ಶುಕ್ರವಾರ, ಏಪ್ರಿಲ್ 23, 2021
31 °C

ರಾಚೋಟೇಶ್ವರ ಜಾತ್ರೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ತಾಲ್ಲೂಕಿನ ರಾಚಣ್ಣ ವಾಗ್ದರಿ ರಾಚೋಟೇಶ್ವರ ಜಾತ್ರೆಯು ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಗ್ರಾಮದಲ್ಲಿ ಸಂಭ್ರಮದ ವಾತಾವರಣ ಮೂಡಿದೆ. ಉತ್ಸವಕ್ಕಾಗಿ ವಿಶೇಷ ಸಿದ್ಧತೆ ಮಾಡಿ, ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ತಾಲ್ಲೂಕಿನ ವಾಗ್ದರಿ ರಾಚೋಟೇಶ್ವರ ದೇವಾಲಯದಿಂದ ರಾಚಣ್ಣ ವಾಗ್ದರಿ ಎಂದು ಪ್ರಸಿದ್ಧವಾಗಿದೆ. ಗುಲ್ಬರ್ಗ ದಿಂದ 32 ಕಿ.ಮೀ ದೂರದಲ್ಲಿರುವ ಬೆಣ್ಣೆತೊರ ನದಿ ದಡದಲ್ಲಿ ಬೃಹತ್ ರಾಚೋಟೇಶ್ವರ ದೇವಾಲಯವಿದೆ. ಶಿವಾಂಶ ಸಂಭೂತನಾದ ವೀರಭದ್ರನನ್ನು ಇಲ್ಲಿ ರಾಚೋಟೇಶ್ವರ ಎಂದು ಆರಾಧಿಸುತ್ತಾರೆ. ಇದು ರಾಚೋಟೇಶ್ವರ ವೀರಭದ್ರನ ಪರಂಪರೆಯ ದೇಗುಲ.ದೇವಾಲಯದ ವಾಸ್ತು ಪರಿಸರ: ದೇವಾಲಯದ ಹೆಬ್ಬಾಗಿಲು ಪೂರ್ವಾಭಿಮುಖವಾಗಿದ್ದು, ಇತ್ತೀಚಿನ ಜೀರ್ಣೋದ್ಧಾರದಲ್ಲಿ ಮುಖ ಗೋಪುರವಾಗಿ ಪರಿವರ್ತನೆಯಾಗಿದೆ.ಇದರ ಮೇಲೆ ನಗಾರಿ ಕೊಠಡಿ ಇದೆ. ಈ ಮುಖಗೋಪುರ ಸುಮಾರು 5 ಅಡಿ ಎತ್ತರವಿದೆ.

ಅದರಲ್ಲಿ ಗಾರೆ ಅಚ್ಚಿನಿಂದ ನಿರ್ಮಿಸಿದ ಸುಂದರವಾದ ವೀರಭದ್ರ ಶಿಲ್ಪವಿದೆ. ಜೊತೆಗೆ ಪ್ರಥಮ ಬಾರಿಗೆ ಜೀರ್ಣೋದ್ಧಾರ ಮಾಡಿದ ಹಾರಕೂಡದ ಚನ್ನಬಸವ ಶಿವಯೋಗಿಗಳ ಸುಂದರ ಶಿಲ್ಪವು ಗಮನ ಸೇಳೆಯುತ್ತದೆ. ದೇವಾಲಯದ ಸುಖನಾಶಿ ಆಯಾತಾಕಾರವಾಗಿದ್ದು ಕೆಳಮಟ್ಟಕ್ಕಿದೆ. ಗರ್ಭ ಗುಡಿಯ  ಹಿತ್ತಾಳೆ ಬಾಗಿಲ ಲಲಾಟದಲ್ಲಿ ಜೋಡಿ ಬಸವನ ಮಧ್ಯ ಶಿವಲಿಂಗದ ಶಿಲ್ಪವಿದೆ. ಹೆಬ್ಬಾಗಿಲಿಗೆ ಅಭಿಮುಖವಾಗಿ 11 ಅಡಿ ಉದ್ದ, 11 ಅಡಿ ಅಗಲ, 2 ಅಡಿ ಆಳದ ಅಗ್ನಿಕುಂಡದ ರಚನೆ ಇದೆ.ಮೂರ್ತಿಸ್ವರೂಪ: ಗರ್ಭ ಗುಡಿಯಲ್ಲಿನ ರಾಚೋಟೇಶ್ವರ ಮೂರ್ತಿ ಸುಮಾರು 3 ಅಡಿ ಎತ್ತರವಾಗಿದೆ. ಸಮಭಂಗದ ಈ ಚತುರ್ಭುಜ ಸ್ಥಾನಕ್ಕೆ ಮೂರ್ತಿಯ ಹಿಂಗೈಯಲ್ಲಿ ಬಿಲ್ಲು ಬಾಣ ಹಿಡಿದಿರುವ ಕಲಾತ್ಮಕ ಶೈಲಿ, ಬಲ ಮುಂಗೈಯಲ್ಲಿ ನೀಲ ಖಡ್ಗ, ಎಡ ಮುಂಗೈ ಮತ್ತು ಬೆರಳುಗಳಿಂದ ಡಾಲನ್ನು ನೆತ್ತಿಯಿಂದ ಇಳಿಬಿಡುತ್ತಿರುವುದು ಶಿಲ್ಲಿಯ ಕಲಾ ನೈಪುಣ್ಯಕ್ಕೆ ಸಾಕ್ಷಿ ನೀಡುತ್ತವೆ.ಆಚರಣೆಗಳು: ಅಶ್ವಿನಿ ಮಾಸದ ಅಮಾವಾಸೆಯಂದು ಆರಂಭವಾಗುವ ಈ ಜಾತ್ರೆಯಲ್ಲಿ ಸಂಜೆ 8ಗಂಟೆಗೆ ಅರ್ಚಕರ ಮನೆಯಿಂದ ರಾಚೋಟೇಶ್ವರ ಉತ್ಸವ ಮೂರ್ತಿಯು ಪಲ್ಲಕ್ಕಿಯಲ್ಲಿ ಹೋರಟು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಅಗಸಿ ಹತ್ತಿರ ಬಂದು ನಿಲ್ಲುತ್ತದೆ. ರಾತ್ರಿಯಿಡಿ ಭಜನೆ, ಪುರವಂತರ ಒಡಪು, ಶಸ್ತ್ರ ಪವಾಡ ನಡೆಯುತ್ತವೆ.ಬಲಿ ಪಾಡ್ಯಮಿಯಂದು ರಾಚೋಟೇಶ್ವರ ವಿಗ್ರಹಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾಚರಣೆ ಮತ್ತು ರಾತ್ರಿ ಮದ್ದು ಸುಡುವ ಕಾರ್ಯಕ್ರಮ   ಜರುಗುವುದು.15ರಂದು ಗ್ರಾಮದಲ್ಲಿ ಕುಂಭ, ನಂದಿಕೋಲಿನ ಉತ್ಸವ ನಡೆದು ಸಾಯಂಕಾಲ ನಾಲ್ಕು ಗಂಟೆಗೆ ಅಗ್ನಿ ಕುಂಡ ಹಾಯುವುದು ನಡೆಯುತ್ತದೆ. ನಂತರ ರಥೋತ್ಸವ ಜರುಗಲಿದೆ.ಹಾರಕೂಡದ ಚನ್ನವೀರ ಶಿವಾಚಾರ್ಯರು, ಬಬಲಾದಿನ ಗುರುಪಾದಲಿಂಗ ಮಹಾಸ್ವಾಮೀಜಿಗಳ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳು  ಜರುಗುತ್ತವೆ.13ರಿಂದ 16ರವರೆಗೆ ಜರುಗುವ ಈ ಜಾತ್ರಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳಬೇಕು ಎಂದು ಬಸವಣ್ಣಯ್ಯ ಮಠಪತಿ, ರೇವಯ್ಯ ಸ್ವಾಮಿ ಮಠಪತಿ, ಸೂಗೂರೇಶ್ವರ, ಪ್ರಭುಲಿಂಗಯ್ಯ, ಬಾಬು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.