ಬ್ಯಾಡ್ಮಿಂಟನ್: ಏಷ್ಯಾ ಟೂರ್ನಿಗೆ ಸಿದ್ದಣ್ಣ

7

ಬ್ಯಾಡ್ಮಿಂಟನ್: ಏಷ್ಯಾ ಟೂರ್ನಿಗೆ ಸಿದ್ದಣ್ಣ

Published:
Updated:
ಬ್ಯಾಡ್ಮಿಂಟನ್: ಏಷ್ಯಾ ಟೂರ್ನಿಗೆ ಸಿದ್ದಣ್ಣ

ಗುಲ್ಬರ್ಗ: ಲಸಿಕೆ ಹಾಕಿಸಿದರೂ ಒಬ್ಬನೇ ಮುದ್ದು ಮಗನಿಗೆ ಪೋಲಿಯೊ ತಪ್ಪಲಿಲ್ಲ. ಆದರೆ ಬಾಲಕ ಮತ್ತು ಪೋಷಕರು ಛಲ ಬಿಡಲಿಲ್ಲ. ಉತ್ತಮ ವಿದ್ಯಾಭ್ಯಾಸ ಕೊಡಿಸಿದರು. ಈ ನಡುವೆ ಬಾಲಕನ ಚಿತ್ತವನ್ನು ಬ್ಯಾಡ್ಮಿಂಟನ್ ಸೆಳೆಯಿತು. ಯಶಸ್ಸಿನ ಹಾದಿಯ ಆರ್ಥಿಕ ಖರ್ಚು ಭರಿಸಲು ರಾಜಕಾರಣಿಗಳು, ಕಂಪೆನಿಗಳು, ಸಂಘ-ಸಂಸ್ಥೆಗಳ ಪ್ರೋತ್ಸಾಹ ಸಿಗಲಿಲ್ಲ.ಕೆಲವರು ಶಾಲು, ಹಣ್ಣು, ಹಾರ ಹಾಕಿ ತಮ್ಮದೊಂದು ಫೋಟೋ ತೆಗೆಸಿಕೊಂಡರು! ಆರ್ಥಿಕ ಸಹಾಯ ಮರೀಚಿಕೆಯಾಯಿತು. ಸತತವಾಗಿ ಜಿಲ್ಲಾಡಳಿತಕ್ಕೆ ಮೊರೆ ಹೋದರೂ ಬರಿಗೈಯೇ ಗತಿಯಾಯಿತು...ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ (ಬಿಡಬ್ಲ್ಯೂಎಫ್:  ಎಸ್‌ಎಲ್-3) ವಿಶ್ವದ ಏಳನೇ  ರ‌್ಯಾಂಕ್, ಭಾರತದ ಎರಡನೇ ರ‌್ಯಾಂಕ್, ರಾಜ್ಯದ ಅಗ್ರ ರ‌್ಯಾಂಕ್‌ನ ಗುಲ್ಬರ್ಗದ ಸಿದ್ಧಣ್ಣ ಸಾಹುಕಾರ್ ಅವರ ಪರಿಸ್ಥಿತಿ. ಇವರ ವಿಶ್ವ ರ‌್ಯಾಂಕಿಂಗ್‌ನ ಆಧಾರದಲ್ಲಿ ಅ.29ರಿಂದ ಕೊರಿಯಾದಲ್ಲಿ ನಡೆಯಲಿರುವ ಏಷಿಯನ್ ಪ್ಯಾರಾ ಬ್ಯಾಂಡ್ಮಿಟನ ಚಾಂಪಿಯನ್‌ಶಿಫ್-12~ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಕೆಲವೇ ದಿನದಲ್ಲಿ ಅವರು ವಿಮಾನ ಏರಬೇಕಾಗಿದೆ.ಆದರೆ ಅದೇ ಆರ್ಥಿಕ ಸಮಸ್ಯೆ...ಫ್ರೆಂಚ್ ಓಪನ್-2012ರಲ್ಲಿ ಕಂಚಿನ ಪದಕ, 2008ರಿಂದ ಸತತ ಮೂರು ವರ್ಷ ರಾಷ್ಟ್ರಮಟ್ಟದ `ಒರಿಸ್ಸಾ ಸೂಪರ್ ಸಿಕ್ಸ್ ಟೂರ್ನಿ~ಯ ಚಿನ್ನದ ಪದಕ, 2007ರಲ್ಲಿ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಕಂಚಿನ ಪದಕ, 2010ರಲ್ಲಿ ಇಸ್ರೇಲ್‌ನಲ್ಲಿ ನಡೆದ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ, ರಾಜ್ಯ, ದಕ್ಷಿಣ ಭಾರತ, ರಾಷ್ಟ್ರಮಟ್ಟದಲ್ಲಿ ಸಿದ್ದಣ್ಣ ಮಿಂಚುತ್ತಲೇ ಇದ್ದಾರೆ. ಇವರು ನಮ್ಮ ಗುಲ್ಬರ್ಗದವರು. `ನಾನು ಸ್ಪೇನ್ ಮತ್ತಿತರೆಡೆ ಟೂರ್ನಿಗೆ ಆಯ್ಕೆಯಾಗಿದ್ದೆ. ಹಣವಿಲ್ಲದೇ ಹೋಗಲಿಲ್ಲ. ರ‌್ಯಾಂಕ್ ಹೆಚ್ಚಿಸಲು ಸಾಧ್ಯವಾಗಲಿಲ್ಲ. ಪ್ರತಿ ಟೂರ್ನಿಗೆ ಸುಮಾರು 1 ಲಕ್ಷ ರೂಪಾಯಿ ಖರ್ಚಾಗುತ್ತದೆ. ಭಾರತದ ನಂ.1 ರ‌್ಯಾಂಕ್‌ನ ಪ್ರಮೋದ್ ಭಾಗ್ವತ್, ನನ್ನ ಬಳಿಕದ ರ‌್ಯಾಂಕಿಂಗ್‌ನ ಆನಂದ್, ದಕ್ಷಿಣ ಕರ್ನಾಟಕದ ಹಲವು ಆಟಗಾರರಿಗೆ ಸ್ಥಳೀಯ ಜಿಲ್ಲೆಯ ಕಂಪೆನಿಗಳು, ಮುಖಂಡರು ಆರ್ಥಿಕ ಸಹಕಾರ ನೀಡುತ್ತಾರೆ. ಅವರು ಮುನ್ನಡೆಯುತ್ತಲೇ ಇದ್ದಾರೆ~ ಎನ್ನುತ್ತಾರೆ ಸ್ವಾಭಿಮಾನಿ ಸಿದ್ಧಣ್ಣ (ಮೊ.7676522642) ಏಷಿಯನ್ ಟೂರ್ನಿಗೆ ಆಯ್ಕೆಯಾದ ಮೂರು ಆಟಗಾರರಲ್ಲಿ ಸಿದ್ದಣ್ಣ ಒಬ್ಬರು.`ತಂದೆ-ತಾಯಿಯ ಸ್ವಾಭಿಮಾನ ಹಾಗೂ ಪ್ರೋತ್ಸಾಹದಿಂದ ಇಲ್ಲಿ ತನಕ ಬೆಳೆದೆ. ಆದರೆ ಖರ್ಚು-ವೆಚ್ಚ ಎಷ್ಟು ಭರಿಸಬಹುದು. ನೀವೇ ಅರ್ಥೈಸಿ~ ಎಂದು ಮೌನಿಯಾಗುತ್ತಾರೆ. ಅವರ ನಾಲ್ಕು ತಂಗಿಯರು ವಿದ್ಯಾಭ್ಯಾಸ (ಬಿಇ, ಇಬ್ಬರು ಎಂಕಾಂ, ಬಿಎಡ್) ಮಾಡುತ್ತಿದ್ದಾರೆ. ಈ ನಡುವೆಯೂ ತಂದೆ ಶಿವಣ್ಣ ಸಾಹುಕಾರ್ ಮತ್ತು ತಾಯಿ ಮಲ್ಲಮ್ಮ 26ರ ಹರೆಯದ ಮಗನ ಕ್ರೀಡಾ ಉತ್ಸಾಹಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.`ನನಗೆ ಹತ್ತು ವರ್ಷ ಇದ್ದಾಗ ಅಪ್ಪ ರೂ. 25ರ ರ‌್ಯಾಕೆಟ್ ಕೊಡಿಸಿದರು. ಆಗಲೇ ಬ್ಯಾಡ್ಮಿಂಟನ್ ಒಲವು ಸೆಳೆಯಿತು~ ಎನ್ನುವ ಅವರು ಪಿಯು ತನಕದ ಶಿಕ್ಷಣವನ್ನು ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಪಡೆದರು. ಆಗ ರಾಜನ್ ತರಬೇತಿ ನೀಡಿದರು. ಬಳಿಕ ಎಂಜಿನಿಯರಿಂಗ್ ಸೀಟು ಪಡೆದು ಗುಲ್ಬರ್ಗಕ್ಕೆ ಮರಳಿದರು. ಬ್ಯಾಡ್ಮಿಂಟನ್ ಸೆಳೆತವು ಬಿಇ ಅರ್ಧಕ್ಕೆ ಬಿಟ್ಟು ರೇಷ್ಮಿ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಬಿಕಾಂ ಸೇರುವಂತೆ ಮಾಡಿತು.2007ರಲ್ಲಿ ಮಧುರೈಯಲ್ಲಿ ನಡೆದ ದಕ್ಷಿಣ ಭಾರತ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ವೃತ್ತಿ ಬ್ಯಾಡ್ಮಿಂಟನ್ ಆಟಗಾರರಾಗಿ ರೂಪುಗೊಂಡರು. ಬಳಿಕ ನಡೆದದ್ದು ಪೋಲಿಯೋ ನಡುವೆಯೂ ಯಶಸ್ಸಿನ ಓಟ. ನಿತ್ಯ ಅಭ್ಯಾಸ, ಸತತ ಶ್ರಮ, ನಡುವೆ ಓದು, ಓಡಾಟದ ಮೂಲಕ ವಿಶ್ವದ ಏಳನೇ ರ‌್ಯಾಂಕ್‌ಗೆ ಏರಿದ್ದಾರೆ. ಮೂಲತಃ ಶಹಾಪುರದ ಕೃಷಿ ಕುಟುಂಬದ ಸಿದ್ಧಣ್ಣ ಸಾಹುಕಾರ್ ಹೈದರಾಬಾದ್ ಕರ್ನಾಟಕದ ಭಾಗದ ಹೆಮ್ಮೆಯಾಗಿದ್ದಾರೆ. ಆದರೆ ಪ್ರೋತ್ಸಾಹಿಸುವ ಆರ್ಥಿಕ ಮನಸ್ಸುಗಳು ಕೈ ಜೋಡಿಸಬೇಕಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry