗಲೇ ಊರಿನಿಂದ ಹೊರಟಿದ್ದರು.ಚಂದ್ರ ಉದಯಿಸಿದರೂ ಆ ಪೈಕಿ 13 ಮಂದಿ ಮನೆಗೆ ಮರಳಲೇ ಇಲ್ಲ. ಹಾದಿ ಮಧ್ಯವೇ ಇಹಲೋಕ ತ್ಯಜಿಸಿದರು. ಅವರು ಬಂದಿದ್ದರೆ ಹರನೂರ ಎಂದಿನ ಜನಜೀವನಕ್ಕೆ ಮರಳುತ್ತಿತ್ತು. ಈ ನಡುವೆ ಗಂಭೀರ ಗಾಯಗೊಂಡ ಆರು ಮಂದಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.ಕೇಂದ್ರ ಸ್ಥಾನ: ಹೆದ್ದಾರಿ ಸಮೀಪದ ಹರನೂರ ಸ್ಥಳೀಯ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ. ಹೀಗಾಗಿ ದಿನನಿತ್ಯವೂ ಗಿಜಿಗಿಡುತ್ತಿತ್ತು. ಶನಿವಾರ ಸಾವಿರಾರು ಜನ ಸೇರಿದರೂ ಸೂತಕದ ಛಾಯೆಯಲ್ಲಿ ಬಹುತೇಕ ನಿಶ್ಯಬ್ದ. ರಾಜಕೀಯ ಭರಾಟೆಯ ಕೇಂದ್ರವಾಗಿದ್ದ ಗ್ರಾಮ ಪಂಚಾಯಿತಿ ಕಚೇರಿಯ ಮುಂದೆಯೇ 7ಜನ ಪುರುಷರು, 6ಜನ ಮಹಿಳೆಯರ ಶವಗಳನ್ನು ಸಾಲಾಗಿ ಮಲಗಿಸಲಾಗಿತ್ತು.`ಎದ್ದು ಬರುವರೋ~ ಎಂಬ ಕೊನೆಯ ಮನದಾಸೆ ಕುಟುಂಬದವರ ಕಂಗಳಲ್ಲಿ. ಬಾರದ ಲೋಕಕ್ಕೆ ಕಳುಹಿಸಿಕೊಡುವ ಯಾತನೆ. ಎಲ್ಲೆಡೆ ಬಾಡಿದ ಮುಖಗಳು. ಶುಕ್ರವಾರ ರಾತ್ರಿ ಶವಗಳ ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಗ್ರಾಮಕ್ಕೆ ತರಲಾಗಿತ್ತು. ವಾಹನ-ಜನ ಸಾಗರ: ಮೃತರ ಸಂಬಂಧಿಕರು ಬೇರೆ ಬೇರೆ ಗ್ರಾಮಗಳಿಂದ ಜೀಪ್, ಟ್ರಾಕ್ಟರ್, ದ್ವಿಚಕ್ರವಾಹನ, ಟಂಟಂಗಳಲ್ಲಿಹರನೂರ ಗ್ರಾಮಕ್ಕೆ ಬರುತ್ತಿದ್ದರು. ಸವಳಹಳ್ಳದ ಶರಣಬಸವೇಶ್ವರ ದೇವಸ್ಥಾನದಿಂದ-ಹರನೂರ ಗ್ರಾಮದವರೆಗಿನ 5 ಕಿ.ಮೀ. ರಸ್ತೆ ಅಕ್ಷರಶಃ ದಟ್ಟಣೆಯಿಂದ ಕೂಡಿತ್ತು. ಎಲ್ಲಿ ನೋಡಿದರಲ್ಲಿ ಜನ. ಮತ್ತದೇ ಮೌನ.  ಸಾಂತ್ವನ: ಅಂತ್ಯಸಂಸ್ಕಾರದಲ್ಲಿ ಸೊನ್ನದ ಶಿವಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ, ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ, ಕಾಂಗ್ರೆಸ್ ಮುಖಂಡ ಡಾ.ಅಜಯಸಿಂಗ್, ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ, ಜಿ.ಪಂ. ಸದಸ್ಯರಾದ ಶೋಭಾ ಬಾಣಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಕಸ್ತೂರಿಬಾಯಿ ಪಾಟೀಲ ಹರನೂರ,ಮುಖಂಡರಾದ ಬಸವಣ್ಣಪ್ಪ ಗೌನಳ್ಳಿ ರಮೇಶ ವಕೀಲ, ರಾಜಶೇಖರ ಸೀರಿ, ಬಸವರಾಜ ಪಾಟೀಲ ನರಿಬೋಳ, ನಿಂಗಣ್ಣ ನೇರಡಗಿ, ಅಶೋಕ ಸಾಹು ಗೋಗಿ, ಖಾಸಿಂಪಟೇಲ ಮುದವಾಳ, ಎಸ್.ಎಸ್.ಸಲಗರ್, ಶಿವಾನಂದ ದ್ಯಾಮಗೊಂಡ, ಎಸ್.ಕೆ.ಹೇರೂರ, ಶಂಕರ ಕಟ್ಟಿಸಂಗಾವಿ, ದೇವಿಂದ್ರಪ್ಪ ಬಿರಾಳ, ತಮ್ಮಣ್ಣ ಬಾಗೇವಾಡಿ, ಬೈಲಪ್ಪ ನೆಲೋಗಿ, ಮರೆಪ್ಪ ಬಡಿಗೇರ, ತಾ.ಪಂ. ಸದಸ್ಯ ಶರಣಗೌಡ ಮದ್ರಕಿ, ಹರನೂರ ಗ್ರಾ.ಪಂ. ಅಧ್ಯಕ್ಷ ಸಕ್ರೆಪ್ಪಗೌಡ ಪೊಲೀಸ್ ಪಾಟೀಲ, ಶಿವಾನಂದ ಮಾಕಾ, ರೇವಣಸಿದ್ಧಪ್ಪ ಸಂಕಾಲಿ, ನಾಗಣ್ಣ ಗಡ್ಡದ, ನಿಂಗಣ್ಣ ಭಂಡಾರಿ ಹಾಗೂ ಹರನೂರ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry