ಬಿಜೆಪಿಯಿಂದ ರಾಜ್ಯದಲ್ಲಿ ಅಭಿವೃದ್ಧಿ

7

ಬಿಜೆಪಿಯಿಂದ ರಾಜ್ಯದಲ್ಲಿ ಅಭಿವೃದ್ಧಿ

Published:
Updated:

ಚಿತ್ತಾಪುರ: `ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಈ ಹಿಂದೆ ಯಾವ ಸರ್ಕಾರ ಮಾಡದ ಕೆಲಸ ಇಂದಿನ ಬಿಜೆಪಿ ಸರ್ಕಾರ ಮಾಡುತ್ತಿದೆ~ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಮತ್ತು ಗೃಹ ಸಚಿವ ಆರ್. ಅಶೋಕ ಹೇಳಿದ್ದಾರೆ.ಪಟ್ಟಣದಲ್ಲಿ 1.40 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಲಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ಹೈಟೆಕ್ ಬಸ್ ನಿಲ್ದಾಣ ಹಾಗೂ 3.50 ಕೋಟಿ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಹೊರ ವಲಯದಲ್ಲಿ ಕಟ್ಟಲಾದ ಅಗ್ನಿಶಾಮಕ ಠಾಣೆ ಮತ್ತು ವಸತಿ ಗೃಹಗಳನ್ನು ಗುರುವಾರ ಉದ್ಘಾಟಿಸಿ ಬಸ್ ನಿಲ್ದಾಣದಲ್ಲಿ ಏರ್ಪಡಿಸಿದ ಬಹಿರಂಗ ಸಮಾರಂಭದಲ್ಲಿ ಅವರು ಮಾತನಾಡಿದರು.`ಉತ್ತರ ಕರ್ನಾಟಕದ ಧೀಮಂತ ನಾಯಕ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಇರುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿ ಆಗಲಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ. ಅಭಿವೃದ್ಧಿಯ ನೋಟ ಎಲ್ಲೆಡೆ ಕಾಣಲಿದೆ~ ಎಂದೂ ಅವರು ಹೇಳಿದರು.`ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಡ್ರೈವರ್, ಕಂಡಕ್ಟರ್ ಹಾಗೂ ಭದ್ರತಾ ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ ಒಟ್ಟು 1,300 ಜನರ ನೇಮಕಾತಿ ಮಾಡಲಾಗುತ್ತಿದೆ. ಅಗ್ನಿಶಾಮಕ ಠಾಣೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 1,854 ಜನರ ನೇಮಕಾತಿ ಮಾಡಲು ಕ್ರಮ ಜರುಗಿಸುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ~ ಎಂದು ಸಚಿವ ಅಶೋಕ ಮಾಹಿತಿ ನೀಡಿದರು.`ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾರಿಗೆ ಇಲಾಖೆ ರಾಜ್ಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ, ದೇಶದ ನಂ.1 ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಸ್ಥೆಗೆ ಒಟ್ಟು 60 ಅವಾರ್ಡ್‌ಗಳು ಲಭಿಸಿವೆ. ಈಗಾಗಲೇ ಈಶಾನ್ಯ ಸಾರಿಗೆಯ ವಿಭಾಗದಲ್ಲಿ 114 ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣಗಳನ್ನು ಕಟ್ಟಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 500 ಹೊಸ ಬಸ್ ನಿಲ್ದಾಣದ ಕಟ್ಟಡಗಳನ್ನು ಕಟ್ಟಲಾಗಿದೆ~ ಎಂದು ಅವರು ವಿವರಿಸಿದರು.`ರಾಜ್ಯದಲ್ಲಿ ಒಟ್ಟು 178 ಅಗ್ನಿಶಾಮಕ ಠಾಣೆಗಳಿವೆ. 123 ಠಾಣೆಗಳಿಗೆ ಕಟ್ಟಡಗಳಿವೆ. 26 ಠಾಣೆಗಳಿಗೆ ನಿವೇಶನದ ಹುಡುಕಾಟ ನಡೆಯುತ್ತಿದೆ. 34 ಠಾಣೆಗಳ ಕಟ್ಟಡ ನಿರ್ಮಾಣ ಬಾಕಿಯಿದೆ. ಈ ವರ್ಷದಲ್ಲಿ 10 ಠಾಣೆಗಳ ಕಟ್ಟಡ ಕಟ್ಟುವ ಗುರಿಯಿದೆ. 650 ವಸತಿ ಗೃಹಗಳ ನಿರ್ಮಾಣ ಮಾಡಬೇಕಿದೆ~ ಎಂದು ಅಶೋಕ ಹೇಳಿದರು.`ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆಯ ಜೊತೆಗೆ  ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆ ಮಾಡುವ ಕುರಿತು ಚಿಂತನೆ ನಡೆದಿದೆ~ ಎಂದು ಸಚಿವರು ತಿಳಿಸಿದರು.

ಶಾಸಕ ವಾಲ್ಮೀಕ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಂಬಳೇಶ್ವರ ಸಂಸ್ಥಾನ ಮಠದ ಸೋಮಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಪಾಟೀಲ್ ತೇಲ್ಕೂರ್, ಉಪಾಧ್ಯಕ್ಷೆ ಪಾರ್ವತಿ ಶಂಕರ್ ಚವ್ಹಾಣ್ ಮುಖ್ಯ ಅತಿಥಿಗಳಾಗಿದ್ದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶರಣಬಸಪ್ಪ ಪಾಟೀಲ್ ಭಾಗೋಡಿ, ಸದಸ್ಯರಾದ ಸಿದ್ಧಣ್ಣ ಜಮಾದಾರ, ನಿಂಗಣ್ಣ ಹುಳಗೋಳಕರ್, ಸಂಜಯ ಮಲ್ಕಪ್ಪ, ಅಣ್ಣಾರಾವ ಬಾಳಿ, ಬಾಲಾಜಿ ಬುರಬುರೆ, ಮಲ್ಲಿಕಾರ್ಜುನ ಎಮ್ಮೆನೋರ್, ಚಂದ್ರಶೇಖರ ರೆಡ್ಡಿ ನಾಲವಾರ,     ಮಲಿಕ್ಲಾರ್ಜುನ ಪಾಟೀಲ್, ತಮ್ಮಣ್ಣ ಡಿಗ್ಗಿ, ಬಸವರಾಜ ಚಿನ್ನಮಳ್ಳಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry