ಕಾಣಿಸದ ಹಾವು ಕಚ್ಚಿದ್ದು ಬರೀ ಭ್ರಮೆ!

7

ಕಾಣಿಸದ ಹಾವು ಕಚ್ಚಿದ್ದು ಬರೀ ಭ್ರಮೆ!

Published:
Updated:

ಗುಲ್ಬರ್ಗ: ಬಡತನ, ಆತ್ಮೀಯತೆ ಕೊರತೆ, ಹೆಚ್ಚಿದ ಜವಾಬ್ದಾರಿಗಳಿಂದಾಗಿ ನಿರಾಶಾದಾಯಕ ಬದುಕು; ಮಾನಸಿಕ ಹಾಗೂ ಶಾರೀರಿಕವಾಗಿ ದೃಢವಾಗಿದ್ದರೂ ಇನ್ನೊಬ್ಬರ ಗಮನವನ್ನು ತನ್ನೆಡೆಗೆ ಸೆಳೆಯುವ ಉದ್ದೇಶದಿಂದ ಹಾವು ಕಡಿತದಿಂದ ಬಳಲಿದಂತೆ ಮಾಡುವುದು...ಅಫಜಲಪೂರ ತಾಲ್ಲೂಕಿನ ಅಳ್ಳಗಿ (ಕೆ) ಗ್ರಾಮದಲ್ಲಿ `ಕಾಣದ ಹಾವು~ ಕಚ್ಚಿ, ಉಂಟು ಮಾಡಿದ ಆತಂಕದ ಹಿನ್ನೆಲೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಸದಸ್ಯರು ವಿಶ್ಲೇಷಿಸಿದ್ದು ಹೀಗೆ. ಪದೇ ಪದೇ ಹಾವು ಕಚ್ಚುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಭೇಟಿ ನೀಡಿದ ಸಮಿತಿಯ ಪದಾಧಿಕಾರಿಗಳು, ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತ ವಿವರ ನೀಡಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಪಿ.ಮೇಲಿನಕೇರಿ, ಶಿವುಕುಮಾರ ಚೆಂಗಟಿ, ಶಿವಶರಣ ಮುಳೆಗಾಂವ್, ನಾಗೇಂದ್ರಪ್ಪ ಅವರಾದ, ಶ್ರೀಮಂತ ಇತರರು ತಂಡದಲ್ಲಿ ಇದ್ದರು.ಹಿನ್ನೆಲೆ: ಮಹೇಶ ಎಂಬ ಬಾಲಕನಿಗೆ 17 ಸಲ ಕಚ್ಚಿದ ಹಾವು, ಶಫೀಕ್‌ಗೆ 12, ನಿಜಗುಣಿ ಎಂಬ ಬಾಲಕನಿಗೆ ಐದಾರು ಸಲ ಹಾಗೂ ಮಲ್ಲಮ್ಮ ಎಂಬುವವರಿಗೆ ಆರೇಳು ಸಲ ಹಾವು ಕಚ್ಚಿತ್ತು.

