ಮೋಮಿನ್‌ಪುರದಲ್ಲಿ ತುಂಬಿದ ಮೌನ

7

ಮೋಮಿನ್‌ಪುರದಲ್ಲಿ ತುಂಬಿದ ಮೌನ

Published:
Updated:
ಮೋಮಿನ್‌ಪುರದಲ್ಲಿ ತುಂಬಿದ ಮೌನ

ಗುಲ್ಬರ್ಗ: ಖಾಜಾ ಕೋಟನೂರ ಕೆರೆಯಲ್ಲಿ ವಿಹಾರ ನಡೆಸುತ್ತಿದ್ದ ವೇಳೆ ದೋಣಿ ಮುಳುಗಿ ಮೃತಪಟ್ಟ 9 ಸಮೀಪದ ಸಂಬಂಧಿಗಳ ಬಡಾವಣೆಯಾದ ಮೋಮಿನ್‌ಪುರದ ನಯಾ ಮೊಹಲ್ಲಾದಲ್ಲಿ ಶನಿವಾರ ದುಃಖ ಕವಿದಿತ್ತು. ಮುಂಜಾನೆಯಿಂದಲೇ ಆಗಸದಲ್ಲಿ ಮೋಡ ಕವಿದಿದ್ದರೆ, ಖಬರಸ್ತಾನದಲ್ಲಿ ಕುಟುಂಬ, ಸಂಬಂಧಿಕರ ನೋವು ಕಣ್ಣೀರಾಗಿತ್ತು. ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿತ್ತು.ಅಕ್ಕ-ಪಕ್ಕದ ಮನೆಯಲ್ಲಿ ವಾಸಿಸುವ ಸಂಬಂಧಿಕರೆಲ್ಲ ಸೇರಿ ಶುಕ್ರವಾರ ಮಧ್ಯಾಹ್ನ ವಿಹಾರಕ್ಕೆ ಹೋಗಿದ್ದರು. ಆದರೆ ವಿಧಿಯ ಆಟ ಬೇರೆಯಾಗಿತ್ತು. ಒಂಭತ್ತು ಮಂದಿ ಬದುಕಿನ ಯಾತ್ರೆಯನ್ನು ನಡುನೀರಿನಲ್ಲಿ ಮುಗಿಸಿದ್ದರು. ಇದರಿಂದ ಬಂಧುಗಳು ನೋವು ತಾಳಲಾರದೆ ಕುಸಿದು ಹೋಗಿದ್ದರು. ಅನೀಸಾ ಬೇಗಂ (25), ಬಿಲ್ಕೀಸ್ ಭಾನು (25), ಉರುನ್ನೀಸಾ (40), ರೆಹನಾ ಬೇಗಂ (40), ನಾಸೀರ್ ಖಾನ್ (35), ಸನಾ ಫಾತಿಮಾ (18), ಶಮಾ (18), ಅಸ್ರಾ ಬೇಗಂ (14) ಮತ್ತು ಮಹ್ಮದ್ ಖಾಜಾಮಿಯಾ (4) ಸಣ್ಣ ದೋಣಿ ಮುಳುಗಿದ ದುರಂತದಲ್ಲಿ ಮೃತಪಟ್ಟವರು.ಈ ಪೈಕಿ ಸನಾ ಮತ್ತು ಶಮಾಗೆ ನಿಶ್ಚಿತಾರ್ಥ ಆಗಿತ್ತು. ತನ್ನ ಪತಿ, ರಿಕ್ಷಾ ಚಾಲಕ ವೃತ್ತಿಯ ಇಸ್ಮಾಯಿಲ್ ಮುಂದೆಯೇ ಪತ್ನಿ ಬಿಲ್ಕೀಸ್ ಭಾನು ಮುಳುಗಿ ಸಾವನ್ನಪ್ಪಿದ್ದರು. ಮಗಳು ನೇಹಾ ಪವಾಡಸದೃಶವಾಗಿ ಪಾರಾಗಿದ್ದರು. ಚಾಲಕ ನಾಸೀರ್ ಖಾನ್ ಮೃತಪಟ್ಟರೆ, ಅವರ ಪತ್ನಿ ಬದುಕುಳಿದಿದ್ದರು. ಪತ್ನಿಯ ಸಹೋದರಿಯರಾದ ಅನಿಸಾ ಬೇಗಂ ಮತ್ತು ಬಿಲ್ಕೀಸ್ ಬೇಗಂ ಕೂಡಾ ಅಸುನೀಗಿದ್ದರು.

ಈ ಮೂವರ ತಂದೆಯ ಶರ್ಪೋದ್ದೀನ್ ನೋವು ಹೇಳುವಂತಿರಲ್ಲಿಲ್ಲ. ಮೃತ ಅನಿಸಾ ಬೇಗಂ ಕುಟುಂಬವು ಜೀವನ ನಿರ್ವಹಣೆಗೆ ಗುಜರಿ ವ್ಯಾಪಾರ ನಡೆಸುತ್ತಿತ್ತು. ಶನಿವಾರ ಎಲ್ಲವೂ ಮೂಲೆಗೆ ಸೇರಿತ್ತು. ಹೀಗೆ ಪ್ರತಿಯೊಂದು ಕುಟುಂಬದ ನೋವಿನ ಕತೆಯೂ ಒಂದೊಂದು. ಈ ಕುಟುಂಬಗಳನ್ನು ಬಹಳ ವರ್ಷದಿಂದ ಹತ್ತಿರದಿಂದ ಕಂಡಿದ್ದ ಗುಲ್ಬರ್ಗ ಮಹಾನಗರ ಪಾಲಿಕೆಯ ಸ್ಥಳೀಯ ವಾರ್ಡ್ ಸದಸ್ಯ ಮಹ್ಮದ್ ನೂಹ್ ಹೇಳುವಾಗ ಮನ ಕರಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry