ಶನಿವಾರ, ಏಪ್ರಿಲ್ 17, 2021
30 °C

ಹೀಗೆ ಮಾಡಿ ಗ್ಯಾಸ್ ಉಳಿತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೀಗೆ ಮಾಡಿ ಗ್ಯಾಸ್ ಉಳಿತಾಯ

ಗೃಹಬಳಕೆ ಅನಿಲ ಸಿಲಿಂಡರ್‌ಗೆ ಸಂಬಂಧಿಸಿದಂತೆ ಬದಲಾಗಿರುವ ನೀತಿಯ ಬಿಸಿ ಇದೀಗ ಜನರನ್ನು ತಟ್ಟುತ್ತಿದೆ. ಒಂದು ಕುಟುಂಬ ವಾರ್ಷಿಕವಾಗಿ ಆರು ಸಿಲಿಂಡರ್‌ಗಳನ್ನಷ್ಟೇ ಸಬ್ಸಿಡಿ ದರದಲ್ಲಿ ಪಡೆಯಬಹುದಾಗಿದ್ದು, ಈ ಸಂಖ್ಯೆಯನ್ನು ದಾಟಿದರೆ ಪ್ರತಿ ಸಿಲಿಂಡರ್‌ಗೆ ಸುಮಾರು ಮೂರು ಪಟ್ಟು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.ಆರ್ಥಿಕವಾಗಿ ಮೇಲ್ವರ್ಗದಲ್ಲಿರುವವರಿಗೆ  ಇದರ ಬಿಸಿ ಹೆಚ್ಚಾಗಿ ತಟ್ಟದಿದ್ದರೂ, ಮಧ್ಯಮ ಹಾಗೂ ಕೆಳವರ್ಗದವರಿಗೆ ಈ ಹೆಚ್ಚಿನ ಹೊರೆಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವೇ. ಅದರಲ್ಲೂ ಅಡುಗೆ ಮನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರಿಗಂತೂ ಸರ್ಕಾರದ ಈ ನೀತಿ `ಶಾಕ್~ ಹೊಡೆಸಿದೆ. ಸರ್ಕಾರ ಈ ಬಗ್ಗೆ ಅದೆಷ್ಟೇ ಸಮಜಾಯಿಷಿ ನೀಡಿದರೂ ಸಾಮಾನ್ಯ ಜನರಿಗೆ ಇದರ ನಿರ್ವಹಣೆ ಬಲು ಕಷ್ಟ.ಅದೇನೇ ಕಾರಣಗಳಿದ್ದರೂ, ಇದೀಗ ಗ್ಯಾಸ್ ಸಿಲಿಂಡರ್‌ಗಳ ಮಿತ-ಹಿತ ಬಳಕೆ ಮಾಡುವುದು ದುಬಾರಿ ಜೀವನದ ಈ ದಿನಗಳಲ್ಲಿ ಅತಿ ಅಗತ್ಯ. ಹಲವಾರು ಮನೆಗಳಲ್ಲಿ ನಾವು ಅಡುಗೆ ಅನಿಲವನ್ನು ಅಗತ್ಯ ಇರುವುದ ಕ್ಕಿಂತಲೂ ಹೆಚ್ಚಾಗಿ ಬಳಸುತ್ತಿದ್ದೇವೆ.ಇದಕ್ಕೆ ನಮ್ಮ ಅವೈಜ್ಞಾನಿಕ ನಿರ್ವಹಣಾ ವಿಧಾನಗಳೇ ಕಾರಣ ಎಂದು ಹೇಳಬಹುದು. ಹೀಗಾಗಿ ಕೆಲವು ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ ಹಾಗೂ ನಮ್ಮ ಅಡುಗೆ ತಯಾರಿಕಾ ವಿಧಾನದಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವುದರಿಂದ ಖಂಡಿತವಾಗಿ ಶೇ 15-25ರಷ್ಟು ಗ್ಯಾಸ್ ಇಂಧನ ಉಳಿತಾಯ ಮಾಡಬಹುದು!

ಅಂತಹ ಕೆಲವು ಟಿಪ್ಸ್‌ಗಳು ಇಲ್ಲಿವೆ, ನಿಮಗಾಗಿ:ಪ್ರೆಷರ್ ಕುಕ್ಕರ್‌ನ ಬಳಕೆ: ಗ್ಯಾಸ್ ಉಳಿತಾಯದಲ್ಲಿ ಪ್ರೆಷರ್ ಕುಕ್ಕರ್‌ನ ಬಳಕೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಸಾಮಾನ್ಯವಾಗಿ ಅಕ್ಕಿ, ಬೇಳೆ, ಕಾಳು ಅಥವಾ ಇನ್ನಾವುದೇ ವಸ್ತುಗಳನ್ನು ಪ್ರೆಷರ್ ಕುಕ್ಕರ್‌ನ ಹಬೆಯಲ್ಲಿ ಬೇಯಿಸುವುದರಿಂದ ಸಾಧಾರಣ ವಿಧಾನಕ್ಕಿಂತಲೂ ಶೇಕಡಾ 50ರಷ್ಟು ಕಡಿವೆು ಅವಧಿ ಸಾಕು. ಪ್ರೆಷರ್ ಕುಕ್ಕರ್‌ನಲ್ಲಿ ಉಂಟಾಗುವ ಒತ್ತಡದಿಂದ ನೀರಿನ ಕುದಿಯುವ ಬಿಂದು ಹೆಚ್ಚಾಗುತ್ತದೆ.ಇದರಿಂದ ಹೆಚ್ಚಾಗುವ ಉಷ್ಣತೆಗೆ ಕಡಿವೆು ಅವಧಿಯಲ್ಲೇ ಆಹಾರ ಪದಾರ್ಥಗಳು ಬೇಯುತ್ತವೆ. ಆದರೆ ಆಹಾರ ವಸ್ತು  ಗಳನ್ನು, ಬೇಳೆಗಳನ್ನು ಬೇಯಿಸುವಾಗ ಅತ್ಯಧಿಕ ಪ್ರಮಾಣದ ನೀರಿನ ಬಳಕೆ ಮಾಡಬಾರದು. ಹೀಗೆ ಮಾಡಿದರೆ ಬೇಯಲು ಹೆಚ್ಚಿನ ಸಮಯ ಬೇಕಾಗಿ, ಗ್ಯಾಸ್‌ನ ನಷ್ಟ ಉಂಟಾಗುತ್ತದೆ. ನೀವು ಪ್ರೆಷರ್ ಕುಕ್ಕರ್ ಬಳಸುತ್ತಿಲ್ಲವಾದರೆ ಇಂದೇ ಅದನ್ನು ಖರೀದಿಸಿ ಗ್ಯಾಸ್‌ನ ಉಳಿತಾಯದ ತುಲನೆ ಮಾಡಿ ನೋಡಬಹುದು. ಕುಕ್ಕರ್‌ನಲ್ಲಿ ಅನ್ನ ಬೇಯಿಸುವಾಗ ಬಳಸಿದ ನೀರು ಅದರಲ್ಲೇ ಇರುವುದರಿಂದ ಹೆಚ್ಚಿನ ಪೋಷಕಾಂಶಗಳೂ ನಮಗೆ ದೊರೆಯುತ್ತದೆ.ಕೇಳಿದ್ದೀರಾ `ಹೇ ಬಾಕ್ಸ್~?

ಇದೇನಿದು `ಹೇ ಬಾಕ್ಸ್~ ಎಂದು ಆಶ್ಚರ್ಯಪಡುತ್ತಿದ್ದೀರಾ? ಇದೊಂದು ವಿಧದ ಕುಕ್ಕರ್. ಯಾವುದೇ ಅನಿಲದ ಅಗತ್ಯವಿಲ್ಲದೇ ವಿಜ್ಞಾನದ ತತ್ವದಲ್ಲಿ ಕೆಲಸ ಮಾಡುವ ಪೆಟ್ಟಿಗೆ ಅಥವಾ ಕುಕ್ಕರ್!ಕೆಲವು ಮನೆಗಳಲ್ಲಿ ಕುಕ್ಕರ್‌ನಲ್ಲಿ ಅನ್ನ ಬೇಯಿಸುವ ರೂಢಿ ಇಲ್ಲದ ಕಾರಣ, ಅಕ್ಕಿಯನ್ನು ಪಾತ್ರೆಯಲ್ಲಿಟ್ಟು ನೀರಿನೊಡನೆ ನೇರವಾಗಿ ಬೇಯಿಸಿ ಅನ್ನ ತಯಾರಿಸುತ್ತಾರೆ. ಈ ವಿಧಾನಕ್ಕೆ 25-30 ನಿಮಿಷಗಳ ಕಾಲ ಗ್ಯಾಸ್ ಉರಿಸಬೇಕಾಗುತ್ತದೆ. ಆದರೆ ಪಾತ್ರೆಯಲ್ಲಿ ಅಕ್ಕಿಯೊಡನೆ ಹಾಕಿದ ನೀರು ಕುದಿಯಲಾರಂಭಿಸಿದ ಕೂಡಲೇ ಪಾತ್ರೆಯನ್ನು ಮುಚ್ಚಿ ಈ `ಹೇ ಬಾಕ್ಸ್~ನಲ್ಲಿ ಇಟ್ಟು ಬಿಡಿ, ಅಂದರೆ ಅರ್ಧ ಬೆಂದ ಅಕ್ಕಿಯನ್ನು ಈ ಬಾಕ್ಸ್‌ನಲ್ಲಿ ಇಡುವುದರಿಂದ, ಉಳಿದ ಭಾಗವು ಯಾವುದೇ ಇಂಧನದ ಅಗತ್ಯವಿಲ್ಲದೇ ಬೇಯುತ್ತದೆ. ಅಕ್ಕಿ ಬೆರೆಸಿದ ನೀರು ಕುದಿಯಲು 8-10 ನಿಮಿಷ ಬೇಕು. ಅಂದರೆ ಇದರಿಂದ ಸುಮಾರು ಅರ್ಧದಷ್ಟು ಗ್ಯಾಸ್ ಇಂಧನ ಉಳಿತಾಯವಾಗುತ್ತದೆ!`ಹೇ ಬಾಕ್ಸ್~ ಹೀಗೆ ತಯಾರಿಸಿ

`ಹೇ ಬಾಕ್ಸ್~ನ ರಚನೆ ಸುಲಭವಾಗಿದ್ದು, ಇದನ್ನು ಯಾರು ಬೇಕಾದರೂ ತಯಾರಿಸಬಹುದು. ಯಾವುದಾದರೂ ತಗಡಿನ ಡಬ್ಬ ತೆಗೆದುಕೊಂಡು ಅದರ ಒಳಗಡೆ ಸುತ್ತಲೂ ಥರ್ಮೊಕೋಲ್‌ನ ಹೊದಿಕೆ ನೀಡಬೇಕು. ಅಡುಗೆಗೆ ಬಳಸುವ ಪಾತ್ರೆಯನ್ನು ಸುಲಭವಾಗಿ ಇದರಲ್ಲಿ ಇಡುವಂತಿರಬೇಕು. ಇದರ ಒಳಗಡೆ ಬಳಸುವ ಥರ್ಮೊಕೋಲ್ ಉಷ್ಣತೆಯ ಆವಾಹಕ ಆಗಿರುತ್ತದೆ.

 

ಆದ್ದರಿಂದ ಕುದಿಯುತ್ತಿರುವ ಅಕ್ಕಿಯ ಪಾತ್ರೆಯನ್ನು ಇದರೊಳಗಡೆ ಇಟ್ಟು ಮುಚ್ಚುವುದರಿಂದ, ನೀರಿನ ಕುದಿಯುವ ಬಿಂದುವಿನ ಉಷ್ಣತೆ ಬಹಳ ಹೊತ್ತಿನವರೆಗೂ ಇದರಲ್ಲಿ ನಷ್ಟವಾಗದೇ ಉಳಿಯುತ್ತದೆ. ಇದರಿಂದ ನಿಧಾನವಾಗಿ (15-20 ನಿಮಿಷಗಳಲ್ಲಿ) ಉಳಿದ ಭಾಗವೂ ಬೇಯುತ್ತದೆ. ಬಿಸಿ ಪಲ್ಯ ಅಥವಾ ಸಾಂಬಾರನ್ನು ಕೂಡ ಇಡುವುದರಿಂದ, ಬಹಳ ಹೊತ್ತಿನವರೆಗೂ ಅವು ಬಿಸಿಯಾಗಿರುತ್ತವೆ. ಕೆಲವು ಪಾತ್ರೆ ಅಂಗಡಿಗಳಲ್ಲಿ ಸಹ ಇಂತಹ ಕುಕ್ಕರ್ ದೊರೆಯುತ್ತದೆ.ಉರಿ ಸಣ್ಣದಾಗಿಡಿ: ಯಾವುದೇ ದ್ರವ ಪದಾರ್ಥ ಕುದಿಯಲಾರಂಭಿಸಿದಾಗ ಜ್ವಾಲೆ ಚಿಕ್ಕದಾಗಿಸುವುದನ್ನು ಮರೆಯಬೇಡಿ, ದ್ರವ ಪದಾರ್ಥ (ಮುಖ್ಯವಾಗಿ ನೀರನ್ನು ಹೊಂದಿರುವ ಆಹಾರ ವಸ್ತು) ಕುದಿಯಲಾರಂಭಿಸಿದಾಗ ನೀರಿನ ಕುದಿಯುವ ಬಿಂದು 100 ಡಿಗ್ರಿ ಸೆಲ್ಸಿಯಸ್ ತಲುಪಿರುತ್ತದೆ. ಹೀಗಾಗಿ ಗ್ಯಾಸ್ ಜ್ವಾಲೆ ದೊಡ್ಡದಿದ್ದಾಗ ನೀರಿನ ಕುದಿಯುವ ಬಿಂದು ಅಷ್ಟೇ ಇದ್ದು, ನೀರು ಆವಿಯಾಗಲಾರಂಭಿಸುತ್ತದೆ. ಹೀಗಾಗಿ ಹೆಚ್ಚಿನ ಪ್ರಮಾಣದ ಉಷ್ಣತೆಯು ನೀರಿನ ಆವಿಯಾಗುವಿಕೆಗೆ ಕಾರಣವಾಗಿ, ಗ್ಯಾಸ್ ಇಂಧನ ನಷ್ಟವಾಗುತ್ತದೆ.ಪಾತ್ರೆಯನ್ನು ಮುಚ್ಚಿಡಿ
: ಯಾವುದೇ ವಸ್ತುವನ್ನು ಬಿಸಿ ಮಾಡುವಾಗ ಅಥವಾ ಬೇಯಿಸುವಾಗ ಪಾತ್ರೆಯನ್ನು ಮುಚ್ಚಿಡಲು ಮರೆಯಬೇಡಿ. ಇದರಿಂದ ಉಷ್ಣತೆಯು ಪಾತ್ರೆಯಲ್ಲೇ ಉಳಿಯುವುದರಿಂದ ಬೇಯುವಿಕೆ ವೇಗವಾಗಿ, ಗ್ಯಾಸ್‌ನ ಉಳಿತಾಯ ಮಾಡಬಹುದು.ಯಾವ ವಿಧದ ಪಾತ್ರೆ ಬಳಸಬೇಕು?:
ಗ್ಯಾಸ್‌ನ ಮೇಲೆ ಇಡುವ ಪಾತ್ರೆಗಳ ತಳ ಯಾವಾಗಲೂ ಜ್ವಾಲೆಗಿಂತ ತುಸು ದೊಡ್ಡದಿದ್ದರೆ ಉಷ್ಣತೆಯು ನಷ್ಟವಾಗದೇ ಗ್ಯಾಸ್‌ನ ಉಳಿತಾಯದಲ್ಲಿ ನೆರವಾಗುತ್ತದೆ.ಕೆಲವೊಮ್ಮೆ ಗ್ಯಾಸ್ ಜ್ವಾಲೆ ಕೆಂಪು ಅಥವಾ ಹಳದಿ ಬಣ್ಣದಿಂದ ಉರಿಯುತ್ತಿದ್ದರೆ ಅಂತಹ ಬರ್ನರ್‌ಗಳನ್ನು ಶುಚಿಗೊಳಿಸಬೇಕು. ನೀಲಿ ಬಣ್ಣದ ಜ್ವಾಲೆಯಲ್ಲಿ ಹಳದಿ ಬಣ್ಣದ ಜ್ವಾಲೆಗಿಂತ ಹೆಚ್ಚಿನ ಶಾಖ ಇರುತ್ತದೆ.ಈ ಮೊದಲು ವಿವರಿಸಿದ ಎಲ್ಲ ಅಂಶಗಳ ಜೊತೆಗೆ ಗೃಹಿಣಿಯರು ತಮ್ಮದೇ ಆದ ಕೆಲವು ವಿಧಾನಗಳನ್ನೂ ಬಳಸಬಹುದು. ಉದಾಹರಣೆಗೆ ಬೇಳೆ, ದವಸ ಧಾನ್ಯಗಳನ್ನು ಬೇಯಿಸುವ ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಆ ಬಳಿಕ ಬೇಯಿಸಬಹುದು. ಇದರಿಂದ ಬೇಳೆ-ಧಾನ್ಯಗಳು ಬೇಯಲು ತೆಗೆದುಕೊಳ್ಳುವ ಸಮಯ ಕಡಿಮೆಯಾಗುತ್ತದೆ.ತರಕಾರಿಗಳನ್ನು ಬೇಯಿಸುವ ಮೊದಲೇ ಉಪ್ಪನ್ನು ಹಾಕಬೇಡಿ, ಸುಮಾರು ಮುಕ್ಕಾಲು ಭಾಗ ಬೆಂದ ಬಳಿಕ ಉಪ್ಪು ಹಾಕುವುದರಿಂದ ಗ್ಯಾಸ್ ಕಡಿಮೆ ಸಾಕಾಗುತ್ತದೆ. ರಾತ್ರಿ ಊಟದ ಸಮಯದಲ್ಲಿ ಮಧ್ಯಾಹ್ನದ ಉಳಿದ ಪಲ್ಯವನ್ನು ನೇರವಾಗಿ ಗ್ಯಾಸ್ ಒಲೆಯ ಮೇಲಿಟ್ಟು ಬಿಸಿ ಮಾಡುವ ಬದಲು ಸಾರು, ಪಲ್ಯ ಅಥವಾ ಸಾಂಬಾರನ್ನು ಬಿಸಿ ಮಾಡುವ ಪಾತ್ರೆಯ ಮೇಲೆ ಇನ್ನೊಂದು ಪುಟ್ಟ ಪಾತ್ರೆಯಲ್ಲಿ ಪಲ್ಯವನ್ನು ಹಾಕಿ ಮುಚ್ಚಿಡುವುದರಿಂದ ಹೆಚ್ಚಿನ ಗ್ಯಾಸ್‌ನ ಅಗತ್ಯವಿಲ್ಲದೇ ಮಧ್ಯಾಹ್ನದ ಪಲ್ಯವನ್ನು ಬಿಸಿ ಮಾಡಬಹುದು.

 

ರೆಫ್ರಿಜಿರೇಟರ್‌ನ ಒಳಗಡೆ ಇಟ್ಟ ಆಹಾರ ಪದಾರ್ಥಗಳನ್ನು ನೇರವಾಗಿ ಬಿಸಿ ಮಾಡುವ ಬದಲು, ಸ್ವಲ್ಪ ಹೊತ್ತು ಅದರಿಂದ ತೆಗೆದು ಹೊರಗಡೆ ಇಟ್ಟು, ಕೊಠಡಿಯ ತಾಪಮಾನಕ್ಕೆ ಬಂದ ಬಳಿಕ ಬಿಸಿ ಮಾಡಬಹುದು.ಇನ್ನು ಕೆಲವು ಮಹಿಳೆಯರಂತೂ ಬೆಳಿಗ್ಗೆ 9- 10 ಗಂಟೆಯೊಳಗೇ ಮಧ್ಯಾಹ್ನದ ಅಡುಗೆಯನ್ನು ಬೇಯಿಸಿಟ್ಟು, ಮಧ್ಯಾಹ್ನ ಊಟದ ಸಮಯದಲ್ಲಿ ಮತ್ತೆ ಅಡುಗೆಯನ್ನು ಬಿಸಿ ಮಾಡುತ್ತಾರೆ. ಅಂತೆಯೇ ರಾತ್ರಿಯ ಅಡುಗೆ ಕೂಡ ಸಂಜೆಯೇ ಮುಗಿಸಿಟ್ಟು ರಾತ್ರಿ ಮತ್ತೆ ಬಿಸಿ ಮಾಡುವ ಅಭ್ಯಾಸ ಇರುತ್ತದೆ.

 

ತಾಜಾ ಆಗಿ ತಯಾರಿಸಿದ ಬಿಸಿ ಊಟದ ರುಚಿಯೇ ಬೇರೆ. ಜೊತೆಗೆ ತರಕಾರಿಗಳನ್ನು ಹಲವಾರು ಬಾರಿ ಬಿಸಿ ಮಾಡುವುದರಿಂದ ಪೌಷ್ಟಿಕಾಂಶಗಳೂ ನಾಶವಾಗುತ್ತವೆ. ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕುಳಿತು ಊಟ-ತಿಂಡಿ ಸೇವಿಸುವುದರಿಂದ ಪದೇ ಪದೇ ಬಿಸಿ ಮಾಡುವುದನ್ನು ತಪ್ಪಿಸಬಹುದು.ಈ ಎಲ್ಲ ವಿಷಯಗಳು ಮಹಿಳೆಯರಿಗೆ ಗೊತ್ತಿದ್ದೂ, ಹಲವಾರು ಮಂದಿ ಗ್ಯಾಸ್‌ನ ನಷ್ಟ ಮಾಡುತ್ತಾರೆ. ಇಂತಹ ಕೆಲವು ಸರಳ ವಿಷಯಗಳಿಗಾಗಿಯೇ ನನಗೂ, ಪಿಎಚ್.ಡಿ ಪದವಿ ಪಡೆದಿರುವ ನನ್ನ ಪತ್ನಿಗೂ ಆಗಾಗ ಮಾತುಕತೆ ಆಗುವುದಿದೆ!ನೆನಪಿಡಿ, ಮೇಲೆ ವಿವರಿಸಿದ ಎಲ್ಲ ವಿಧಾನಗಳನ್ನೂ ಪ್ರತಿ ಕುಟುಂಬ ಕಡ್ಡಾಯವಾಗಿ ಅನುಸರಿಸಿದರೆ, ನಮ್ಮ ಇಂಧನ ಸಚಿವರು ಹೇಳುವಂತೆ `ಪ್ರತಿ ಕುಟುಂಬಕ್ಕೂ ಅಡುಗೆಗಾಗಿ ವರ್ಷಕ್ಕೆ ಆರು ಸಿಲಿಂಡರ್‌ಗಳು ಸಾಕು~.

 

ಸುರಕ್ಷತೆ ಕಾಯ್ದುಕೊಳ್ಳಿ

-ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ಯಾವಾಗಲೂ ಬಿಐಎಸ್ (ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನ್ಯತೆ ಪಡೆದ ಉಪಕರಣಗಳನ್ನೇ ಬಳಸಿ-ರಬ್ಬರ್ ಕೊಳವೆಗಳು ಮತ್ತು ರೆಗ್ಯುಲೇಟರ್‌ಗಳನ್ನು ಅಧಿಕೃತ ವಿತರಕರಿಂದ ಮಾತ್ರ ಖರೀದಿಸಿ-ಹೊಸದಾಗಿ ಸರಬರಾಜಾದ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಸುರಕ್ಷಾ ಮುಚ್ಚಳ ಮತ್ತು ಕಂಪೆನಿಯ ಸೀಲ್ ಕಡ್ಡಾಯವಾಗಿ ಇರಬೇಕು- ಸಿಲಿಂಡರ್‌ನ್ನು ಯಾವಾಗಲೂ ಸ್ಟೌನಿಂದ ದೂರ ನೆಲದ ಮಟ್ಟದಲ್ಲಿ ಇಡಬೇಕು-ಅನಿಲ ಸೋರಿಕೆ ಸಾಧ್ಯತೆಯನ್ನು ವಾಸನೆಯಿಂದ ಕಂಡುಕೊಳ್ಳಿ. ಅದು ಬಿಟ್ಟು ಬೆಂಕಿಕಡ್ಡಿ, ಮೇಣದಬತ್ತಿ ಅಥವಾ ಲೈಟರ್‌ಗಳನ್ನು ಹಚ್ಚಿ ಪರೀಕ್ಷಿಸುವುದು ಅತ್ಯಂತ ಅಪಾಯಕಾರಿ-ಸಿಲಿಂಡರ್‌ನ್ನು ಸುಲಭವಾಗಿ ಕಾಣಿಸದ ಜಾಗದಲ್ಲಿ ಅಥವಾ ಗಾಳಿಯಾಡದ ಮುಚ್ಚಿದ ಆವರಣದಲ್ಲಿ ಇಡುವುದು ಸರಿಯಲ್ಲ-ಉರಿಯುತ್ತಿರುವ ಸ್ಟೌನ ಸಮೀಪ ಧೂಮಪಾನ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ-ಅಡುಗೆ ಕಾರ್ಯ ಪೂರ್ಣಗೊಳಿಸಿದ ಬಳಿಕ ಮತ್ತು ರಾತ್ರಿ ವೇಳೆ ರೆಗ್ಯುಲೇಟರ್‌ನ್ನು ಆಫ್ ಮಾಡಿ-ತುಂಬಿದ ಅಥವಾ ಖಾಲಿಯಾದ ಸಿಲಿಂಡರ್‌ನ್ನು ಬಿಸಿ ಅಥವಾ ಬೆಂಕಿ ಮೂಲ ಇಲ್ಲದ ಸ್ಥಳಗಳಲ್ಲಿ ಸುರಕ್ಷಾ ಮುಚ್ಚಳವನ್ನು ಹಾಕಿಯೇ ಇಡಬೇಕು-ರಬ್ಬರ್ ಕೊಳವೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ. ಕನಿಷ್ಠ ಎರಡು ವರ್ಷಗಳಿಗೆ ಒಮ್ಮೆಯಾದರೂ ಅದನ್ನು ಬದಲಾಯಿಸಿ

 

ನೆನಪಿಡಿ...

-ಸಣ್ಣ ಬರ್ನರ್‌ನ್ನೇ ಹೆಚ್ಚಾಗಿ ಬಳಸಿ. ಇದು ದೊಡ್ಡ ಬರ್ನರ್‌ಗಿಂತ ಶೇ 6- 10ರಷ್ಟು ಗ್ಯಾಸ್ ಉಳಿತಾಯ ಮಾಡುತ್ತದೆ.

-ಬರ್ನರ್‌ಗಳನ್ನು ಆಗಾಗ್ಗೆ ಶುಚಿಗೊಳಿಸುತ್ತಾ ಇರಿ. ಇದರಿಂದ ಉಕ್ಕಿದ ಹಾಲು ಅಥವಾ ಇತರ ಆಹಾರ ಪದಾರ್ಥದ ಕಣಗಳು ಬರ್ನರ್‌ನ ಒಳಗೆ ಸೇರಿಕೊಂಡು ಉರಿ ಸಮ ಪ್ರಮಾಣದಲ್ಲಿ ಇರದಂತೆ ತಡೆಯುವುದು ತಪ್ಪುತ್ತದೆ.

-ಉರಿ ನೀಲಿ ಬಣ್ಣದಲ್ಲಿದ್ದರೆ ನಿಮ್ಮ ಸ್ಟೌ ಸರಿಯಾಗಿ ಉರಿಯುತ್ತಿದೆ ಎಂದರ್ಥ. ಅದಿಲ್ಲದೆ ಉರಿಯು ಕೇಸರಿ, ಹಳದಿ ಬಣ್ಣದಿಂದ ಕೂಡಿದ್ದರೆ ಅಥವಾ ಒಂದೇ ಸಮನಾಗಿ ಇರದಿದ್ದರೆ ಕೂಡಲೇ ಬರ್ನರ್‌ನ್ನು ಶುದ್ಧ ಮಾಡಿ. ಸಾಮಾನ್ಯವಾಗಿ ಅನಿಲ ಬರುವ ಮಾರ್ಗದಲ್ಲಿ ಕೊಳೆ ತುಂಬಿಕೊಂಡಿದ್ದರೆ ಹೀಗಾಗುತ್ತದೆ. ಆಗ ಇಂಧನ ಅರ್ಧಂಬರ್ಧ ಉರಿದು ಕಾರ್ಬನ್ ರೂಪದಲ್ಲಿ ಒಂದೆಡೆ ಸಂಗ್ರಹವಾಗುತ್ತದೆ. ಇದರಿಂದ ಇಂಧನದ ಉರಿಯುವ ಸಾಮರ್ಥ್ಯ ವ್ಯರ್ಥವಾಗುತ್ತದೆ.

-ಒದ್ದೆ ಪಾತ್ರೆಯನ್ನು ನೇರವಾಗಿ ಉರಿಯುತ್ತಿರುವ ಸ್ಟೌ ಮೇಲಿಡಬೇಡಿ. ಒದ್ದೆಯನ್ನು ಒರೆಸಿದ ಬಳಿಕವಷ್ಟೇ ಇಡಿ. ಇದರಿಂದಲೂ ಒಂದಷ್ಟು ಗ್ಯಾಸ್ ಉಳಿತಾಯ ಮಾಡಬಹುದು.

-ಸ್ಟೌ ಮೇಲೆ ಪಾತ್ರೆ ಇಟ್ಟು ನಂತರ ತರಕಾರಿ ಹೆಚ್ಚುವುದು ಅಥವಾ ಅಡುಗೆಗೆ ಬೇಕಾದ ತಕ್ಷಣದ ಇತರ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಂದಾಗಬೇಡಿ.  ಪಾತ್ರೆಯನ್ನು ಮತ್ತು ಅದರ ಒಳಗೆ ಹಾಕಬೇಕಾದ ವಸ್ತುಗಳನ್ನು ಮೊದಲೇ ಸಿದ್ಧಪಡಿಸಿಕೊಂಡು ಕೈಗೆಟಕುವಂತೆ ಇಟ್ಟುಕೊಂಡ ಬಳಿಕವಷ್ಟೇ ಸ್ಟೌ ಹಚ್ಚಿ.

-ಬರ್ನರ್‌ಗಿಂತ ಕೇವಲ ಎರಡು ಇಂಚು ಸಣ್ಣದಾದ ಪಾತ್ರೆ ಇಟ್ಟರೂ ಶೇ 40ರಷ್ಟು ಉರಿ ವ್ಯರ್ಥವಾಗಿ ಹೋಗುತ್ತದೆ.

 

 

  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.