ಗುರುವಾರ , ಏಪ್ರಿಲ್ 22, 2021
28 °C

ಗುಲ್ಬರ್ಗದ ಅನನ್ಯ ದೀಪಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೊಸ ಉಡುಪು, ಬಾಯಲ್ಲಿ ಸಿಹಿತಿಂಡಿ, ಕಿಸೆಯಲ್ಲಿ ಪಟಾಕಿ, ಕೈಯಲ್ಲೊಂದು ಬೆಂಕಿ ಹಚ್ಚಿದ ಊದು ಬತ್ತಿ ಹಿಡಿದುಕೊಂಡು ರಸ್ತೆಗಿಳಿವ ಚಿಣ್ಣರು. ಎಲ್ಲೆಡೆ ಢಂ ಢಂ ಸದ್ದು, ಬೆಳಕಿನ ಚಿತ್ತಾರ. ಮನೆಯಂಗಳ ಬೆಳಗುವ ಹಣತೆ- ಕ್ಯಾಂಡಲ್ ಹಾಗೂ ಆಕಾಶ ಬುಟ್ಟಿ. ಇದು ಸೂರ್ಯನಗರಿಯ ದೀಪಾವಳಿ ರಾತ್ರಿಯ ಸೊಬಗು. ಎಲ್ಲೆಡೆ ಸದ್ದುಗದ್ದಲದ ಸಂಭ್ರಮ.  ವಿವಿಧ ಧರ್ಮ, ಸಮುದಾಯಗಳ ಪ್ರಭಾವದ ಗುಲ್ಬರ್ಗದಲ್ಲಿ ದೀಪಾವಳಿ ಅನನ್ಯ. ಆಚರಣೆಗಳು ಒಂದಕ್ಕಿಂತ ಒಂದು ವಿಭಿನ್ನ. ಆದರೆ ಎಲ್ಲೆಡೆ ಅದೇ ಸಂಭ್ರಮ. ಢಂ ಢಂ!ಆಹಾರ: ಅಡುಗೆ ಮನೆಯಲ್ಲಿ ಸಿಹಿ ತಯಾರಿಯ ತರಾತುರಿ. ಹಬ್ಬಕ್ಕೆ ಚುಡುವಾ, ಕೋಡುಬಳೆ, ಕರ್ಜಿ ಕಾಯಿ, ರವೆ ಉಂಡೆ, ಲಾಡು, ಕರಿಗಡುಬು, ಶೇಂಗಾ ಹೋಳಿಗೆ, ಪಾಯಸ, ಗೋಧಿ ಹುಗ್ಗಿ, ಹೋಳಿಗೆ ಸಾಂಬಾರು `ಆಂಬ್ರಾ~ (ತೊಗರಿ ಬೇಳೆ ಬೇಯಿಸಿದ ರಸ), ತುಂಬುಗಾಯಿಯ ಎಣ್ಣೆ ಬದನೆಕಾಯಿ ಹೀಗೆ ಬಾಯಿ ನೀರಿಳಿಸುವ ಬಗೆ ಬಗೆಯ ಖಾದ್ಯ. ಭೂರಿ ಭೋಜನ. ಮೊದಲ ದಿನ: ಹಬ್ಬದ ಮೊದಲ ದಿನ ಮನೆಯ ಎಲ್ಲ ಬಿಂದಿಗೆ, ದಾಸ್ತಾನು ಪಾತ್ರೆಗಳಲ್ಲಿ ಹೊಸ ನೀರು ತುಂಬುತ್ತಾರೆ. ಬಳಿಕ ಹಂಡೆ, ಪಾತ್ರೆಗಳಿಗೆ ವಿಭೂತಿ ಮತ್ತು ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ಆ ಬಳಿಕವೇ ಒಲೆಗೆ ಬೆಂಕಿ ಹಚ್ಚಿ ಅಡುಗೆ ಕಾರ್ಯಕ್ಕೆ ತೊಡಗುತ್ತಾರೆ. ಹಳೆ ಕಹಿಗಳು ಹೋಗಿ ಹೊಸ ಸಿಹಿ ಆರಂಭಗೊಳ್ಳಲಿ ಎಂಬ ಭಾವ. ಅಂದು ಬೆಳಿಗ್ಗೆ ಹೆಣ್ಣು ಮಕ್ಕಳು ಅಣ್ಣ-ತಮ್ಮಂದಿರಿಗೆ ಆರತಿ ಬೆಳಗುತ್ತಾರೆ. ಬಳಿಕ ಸಿಹಿ ತಿಂಡಿಯೊಂದಿಗೆ ಮಧ್ಯಾಹ್ನದ ಭೂರಿ ಭೋಜನ. ದಿನಚರಿ ಆರಂಭ: ವರ್ತಕರು, ಕೃಷಿಕರು ಸೇರಿದಂತೆ ಹಿಂದಿನ ಪರಂಪರೆಯ ಜನತೆ ತಮ್ಮ ವ್ಯಾಪಾರ ವ್ಯವಹಾರಗಳನ್ನು ಕೊನೆಗೊಳಿಸುತ್ತಾರೆ. ದೀಪಾವಳಿಯಂದು ಹೊಸ ದಿನಶೀರ್ಷಿಕೆ (ಕ್ಯಾಲೆಂಡರ್)ಯಲ್ಲಿ ತಮ್ಮ ಲೆಕ್ಕಪತ್ರ ಆರಂಭಿಸುತ್ತಾರೆ. ಮೂರನೇ ದಿನವೇ ಮನೆ- ಅಂಗಡಿಗಳಲ್ಲಿ ಹೊಸ (ಲಕ್ಷ್ಮೀ ವರ್ಷ) ಲೆಕ್ಕಾಚಾರಗಳು ಆರಂಭಗೊಳ್ಳುತ್ತವೆ. ಅಮಾವಾಸ್ಯೆಯ ಎರಡನೇ ದಿನ ವಿಶೇಷ ಆಚರಣೆಗಳಿರುವುದಿಲ್ಲ.ಆದರೆ ಮೂರು ದಿನಗಳೂ ಬೆಳಿಗ್ಗೆ ಪೂಜೆ ನಡೆಯುತ್ತದೆ. ಹಬ್ಬದ ಬಳಿಕ ಬರುವ ಕಡೇ ಪಂಚಮಿ ತನಕವೂ ಪಟಾಕಿ, ಪೂಜೆ, ಸಿಹಿತಿಂಡಿಗಳ ಸಂಭ್ರಮ ಮುಂದುವರಿಯುತ್ತದೆ.ಆಚರಣೆ: ದನದ ಕೊಟ್ಟಿಗೆ ಇದ್ದವರು ದನಗಳಿಗೆ ಪೂಜೆ ಮಾಡಿ ಕೊಟ್ಟಿಗೆ ಬಾಗಿಲಲ್ಲಿ ಬೆಂಕಿಯ ಉರಿ ಹಾಕಿ ದನಗಳನ್ನು ದಾಟಿಸುತ್ತಾರೆ. ಎಕ್ಕೆಯ ಹಾಲಿಗೆ ಅರಶಿನ ಹಾಕಿ ದನಗಳ ಹಣೆಗೆ ನಾಮ ಹಾಕಿ ಪೂಜೆ ಮಾಡುತ್ತಾರೆ. ಇನ್ನು ಕೆಲವು ಕೃಷಿಕರು ಎಳ್ಳೆಮಾವಾಸ್ಯೆಗೆ ಪೂಜಿಸಲ್ಪಡುವ `ಪಾಂಡವ~ರನ್ನು (ಐದು ಕಲ್ಲುಗಳು, ಜೋಳದ ಗೋಪುರ ದೀಪ) ಹೊಲದಲ್ಲಿ ದೀಪಾವಳಿ ಸಂದರ್ಭ ಸ್ಥಾಪನೆ ಮಾಡುತ್ತಾರೆ. ವರ್ತಕರು ಲಕ್ಷ್ಮೀ (ಧನ) ಆಚರಣೆಗೆ ಆದ್ಯತೆ ನೀಡುತ್ತಾರೆ.ಬಂಜಾರ: ಬಂಜಾರ ಸಮುದಾಯದ ಆಚರಣೆಯು ವಿಶಿಷ್ಟವಾಗಿ ಗಮನ ಸೆಳೆಯುತ್ತದೆ. ಜಾತಿ ವ್ಯವಸ್ಥೆಯಿಂದ ಹೊರತಾದ ಅಲೆಮಾರಿ ಬುಡಕಟ್ಟು ಜನಾಂಗದ ಈ ಸಮುದಾಯ ನಿಸರ್ಗವನ್ನೇ ದೇವರಂತೆ ಪ್ರೀತಿಸಿ, `

ಜಾಗತಿಕ ಸುಖಶಾಂತಿ~ಗೆ ಪ್ರಾರ್ಥಿಸುತ್ತಾರೆ. ಸಕಲ ಜೀವಿಗಳು ಹಾಗೂ ನಿರ್ಜೀವಿಗಳಿಗಾಗಿ ಪ್ರಾರ್ಥಿಸುತ್ತಾರೆ. ಅದಕ್ಕಾಗಿ ನಿಸರ್ಗದ ಪೂಜೆ ಮಾಡುತ್ತಾರೆ.ತಂಬಿಗೆಯಲ್ಲಿ ನೀರು ಮತ್ತು ಬೇವಿನ ಸೊಪ್ಪನ್ನು ಇಟ್ಟು ಪ್ರಕೃತಿಯನ್ನು ಆರಾಧಿಸುತ್ತಾರೆ. ಕಾಡು ಹೂಗಳನ್ನು ಆಯ್ದು ತಂದು `ದಾವಣಿ~ (ಕೊಟ್ಟಿಗೆ)ಯಲ್ಲಿನ ಆಕಳು, ಎತ್ತುಗಳಿಗೆ ಪೂಜೆ ಮಾಡುತ್ತಾರೆ. ಆಗ ತಮ್ಮ ದಿನನಿತ್ಯದ ಬಳಕೆಯ ಪಾತ್ರೆ, ಪರಿಕರ ಸೇರಿದಂತೆ ಎಲ್ಲ ವಸ್ತುಗಳಿಗೂ ಪೂಜೆ ಸಲ್ಲುತ್ತದೆ. ಎಲ್ಲವೂ ಪೂಜ್ಯ.

ಕನ್ಯೆಯರೆಲ್ಲ ಸೇರಿ ದೀಪ ಹಚ್ಚಿಕೊಂಡು ದೇವರ ಗುಡಿ ಮುಂದೆ ಸೇರುತ್ತಾರೆ. ಆ ಬಳಿಕ ನಾಯಕನ ಮನೆಗೆ ಹೋಗುತ್ತಾರೆ. ಅಲ್ಲಿಂದ ಎಲ್ಲರ ಮನೆಗೆ ಹೋಗುತ್ತಾರೆ. ಪ್ರತಿ ಮನೆಯ ಪ್ರತಿ ಕುಟುಂಬದ ಸದಸ್ಯರ ಹೆಸರಲ್ಲಿ ಪ್ರಾರ್ಥಿಸಿ, ಪೂಜೆ ಮಾಡುತ್ತಾರೆ~ ಎಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಸುಭಾಷ ರಾಠೋಡ ವಿವರಿಸಿದರು.ಹಬ್ಬ ಮುಗಿದ ಮೇಲೆ `ಕರಿ~ ಎಂದು ಮಾಡುತ್ತಾರೆ. ಬೇಟೆ ಆಹಾರ ಬಳಸುವುದೇ ಈ `ಕರಿ~ ಆಚರಣೆಯ ವಿಶೇಷ. ಎಲ್ಲವೂ ಸಾಮೂಹಿಕ ಆಚರಣೆ. ಬಂಜಾರರ ಆರಾಧನೆ ಯಾವುದೇ ಧರ್ಮ, ದೇವರಿಗೆ ಸೀಮಿತವಲ್ಲ. ಕಟ್ಟುಪಾಡುಗಳ ಬಂಧನವಿಲ್ಲ. ಜಗತ್ತು ಎಲ್ಲವೂ ನಮ್ಮದೇ. ನಿಸರ್ಗದ ವಿಸ್ಮಯವೇ ದೇವರು ಎಂಬ ವಿಶಾಲ ಪರಿಕಲ್ಪನೆ. ಈ ಹಿನ್ನೆಲೆಯಲ್ಲಿ ದೀಪಾವಳಿಯ ಹಬ್ಬವೂ ಅನನ್ಯ ಎಂದು ಅವರು ಬಣ್ಣಿಸಿದರು.`ತಾಂಡಾದಲ್ಲಿ ಸೇವಾಲಾಲರ ಮಂದಿರದ ಮುಂದೆ ಪಣತಿ (ಆರತಿ) ಹಿಡಿದುಕೊಂಡು ಮೋರಾ (ಸೇರುವ) ಮೂಲಕ ಆಚರಣೆ ಆರಂಭಗೊಳ್ಳುತ್ತದೆ. ಅಂದಿನಿಂದ ಮೂರು ದಿನ ತಾಂಡಾದಲ್ಲಿ ಸಡಗರ~ ಎಂದು ಹನುಮಂತ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.