ಇಂಥ ಸಮಯದಲ್ಲಿ ಆಸ್ಪತ್ರೆಗೆ ಹೋಗದೇ ಸಮೀಪದ ಗೋಳನೂರ ಗ್ರಾಮಕ್ಕೆ ಹೋಗಿ, ನಾಟಿ ವೈದ್ಯನ ಬಳಿ ಔಷಧಿ ಸೇವಿಸಿ ಬರುವುದು ರೂಢಿಯಾಗಿತ್ತು. ಹಾವು ಕಚ್ಚಿದ ದಿನ ಜಾಗರಣೆ ಮಾಡಬೇಕು. ಇದಕ್ಕಾಗಿ ಭಜನಾ ತಂಡ ಕರೆಸಿ, ಅವರ ಜತೆ ಉಳಿದವರಿಗೂ ಊಟ-ತಿಂಡಿಗೆ ವ್ಯವಸ್ಥೆ ಮಾಡಬೇಕು.ಕಳೆದ ಮೂರು ತಿಂಗಳಿನಿಂದ ಆರಂಭವಾದ ಹಾವಿನ ಕಾಟ ತಪ್ಪಿಸಲು ಗ್ರಾಮಸ್ಥರು ಅಕ್ಕಲಕೋಟ ತಾಲ್ಲೂಕಿನ ಗಳೂರಗಿಯಿಂದ ಸ್ವಾಮೀಜಿಯೊಬ್ಬನನ್ನು ಕರೆಸಿದರು. `ಅದು ಭಾನಾಮತಿ ಹಾವು. ಅದನ್ನು ಮಾಡಿಸಿದವರನ್ನು ಹಿಡಿದುಕೊಡುವೆ~ ಎಂಬ ಸವಾಲಿನೊಂದಿಗೆ ಕಳೆದ ಶುಕ್ರವಾರ ಆತ ಹಳ್ಳಿಗೆ ಬಂದಾಗ ಸಾವಿರಾರು ಜನ ಸೇರಿದ್ದರು. ಜನಸಮೂಹ ನೋಡಿ ಆತ ತಡಬಡಾಯಿಸಿದಾಗ ಜನರು ಸಿಟ್ಟಿಗೆದ್ದರು. ಕೊನೆಗೆ ಪೊಲೀಸರೇ ಸ್ವಾಮೀಜಿಯನ್ನು ಬಚಾವು ಮಾಡಿದರು.ಖಿನ್ನತೆ: “ನಾವು ಭೇಟಿ ಕೊಟ್ಟಾಗ ಜನರು ಆತಂಕದಲ್ಲಿ ಇದ್ದರು. ಹಾವು ಕಡಿದವರನ್ನು ಪ್ರತ್ಯೇಕವಾಗಿ ಮಾತನಾಡಿಸಿ ಕೌನ್ಸೆಲಿಂಗ್ ಮಾಡಿದಾಗ ಗೊತ್ತಾಗಿದ್ದು- ಆ ಹಾವು ಇಲ್ಲವೇ ಇಲ್ಲ ಎಂಬುದು” ಎಂದು ಸಮಿತಿಯ ಅಧ್ಯಕ್ಷ ಶ್ರೀಶೈಲ ಘೂಳಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಹಾವು ಕಡಿದಿದೆ ಎನ್ನಲಾದ ನಾಲ್ವರಿಗೂ ಬೇರೆ ಥರದ ಗಾಯಗಳಾಗಿದ್ದವು. ಅವರು ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದರು. ಒಬ್ಬನಿಗೆ ಕುಟುಬದ ಜವಾಬ್ದಾರಿ ಹೆಚ್ಚಾಗಿದ್ದರೆ, ಇನ್ನೊಬ್ಬ ಶಾಲೆಯೆಂದರೆ ತನಗೆ ಆಗದು ಎನ್ನುವಂತಿದ್ದ. ಮತ್ತೊಬ್ಬ ಮಹಿಳೆಗೆ ಮದುವೆ ಮಾಡಿಕೊಂಡ ಮಕ್ಕಳು ದೂರ ಹೋಗಿರುವ ಚಿಂತೆ. ಹೀಗೆ ಇವರುಹಲವು ಬಗೆಯ ಖಿನ್ನತೆಯಿಂದ ಬಳಲುತ್ತಿದ್ದರು. `ಹಾವು ಕಡಿತ~ ಘಟನೆಯಿಂದ ಇನ್ನೊಬ್ಬರ ಗಮನಸೆಳೆಯುವುದನ್ನೇ ಇವರು ಬಳಸಿಕೊಂಡರು. ಕೌನ್ಸೆಲಿಂಗ್‌ನಲ್ಲಿ ಈ ಅಂಶ ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಶ್ರೀಶೈಲ ಘೂಳಿ ವಿವರಿಸಿದರು.ಬಾರದ ವೈದ್ಯರು: ಹಾವು ಕಡಿತದ ಬಗ್ಗೆ ಹಳ್ಳಿಯಲ್ಲಿ ಆತಂಕದ ವಾತಾವರಣ ಇದ್ದರೂ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು ಬಂದಿಲ್ಲ. ಇನ್ನು ಚಿಕಿತ್ಸೆ ನೆಪದಲ್ಲಿ ರಾತ್ರಿ ಜಾಗರಣೆ ನಡೆಸುವಾಗ ಇಸ್ಪೀಟ್ ಆಟದ ದಂಧೆ ಶುರುವಾಗಿತ್ತು. ಬೇರೆ ಕಡೆಗಳಿಂದಲೂ ಜನರು ಬಂದು ರಾತ್ರಿಯಿಡೀ ಇಸ್ಪೀಟು ಆಡುತ್ತಿದ್ದರು. ಈ ಬಗ್ಗೆ ಕ್ರಮ ಜರುಗಿಸಬೇಕಾದ ಪೊಲೀಸರು, ತಮ್ಮ ಕರ್ತವ್ಯ ನಿಭಾಯಿಸವಲ್ಲಿ ವಿಫಲರಾಗಿದ್ದರು ಎಂದು ಅವರು ದೂರಿದರು.

ಮಂತ್ರದಿಂದ ಹಾವಿನ ವಿಷ ಇಳಿಸಲು ಅಸಾಧ್ಯ.

ಹಾವು ಕಡಿತಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯ. ಅಲ್ಲಿಗೆ ಚಿಕಿತ್ಸೆಗೆ ಕರೆದೊಯ್ಯಬೇಕು. ಅದಕ್ಕೂ ಮುನ್ನ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಯಾವುವು? ಎಂಬ ಬಗ್ಗೆ ಪ್ರಾತ್ಯಕ್ಷಿತೆ ನೀಡಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry