ಭಾನುವಾರ, ಏಪ್ರಿಲ್ 11, 2021
32 °C

23ರಂದು ಬೇನೂರು ಮಠದಲ್ಲಿ ಪಟ್ಟಾಧಿಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ತಾಲ್ಲೂಕಿನ ಬೇನೂರ ಸುಕ್ಷೇತ್ರ ಓಂಕಾರದ ಶ್ರೀ ಗುರು ಮಹಾಲಿಂಗೇಶ್ವರ ಸಂಸ್ಥಾನ ಹಿರೇಮಠದ ಚೊಚ್ಚಲ ಪೀಠಾಧಿಪತಿ ಸಿದ್ಧಲಿಂಗದೇವರ ಗುರು ಪಟ್ಟಾಧಿಕಾರ ಮಹೋತ್ಸವ ನ.23ರಂದು ನಡೆಯಲಿದೆ.ಶ್ರೀ ಮದ್ರಂಭಾಪುರಿ ವೀರ ಸಿಂಹಾಸನ ಮಹಾಸಂಸ್ಥಾನ ಪೀಠದ ಶಾಖಾ ಮಠವಾದ ಬೇನೂರಿನಲ್ಲಿ ಅಂದು ಬೆಳಿಗ್ಗೆ ಶ್ರೀ ಶಾಲಿವಾಹನ ಶಕೆ 1934ನೇ ನಂದನಾಮ ಸಂವತ್ಸರ ಕಾರ್ತಿಕ ಶುದ್ಧ ದಶಮಿ ತಿಥಿಯ ಶುಕ್ರವಾರ ಹೊನ್ನಕಿರಣಗಿ ರಾಚೋಟೇಶ್ವರ ಸಂಸ್ಥಾನಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿ `ಷಟಸ್ಥಲ ಬ್ರಹ್ಮೋಪದೇಶ~ ಮಾಡುವರು.ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯ, `ಸರ್ವಧರ್ಮ ಸಮನ್ವಯದ ಬೇನೂರಿನಲ್ಲಿ ಪಟ್ಟಾಧಿಕಾರ ಅಂಗವಾಗಿ ನ. 22ರಂದು ಭಾವೈಕ್ಯ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಿವಗಂಗೆ ಮೇಲಿನ ಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಮತ್ತು ಮೈಸೂರು ಅರಮನೆ ಜಪದಕಟ್ಟಿಮಠ ಚಂದ್ರಶೇಖರ ಶಿವಾಚಾರ್ಯ ಉಪದೇಶ ನೀಡುವರು. ಬುಕ್ಕಸಾಗರ ಕರಿಸಿದ್ಧೇಶ್ವರ ಶಿವಾಚಾರ್ಯ, ಗಂಗಾವತಿ ಬ್ರಹನ್ಮಠ ಹೆಬ್ಬಾಳ ಶಿವಾಚಾರ್ಯ, ಕನಕಗಿರಿ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಮಹಾಸ್ವಾಮಿ, ಘಟಪ್ರಭ ಕೆಂಪಯ್ಯ ಸ್ವಾಮಿ ಮಠದ ಮಹಾಸ್ವಾಮಿ ಉಪಸ್ಥಿತರಿರುವರು. ಶಾಸಕಿ ಅರುಣಾ ಸಿ.ರೇವೂರ ಪಾಟೀಲ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು ಹಾಗೂ ಪ್ರಮುಖರು ಪಾಲ್ಗೊಳ್ಳುವರು ಎಂದರು.`ಪಟ್ಟಾಧಿಕಾರ ಸಮಾರಂಭದಲ್ಲಿ ಹಲವು ಮಠಗಳ ಶಿವಾಚಾರ್ಯರು, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿ ಹಾಗೂ ಸಚಿವರು, ಶಾಸಕರು ಸೇರಿದಂತೆ ನಾಡಿನ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.ಸುಮಾರು ನಾಲ್ಕೈದು ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿದ ಬೇನೂರು ಮಠದ ಈ ಸಮಾರಂಭದಲ್ಲಿ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ದಾಸೋಹ, ವಸತಿ, ಉಳಿಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಕರಿಸಿದ್ಧಪ್ಪ ಪಾಟೀಲ ಹೇಳಿದರು. ತೊನಸನಳ್ಳಿ ಸಂಗಮೇಶ್ವರ ಸಂಸ್ಥಾನ ಮಠದ ಚರಂತೇಶ್ವರ ಶಿವಾಚಾರ್ಯ, ನಾಗಲಿಂಗಯ್ಯ ಮಠಪತಿ, ಬಸವರಾಜ ಮಹಾಲಿಂಗಪ್ಪ ಪಾಟೀಲ ಇದ್ದರು.

ಶೈಕ್ಷಣಿಕ ಕಾಯಕ: ಶ್ರೀ ಕನಸು

ಗುಲ್ಬರ್ಗ: ಬೇನೂರು ಸೇರಿದಂತೆ ಈ ಭಾಗದ ಬಡವರಿಗೆ ಶಿಕ್ಷಣ ನೀಡುವುದು ನಮ್ಮ ಕನಸು ಎಂದು ಪಟ್ಟಾಧಿಕಾರ ಸ್ವೀಕರಿಸಲಿರುವ ಸಿದ್ಧಲಿಂಗದೇವರು ಹೇಳಿದರು. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರು, ಅನಾಥರು ಸೇರಿದಂತೆ ಸಂಕಷ್ಟದಲ್ಲಿರುವ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವ ಮೂಲಕ ಅಭಿವೃದ್ಧಿ ಸಾಧಿಸುವ ಕನಸನ್ನು ಹೊಂದಿದ್ದೇನೆ. ಅದಕ್ಕಾಗಿ ಶಿಕ್ಷಣ ಸಂಸ್ಥೆ, ಉಚಿತ ವಿದ್ಯಾರ್ಥಿ ವಸತಿ ನಿಲಯ, ಸಂಸ್ಕಾರಯುತ ಶಿಕ್ಷಣ ನೀಡುವ ಹಂಬಲವಿದೆ.

 

ಅದರ ಜೊತೆ ಊರು ಹಾಗೂ ಮಠವನ್ನು ಅಭಿವೃದ್ಧಿ ಪಡಿಸುವ ಆಶಯವಿದೆ. ಇವೆಲ್ಲವೂ ಊರಿನ ಜನರ ಸಹಕಾರದಿಂದ ಸಾಧ್ಯ. ಜನರ ಸಂಪೂರ್ಣ ಸಹಕಾರದ ಜೊತೆ ಪಟ್ಟಾಧಿಕಾರ ಮಾಡುವ ಸಂತೃಪ್ತಿ ಇದೆ ಎಂದು ಅಭಿವ್ಯಕ್ತಿಸಿದರು.ರಾಯಚೂರು ಜಿಲ್ಲೆಯ ಸಿಂಧನೂರ ತಾಲ್ಲೂಕಿನ ಹಟ್ಟಿವೀರುಪಾಪುರ ಮೂಲದ ಸಿದ್ಧಲಿಂಗದೇವರು, ವೀರೇಶಯ್ಯ ಸ್ವಾಮಿ ಹಗೂ ಸಿದ್ಧಮ್ಮ ದಂಪತಿಯ ಪುತ್ರ. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಬೆಂಗಳೂರಿನ ಮಹಾಂತಿನ ಮಠ, ಮೈಸೂರಿನ ಸುತ್ತೂರು ಮಹಾಸಂಸ್ಥಾನ, ಅರಮನೆ ಜಪದಕಟ್ಟಿ ಮಠದಲ್ಲಿ ಧಾರ್ಮಿಕ ಅಧ್ಯಯನ ಮಾಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.