ಸೋಮವಾರ, ಏಪ್ರಿಲ್ 19, 2021
33 °C

ನಂದಿನಿ ಹಾಲಿನ ಕೊರತೆ: ದರ ಇಳಿಸಿದ ಒಕ್ಕೂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬೀದರ್, ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ನಂದಿನಿ ಹಾಲಿಗೆ ಭಾರಿ ಬೇಡಿಕೆ ಇದೆ. ಆದರೆ ರೈತರಿಗೆ ನೀಡುವ ದರದಲ್ಲಿ 1.50 ರೂಪಾಯಿ ಕಡಿತ ಮಾಡಲು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಅಧೀನದ ಗುಲ್ಬರ್ಗ -ಬೀದರ್ ಹಾಲು ಒಕ್ಕೂಟವು ನಿರ್ಧರಿಸಿದೆ. ಇದನ್ನು ಖಂಡಿಸಿ ರೈತರು ಸೋಮವಾರ ನಗರದಲ್ಲಿ ಧರಣಿ ನಡೆಸಿದರು. ದರ ಇಳಿಕೆ ಕೂಡಲೇ ಹಿಂತೆಗೆದುಕೊಳ್ಳದಿದ್ದರೆ ನ.8ರಿಂದ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದರು.`ಸರ್ಕಾರದ ಸಹಾಯಧನ ಸೇರಿ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಸಿಗುತ್ತಿರುವುದು ಕೇವಲ 21.50 ರೂಪಾಯಿ. ಆದರೆ ಇಲ್ಲಿನ ಒಕ್ಕೂಟವು ಸೋಮವಾರ ಸಭೆ ನಡೆಸಿ 1.50 ರೂಪಾಯಿ ಇಳಿಕೆ (ರೂ. 20) ಮಾಡಿದೆ. ಇನ್ನೊಂದೆಡೆ ರೈತರು ಖರೀದಿಸುವ ಮೇವಿನ ಚೀಲಕ್ಕೆ (50 ಕೆಜಿ) ಈ ಹಿಂದೆಯೇ 122 ರೂಪಾಯಿ ಹೆಚ್ಚು ಮಾಡಿತ್ತು.

 

ಇದರಿಂದ ನೆರೆ-ಬರದ ನಡುವೆಯೂ ಬ್ಯಾಂಕ್ ಸಾಲ ಮಾಡಿ ದನ ಖರೀದಿಸಿದ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಒಕ್ಕೂಟವೇ ದನಗಳನ್ನು ಕಸಾಯಿಖಾನೆಗೆ ದೂಡಿದಂತೆ ಆಗುತ್ತದೆ~ ಎಂದು ಚಿಂಚೋಳಿ ಮೋಘಾ ಹಾಲು ಉತ್ಪಾದಕರ ಒಕ್ಕೂಟದ ಗುರುಲಿಂಗಪ್ಪ ಪಾಟೀಲ್ ಆರೋಪಿಸಿದರು.`ಒಕ್ಕೂಟದಲ್ಲಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನಾ ಗುರಿ ಇದೆ. ಆದರೆ 76 ಸಾವಿರ ಲೀಟರ್ ಹಾಲು ಮಾತ್ರ ಉತ್ಪಾದನೆ ಆಗುತ್ತಿದೆ. ಅಲ್ಲದೇ ಗುಲ್ಬರ್ಗದಲ್ಲಿ ಹಾಲಿಗೆ ಭಾರಿ ಬೇಡಿಕೆ ಇದೆ. ಆದರೆ `ನಂದಿನಿ~ ಬ್ರಾಂಡ್  ಪ್ರಚಾರ ಮಾಡದೇ, ಸಮಯಕ್ಕೆ ಸರಿಯಾಗಿ ಮಾರಾಟ ಕೇಂದ್ರಕ್ಕೆ ಹಾಲು ಸರಬರಾಜು ಮಾಡದ ಒಕ್ಕೂಟವು    60 ಸಾವಿರ ಲೀಟರ್ ಖಾಸಗಿ ಹಾಲು ಬರಲು ಅವಕಾಶ ಮಾಡಿದೆ~ ಎಂದು  ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳ ಒಕ್ಕೂಟದ ನಿಂಗಣ್ಣ ಕಂಬಾರ ಆರೋಪಿಸಿದರು.`ಹೀಗೆ ಪಶುಸಂಗೋಪನಾ ಸಚಿವರ ಜಿಲ್ಲೆಯಲ್ಲೇ ಇತರ ಹಾಲು ಮಾರಾಟಕ್ಕೆ ಪ್ರೇರಣೆ ನೀಡಿದ್ದಾರೆ. ರಾಜ್ಯದಲ್ಲಿ ದರ ಇಳಿಸಲು ಕೆಎಂಎಫ್ ಆದೇಶ ಇದೆ ಎಂದು ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ ಸಬೂಬು ಹೇಳುತ್ತಾರೆ. ಅಪೌಷ್ಠಿಕತೆಯಿಂದ ಮಕ್ಕಳು ಬಳಲುತ್ತಿರುವ ಇಲ್ಲಿ ಹಾಲಿಗೆ ಬೇಡಿಕೆ ಹೆಚ್ಚಿದೆ.

 

ಆದರೂ ದರ ಇಳಿಸಿ ಪರರಾಜ್ಯಗಳ ಹಾಲು ಉತ್ಪಾದಕರಿಗೆ ಪ್ರೋತ್ಸಾಹಿಸಿದ್ದಾರೆ. ಇದರಿಂದ ಇಲ್ಲಿನ ರೈತರು ಬೀದಿಗೆ ಬಿದ್ದರೆ, ದನಗಳು ಕಸಾಯಿಖಾನೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣ ಆಗುತ್ತದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಒಕ್ಕೂಟಕ್ಕೆ ಕಾಳಜಿ ಇದ್ದರೆ ಹಾಲು ಮಾರಾಟ ಹೆಚ್ಚಳಕ್ಕೆ ಪ್ರಯತ್ನಿಸಬೇಕು.  ಬೀದರ್, ಗುಲ್ಬರ್ಗ ಮತ್ತು  ಯಾದಗಿರಿಯಲ್ಲಿ `ನಂದಿನಿ~ ಹಾಲು ಮಾರಾಟ ಹೆಚ್ಚಳಕ್ಕೆ ಪ್ರಯತ್ನಿಸದ, ರೈತರಿಗೆ ನೀಡುವ ದರ ಇಳಿಸುವ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಲು ಸಿದ್ಧ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.