ಆಯುಕ್ತ ಡಾ. ಸಿ. ನಾಗಯ್ಯ ಭ್ರಷ್ಟ- ಅಮಾನತು ಮಾಡಿ

7

ಆಯುಕ್ತ ಡಾ. ಸಿ. ನಾಗಯ್ಯ ಭ್ರಷ್ಟ- ಅಮಾನತು ಮಾಡಿ

Published:
Updated:

ಗುಲ್ಬರ್ಗ: ಮಹಾನಗರ ಪಾಲಿಕೆಯಲ್ಲಿ ವಿವಿಧ ಯೋಜನೆಗಳಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಭ್ರಷ್ಟ ಅಧಿಕಾರಿಯಾದ ಪಾಲಿಕೆ ಆಯುಕ್ತ ಡಾ. ಸಿ. ನಾಗಯ್ಯ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಸದಸ್ಯ ಸಜ್ಜಾದ್ ಅಲಿ ಅವರು ಶುಕ್ರವಾರ ನಡೆದ ಸಾಮಾನ್ಯ ಸಭೆಯನ್ನು ಮೇಯರ್ ಅವರು ಮುಂದೂಡಿದ ನಂತರ ಏಕಾಂಗಿ ಹೋರಾಟ ಆರಂಭಿಸಿದರು.ಆಯುಕ್ತರ ವಿರುದ್ಧ ಭ್ರಷ್ಟಾಚಾರದ ಕೂಗು ಕೇಳಿಬಂದಾಕ್ಷಣ ಸರ್ಕಾರವು ಅವರನ್ನು ವರ್ಗಾಯಿಸುವ ತಂತ್ರ ಅನುಸರಿಸುತ್ತದೆ. ಇದರಿಂದ ಮಹಾನಗರ ಪಾಲಿಕೆಯು ಬರೀ ಲೂಟಿಕೋರರ ಕೇಂದ್ರವಾಗಿ ಮಾರ್ಪಡುತ್ತದೆ. ಹಿಂದುಳಿದ ವರ್ಗಗಳು ಹಾಗೂ ಎಸ್‌ಸಿ/ಎಸ್‌ಟಿಗೆ ಮೀಸಲಿಟ್ಟ ಹಣದಲ್ಲೆ ಸಾಕಷ್ಟು ಬೋಗಸ್ ಚೆಕ್‌ಗಳನ್ನು ಆಯುಕ್ತರು ನೀಡಿದ್ದಾರೆ. ಈ ಬಗ್ಗೆ ದಾಖಲೆಗಳ ಸಮೇತ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಸುರೇಶಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದೇನೆ. ಇಲ್ಲಿಯವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ದಾಖಲೆಗಳ ಸಮೇತ ನ್ಯಾಯಲಯ ಮೊರೆ ಹೋಗುತ್ತೇನೆ ಎಂದು ಮಾಧ್ಯಮಗಳಿಗೆ ವಿವರಿಸಿದರು.ಉಚ್ಚಾಟನೆ: ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲು ಸಜ್ಜಾದ್ ಅಲಿ ಅವರಿಗೆ  ಸಾಕಷ್ಟು ಅವಕಾಶವಿದ್ದರೂ ವಿಷಯವನ್ನು ಮಂಡಿಸದೆ ಪಾಲಿಕೆ ಸಭೆಯನ್ನು ಮುಂದೂಡಿದ ವೇಳೆ ಸಭಾಂಗಣದಲ್ಲಿ ಬ್ಯಾನರ್ ಹಿಡಿದು ಪ್ರತಿಭಟಿಸಿದ್ದಲ್ಲದೆ, ಸದಸ್ಯರಿಂದ ಪ್ರಾಣಭೀತಿ ಇದೆ ಎಂದು ಪತ್ರಿಕೆಗಳಿಗೆ ಸುದ್ದಿ ನೀಡುವ ಮೂಲಕ ಪಾಲಿಕೆ ಘನತೆಗೆ ಧಕ್ಕೆ ಉಂಟು ಮಾಡಿದ್ದಾರೆ.ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಭೀಮರೆಡ್ಡಿ ಪಾಟೀಲ ಅವರು ಮಧ್ಯಾಹ್ನ ಸೇರಿದ ಸಭೆಯಲ್ಲಿ ವಿಷಯ ಮಂಡಿಸಿದರು. ಹಲವು ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದರು. ನಿಯಮಗಳನ್ನು ಪರಿಶೀಲಿಸಿದ ಮೇಯರ್ ಸೋಮಶೇಖರ್ ಮೇಲಿನಮನಿ ಅವರು, ಸಜ್ಜಾದಅಲಿ ಅವರನ್ನು ಎರಡು ಸಾಮಾನ್ಯ ಸಭೆಯಿಂದ ಉಚ್ಚಾಟಿಸಲಾಗಿದೆ ಎಂದು ಘೋಷಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry