ನವ ರಾತ್ರಿಗಳಲ್ಲಿ ನಾಡಹಬ್ಬದ ಸಂಭ್ರಮ

7

ನವ ರಾತ್ರಿಗಳಲ್ಲಿ ನಾಡಹಬ್ಬದ ಸಂಭ್ರಮ

Published:
Updated:

ಗುಲ್ಬರ್ಗ: ಭಾರತದ ಉದ್ದಗಲಕ್ಕೂ ದೇವಿಪೂಜೆ ಆಚರಣೆಯು ವಿವಿಧ ಬಗೆಗಳಲ್ಲಿ ಇದೆ. ಜಗನ್ಮಾತೆ ದುರ್ಗಾದೇವಿಯನ್ನು ನವವಿಧವಾಗಿ ಪೂಜಿಸುವುದು ನವರಾತ್ರಿ ವಿಶೇಷ.ಶಕ್ತಿದೇವಿಯನ್ನು ಆರಾಧಿಸುವ ಹಬ್ಬ ನವರಾತ್ರಿ. ದಸರಾ ಎಂದು ಸಹ ಇದನ್ನು ಕರೆಯಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು; ಈ ಅವಧಿಯಲ್ಲಿ ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಇವುಗಳೆಂದರೆ- ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಹತ್ತನೇ ದಿನ `ವಿಜಯದಶಮಿ~. ಅಂದು ಬನ್ನಿ ವೃಕ್ಷಕ್ಕೆ ಪೂಜೆ ಸಲ್ಲಿಸಿ `ಬನ್ನಿ- ಬಂಗಾರ~ ಪರಸ್ಪರ ಕೊಡುವುದು ನಮ್ಮಲ್ಲಿ ಆಚರಣೆ ವಿಧಾನ.ನಗರದಲ್ಲಿ ಈಗ ಎಲ್ಲೆಡೆ ನವರಾತ್ರಿ ವೈಭವ. ಹಲವು ಬಡಾವಣೆಗಳಲ್ಲಿ ದುರ್ಗಾಮಾತೆ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತಿದೆ. ಈ ಹಬ್ಬಕ್ಕೆ ಸಾಕಷ್ಟು ಮುನ್ನವೇ ತಯಾರಿ ಶುರುವಾಗುತ್ತದೆ. ಮನೆಮನೆಗೆ ತೆರಳಿ ಚಂದಾ ಸಂಗ್ರಹಿಸಿ, ಪ್ರಮುಖ ರಸ್ತೆಯ ಬದಿಯಲ್ಲಿ ದೇವಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಒಂಬತ್ತು ದಿನಗಳವರೆಗೂ ವೈವಿಧ್ಯಮಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಭರಾಟೆ...ನವರಾತ್ರಿ ಎಂದರೆ ನಾಡಹಬ್ಬ. ಇದರ ಅಂಗವಾಗಿ ಎನ್‌ಜಿಒ ಕಾಲೋನಿಯ `ಗೆಳೆಯರ ಬಳಗ~ ಪ್ರತಿ ವರ್ಷ ಅನೇಕ ಕಾರ್ಯಕ್ರಮ ಏರ್ಪಡಿಸುತ್ತದೆ. ದುರ್ಗಾದೇವಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ರಸದೌತಣ ನೀಡಲಾಗುತ್ತದೆ. “ಈ ಸಲ ನಡೆಯುತ್ತಿರುವುದು 6ನೇ ವರ್ಷದ ನಾಡಹಬ್ಬ. ಸ್ಥಳೀಯ ಕಲಾವಿದರಿಂದ ಸಂಗೀತ, ಬಡಾವಣೆಯ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದು, ನೃತ್ಯ, ರಂಗೋಲಿ, ಚಿತ್ರಕಲಾ ಸ್ಪರ್ಧೆ ಆಯೋಜಿಸುತ್ತೇವೆ. ಕೊನೆಯ ದಿನ ವಿಜೇತರಿಗೆ ಬಹುಮಾನ ಪ್ರದಾನ ಮಾಡುತ್ತೇವೆ. ಇಷ್ಟೇ ಅಲ್ಲ; ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸುತ್ತೇವೆ” ಎಂದು ಸಂಘಟಕ ಅರುಣ ಕುಲಕರ್ಣಿ ಹೇಳುತ್ತಾರೆ.ಅಲಂಕಾರ: ನಗರದ ಶಹಾಬಜಾರ್ ಬಡಾವಣೆಯ ಅಂಬಾಭವಾನಿ ದೇವಸ್ಥಾನದಲ್ಲಿನ ಅಲಂಕಾರವು ದಸರಾ ಹಬ್ಬದ ಇನ್ನೊಂದು ವೈಶಿಷ್ಟ್ಯ. ಅಷ್ಟಲಕ್ಷ್ಮೀ, ಅನ್ನಪೂರ್ಣೇಶ್ವರಿ, ಲಲಿತಾ ತ್ರಿಪುರಸುಂದರಿ ಸೇರಿದಂತೆ ಒಂಬತ್ತು ದಿನಗಳ ಕಾಲ ದೇವಿಗೆ ವಿವಿಧ ಬಗೆಯ ಅಲಂಕಾರ ಮಾಡುತ್ತಾರೆ. ಜೇವರ್ಗಿ ರಸ್ತೆಯ ಸಿಂದ್ಗಿ ಅಂಬಾಭವಾನಿ ದೇವಸ್ಥಾನದಲ್ಲೂ ದೇವಿಗೆ ದಿನಕ್ಕೊಂದು ಬಗೆಯ ಅಲಂಕಾರ ಮಾಡಲಾಗುತ್ತದೆ. ಒಂದು ದಿನ ಪುಷ್ಪಾಲಂಕಾರವಾದರೆ ಇನ್ನೊಂದು ದಿನ ಬಗೆಬಗೆಯ ಹಣ್ಣುಗಳು. ಮತ್ತೊಂದು ದಿನ ಒಣಹಣ್ಣು (ಡ್ರೈಫ್ರೂಟ್ಸ್)! ಅಲಂಕೃತ ದೇವಿಯ ದರ್ಶನಕ್ಕೆ ನೂರಾರು ಭಕ್ತರು ಆಗಮಿಸುತ್ತಾರೆ.ಇನ್ನು ವಿಜಯದಶಮಿ ನಿಮಿತ್ತ ಶರಣಬಸವೇಶ್ವರ ಸಂಸ್ಥಾನ ದೇವಸ್ಥಾನ ಆವರಣದಲ್ಲಿ ವಿಶೇಷ ಉಪನ್ಯಾಸ ನಡೆಯುತ್ತವೆ. ದಿನಕ್ಕೊಂದು ವಿಷಯದ ಮೇಲೆ ಚಿಂತನೆಯನ್ನು ವಿದ್ವಾಂಸರು ಮಂಡಿಸುತ್ತಾರೆ. ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀ ಹರೇ ಶ್ರೀನಿವಾಸ ಸೇವಾ ಸಮಿತಿಯು `ದಾಸವಾಣಿ~ ಸೇರಿದಂತೆ ಆಯೋಜಿಸುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವ ಸ್ಫುರಿಸುತ್ತವೆ.ಜನಜಂಗುಳಿ: ನಗರದ ಗಲ್ಲಿಗಲ್ಲಿಗಳಲ್ಲಿ ಈಗ ವೈಭವದ ನಾಡಹಬ್ಬ ನಡೆಯುತ್ತಿದೆ. ಸಂಜೆಯಾಗುತ್ತಲೇ ದೇವಿ ಪ್ರತಿಷ್ಠಾಪನೆ ವೇದಿಕೆಯಲ್ಲಿ ಕಾರ್ಯಕ್ರಮ ಶುರುವಾಗುತ್ತವೆ. ಮನರಂಜನೆಯೋ, ಧಾರ್ಮಿಕ ಆಸಕ್ತಿಯೋ ಒಟ್ಟಾರೆ ಜನತೆ ಸಂಭ್ರಮದಲ್ಲಿ ಸೇರುತ್ತಾರೆ. ರಸ್ತೆ ಪಕ್ಕ ವೇದಿಕೆ ಇದ್ದರಂತೂ ಆ ರಸ್ತೆ ಬಂದ್! ಕೆಲವು ಸಂಘಟನೆಗಳು ನೆರೆರಾಜ್ಯಗಳಿಂದ ಕಲಾವಿದರನ್ನು ಆಹ್ವಾನಿಸಿ ಸಂಗೀತ ಸುಧೆ ಉಣಬಡಿಸಿದರೆ, ಇನ್ನು ಕೆಲವೆಡೆ ಆರ್ಕೆಸ್ಟಾ ತಂಡಗಳ ಪ್ರದರ್ಶನ ಯುವಪೀಳಿಗೆಯನ್ನು ರಂಜಿಸುತ್ತದೆ. ದಾಂಡಿಯಾ ನೃತ್ಯ ಸೇರಿದಂತೆ ರಾತ್ರಿಯಿಡೀ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೇನೂ ಇಲ್ಲಿ ಕೊರತೆಯಿಲ್ಲ.ದಸರಾ ಹಬ್ಬ ಬರೀ ದುರ್ಗಾದೇವಿ ಪೂಜೆಗೆ ಸೀಮಿತವಾಗದೇ ಧಾರ್ಮಿಕ ಚಿಂತನೆ. ಸಾಂಸ್ಕೃತಿಕ ಹಾಗೂ ಸಮಾಜೋಪಯೋಗಿ ಚಟುವಟಿಕೆಗೂ ವೇದಿಕೆಯಾಗಿ ರೂಪುಗೊಂಡಿರುವುದು ಗಮನಿಸಬೇಕಾದ ಸಂಗತಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry