371ನೇ ಕಲಂ ತಿದ್ದುಪಡಿ: ಉಪ ಸಮಿತಿ ರಚನೆ:ಸಂಪುಟ ಸಭೆ ನಿರ್ಧಾರಕ್ಕೆ ವೈಜನಾಥ ವಿರೋಧ

7

371ನೇ ಕಲಂ ತಿದ್ದುಪಡಿ: ಉಪ ಸಮಿತಿ ರಚನೆ:ಸಂಪುಟ ಸಭೆ ನಿರ್ಧಾರಕ್ಕೆ ವೈಜನಾಥ ವಿರೋಧ

Published:
Updated:

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಪ್ರಾದೇಶಿಕ ಅಭಿವೃದ್ಧಿ ಮತ್ತು ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯ ಮೇಲ್ವಿಚಾರಣೆ ಮತ್ತು ಮಾರ್ಗಸೂಚಿ ಸಿದ್ಧಪಡಿಸಲು ಸಚಿವ ಸಂಪುಟದ ಉಪ ಸಮಿತಿ ರಚಿಸಲಾಗುವುದು ಎಂಬ ಸಚಿವ ಸಂಪುಟದ ಸಭೆಯ ನಿರ್ಧಾರವನ್ನು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ ವಿರೋಧಿಸಿದ್ದಾರೆ.ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟದಲ್ಲಿ ಕೈಗೊಂಡ ಈ ನಿರ್ಣಯವನ್ನು ಹಿಂತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಹಿಂದುಳಿದ ನಮ್ಮ ಭಾಗಕ್ಕೆ ಏನು ಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತು. ಹೀಗಾಗಿ ನಮ್ಮನ್ನು ಕೇಳಿ ನಿರ್ಣಯ ಕೈಗೊಳ್ಳಬೇಕು ವಿನಃ ಉಪ ಸಮಿತಿ ಅಭಿಪ್ರಾಯ ಪಡೆಯುವುದು ಅಸಮಂಜಸ ಎಂದು ತಿಳಿಸಿದರು.ಕೈಯಲ್ಲಿ ಅಧಿಕಾರ ಇದೆ ಎಂದ ಮಾತ್ರಕ್ಕೆ ತಮ್ಮ ಮನಸ್ಸಿಗೆ ಬಂದಂತೆ ನಿರ್ಣಯ ಕೈಗೊಳ್ಳಬಾರದು. ಉಪ ಸಮಿತಿ ರಚಿಸುವುದು, ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡವನ್ನು ಬೇರೆ, ಬೇರೆ ರಾಜ್ಯಗಳಿಗೆ ಕಳಿಸುವುದು ಬರೀ ಇಂಥದೆ ಕೆಲಸಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಸಂವಿಧಾನದ 371ನೇ ಕಲಂ ತಿದ್ದುಪಡಿ ಅನ್ವಯವಾದರೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ತುರ್ತು ಹಾಗೂ ಅಗತ್ಯ  ಕ್ರಮಗಳ ಕುರಿತು ಗಂಭೀರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು.ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಸಹಮತ ವ್ಯಕ್ತಪಡಿಸಿದ್ದು, ಅದು ನಮ್ಮಲ್ಲಿ ಅಳವಡಿಕೆ ಆಗುವವರೆಗೂ ರಾಜ್ಯ ಸರ್ಕಾರ ಯಾವುದೇ ನೇಮಕ ಪ್ರಕ್ರಿಯೆಗಳನ್ನು ಆರಂಭಿಸಬಾರದು. ನೇಮಕ ಪ್ರಕ್ರಿಯೆ ತಡೆ ಹಿಡಿದು ಉದ್ಯೋಗದಲ್ಲಿ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸಿದರು. ಅಂಬಾರಾವ ಉಪಳಾಂವಕರ್, ಚಂದ್ರಶೇಖರ ಹರಸೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry