ಹಾಸ್ಟೆಲ್ ದಿನಗೂಲಿ ನೌಕರರ ಪ್ರತಿಭಟನೆ

7

ಹಾಸ್ಟೆಲ್ ದಿನಗೂಲಿ ನೌಕರರ ಪ್ರತಿಭಟನೆ

Published:
Updated:

ಗುಲ್ಬರ್ಗ: ಸರ್ಕಾರವು ನೀಡುವ ಕನಿಷ್ಠ ಕೂಲಿಯನ್ನು ಮಧ್ಯವರ್ತಿಗಳ ಮೂಲಕ ನೀಡುವುದನ್ನು ಕೈಬಿಟ್ಟು, ಚೆಕ್ ಮೂಲಕ ನೇರವಾಗಿ ಕೂಲಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ವಸತಿ ನಿಲಯಗಳ ದಿನಗೂಲಿ ನೌಕರರ ಸಂಘದ ಸದಸ್ಯರು ನಡೆಸುತ್ತಿರುವ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿಟ್ಟಿತು.ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿರುವ ಪ್ರತಿಭಟನಾನಿರತ ದಿನಗೂಲಿ ನೌಕರರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೆ ಇದ್ದು, ಬುಧವಾರ ಅಗತ್ಯ ಆಹಾರವನ್ನು ರಸ್ತೆಯಲ್ಲೆ ಒಲೆ ಇಟ್ಟು ತಯಾರಿಸಿಕೊಳ್ಳುವ ಮೂಲಕ ಹೋರಾಟದ ಕಿಚ್ಚನ್ನು ಮತ್ತೆ ಚುರುಕುಗೊಳಿಸಿದರು.`ದಿನಗೂಲಿ ನೌಕರರಿಗೆ ರೂ 2,400 ಕನಿಷ್ಠ ಕೂಲಿಯನ್ನು ನೀಡಲಾಗುತ್ತಿದ್ದು, ಕೂಲಿಯ ಅರ್ಧ ಭಾಗವನ್ನು ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ನುಂಗುತ್ತಿದ್ದಾರೆ. ಈ ಬಗ್ಗೆ ಆರು ತಿಂಗಳಿಂದ ಮನವಿ ಸಲ್ಲಿಸುತ್ತಿದ್ದರೂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಗಳು ಇದೀಗ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.ಆದರೆ ಬಿಸಿಎಂ ವಸತಿ ನಿಲಯದ ಜಿಲ್ಲಾ ಅಧಿಕಾರಿಗಳು ಈ ಬಗ್ಗೆ ನಿಷ್ಕಾಳಜಿ ವಹಿಸುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಕೂಲಿಯನ್ನು ಚೆಕ್ ಮೂಲಕ ವಿತರಿಸಿದ ಕೂಡಲೇ ಬಿಸಿಎಂ ಕಚೇರಿ ಎದುರು ಧರಣಿ ಆರಂಭಿಸಲಾಗುವುದು~ ಎಂದು ಹೋರಾಟದ ನೇತೃತ್ವ ವಹಿಸಿರುವ ಭೀಮಶೆಟ್ಟಿ ಯಂಪಳ್ಳಿ ತಿಳಿಸಿದರು.`ಇದೀಗ ಅಕ್ಟೋಬರ್ ರಜೆ ಇರುವುದರಿಂದ ದಿನಗೂಲಿಗಳು ಉಗ್ರ ಹೋರಾಟಕ್ಕೆ ಸಿದ್ಧರಾಗಿದ್ದು, ಸರ್ಕಾರಿ ಹಾಸ್ಟೆಲ್‌ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಸಂಪೂರ್ಣ ನಿಲ್ಲುವವರೆಗೂ ಪ್ರತಿಭಟನೆಯನ್ನು ಚುರುಕುಗೊಳಿಸಲಾಗುವುದು. ಕೆಲವು ತಿಂಗಳಿಂದ ದಿನಗೂಲಿಗಳಿಗೆ ಇಪಿಎಫ್ ಕಡಿತಗೊಳಿಸುತ್ತಿಲ್ಲ. ಸರ್ಕಾರವು ತನ್ನ ಪಾಲಿನ ಹಣವನ್ನು ಭರಿಸುತ್ತಿಲ್ಲ~ ಎಂದರು.ಅಶೋಕ ಮ್ಯಾಗೇರಿ, ಮಹಾಂತ ಔರಳ್ಳಿ, ಭಾಗಣ್ಣ, ಮಹಾದೇವಿ ಮತ್ತಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry