ಸೋಮವಾರ, ಏಪ್ರಿಲ್ 19, 2021
23 °C

ಈ ರಸ್ತೆಪ್ರಯಾಣ; ಮೈಹೈರಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ರಸ್ತೆಪ್ರಯಾಣ; ಮೈಹೈರಾಣ!

ಗುಲ್ಬರ್ಗ: ನಗರದ ಬಂಬೂಬಜಾರ್‌ನಿಂದ ಸುಲ್ತಾನಪುರದ ವರ್ತುಲವರೆಗಿನ ರಸ್ತೆಯಲ್ಲಿ ಸಂಚರಿಸಲು ಜನರು ಹೆದರುತ್ತಾರೆ! ಇಲ್ಲಿನ ರಸ್ತೆಯ ದುಃಸ್ಥಿತಿ ನೋಡಿದರೆ ಈ ರಸ್ತೆಯಲ್ಲಿ ಹೋಗುವುದೇ ಬೇಡ ಎನ್ನುವಷ್ಟರ ಮಟ್ಟಿಗೆ ಹದೆಗಟ್ಟಿದೆ.ಸುಮಾರು ಮೂರು ಕಿ.ಮೀ. ಉದ್ದದ ಈ ರಸ್ತೆಯಲ್ಲಿ ಒಂದೆರಡು ಅಡಿ ಆಳದ ಹೊಂಡಗಳೇ ಕಾಣಸಿಗುತ್ತವೆ. ಇದೇ ರಸ್ತೆಯ ಮಾರ್ಗವಾಗಿ ಚೆನ್ನವೀರ ನಗರ, ಶಿವಶಕ್ತಿ ನಗರ, ಜಿಡಿಎ ಕಾಲೋನಿ, ಫಿಲ್ಟರ್ ಬೆಡ್ ಮುನಿಮ ಸಂಘ ಇನ್ನೂ ಅನೇಕ ನಗರಗಳು ಬರುತ್ತವೆ. ಈ ಬಡಾವಣೆಗಳಿಗೆ ಹೋಗುವ ಜನರು ಹದಗೆಟ್ಟ ರಸ್ತೆಯಲ್ಲೇ ಸಾಗಬೇಕಾದ ತೊಂದರೆ ಎದುರಾಗಿದೆ.ಮಳೆ ಬಂತೆಂದರೆ ಸಾಕು; ಚರಂಡಿಗಳೆಲ್ಲ ತುಂಬಿಕೊಂಡು ಕೊಳಚೆ ನೀರು ರಸ್ತೆಯ ಮೇಲೆಲ್ಲ ಹರಿದಾಡಿ, ಸಂಚಾರಕ್ಕೆ ತೊಂದರೆ ಮಾಡುತ್ತದೆ. ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.ಫಿಲ್ಟರ್ ಬೆಡ್‌ನಿಂದ ರಿಂಗ್ ರಸ್ತೆಯವರೆಗಿನ ದುಃಸ್ಥಿತಿಯಂತೂ ಹೇಳತೀ ರದಾಗಿದೆ. ಇಲ್ಲಿ ಆಟೋಗಳು ಕುಲುಕಾಡುತ್ತ ಹೋಗುತ್ತಿದ್ದರೆ, ಒಳಗಿರುವ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಕೂಡಬೇಕು.

 

ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಜನಪ್ರತಿನಿಧಿಗಳಿಗೆ ದಿನಾಲೂ ಹಿಡಿ ಶಾಪ ಹಾಕುತ್ತಾ ಓಡಾಡುವುದು ಸಾಮಾನ್ಯವಾಗಿದೆ.ಇಲ್ಲಿನ ರಿಂಗ್ ರಸ್ತೆಯ ಸಮೀಪ ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಮತ್ತು ಬೀದರ್-ಗುಲ್ಬರ್ಗ ಮಧ್ಯೆ ರೈಲ್ವೆ ಮಾರ್ಗ ಕಾಮಗಾರಿ ಸಹ ನಡೆದಿದೆ. ಆದರೆ ನಗರದ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವಂಥ ಈ ರಸ್ತೆ ಮಾತ್ರ ಅಭಿವೃದ್ಧಿ ಕಾಣದೆ ಹಿಂದುಳಿದಿದೆ.“ರಸ್ತೆ ಅಭಿವೃದ್ಧಿ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ, ಶಾಸಕರಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಚೆನ್ನವೀರ ನಗರದ ನಿವಾಸಿ ಸಂತೋಷ ಸಿಂಧೆ `ಪ್ರಜಾವಾಣಿ~ ಎದುರು ತಮ್ಮ ನೋವು ತೋಡಿಕೊಂಡರು. ರಾತ್ರಿ ವೇಳೆ ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇರದ ಕಾರಣ ಕಳ್ಳರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಹೊರಬರಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ.ತಮ್ಮ ಸಮಸ್ಯೆ ಅರ್ಥಮಾಡಿಕೊಂಡು ಮಹಾನಗರ ಪಾಲಿಕೆಯು ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂಬುದು ಇಲ್ಲಿನ ಹಲವು ಬಡಾವಣೆಗಳ ಜನರ ಆಶಯವಾಗಿದೆ.

ಕಾಮಗಾರಿ ಶೀಘ್ರ ಆರಂಭ: ಆಯುಕ್ತ


ಬಂಬೂಬಜಾರ್‌ನಿಂದ ಸುಲ್ತಾನಪುರ ರಿಂಗ್ ರಸ್ತೆವರೆಗಿನ ಕಾಮಗಾರಿ ಆರಂಭಿಸಲು ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ರೂ. 1.75 ಕೋಟಿ ಮಂಜೂರಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದ ತಕ್ಷಣ  ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸಿ.ನಾಗಯ್ಯ      `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಆದರೆ ಇಷ್ಟು ಮೊತ್ತದಲ್ಲಿ ಮೂರು ಕಿ.ಮೀ. ಉದ್ದದ ರಸ್ತೆ ಕಾಮಗಾರಿ ಪೂರ್ಣವಾಗಿ ಆಗುವುದಿಲ್ಲ. ಹೀಗಾಗಿ ಪಾಲಿಕೆಯು ಇನ್ನಷ್ಟು ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು 7ನೇ ವಾರ್ಡಿನ ಪಾಲಿಕೆ ಸದಸ್ಯ ವಸಂತ ಜಾಧವ ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.